ಅಥ್ಲೀಟ್‌ಗಳಿಗೆ ಎಚ್ಚರಿಕೆ ಕರ್ನಾಟಕದ ಅಶ್ವಿನಿ ಅಕ್ಕುಂಜೆ ಸೇರಿದಂತೆ ಐವರು ಮಹಿಳಾ ಅಥ್ಲೀಟ್‌ಗಳಿಗೆ ಒಂದು ವರ್ಷದ ನಿಷೇಧ ಶಿಕ್ಷೆಯಾಗಿದೆ. ಉದ್ದೀಪನ ಮದ್ದು ಸೇವನೆಯ ತಪ್ಪು ಅರಿವಿಲ್ಲದೆ ನಡೆದ ಪ್ರಮಾದ ಎಂಬ ಕಾರಣಕ್ಕೆ ಶಿಕ್ಷೆಯ ಪ್ರಮಾಣ ಕಡಿಮೆಯಾಗಿದೆ. ಮುಗ್ಧತೆಯ ಕಾರಣ ನೀಡಿ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವುದನ್ನು ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕವು (ನಾಡಾ) ಕ್ರೀಡಾಪಟುಗಳಿಗೆ ಮನವರಿಕೆ ಮಾಡಿಕೊಟ್ಟಿದೆ. ಅಶ್ವಿನಿ, ಮನ್‌ದೀಪ್ ಕೌರ್, ಸಿನಿ ಜೋಸ್, ಟಿಯಾನಾ ಮೇರಿ ಥಾಮಸ್, ಪ್ರಿಯಾಂಕಾ ಪವಾರ್ ಹಾಗೂ ಜುವಾನಾ ಮುರ್ಮು ಗೊತ್ತಿಲ್ಲದೆ ಆಗಿದ್ದ ಪ್ರಮಾದಕ್ಕೂ ಪರಿತಪಿಸುವಂತೆ ಮಾಡಿದೆ. ಮದ್ದುಯುಕ್ತ ಪೋಷಕಾಂಶ ಆಹಾರ ಕೊಟ್ಟ ಯುರಿ ಓಗೊರೊಡ್ನಿಕ್ ಅವರಂಥ ಕೋಚ್‌ಗಳು ಕೈತೊಳೆದುಕೊಂಡು ಹೋಗಿ ಬಿಡುತ್ತಾರೆ. ಕೊನೆಗೆ ಸಂಕಷ್ಟ ಅನುಭವಿಸುವುದು ಸ್ಪರ್ಧಿಗಳು. ಜೂನಿಯರ್ ಮಟ್ಟದಿಂದಲೇ ಎಲ್ಲ ಕ್ರೀಡಾಪಟುಗಳಿಗೆ ನಿಷೇಧಿತ ಮದ್ದುಗಳ ಬಗ್ಗೆ ಎಚ್ಚರಿಕೆ ನೀಡಲಾಗುತ್ತದೆ. ಆದರೆ ಆ ಹಿತವಾದ ಮಾತುಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಯಶಸ್ಸಿಗಾಗಿ ಹಾತೊರೆಯುವ ಇಂಥವರೆಲ್ಲಾ ಅಡ್ಡದಾರಿ ಹಿಡಿಯುವುದಕ್ಕೂ ಹಿಂದೇಟು ಹಾಕುವುದಿಲ್ಲ. ಪದಕ ಗೆಲ್ಲಬೇಕು ಎನ್ನುವ ಆತುರದಲ್ಲಿ ತಾಕತ್ತು ಹೆಚ್ಚಿಸಿಕೊಳ್ಳಲು ಮದ್ದಿನ ದಾಸರಾಗುತ್ತಾರೆ. ಇದೇ ಕಾರಣಕ್ಕಾಗಿ ನಾಡಾ ಹನ್ನೆರಡು ತಿಂಗಳ ಅವಧಿಯ ಶಿಕ್ಷೆಯನ್ನು ನೀಡಿ ಮುಂದೆ ಇಂಥ ಘಟನೆಗಳು ನಡೆಯದಂತೆ ತಡೆಯಲು ಪ್ರಯತ್ನಿಸಿದೆ. ಈ ನಿಟ್ಟಿನಲ್ಲಿ ನಾಡಾ ನಿರ್ಧಾರ ಸ್ವಾಗತಾರ್ಹ. ಅಶ್ವಿನಿ ಏಷ್ಯನ್ ಕ್ರೀಡಾಕೂಟದಲ್ಲಿ ಎರಡು ಸ್ವರ್ಣ ಪದಕ ಗೆದ್ದಾಗ ದೇಶವೇ ಸಂಭ್ರಮಿಸಿತ್ತು. ಈ ಸಾಧನೆಯ ಹಿಂದೆ ಮದ್ದು ಸೇವನೆಯ ಕರಾಳ ಮುಖವಿದೆ ಎನ್ನುವುದನ್ನು ಅರಿತಾಗ ನಾಡಿನವರೆಲ್ಲ ಮರುಗಿದರು. ಮದ್ದು ತಮ್ಮ ದೇಹವನ್ನು ಹೇಗೆ ಸೇರಿತೆಂದು ಗೊತ್ತೇ ಇಲ್ಲವೆನ್ನುವಂತೆ ಮಾತಾಡಿದ ಅಕ್ಕುಂಜೆ ಸೇರಿದಂತೆ ಆರೂ ಅಥ್ಲೀಟ್‌ಗಳು ಕೋಚ್ ಕೊಟ್ಟ ಪೋಷಕಾಂಶ ಆಹಾರವನ್ನು ಮುಗ್ಧತೆಯಿಂದ ತೆಗೆದುಕೊಳ್ಳುವಷ್ಟು ಎಳೆಯರಂತೂ ಅಲ್ಲ. ಕ್ರೀಡಾ ಸಾಧನೆಯ ಉತ್ಸಾಹದಲ್ಲಿ ಮದ್ದು ಸೇವನೆ ಮಾರ್ಗ ಹಿಡಿಯುವುದು ತಪ್ಪು. ಅಷ್ಟೇ ಅಲ್ಲ, ತರಬೇತುದಾರರು ನೀಡುವ ಪೋಷಕಾಂಶ ಆಹಾರವನ್ನು ಮುಗ್ಧತೆಯಿಂದ ತೆಗೆದುಕೊಂಡರೂ ಅದಕ್ಕೆ ಶಿಕ್ಷೆ ತಪ್ಪದು. ಪ್ರತಿಯೊಂದು ಹಂತದಲ್ಲಿ ಎಚ್ಚರಿಕೆ ಅಗತ್ಯ. ಮದ್ದಿನ ಕೆಟ್ಟ ಪರಿಣಾಮ ಭವಿಷ್ಯದಲ್ಲಿ ಆರೋಗ್ಯದ ಮೇಲೆಯೂ ಆಗುತ್ತದೆ ಎನ್ನುವುದನ್ನು ಕ್ರೀಡಾಪಟುಗಳು ಮರೆಯಬಾರದು. ದೈಹಿಕವಾಗಿ ಎದುರಾಗುವ ಸಮಸ್ಯೆಗಳು ಆನಂತರ ವೈಯಕ್ತಿಕ ಬದುಕನ್ನೂ ಹದಗೆಡಿಸುವ ಅಪಾಯ ಇರುತ್ತದೆ. ಮದ್ದು ಸೇವಿಸಿ ಸಿಕ್ಕಿಬಿದ್ದರಂತೂ ಎಷ್ಟೇ ದೊಡ್ಡ ಚಾಂಪಿಯನ್ ಆಗಿದ್ದರೂ, ಆ ಎಲ್ಲ ಹಿರಿಮೆ, ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತೆ ಆಗಿಬಿಡುತ್ತದೆ. ಆದ್ದರಿಂದ ಎಚ್ಚರಿಕೆಯಿಂದ ಸ್ವಸ್ಥವಾದ ಕ್ರೀಡಾ ಮಾರ್ಗ ಅನುಸರಿಸುವುದೇ ಸೂಕ್ತ ಹೆಜ್ಜೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.