ನಿರೀಕ್ಷಿತ ಗೆಲುವು; ಹೆಚ್ಚಿದ ಹೊಣೆ ಅನಿರೀಕ್ಷಿತ ಬೆಳವಣಿಗೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಬಂದ ದೇವರಗುಂಡ ವೆಂಕಪ್ಪಗೌಡ ಸದಾನಂದಗೌಡರು ಮೇಲ್ಮನೆ ಸದಸ್ಯರಾಗಿ ಚುನಾಯಿತರಾಗುವ ಮೂಲಕ ತಮ್ಮ ಹುದ್ದೆಗೆ ಅಗತ್ಯವಾದ ಸಾಂವಿಧಾನಿಕ ಅರ್ಹತೆಯನ್ನು ಗಳಿಸಿದ್ದಾರೆ. ವಿಧಾನಸಭೆಯಿಂದ ವಿಧಾನಪರಿಷತ್ತಿನ ಒಂದು ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅವರದು ನಿರೀಕ್ಷಿತ ಗೆಲುವು. ಪಕ್ಷದ ಸದಸ್ಯರೊಂದಿಗೆ ಕೆಲವು ಪಕ್ಷೇತರರೂ ಬೆಂಬಲ ನೀಡಿದ್ದರಿಂದ ಅವರ ಆಯ್ಕೆ ಸುಗಮವಾಗಿದೆ. ಅಧಿಕಾರಕ್ಕೆ ಬಂದ ದಿನದಿಂದಲೂ ಭ್ರಷ್ಟಾಚಾರ ಸೇರಿದಂತೆ ಒಂದಲ್ಲ ಒಂದು ಹಗರಣಗಳನ್ನು ನಡೆಸುತ್ತಲೇ ಬಂದ ಬಿಜೆಪಿ ಸರ್ಕಾರದ ಆಡಳಿತ ಲೋಪಗಳನ್ನು ಬಯಲಿಗೆಳೆಯುವ ವಿರೋಧ ಪಕ್ಷದ ಕರ್ತವ್ಯವನ್ನೂ ಇಷ್ಟರವರೆಗೆ ನಿರ್ವಹಿಸಲಾಗದ ಕಾಂಗ್ರೆಸ್ ಮುಖಂಡರು, ಈ ಚುನಾವಣೆಯಲ್ಲಿಯೂ ಎಡವಿದ್ದಾರೆ. ಸ್ವಂತ ಬಲದಿಂದ ಗೆಲ್ಲುವ ಸಾಮರ್ಥ್ಯ ಇಲ್ಲದಿದ್ದರೂ ಕಣಕ್ಕಿಳಿದು ಅಭ್ಯರ್ಥಿಯೊಬ್ಬರನ್ನು ಹರಕೆಯ ಕುರಿಯನ್ನಾಗಿ ಮಾಡಿದ ರಾಜ್ಯದ ಕಾಂಗ್ರೆಸ್ ನಾಯಕತ್ವ, ತನ್ನ ಎಂದಿನ ರಾಜಕೀಯ ದಿವಾಳಿತನವನ್ನು ಮುಂದುವರಿಸಿದೆ. ಶಾಸಕರ ಸಂಖ್ಯಾಬಲ ಇಲ್ಲದಿದ್ದರೂ ತಂತ್ರ ಕುತಂತ್ರಗಳ ಮೂಲಕ ಈಚಿನ ವರ್ಷಗಳಲ್ಲಿ ಅಧಿಕಾರದಲ್ಲಿ ಪಾಲು ಪಡೆದಿದ್ದ ಜೆಡಿಎಸ್, ಈ ಚುನಾವಣೆಯಲ್ಲಿ ತಟಸ್ಥವಾಗಿರುವ ಸೋಗನ್ನು ಪ್ರದರ್ಶಿಸಿದೆ. ತನ್ನ ಯಾವುದೇ ನಿಲುವು ಚುನಾವಣೆ ಫಲಿತಾಂಶದ ಮೇಲೆ ಪರಿಣಾಮ ಬೀರಲಾಗದೆಂಬ ವಸ್ತುಸ್ಥಿತಿ ಇದಕ್ಕೆ ಕಾರಣ. ಅಕ್ರಮ ಗಣಿಗಾರಿಕೆಯಿಂದ ಗಳಿಸಿದ ಅನೈತಿಕ ಹಣದ ಬಲದಿಂದ ರಾಜ್ಯದಲ್ಲಿ ಚುನಾವಣಾ ಕಣವನ್ನು ಉಳ್ಳವರ ಆಡುಂಬೊಲವಾಗಿಸಿದ ಬಳ್ಳಾರಿ ಗಣಿಧಣಿಗಳ ಪ್ರಭಾವದಿಂದ ಈ ಚುನಾವಣೆ ಮುಕ್ತವಾಗಿದ್ದೊಂದು ಸಮಾಧಾನಕರ ಅಂಶ. ಮುಖ್ಯಮಂತ್ರಿ ಸ್ಥಾನವನ್ನು ವಹಿಸಿಕೊಂಡ ದಿನದಿಂದಲೂ ಸದಾನಂದಗೌಡರು ಹಿಂದಿನ ಮುಖ್ಯಮಂತ್ರಿಯ ಕೈಗೊಂಬೆಯಂತೆ ನಿರ್ಧಾರ ಕೈಗೊಂಡಿರುವುದು ಅನೇಕ ಸಂದರ್ಭಗಳಲ್ಲಿ ವ್ಯಕ್ತವಾಗಿದೆ. ಅಕ್ರಮ ಗಣಿಗಾರಿಕೆ ಕುರಿತಂತೆ ಲೋಕಾಯುಕ್ತರು ಸಲ್ಲಿಸಿದ ವರದಿಯೇ, ಸಂಸದರಾಗಿದ್ದ ತಮಗೆ ಮುಖ್ಯಮಂತ್ರಿ ಸ್ಥಾನದ ಅವಕಾಶ ಕಲ್ಪಿಸಿಕೊಟ್ಟಿದ್ದರೂ, ಸದಾನಂದಗೌಡರು, ಅದೇ ಲೋಕಾಯುಕ್ತ ವ್ಯವಸ್ಥೆಯನ್ನು ದುರ್ಬಲಗೊಳಿಸುವಂಥ ನಿರ್ಧಾರಗಳನ್ನು ಕೈಗೊಳ್ಳಲು ಹಿಂಜರಿದಿಲ್ಲ. ಇದರಿಂದ ಸರ್ಕಾರಕ್ಕೆ ಮಾತ್ರವಲ್ಲದೆ, ಈವರೆಗೆ ಸ್ವಚ್ಛವಾಗಿದ್ದ ತಮ್ಮ ವರ್ಚಸ್ಸಿಗೂ ಧಕ್ಕೆ ಆಗಿರುವುದನ್ನು ಸದಾನಂದಗೌಡರು ಮರೆಯಬಾರದು. ಮಾಜಿ ಮುಖ್ಯಮಂತ್ರಿ ಮಾತ್ರವಲ್ಲದೆ, ಬಿಜೆಪಿಯ ಹಲವು ಸಚಿವರು ಮತ್ತು ಶಾಸಕರ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳು ಲೋಕಾಯುಕ್ತ ತನಿಖೆಯ ನಿರ್ಣಾಯಕ ಹಂತದಲ್ಲಿದ್ದ ಸಂದರ್ಭದಲ್ಲಿ ಆ ಸಂಸ್ಥೆಯನ್ನು ದುರ್ಬಲಗೊಳಿಸುವಂಥ ಕ್ರಮಗಳು, ಭ್ರಷ್ಟಾಚಾರದ ವಿರುದ್ಧ ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ಆರಂಭಿಸಿರುವ ಹೋರಾಟವನ್ನು ನಗೆಪಾಟಲು ಮಾಡಿವೆ. ಬಿಜೆಪಿಯ ವರ್ಚಸ್ಸಿಗೆ ರಾಷ್ಟ್ರೀಯ ಮಟ್ಟದಲ್ಲಿಯೂ ಧಕ್ಕೆಯಾಗಿದೆ. ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತನಾಗಿ ಸದಾನಂದಗೌಡರು ತಾವು ಯಾರೊಬ್ಬರ ಕೈಗೊಂಬೆಯಲ್ಲ ಎಂಬುದನ್ನು ಸ್ವತಂತ್ರ ನಿರ್ಧಾರಗಳ ಮೂಲಕ ಸಾಬೀತುಪಡಿಸಬೇಕಾಗಿದೆ. ಸರ್ಕಾರಕ್ಕೆ ಅಂಟಿರುವ ಭ್ರಷ್ಟತೆಯ ಕಳಂಕವನ್ನು ಭ್ರಷ್ಟಾಚಾರ ತನಿಖೆಯ ವ್ಯವಸ್ಥೆಯನ್ನು ಬಲಪಡಿಸುವುದರಿಂದ ನಿವಾರಿಸಿಕೊಳ್ಳಲು ಮುಂದಾಗಬೇಕಿದೆ. ಅದಕ್ಕೆ ಬೇಕಾದ ರಾಜಕೀಯ ಶಕ್ತಿಯನ್ನು ಅವರ ಈ ಗೆಲುವು ತಂದುಕೊಟ್ಟಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.