ಬರ ಪರಿಹಾರ ಬರ ಪರಿಸ್ಥಿತಿಯನ್ನು ನಿಭಾಯಿಸುವ ವಿಷಯದಲ್ಲಿ ರಾಜ್ಯ ಸರ್ಕಾರ ಹಿಂದೆ ಬಿದ್ದಿದೆ. ಕೇಂದ್ರದ ನೆರವು ಪಡೆಯುವ ವಿಷಯದಲ್ಲೂ ಅಷ್ಟೇ. ಸಕಾಲದಲ್ಲಿ ಬರಗಾಲದ ವಸ್ತುಸ್ಥಿತಿಯ ಚಿತ್ರಣವನ್ನು ಕೇಂದ್ರದ ಗಮನಕ್ಕೆ ತಂದು ಆರ್ಥಿಕ ನೆರವು ಪಡೆದುಕೊಂಡು ಪರಿಸ್ಥಿತಿ ನಿಭಾಯಿಸುವ ವಿಷಯದಲ್ಲಿ ಈಗಿನ ಸರ್ಕಾರ ಮಾತ್ರವಲ್ಲ, ಹಿಂದಿನ ಅನೇಕ ಸರ್ಕಾರಗಳು ವಿಫಲವಾಗಿವೆ. ಹೀಗಾಗಿ ಕರ್ನಾಟಕದ ಬರ, ಪ್ರವಾಹ ಇತ್ಯಾದಿಗಳ ಬಗ್ಗೆ ಕೇಂದ್ರ ಸರ್ಕಾರ ಉದಾಸೀನ ಧೋರಣೆ ಬೆಳೆಸಿಕೊಂಡಿದೆ. ಈ ವರ್ಷ ರಾಜ್ಯದ 23 ಜಿಲ್ಲೆಗಳ 95ಕ್ಕೂ ಹೆಚ್ಚು ತಾಲ್ಲೂಕುಗಳನ್ನು ಬರಪೀಡಿತ ಎಂದು ಸರ್ಕಾರ ಘೋಷಿಸಿ ಎರಡೂವರೆ ತಿಂಗಳು ಕಳೆದಿವೆ. ಆದರೆ ಅಲ್ಲಿನ್ನೂ ಪರಿಹಾರ ಕಾಮಗಾರಿಗಳು ಆರಂಭವಾಗಿಲ್ಲ. ಅಕ್ಟೋಬರ್ ಮೊದಲವಾರ ಬರಪೀಡಿತ ಜಿಲ್ಲೆಳಿಗೆ 40 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿರುವುದಾಗಿ ಮುಖ್ಯಮಂತ್ರಿ ಹೇಳಿದ್ದರು. `ಈ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಬಳಿ ಇರುವ 120 ಕೋಟಿಗಳನ್ನು ಬಳಸಿಕೊಂಡು ಪರಿಸ್ಥಿತಿ ನಿಭಾಯಿಸುತ್ತೇವೆ~ ಎಂದಿದ್ದರು. ಆದರೆ ವಾಸ್ತವ ಪರಿಸ್ಥಿತಿ ಬೇರೆಯೇ ಇದೆ. ಬರಪೀಡಿತ ತ್ಲ್ಲಾಲೂಕುಗಳ ಸಹಸ್ರಾರು ಕೂಲಿಕಾರರು ಮತ್ತು ಸಣ್ಣ ರೈತರು ಈಗಾಗಲೇ ಗುಳೇ ಹೋಗಿದ್ದಾರೆ. ಕೇಂದ್ರ ಸರ್ಕಾರದ ಉದ್ಯೋಗ ಖಾತರಿ ಯೋಜನೆಯನ್ನು ಬಳಸಿಕೊಂಡು ಸಂತ್ರಸ್ತರಿಗೆ ಸ್ಥಳೀಯರಿಗೆ ಉದ್ಯೋಗ ಕೊಡಲು ಸಾಧ್ಯವಿತ್ತು. ಉದ್ಯೋಗ ಭರವಸೆ ಯೋಜನೆಯನ್ನು ಸ್ಥಳೀಯ ರಾಜಕಾರಣಿಗಳು ಮತ್ತು ಸರ್ಕಾರಿ ಸಿಬ್ಬಂದಿ ದುರುಪಯೋಗಪಡಿಸಿಕೊಂಡ ನೂರಾರು ಉದಾಹರಣೆಗಳಿವೆ. ಹೀಗಾಗಿ ಬರ ಸಂತ್ರಸ್ತರಿಗೆ ಅದರಿಂದ ಪ್ರಯೋಜನವಾಗಿಲ್ಲ. ರಾಜ್ಯ ಸರ್ಕಾರ ಕೇಳಿರುವಂತೆ 2,606 ಕೋಟಿಯಷ್ಟು ಆರ್ಥಿಕ ನೆರವನ್ನು ಕೇಂದ್ರವು ನೀಡಿದರೂ ಅದನ್ನು ಬಳಸಿಕೊಂಡು ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸುತ್ತದೆ ಎಂಬ ಭರವಸೆ ಇಲ್ಲ. ಎರಡೂವರೆ ವರ್ಷಗಳ ಹಿಂದೆ ಉತ್ತರ ಕರ್ನಾಟಕದ ಪ್ರವಾಹ ಪೀಡಿತ ಜನರಿಗೆ ಮನೆಗಳನ್ನು ನಿರ್ಮಿಸಿಕೊಡಲು ಕೇಂದ್ರ ಸರ್ಕಾರ ನೀಡಿದ್ದ ದೊಡ್ಡ ಮೊತ್ತದ ಹಣವನ್ನು ಸರಿಯಾಗಿ ಬಳಸಿಕೊಂಡಿಲ್ಲ. ಭ್ರಷ್ಟಾಚಾರದ ಹಗರಣಗಳು ಮತ್ತು ರಾಜಕೀಯ ಗೊಂದಲಗಳಲ್ಲಿ ಮುಳುಗಿಹೋಗಿರುವ ರಾಜ್ಯ ಸರ್ಕಾರಕ್ಕೆ ಬರ ಸಂತ್ರಸ್ತರ ಬಗ್ಗೆ ಕನಿಷ್ಠ ಕಾಳಜಿಯೂ ಇಲ್ಲ. ಪರಿಸ್ಥಿತಿಯನ್ನು ನಿಭಾಯಿಸುವ ಜಾಣ್ಮೆಯೂ ಇಲ್ಲ. ಮುಖ್ಯಮಂತ್ರಿ ಸದಾನಂದಗೌಡರು ಮಾತುಗಳ್ಲ್ಲಲಷ್ಟೇ ಜನಪರ ಕಾಳಜಿ ತೋರಿಸುತ್ತಾರೆ. ಅದು ಕಾರ್ಯರೂಪಕ್ಕೆ ಬರುವುದೇ ಇಲ್ಲ. ಬರ ಪೀಡಿತ ತಾಲ್ಲೂಕುಗಳ ಜನರ ಬಗ್ಗೆ ಸರ್ಕಾರಕ್ಕೆ ನಿಜವಾಗಿಯೂ ಕಾಳಜಿ ಇದ್ದಿದ್ದರೆ ಅವರು ಅನುತ್ಪಾದಕ ವೆಚ್ಚಗಳಿಗೆ ಕಡಿವಾಣ ಹಾಕಿ ಎಲ್ಲ ಸಂಪನ್ಮೂಲಗಳನ್ನು ಕ್ರೋಡೀಕರಿಸಿಕೊಂಡು ಈ ವೇಳೆಗೆ ಬರ ಸಂತ್ರಸ್ತರಿಗೆ ನೆರವಾಗುತ್ತಿದ್ದರು. `ಈ ವರ್ಷ ಸರ್ಕಾರದ ಆದಾಯ ಕಡಿಮೆಯಾಗಿದೆ~ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಸರ್ಕಾರ ಹೊಸದಾಗಿ 10,827 ಕೋಟಿ ರೂಪಾಯಿ ಸಾಲ ಮಾಡಲು ಹೊರಟಿದೆ. ಸಾಲ ಮಾಡಿ ಪರಿಸ್ಥಿತಿ ನಿಭಾಯಿಸುವ ಹಂತ ತಲುಪಿರುವ ಈ ಸರ್ಕಾರದಿಂದ ಹೆಚ್ಚಿನದನ್ನು ನಿರೀಕ್ಷಿಸಲಾಗದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.