ಆಹಾರ ಭದ್ರತೆ; ಕಾರ್ಯಸಾಧ್ಯವೇ? ದೇಶದ ಶೇ 63ರಷ್ಟು ಜನತೆಗೆ ಸಬ್ಸಿಡಿ ದರದಲ್ಲಿ ಧಾನ್ಯ ಪೂರೈಸುವ ಆಹಾರ ಭದ್ರತಾ ಕಾಯ್ದೆಗೆ ಕೇಂದ್ರ ಸಂಪುಟ ಕೊನೆಗೂ ಅಳೆದು ಸುರಿದು ಒಪ್ಪಿಗೆ ಸೂಚಿಸಿದೆ. ಗ್ರಾಮಾಂತರ ಪ್ರದೇಶಗಳ ಶೇ 75ರಷ್ಟು ಮತ್ತು ನಗರ ಪ್ರದೇಶಗಳ ಶೇ 50ರಷ್ಟು ಜನರನ್ನು ಈ ರಿಯಾಯಿತಿ ದರದ ಧಾನ್ಯ ಪೂರೈಕೆಯ ವ್ಯಾಪ್ತಿಗೆ ತರಲಾಗುವುದು ಎಂಬ ಭರವಸೆ ಮೇಲುನೋಟಕ್ಕೆ ಆಕರ್ಷಕವಾಗಿದೆ. ಬಡತನದ ರೇಖೆಯ ಕೆಳಗಿನ ಪ್ರತಿ ಫಲಾನುಭವಿಗೆ (ಕಡು ಬಡವರಿಗೆ) ರೂ 3ರ ದರದಂತೆ 7 ಕಿಲೋ ಅಕ್ಕಿ, ರೂ 2 ರ ದರದಂತೆ ಗೋಧಿ ಮತ್ತು ರೂ 1 ರ ದರದಂತೆ ಇನ್ನಿತರ ಧಾನ್ಯ ಪಡೆಯುವ ಹಕ್ಕನ್ನು ಈ ಕಾಯ್ದೆಯಲ್ಲಿ ನೀಡುವುದು ಸರ್ಕಾರದ ಉದ್ದೇಶ. ಆಹಾರ ಧಾನ್ಯಗಳನ್ನು ನೀಡಲಾಗದಿದ್ದರೆ ರಿಯಾಯಿತಿಯ ಭಾಗವನ್ನು ನಗದಾಗಿ ಫಲಾನುಭವಿಗೆ ನೇರವಾಗಿ ನೀಡುವುದಕ್ಕೂ ಅವಕಾಶವಿದೆ. ಬಡತನ ರೇಖೆಯ ಮೇಲಿರುವ ಪ್ರತಿ ವ್ಯಕ್ತಿಗೆ ತಿಂಗಳಿಗೆ 3 ಕಿಲೋ ಆಹಾರಧಾನ್ಯವನ್ನು ಅವುಗಳ ಬೆಂಬಲ ಬೆಲೆಯ ಶೇ 50ರಷ್ಟಕ್ಕೆ ಸಿಗುವಂತೆ ಮಾಡಲಾಗುವುದೆಂಬುದು ಕಾಯ್ದೆಯಲ್ಲಿನ ಇನ್ನೊಂದು ಅಂಶ. ಗರ್ಭಿಣಿಯರಿಗೆ 6 ತಿಂಗಳವರೆಗೆ ತಲಾ ರೂ 1000 ದಂತೆ ಭತ್ಯೆ, ಕುಟುಂಬದ ಮಹಿಳೆಯರ ಹೆಸರಿನಲ್ಲಿಯೇ ಪಡಿತರ ಚೀಟಿ ಸ್ತ್ರೀ ಸಬಲೀಕರಣದ ಆಶಯ. ಕೇಂದ್ರ ಸರ್ಕಾರದ ಸಂಪೂರ್ಣ ನಿಯಂತ್ರಣದಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಿದ ಈ ಕಾಯ್ದೆ ಆಹಾರ ಹಕ್ಕು ಕಾರ್ಯಕರ್ತರು ಮತ್ತು ಈ ಕ್ಷೇತ್ರದಲ್ಲಿ ದುಡಿಯುತ್ತಿರುವ ಸ್ವಯಂಸೇವಾ ಸಂಸ್ಥೆಗಳ ವಿರೋಧ ಎದುರಿಸುತ್ತಿದೆ. ಈಗಾಗಲೇ ನ್ಯಾಯಬೆಲೆ ಅಂಗಡಿಗಳ ಮೂಲಕ ಕಾರ್ಯನಿರ್ವಹಿಸುತ್ತಿರುವ ಸಾರ್ವಜನಿಕ ವಿತರಣ ವ್ಯವಸ್ಥೆಗೆ ಪರ್ಯಾಯವಾಗಿ ರೂಪುಗೊಳ್ಳಲು ಉದ್ದೇಶಿಸಿದ ಈ ವ್ಯವಸ್ಥೆಯಲ್ಲಿ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯೇ ದೊಡ್ಡ ಸವಾಲಿನದು. ಬಡತನದ ರೇಖೆಯ ಕೆಳಗಿನವರನ್ನು (ಬಿಪಿಎಲ್) ಗುರುತಿಸುವ ಮಾನದಂಡ ವಾಸ್ತವ ದೃಷ್ಟಿಯಿಂದ ಕೂಡಿಲ್ಲ. ರಾಜ್ಯಗಳು ಆಯ್ಕೆಮಾಡಿರುವ `ಬಿಪಿಎಲ್~ ಫಲಾನುಭವಿಗಳ ಸಂಖ್ಯೆಗೂ ಕೇಂದ್ರ ಸರ್ಕಾರದ ಮಾನದಂಡದಂತೆ ಆಯ್ಕೆಯಾಗುವ ಫಲಾನುಭವಿಗಳ ಸಂಖ್ಯೆಗೂ ತಾಳೆಯಾಗುತ್ತಿಲ್ಲ. ಅನೇಕ ರಾಜ್ಯಗಳಲ್ಲಿ ಪಡಿತರ ವ್ಯವಸ್ಥೆ ಸಮರ್ಪಕವಾಗಿ ಸರ್ಕಾರದ ರಿಯಾಯಿತಿ ದರದ ಧಾನ್ಯಗಳು ಅರ್ಹ ಫಲಾನುಭವಿಗಳಿಗೆ ತಲುಪುವ ವ್ಯವಸ್ಥೆ ಇದ್ದರೆ, ಕರ್ನಾಟಕವೂ ಸೇರಿದಂತೆ ಇನ್ನೂ ಕೆಲವು ರಾಜ್ಯಗಳಲ್ಲಿ ಪಡಿತರ ಧಾನ್ಯಗಳ ಅಕ್ರಮ ಮಾರಾಟದ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಬಯಲಿಗೆ ಬರುತ್ತಿವೆ. ಈಗಿನ ವ್ಯವಸ್ಥೆಯಲ್ಲಿಯೇ ಕೇಂದ್ರದಿಂದ ಹೆಚ್ಚು ಆಹಾರ ಧಾನ್ಯ ಪಡೆದು ಅರ್ಹರಲ್ಲದವರಿಗೆ ಹಂಚುತ್ತಿರುವ ಮತ ಗಳಿಕೆಯ ತಂತ್ರವನ್ನು ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿರುವ ರಾಜಕೀಯ ಪಕ್ಷಗಳು ಅನುಸರಿಸುತ್ತಿರುವುದನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ. ಗ್ರಾಮಾಂತರ ಪ್ರದೇಶದ ಶೇ 75ರಷ್ಟು ಮತ್ತು ನಗರ ಪ್ರದೇಶಗಳ ಶೇ 50ರಷ್ಟು ಎಂಬುದು ಆಕರ್ಷಕ ಗುರಿಯಾಗಿದ್ದರೂ, `ಬಿಪಿಎಲ್~ಗೆ ನಿಗದಿಪಡಿಸಿದ ಮಾನದಂಡದಿಂದ ಹೊರಗೆ ಉಳಿಯುವ ಅಪಾರ ಪ್ರಮಾಣದ ಜನಸಂಖ್ಯೆ ಮುಕ್ತ ಮಾರುಕಟ್ಟೆ ಶಕ್ತಿಗಳು ನಿರ್ಧರಿಸುವ ಬೆಲೆಗೆ ಸುಲಭ ತುತ್ತಾಗುತ್ತದೆ. ಅವರದು ಬಾಣಲೆಯಿಂದ ಬೆಂಕಿಗೆ ಬೀಳುವ ಸ್ಥಿತಿ. ಆಹಾರ ಭದ್ರತೆಯ ವಿಧೇಯಕವನ್ನು ಅಂಗೀಕರಿಸುವ ಮೊದಲು ಸಂಸತ್ತು ಈ ವಾಸ್ತವವನ್ನು ಅರ್ಥ ಮಾಡಿಕೊಳ್ಳಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.