ಸಂವಿಧಾನದ ಆಶಯಕ್ಕೆ ವಿರೋಧಿ ವ್ಯವಸ್ಥೆಯ ರೂಢಿಗತ ಕ್ರಮ ಬದಲಾಯಿಸುವುದರ ಹಿಂದೆ ಸುಧಾರಣೆಯ ಆಶಯ ಇರುತ್ತದೆ. ಆದರೆ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಸ್ಪರ್ಧಾತ್ಮಕ ಪರೀಕ್ಷೆಗಳ ವಿಧಾನದಲ್ಲಿ ಬದಲಾವಣೆ ಮಾಡಿ ಇತ್ತೀಚೆಗೆ ಹೊರಡಿಸಿರುವ ಅಧಿಸೂಚನೆ ಅತ್ಯಂತ ವಿವಾದಾತ್ಮಕವಾಗಿದೆ. ಅಭ್ಯರ್ಥಿಗಳು ತಮ್ಮ ಮಾತೃಭಾಷೆಯಲ್ಲಿ ಪರೀಕ್ಷೆ ಬರೆಯುವ ಮತ್ತು ತಮಗೆ ಇಷ್ಟವಾದ ಭಾಷಾ ಸಾಹಿತ್ಯವನ್ನು ಆಯ್ದುಕೊಳ್ಳುವ ಮೂಲಭೂತ ಹಕ್ಕುಗಳನ್ನು ಇದು ಕಸಿಯಲಿದೆ. ಹೊಸ ನಿಯಮಾವಳಿಯ ಪ್ರಕಾರ, ಅಭ್ಯರ್ಥಿಗಳು ಪ್ರಾದೇಶಿಕ ಭಾಷೆಯಲ್ಲಿ ಪರೀಕ್ಷೆ ಬರೆಯಲಿಚ್ಛಿಸಿದರೆ ಆ ಭಾಷಾ ಮಾಧ್ಯಮದಲ್ಲೇ ಶಿಕ್ಷಣ ಪಡೆದಿರಬೇಕು. ಪ್ರಾದೇಶಿಕ ಭಾಷಾ ಸಾಹಿತ್ಯವನ್ನು ಐಚ್ಛಿಕ ವಿಷಯವಾಗಿ ಆಯ್ದುಕೊಳ್ಳಲು ಇಷ್ಟಪಟ್ಟರೆ ಅದನ್ನು ಪದವಿಯಲ್ಲಿ ಮೊದಲೇ ಹಾಗೆ ಓದಿರಬೇಕು. ಇವೆಲ್ಲ ಮಾಡಿದರೂ ಒಬ್ಬ ಅಭ್ಯರ್ಥಿ ತನ್ನ ಮಾತೃಭಾಷೆಯಲ್ಲಿ ಪರೀಕ್ಷೆ ಬರೆಯಲು ಯೋಚಿಸಿದರೆ ಅದಕ್ಕೆ ನಿರ್ದಿಷ್ಟ ಸಂಖ್ಯೆಯ ಅಭ್ಯರ್ಥಿಗಳು ಇರಬೇಕು. ಅಂದರೆ, ದೇಶದ ವಿವಿಧ ರಾಜ್ಯಗಳ ಮಕ್ಕಳು ಶಾಲೆಗೆ ಸೇರುವಾಗಲೇ ನಾಗರಿಕ ಸೇವಾ ಪರೀಕ್ಷೆಗೆ ಬೇಕಾದ ಅರ್ಹತೆಗಳ ಬಗ್ಗೆ ಆಲೋಚಿಸಬೇಕಾದ ಅಸಂಬದ್ಧತೆಯನ್ನು ಇದು ಸೃಷ್ಟಿಸುತ್ತದೆ. ಮೇಲ್ನೋಟಕ್ಕೇ ಕಾಣುವಂತೆ ಇದು ಹಲವರ ಹಿತಾಸಕ್ತಿಗಳನ್ನು ಬಲಿಗೊಟ್ಟು ಕೆಲವರ ಮತಾಸಕ್ತಿಗಳನ್ನು ರಕ್ಷಿಸುವ ಪ್ರಯತ್ನ, ಗಣತಂತ್ರದ ಆಧಾರತತ್ವಕ್ಕೆ ಅಪಚಾರ ಮಾಡುವ ಕುತಂತ್ರ - ಎಂದೆಲ್ಲ ದೇಶದ ಉದ್ದಗಲಕ್ಕೆ ತೀವ್ರ ವಿರೋಧ ಏಳುತ್ತಿರುವುದು ಸಹಜ. ನೆರೆಹೊರೆಯ ರಾಜ್ಯಗಳಂತೆ ಕರ್ನಾಟಕವೂ ಈ ನಿರ್ಧಾರವನ್ನು ಬಲವಾಗಿ ವಿರೋಧಿಸಬೇಕು. ನಮ್ಮದು ಬಹುಭಾಷೆ - ಬಹುಸಂಸ್ಕೃತಿಯ ದೇಶವಾಗಿದ್ದು, ವೈವಿಧ್ಯವೇ ಅದರ ವೈಶಿಷ್ಟ್ಯವಾಗಿದೆ. ವಸಾಹತೋತ್ತರ ರಾಜಕೀಯ ಚಿಂತನೆಯಲ್ಲಿ ಪ್ರಾದೇಶಿಕ ಆಶಯಗಳ ರಕ್ಷಣೆಗೇ ಪ್ರಾಧಾನ್ಯವಿದೆ. ಆದರೆ ನಮ್ಮ ಒಕ್ಕೂಟ ವ್ಯವಸ್ಥೆಯ ಅಡಿಪಾಯಕ್ಕೇ ಅಪಾಯ ತರುವ ಇಂಥದೊಂದು ನಿರ್ಧಾರ ಹೇಗೆ ಕೇಂದ್ರ ಸರ್ಕಾರದ ಒಪ್ಪಿಗೆ ಪಡೆಯಿತು? ನಮ್ಮ ಸಂವಿಧಾನದಲ್ಲಿ ಎಂಟನೇ ಪರಿಚ್ಛೇದಕ್ಕೆ ಸೇರಿದ ಎಲ್ಲ ಪ್ರಾದೇಶಿಕ ಭಾಷೆಗಳಿಗೆ ಸಮಾನ ಸ್ಥಾನವಿದೆ. ಆದರೆ ಈ ನಿರ್ಧಾರ ಒಂದೆಡೆ ಹಿಂದಿ ಭಾಷೆಯನ್ನು ರಾಷ್ಟ್ರಭಾಷೆ ಎಂಬಂತೆ ಅಟ್ಟಕ್ಕೇರಿಸಿ ಅದು ಮಿಕ್ಕೆಲ್ಲ ಪ್ರಾದೇಶಿಕ ಭಾಷೆಗಳ ಮೇಲೆ ದಬ್ಬಾಳಿಕೆ ಮಾಡಲು ಅವಕಾಶ ಕೊಡುತ್ತದೆ. ಇನ್ನೊಂದೆಡೆ ಪ್ರತಿಭೆ ಮತ್ತು ಸಾಮರ್ಥ್ಯಕ್ಕೆ ಇಂಗ್ಲಿಷ್ ಭಾಷೆ ಅಗತ್ಯ ಎಂಬ ಆಲೋಚನೆಯನ್ನು ಸಮರ್ಥಿಸುತ್ತದೆ. ಬೇರಾವ ವಿಷಯಗಳಿಗೂ ಇಲ್ಲದ ತೊಡಕನ್ನು ಸಾಹಿತ್ಯಕ್ಕೆ ತಂದೊಡ್ಡುತ್ತದೆ. ಇವೆಲ್ಲಕ್ಕಿಂತ ಮುಖ್ಯವಾಗಿ, ಪ್ರಾದೇಶಿಕ ಭಾಷೆಯ ಮಾಧ್ಯಮಕ್ಕೆ ನಿಯಮಗಳ ಕಡಿವಾಣ ಹಾಕುವ ಮೂಲಕ ಮೊದಲೇ ಆತಂಕ ಹುಟ್ಟಿಸುತ್ತಿರುವ ನಗರ ಮತ್ತು ಗ್ರಾಮೀಣ ಪ್ರದೇಶಗಳ ಅಂತರವನ್ನು ಇನ್ನಷ್ಟು ಹಿಗ್ಗಿಸುತ್ತದೆ. ಆಯೋಗ ಇಂಥ `ಲೋಕಸೇವೆ' ಯನ್ನು ಕೈಬಿಟ್ಟರೆ ಕ್ಷೇಮ. ಇರುವ ಭಾಷಾ ವಿವಾದಕ್ಕೆ ಅದು ಹೊಸ ಭಾಷ್ಯ ಬರೆಯುವುದು ಬೇಡ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.