ಗೂಂಡಾಗಿರಿ ನಿಲ್ಲಿಸಿ ಬೆಂಗಳೂರು ವಿಶ್ವವಿದ್ಯಾಲಯ ಅಕ್ಷರಶಃ `ಗೂಂಡಾರಾಜ್~ ಆಗಿಬಿಟ್ಟಿದೆ. ಜವಾಬ್ದಾರಿಯುತವಾದ ಮುಂದಿನ ಜನಾಂಗವನ್ನು ರೂಪಿಸಬೇಕಾದ ಶಿಕ್ಷಣ ಕೇಂದ್ರದಲ್ಲಿಯೇ ನಡೆಯುತ್ತಿರುವ ಈ ರೀತಿಯ ಗೂಂಡಾಗಿರಿಯಿಂದಾಗಿ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ಕೆಲವು ದಿನಗಳ ಹಿಂದೆ ಅಲ್ಲಿನ ದೂರ ಶಿಕ್ಷಣದ ನಿರ್ದೇಶಕ ಬಿ.ಆರ್. ನಿರಂಜನ ಅವರ ಮೇಲೆ ಶ್ರಿರಾಮಸೇನೆಯ ಕಾರ‌್ಯಕರ್ತರು ಅದರ ಅಧ್ಯಕ್ಷರಾದ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿಯೇ ಹಲ್ಲೆ ನಡೆಸಿದರು. ಕುಲಪತಿಗಳಾದ ಡಾ.ಎನ್.ಪ್ರಭುದೇವ ಅವರ ಮೇಲೆ ಸೋಮವಾರ ಮತ್ತೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದಾರೆ. `ಪೊಲೀಸರ ರಕ್ಷಣೆ ಇಲ್ಲದೆ ಕ್ಯಾಂಪಸ್‌ಗೆ ಹೋಗಲಾರೆ~ ಎಂದು ಕುಲಪತಿಗಳು ಹೇಳುವಷ್ಟು ಅಲ್ಲಿನ ಪರಿಸ್ಥಿತಿ ಕೈಮೀರಿ ಹೋಗಿದೆ. ಈಗಿನ ಸಂಘರ್ಷಕ್ಕೆ ಕಾರಣವಾದ ವಿವಾದ ಸರಳವಾದುದು. ಪರೀಕ್ಷಾ ಅಕ್ರಮಗಳು ನಡೆದಿದೆ ಎನ್ನುವ ಕಾರಣಕ್ಕೆ ದೂರಶಿಕ್ಷಣ ನಿರ್ದೇಶನಾಲಯ ಇತ್ತೀಚೆಗೆ ಮರುಪರೀಕ್ಷೆಗಳನ್ನು ನಡೆಸಿದೆ. ಸಾಮೂಹಿಕ ನಕಲು ಆರೋಪದ ಹಿನ್ನೆಲೆಯಲ್ಲಿ ಸಿಸಿಟಿವಿ ಅಳವಡಿಸಿರುವ ಕೇಂದ್ರಗಳಲ್ಲಿ ಮಾತ್ರ ಪರೀಕ್ಷೆ ನಡೆಸಲು ನಿರ್ದೇಶನಾಲಯ ನಿರ್ಧರಿಸಿರುವ ಕಾರಣ 31 ಪರೀಕ್ಷಾ ಕೇಂದ್ರಗಳ ಪೈಕಿ ನಾಲ್ಕರಲ್ಲಿ ಪರೀಕ್ಷೆಗಳನ್ನು ನಡೆದಿಲ್ಲ. ಆ ಕೇಂದ್ರಗಳಿಗೆ ಸೇರಿದ ವಿದ್ಯಾರ್ಥಿಗಳು ಸಿಸಿಟಿವಿ ಇಲ್ಲದೆ ಇದ್ದರೂ ಪರೀಕ್ಷೆ ನಡೆಸುವಂತೆ ಒತ್ತಡ ಹೇರುತ್ತಿದ್ದಾರೆ. ಇಂತಹ ಅಕ್ರಮಗಳಿಗೆ ಎಬಿವಿಪಿಯಂತಹ ವಿದ್ಯಾರ್ಥಿ ಸಂಘಟನೆಯೂ ಬೆಂಬಲ ನೀಡುತ್ತಿರುವುದು ವಿಷಾದನೀಯ. ವಿಶ್ವವಿದ್ಯಾಲಯದಲ್ಲಿನ ಇತ್ತೀಚಿನ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದು ಕೇವಲ ವಿದ್ಯಾರ್ಥಿಗಳು ಮತ್ತು ಕುಲಪತಿಗಳ ನಡುವಿನ ಸಂಘರ್ಷದಂತೆ ಕಾಣುತ್ತಿಲ್ಲ. ಕುಲಪತಿಗಳನ್ನು ಗುರಿಯಾಗಿಟ್ಟುಕೊಂಡ ವಿಶ್ವವಿದ್ಯಾಲಯದೊಳಗಿನ ಕೆಲವು ದುಷ್ಟಶಕ್ತಿಗಳು ಮರೆಯಲ್ಲಿ ನಿಂತು ಆಟವಾಡುತ್ತಿರುವಂತೆ ಕಾಣುತ್ತಿದೆ. ಈ ಆಟದಲ್ಲಿ ವಿದ್ಯಾರ್ಥಿಗಳು ದಾಳಗಳಾಗುತ್ತಿದ್ದಾರೆ, ವಿಶ್ವವಿದ್ಯಾಲಯ ಆಟದ ಮೈದಾನವಾಗುತ್ತಿದೆ. ಸೋಮವಾರದ ಘಟನೆ ವಿಧಾನಸೌಧದಿಂದ ಕೂಗಳತೆಯ ದೂರದಲ್ಲಿರುವ ಸೆಂಟ್ರಲ್ ಕಾಲೇಜಿನಲ್ಲಿ ನಡೆದಿದೆ ಎನ್ನುವುದು ಗಮನಾರ್ಹ. ವಿಶ್ವವಿದ್ಯಾಲಯಗಳ ಉಸ್ತುವಾರಿ ಉನ್ನತ ಶಿಕ್ಷಣ ಸಚಿವರ ಕರ್ತವ್ಯ. ಕಳೆದ ಕೆಲವು ದಿನಗಳಿಂದ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ದಾಂಧಲೆ ನಡೆಯುತ್ತಿದ್ದರೂ ಸಚಿವ ಡಾ.ವಿ.ಎಸ್.ಆಚಾರ್ಯ ಅವರು ಅದು ತಮಗೆ ಸಂಬಂಧಿಸಿದ ವಿಚಾರವೇ ಅಲ್ಲವೆನ್ನುವಂತೆ ಮೌನ ವಹಿಸಿರುವುದು ಅಚ್ಚರಿ ಹುಟ್ಟಿಸುತ್ತದೆ. ಗಲಾಟೆ ನಡೆಸುತ್ತಿರುವ ವಿದ್ಯಾರ್ಥಿ ಸಂಘಟನೆ ಕೂಡಾ ಅವರಿಗೆ ಅಪರಿಚಿತವೇನಲ್ಲ. ಅದರ ನಾಯಕರನ್ನು ಕರೆದು ಬುದ್ಧಿ ಹೇಳುವಷ್ಟು ಸಲಿಗೆಯೂ ಅವರಿಗೆ ಇದೆ. ತಪ್ಪು ಮಾಡಿದರೆ ತಿದ್ದುವ ಜವಾಬ್ದಾರಿ ನಿರ್ವಹಿಸಬೇಕಾದವರು ಮೌನ ವಹಿಸಿದರೆ ಅದು ಕರ್ತವ್ಯಭ್ರಷ್ಟತೆ ಆಗುತ್ತದೆ. ಸಚಿವರು ಈ ಆರೋಪದಿಂದ ಮುಕ್ತರಾಗಬೇಕಾದರೆ ತಕ್ಷಣ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಹೆಸರಲ್ಲಿ ನಡೆಯುತ್ತಿರುವ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ವರದಿ ಪಡೆದು ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದ್ದರೆ ಅವರಿಗೆ ನ್ಯಾಯ ಕೊಡಿಸುವ ಕೆಲಸವನ್ನೂ ಮಾಡಬೇಕು. ಜತೆಗೆ ವಿದ್ಯಾರ್ಥಿಗಳನ್ನು ಎತ್ತಿಕಟ್ಟಿ ಶಿಕ್ಷಣ ಕೇಂದ್ರದ ಗೌರವ ಮಣ್ಣುಪಾಲು ಮಾಡುತ್ತಿರುವವರ ವಿರುದ್ಧ ಕ್ರಮಕೈಗೊಳ್ಳಲು ಕೂಡಾ ಹಿಂಜರಿಯಬಾರದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.