ವಿಳಂಬ ನ್ಯಾಯ ಅಪರಾಧ ಪ್ರವೃತ್ತಿಯ ಏರಿಕೆಯ ಸೂಚ್ಯಂಕವೆಂಬಂತೆ ದೇಶದ ನ್ಯಾಯಾಲಯಗಳಲ್ಲಿ ದಾಖಲಾಗುವ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಲೇ ಇದೆ. ಅಧೀನ ನ್ಯಾಯಾಲಯಗಳಲ್ಲಿ ಈ ಸಂಖ್ಯೆ ಕೋಟಿಗಳಲ್ಲಿದ್ದರೆ, ಹೈಕೋರ್ಟ್‌ಗಳಲ್ಲಿ ಲಕ್ಷಗಟ್ಟಲೆ ಇದೆ. ಸರ್ವೋಚ್ಚ ನ್ಯಾಯಾಲಯದಲ್ಲಿಯೂ ಈ ಪ್ರಮಾಣ ಕಡಿಮೆ ಇಲ್ಲ. ಸಂಸತ್ತಿನಲ್ಲಿ ಕೇಂದ್ರ ಕಾನೂನು ಸಚಿವರು ಹೇಳಿಕೆ ನೀಡಿರುವಂತೆ 57 ಸಾವಿರ ಪ್ರಕರಣಗಳು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಉಳಿದುಕೊಂಡಿವೆ. ವಿಶೇಷವೆಂದರೆ ಇವುಗಳಲ್ಲಿ 20 ಸಾವಿರ ಪ್ರಕರಣಗಳು ಕಳೆದ ಒಂದು ವರ್ಷದ ಅವಧಿಯಲ್ಲಿಯೇ ದಾಖಲಾಗಿವೆ. ಸಾಂವಿಧಾನಿಕ ವ್ಯಾಖ್ಯಾನ ಅವಶ್ಯಕವಿರುವ ಪ್ರಕರಣಗಳನ್ನಷ್ಟೆ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಸ್ವೀಕರಿಸಬೇಕೆಂಬ ಅಭಿಪ್ರಾಯವಿದ್ದರೂ ಎಲ್ಲ ಬಗೆಯ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣಗಳೆಲ್ಲ ಅಲ್ಲಿ ದಾಖಲಾಗುತ್ತಿರುವುದರಿಂದ ಬಾಕಿ ಪ್ರಕರಣಗಳ ಹೊರೆ ಹೆಚ್ಚಿದೆ. ಇವುಗಳನ್ನು ಬೇಗ ಇತ್ಯರ್ಥ ಮಾಡುವ ಬದ್ಧತೆಯನ್ನು ಸರ್ಕಾರದಂತೆ ನ್ಯಾಯಾಧೀಶರು ಮತ್ತು ವಕೀಲರು ಇದುವರೆಗೆ ಪ್ರದರ್ಶಿಸಿಲ್ಲ. ರಾಷ್ಟ್ರೀಯ ಮಟ್ಟದಲ್ಲಿರಲಿ, ರಾಜ್ಯಮಟ್ಟದಲ್ಲಿರಲಿ, ಈ ಸಂಬಂಧದಲ್ಲಿ ಸಮಾವೇಶಗಳು ನಡೆದಾಗಲೆಲ್ಲ `ನ್ಯಾಯ ವಿಳಂಬ ನ್ಯಾಯವನ್ನು ನಿರಾಕರಿಸಿದಂತೆ~ ಎಂಬ ನಾಣ್ಣುಡಿಯ ಪುನರಾವರ್ತನೆಯಷ್ಟೆ ಕೇಳಿಬರುತ್ತದೆ. ಅಗಾಧ ಪ್ರಮಾಣದಲ್ಲಿ ಉಳಿದುಕೊಂಡಿರುವ ಪ್ರಕರಣಗಳನ್ನು ನಿರ್ದಿಷ್ಟ ಕಾಲಮಿತಿಯನ್ನು ಹಾಕಿಕೊಂಡು ಇತ್ಯರ್ಥಪಡಿಸುವ ಮೂಲಕ, ವರ್ಷಗಳಿಂದ ಅಲೆಯುತ್ತಿರುವ ಕಕ್ಷಿದಾರರಿಗೆ ನ್ಯಾಯ ಒದಗಿಸುವ ಪ್ರಯತ್ನಗಳು ನಡೆಯುತ್ತಿಲ್ಲ. ವಿಚಾರಣೆಗಳ ಮುಂದೂಡಿಕೆ ಪ್ರವೃತ್ತಿ, ಹಳೆಯ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಆದ್ಯತೆ ನೀಡದಿರುವುದು ಮತ್ತು ಸಿಬ್ಬಂದಿ ಕೊರತೆಯಿಂದ ಈ ಪರಿಸ್ಥಿತಿ. ಸುಪ್ರೀಂ ಕೋರ್ಟ್‌ನಲ್ಲಿ ತೆರವಾಗಿರುವ ನ್ಯಾಯಾಧೀಶರ ಹುದ್ದೆಗಳನ್ನು ತುಂಬುವ ಹಾಗೂ ಅದಕ್ಕೆ ಪೂರಕ ಸೌಕರ್ಯಗಳನ್ನು ಒದಗಿಸುವ ಹೊಣೆ ಕೇಂದ್ರ ಸರ್ಕಾರದ್ದು. ಹೈಕೋರ್ಟ್‌ಗಳಲ್ಲಿನ ಹುದ್ದೆಗಳ ಭರ್ತಿ, ಪೂರಕ ಸಿಬ್ಬಂದಿಯ ನೇಮಕ ಮತ್ತು ನ್ಯಾಯಾಲಯ ಕಲಾಪ ನಿರ್ವಹಣೆಗೆ ಅವಶ್ಯಕವಾದ ವ್ಯವಸ್ಥೆಗಳನ್ನು ಕಲ್ಪಿಸುವ ಹೊಣೆಯನ್ನು ರಾಜ್ಯ ಸರ್ಕಾರಗಳೂ ಹೊರಬೇಕು. ಕೆಲವು ಕಡೆ ಸಂಜೆ ವೇಳೆ ಕರ್ತವ್ಯ ನಿರ್ವಹಿಸುವ ನ್ಯಾಯಪೀಠಗಳು ಅವಶ್ಯಕವೆಂಬ ಸಲಹೆ ವ್ಯಕ್ತವಾಗಿತ್ತಾದರೂ ಅದು ಅನುಷ್ಠಾನಕ್ಕೆ ಬರಲಿಲ್ಲ. ಭ್ರಷ್ಟಾಚಾರ ಪ್ರಕರಣಗಳ ವಿಚಾರಣೆ ನಡೆಸುವ ನ್ಯಾಯಾಲಯಗಳನ್ನು ಉದ್ದೇಶಪೂರ್ವಕವಾಗಿ ದುರ್ಬಲಗೊಳಿಸುವ ಕೆಲವು ರಾಜ್ಯ ಸರ್ಕಾರಗಳ ದುಷ್ಟ ಹುನ್ನಾರಗಳೂ ಬಾಕಿ ಪ್ರಕರಣಗಳ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗುತ್ತಿದೆ. ತ್ವರಿತ ನ್ಯಾಯಾಲಯ, ಲೋಕ ಅದಾಲತ್, ವಿಶೇಷ ನ್ಯಾಯಾಲಯ ಮೊದಲಾಗಿ ಹಲವು ನ್ಯಾಯಪೀಠಗಳನ್ನು ಶೀಘ್ರವಾಗಿ ಅಸ್ತಿತ್ವಕ್ಕೆ ತಂದು ಬಾಕಿ ಪ್ರಕರಣಗಳಿಗೆ ಮುಕ್ತಿ ಕಾಣಿಸಬೇಕು. ದಕ್ಷಿಣ ಭಾರತದಲ್ಲಿ ಸುಪ್ರೀಂ ಕೋರ್ಟ್‌ನ ಪೀಠ ಆರಂಭಿಸುವ ಪ್ರಸ್ತಾಪ ಕಾರ್ಯಗತವಾದರೆ ಕಕ್ಷಿದಾರರಿಗೆ ಅನುಕೂಲ. ಅನ್ಯಾಯ, ಅಕ್ರಮ ಮತ್ತು ಭ್ರಷ್ಟಾಚಾರದಂತಹ ಅಪರಾಧಗಳು ತಾಂತ್ರಿಕತೆಯ ಆವಿಷ್ಕಾರಗಳೊಂದಿಗೆ ಸಂಕೀರ್ಣ ಸ್ವರೂಪವನ್ನು ಪಡೆದು ವಿಚಾರಣೆಯ ಸ್ವರೂಪ ಮತ್ತು ನ್ಯಾಯಾಂಗ ಪದ್ಧತಿಗೆ ಸವಾಲಾಗಿವೆ. ಇದನ್ನು ಉತ್ತರದಾಯಿತ್ವ, ಮತ್ತು ಪ್ರಾಮಾಣಿಕತೆಯ ಬಲದಿಂದ ಸಮರ್ಥವಾಗಿ ಎದುರಿಸುವ ಬದ್ಧತೆಯನ್ನು ಪ್ರದರ್ಶಿಸಿದರೆ ಜನತೆ ನ್ಯಾಯಾಂಗದ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.