ಮೊದಲು ಕಾಯ್ದೆಯಾಗಲಿ ಒಂದು ವರ್ಷದ ಕೊಸರಾಟದ ನಂತರ ಲೋಕಪಾಲ ವಿಧೇಯಕ ಸಂಸತ್ತಿನಲ್ಲಿ ಮಂಡನೆಯಾಗಿದೆ. ಭ್ರಷ್ಟಾಚಾರದ ವಿರುದ್ಧ ಪ್ರಬಲ ತನಿಖಾ ವ್ಯವಸ್ಥೆಯನ್ನು ಅಸ್ತಿತ್ವಕ್ಕೆ ತರಬೇಕೆಂಬ ಜನತೆಯ ಒತ್ತಾಯಕ್ಕೆ ಸರ್ಕಾರ ಮಣಿದಿದೆ ಎಂದು ಸಂತೋಷಪಡಬೇಕೋ, ಕಾಂಗ್ರೆಸ್ ನೇತೃತ್ವದ ಯುಪಿಎ, ತೋರಿಕೆಗೆ ಒಂದು ದುರ್ಬಲ ವ್ಯವಸ್ಥೆಯನ್ನು ತರುವ ಹುನ್ನಾರ ನಡೆಸಿದೆ ಎಂದು ಆಕ್ರೋಶಗೊಳ್ಳಬೇಕೋ ಎಂಬ ಜಿಜ್ಞಾಸೆಗೆ ಇದು ಆಸ್ಪದ ನೀಡಿದೆ. ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ನೇತೃತ್ವದಲ್ಲಿ ಬಲಿಷ್ಠ ಲೋಕಪಾಲ ಕಾನೂನು ರೂಪಿಸುವಂತೆ ಒಂದು ವರ್ಷದಿಂದ ನಡೆದ ಹೋರಾಟದ ನಂತರ ಲೋಕಪಾಲ ವಿಧೇಯಕ ಸಂಸತ್ತಿನಲ್ಲಿ ಮಂಡನೆಯಾಗುವ ಹಂತಕ್ಕೆ ಬಂದಿರುವುದು ಸಮಾಧಾನದ ಅಂಶ. ಹಲವು ಭ್ರಷ್ಟಾಚಾರದ ಪ್ರಕರಣಗಳನ್ನು ಎದುರಿಸುತ್ತಿರುವ ಯುಪಿಎ ಸರ್ಕಾರ, ಪ್ರಧಾನಿಯೂ ಒಳಗೊಳ್ಳುವಂಥ ಲೋಕಪಾಲ ತನಿಖಾ ವ್ಯವಸ್ಥೆಗೆ ಕಾಯ್ದೆ ರೂಪಿಸಲು ಹೆಜ್ಜೆ ಇಟ್ಟಿದೆ. ಭ್ರಷ್ಟಾಚಾರ ನಿಗ್ರಹಿಸುವ ವಿಚಾರದಲ್ಲಿ ದೇಶದ ಜನತೆಗೆ, ಅವರ ಧ್ವನಿಯಾಗಿ ವರ್ತಿಸುತ್ತಿರುವ ನಾಗರಿಕ ಸಮಾಜದ ಪ್ರತಿನಿಧಿಗಳಿಗೆ ಇರುವಷ್ಟು ಬದ್ಧತೆಯನ್ನು ಯಾವ ರಾಜಕೀಯ ಪಕ್ಷಗಳೂ ಈ ಕುರಿತು ವರ್ಷದಿಂದ ನಡೆದ ಚರ್ಚೆಯ ಸಂದರ್ಭದಲ್ಲಿ ಪ್ರದರ್ಶಿಸಿಲ್ಲ. ಭ್ರಷ್ಟಾಚಾರದ ವಿರುದ್ಧ ಪ್ರಬಲ ಅಂಕುಶವಾಗಬಲ್ಲ ಲೋಕಪಾಲ ಸಂಸ್ಥೆಯನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವ ತಂತ್ರವನ್ನೂ ಕೆಲವು ರಾಜಕೀಯ ಪಕ್ಷಗಳು ಪ್ರದರ್ಶಿಸಿವೆ. ಲೋಕಪಾಲದಲ್ಲಿ ಮೀಸಲಾತಿ ಇರಬೇಕು ಎಂಬುದು ಇಂಥ ತಂತ್ರದ ಭಾಗ. ಕಾಯ್ದೆಯ ಅನ್ವಯ ವಿಚಾರಣೆ ನಡೆಸಬೇಕಾದ ವ್ಯವಸ್ಥೆಯಲ್ಲಿ ಮೀಸಲಾತಿಯ ಪಾತ್ರ ಏನೆಂಬುದನ್ನು ರಾಜಕೀಯ ಪಕ್ಷಗಳು ಸ್ಪಷ್ಟಪಡಿಸಬೇಕಿದೆ. ಲೋಕಪಾಲ ಸಂಸ್ಥೆ, ಭ್ರಷ್ಟರ ವಿರುದ್ಧ ಸಾಮಾಜಿಕ ನ್ಯಾಯವನ್ನು ಅನುಷ್ಠಾನಕ್ಕೆ ತರುವ ವೇದಿಕೆಯಂತೂ ಅಲ್ಲ. ನಾಲ್ಕು ದಶಕಗಳಿಂದ ನೆನೆಗುದಿಯಲ್ಲಿ ಬಿದ್ದಿದ್ದ ಲೋಕಪಾಲ ಕಲ್ಪನೆ ಸಾಕಾರಗೊಳ್ಳುವ ಸನ್ನಿವೇಶ ಈಗ ಸೃಷ್ಟಿಯಾಗಿದೆ. ಇದಕ್ಕೆ ಅಣ್ಣಾ ಹಜಾರೆ ತಂಡದ ಪ್ರಬಲ ಒತ್ತಾಯ ಕಾರಣವಾಗಿರುವುದು ನಿಜ. ಆದರೆ ಲೋಕಪಾಲದ ಕರಡು ಸಂಸತ್ತಿನಲ್ಲಿ ಚರ್ಚೆಗೆ ಬಂದು ಕಾಯ್ದೆಯಾಗುವ ಪ್ರಕ್ರಿಯೆ ನಡೆದಿರುವಾಗ ಅದರಲ್ಲಿ ಕುಂದುಗಳನ್ನು ಹುಡುಕಿ ಅವುಗಳ ನಿವಾರಣೆಗೆ ಅಣ್ಣಾ ಹಜಾರೆ ತಂಡ ಈ ಹಂತದಲ್ಲಿ ಮುಂದಾಗಿರುವುದು ಅಸಂಗತ. ದೇಶ ಅಂಗೀಕರಿಸಿದ ಸಂಸದೀಯ ಪ್ರಜಾಸತ್ತೆಯಲ್ಲಿ ಕಾನೂನು ರೂಪಿಸುವುದು ಜನಪ್ರತಿನಿಧಿಗಳ ಪರಮಾಧಿಕಾರ. ಸಂಸತ್ತು ಅಂಗೀಕರಿಸುವ ಕಾಯ್ದೆಯಲ್ಲಿ ಲೋಪಗಳಿದ್ದರೆ ಅದನ್ನು ತಿದ್ದುಪಡಿಗಳ ಮೂಲಕ ಸರಿಪಡಿಸಿಕೊಳ್ಳುವುದಕ್ಕೆ ಅವಕಾಶ ಇದ್ದೆೀ ಇದೆ. ಇದು ಸತ್ಯಾಗ್ರಹದ ಮೂಲಕ ಇತ್ಯರ್ಥಪಡಿಸುವಂಥದ್ದಲ್ಲ. ಇದನ್ನೇ ಮುಂಬೈ ಹೈಕೋರ್ಟ್ ಪೀಠ ಸ್ಪಷ್ಟಪಡಿಸಿದೆ. ಸಂವಿಧಾನ ಕೂಡ ನೂರಕ್ಕೂ ಹೆಚ್ಚು ತಿದ್ದುಪಡಿಗಳಿಗೆ ಒಳಗಾಗಿದೆ. ಲೋಕಪಾಲ ಕಾಯ್ದೆ ಭ್ರಷ್ಟರನ್ನು ರಕ್ಷಿಸುವ ರಾಜಕೀಯ ಪಕ್ಷಗಳ ಹುನ್ನಾರಕ್ಕೆ ಆಸ್ಪದ ನೀಡುವಂತಿದ್ದರೆ ಅದನ್ನು ಸಂಸತ್ತಿನ ಮೂಲಕವೇ ತಿದ್ದುಪಡಿ ಮಾಡಿ ಪ್ರಬಲಗೊಳಿಸುವ ಅವಕಾಶಗಳಿವೆ. ಈ ಸಾಧ್ಯತೆಯನ್ನು ಅಣ್ಣಾ ಹಜಾರೆ ನೇತೃತ್ವದ ನಾಗರಿಕ ಸಮಾಜ ನಿರ್ಲಕ್ಷಿಸಬಾರದು. ಸದ್ಯಕ್ಕೆ ಸಂಸತ್ತು ತನ್ನ ಕರ್ತವ್ಯವನ್ನು ನಿರ್ವಹಿಸಲು ಬಿಡಬೇಕು. ಸತ್ಯಾಗ್ರಹ ಅಸ್ತ್ರದ ಬಳಕೆ ವಿವೇಚನೆಯಿಂದ ಕೂಡಿದ್ದರೆ ಮಾತ್ರ ಪ್ರಭಾವಶಾಲಿ ಎಂಬುದನ್ನು ಅಣ್ಣಾ ಹಜಾರೆ ತಂಡ ಅರ್ಥ ಮಾಡಿಕೊಳ್ಳಬೇಕು. ಅಂತೆಯೇ ಲೋಕಪಾಲ ದುರ್ಬಲವಾಗುವುದಕ್ಕೆ ರಾಜಕೀಯ ಪಕ್ಷಗಳೂ ಆಸ್ಪದ ನೀಡಬಾರದು. ಸಿಬಿಐಗೆ ಸ್ವಾಯತ್ತತೆ ನೀಡದೆ, ಸಿಎಜಿಯನ್ನು ಬಲಪಡಿಸದೆ, ಭ್ರಷ್ಟತೆಯ ಆರೋಪ ಎದುರಿಸುವ ಸಿಬ್ಬಂದಿಗೆ ಸರ್ಕಾರವೇ ಕಾನೂನು ನೆರವು ನೀಡುವಂಥ ಕ್ರಮಗಳನ್ನು ಒಳಗೊಂಡರೆ ಲೋಕಪಾಲ ದುರ್ಬಲವಾಗುತ್ತದೆ ಎಂಬುದನ್ನು ಮನಗಾಣಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.