ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ ಜನ ಪ್ರತಿನಿಧಿಗಳ ನಡವಳಿಕೆಗಳು ಸಾರ್ವಜನಿಕರಿಗೆ ಮಾದರಿ ಆಗಿರಬೇಕು. ಕಾನೂನು ಮಾಡುವ ಅವರು ಕಾನೂನಿಗೆ ಬದ್ಧರಾಗಿರಬೇಕು. ಇದು ಪ್ರಜಾಪ್ರಭುತ್ವ ವ್ಯವಸ್ಥೆ ಬಯಸುವ ಸನ್ನಡತೆ. ಆದರೆ ಕೆಲ ಚುನಾಯಿತ ಪ್ರತಿನಿಧಿಗಳು ಕಾನೂನು ವ್ಯವಸ್ಥೆಯನ್ನು ಅಣಕಿಸುವಂತೆ ಅದನ್ನು ಉಲ್ಲಂಘಿಸುತ್ತಿರುವ ಘಟನೆಗಳು ಆಗಾಗ ನಡೆಯುತ್ತವೆ. ಕಳೆದ ವಾರ ಬಾಗಲಕೋಟೆಯ ವಿಧಾನಸಭೆಯ ಸದಸ್ಯ ವೀರಣ್ಣ ಚರಂತಿಮಠ ಮತ್ತು ವಿಧಾನ ಪರಿಷತ್ ಸದಸ್ಯ ನಾರಾಯಣ ಸಾ ಬಾಂಢಗೆ ತಮ್ಮ ಹಿಂಬಾಲಕರ ಗುಂಪು ಕಟ್ಟಿಕೊಂಡು ಅಲ್ಲಿನ ಠಾಣೆಗೆ ನುಗ್ಗಿ ಪೊಲೀಸರು ವಿಚಾರಣೆಗಾಗಿ ಕರೆತಂದಿದ್ದ ಸ್ಥಳೀಯ ನಗರಸಭೆಯ ಸದಸ್ಯರೊಬ್ಬರನ್ನು ಬಲವಂತವಾಗಿ ಬಿಡಿಸಿಕೊಂಡು ಹೋದ ಘಟನೆ ನಡೆದಿದೆ. ಭಾನುವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಸಿನಿಮಾ ನಟರ ಕ್ರಿಕೆಟ್ ಪಂದ್ಯ ನೋಡಲು ಹೋಗಿದ್ದ ಅಧಿಕಾರಿಯೊಬ್ಬರ ಪತ್ನಿ ಅಲ್ಲಿ ಕರ್ತವ್ಯದಲ್ಲಿದ್ದ ಮಹಿಳಾ ಇನ್ಸ್‌ಪೆಕ್ಟರ್ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಎರಡೂ ಪ್ರಕರಣಗಳು ಪೊಲೀಸರ ಕರ್ತವ್ಯ ನಿರ್ವಹಣೆಗೆ ಅಡ್ಡಿ ಮಾಡಿದ ಶಿಕ್ಷಾರ್ಹ ಅಪರಾಧಗಳು. ಆರೋಪಿಗಳ ವಿರುದ್ಧ ದೂರು ದಾಖಲಿಸಿಕೊಂಡು ತನಿಖೆ ನಡೆಸಿ ಅವರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳುವ ಕನಿಷ್ಠ ಆಸಕ್ತಿಯನ್ನೂ ತೋರದೆ ಪೊಲೀಸ್ ಇಲಾಖೆಗೆ ಕರ್ತವ್ಯಲೋಪ ಪ್ರದರ್ಶಿಸಿದೆ. ಶಾಸಕ ಚರಂತಿಮಠ ಅವರು `ಠಾಣೆಯ ಇನ್ಸ್‌ಪೆಕ್ಟರನ್ನು ಅವಾಚ್ಯ ಶಬ್ದಗಳಲ್ಲಿ ನಿಂದಿಸಿದ್ದಾರೆ. ಅವರು ಪೊಲೀಸರನ್ನಷ್ಟೇ ಅಲ್ಲ, ಸರ್ಕಾರಿ ಅಧಿಕಾರಿಗಳನ್ನೂ ಏಕವಚನದಲ್ಲಿಯೇ ಮಾತನಾಡಿಸುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ~ ಎಂಬ ಆರೋಪವಿದೆ. ಈ ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಲಾಖೆಯ ಕರ್ತವ್ಯಪರತೆಯನ್ನು ಕಡೆಗಣಿಸಿ ಶಾಸಕರ ವಿರುದ್ಧ ದೂರು ದಾಖಲಾಗದಂತೆ ನೋಡಿಕೊಂಡಿದ್ದಾರೆ. ಬೆಂಗಳೂರು ಘಟನೆಯ ಆರೋಪಿ, ಅಧಿಕಾರಿಯ ಪತ್ನಿಯ ವಿರುದ್ಧವೂ ಕ್ರಮ ಜರುಗಿಸುವ ಸಾಧ್ಯತೆ ಕಡಿಮೆ. ಪ್ರಭಾವಿ ವ್ಯಕ್ತಿಗಳು ಕರ್ತವ್ಯನಿರತ ಪೊಲೀಸರನ್ನು ಕೆಟ್ಟ ಭಾಷೆ ಬಳಸಿ ನಿಂದಿಸಿದರೂ, ಹಲ್ಲೆ ಮಾಡಿದರೂ ಸಹಿಸಿಕೊಳ್ಳುವ ಪೊಲೀಸರು ಸಾರ್ವಜನಿಕರು ಹೀಗೇ ವರ್ತಿಸಿದರೆ ಸುಮ್ಮನಿರುತ್ತಾರೆಯೇ? ಅನೇಕ ಸಂದರ್ಭಗಳಲ್ಲಿ ಕರ್ತವ್ಯ ನಿರ್ವಹಣೆಗೆ ಅಡ್ಡಿ ಮಾಡಿದರೆಂದು ಸುಳ್ಳು ಆರೋಪ ಹೊರಿಸಿ ಅಮಾಯಕರನ್ನು ಠಾಣೆಗೆ ಎಳೆದು ತಂದು ಶಿಕ್ಷಿಸಿದ ಉದಾಹರಣೆಗಳಿವೆ. ಇಂತಹ ವರ್ತನೆಗಳಿಂದಾಗಿಯೇ ಪೊಲೀಸರ ವರ್ಚಸ್ಸು ಕಡಿಮೆಯಾಗುತ್ತಿದೆ. ರಾಜಕೀಯ ಒತ್ತಡ ಹಾಗೂ ತಮ್ಮದೇ ಇಲಾಖೆಯ ಅಧಿಕಾರಿಗಳ ಒತ್ತಾಯಕ್ಕೆ ಮಣಿದು ಕರ್ತವ್ಯನಿರತ ಸಿಬ್ಬಂದಿಯನ್ನೂ ರಕ್ಷಿಸದ ಅಸಹಾಯಕ ಸ್ಥಿತಿ ಇಲಾಖೆಯದು. ಸರ್ಕಾರ ರಾಜಕೀಯ ಹಸ್ತಕ್ಷೇಪಕ್ಕೆ ಅವಕಾಶ ನೀಡಿ ಪೊಲೀಸರ ನೈತಿಕ ಸ್ಥೈರ್ಯವನ್ನೇ ಕುಗ್ಗಿಸುತ್ತಿದೆ. ಗೃಹ ಸಚಿವರು ಮತ್ತು ಇಲಾಖೆಯ ಮುಖ್ಯಸ್ಥರು ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಈ ಎರಡೂ ಪ್ರಕರಣಗಳಲ್ಲಿ ತಪ್ಪಿತಸ್ಥರನ್ನು ಕಾನೂನು ಪ್ರಕಾರ ವಿಚಾರಣೆಗೆ ಒಳಪಡಿಸಿ ನ್ಯಾಯಾಲಯದಿಂದ ಶಿಕ್ಷೆ ಕೊಡಿಸುವುದಕ್ಕೆ ಅಗತ್ಯ ತನಿಖೆಯ ಪ್ರಕ್ರಿಯೆಯನ್ನು ಮುಂದುವರಿಸಬೇಕು. ಶಾಸಕರೇ ಪೊಲೀಸ್ ಠಾಣೆಗೆ ನುಗ್ಗಿ ಆರೋಪಿಗಳನ್ನು ಬಿಡಿಸಿಕೊಂಡು ಹೋಗುವಂಥ ಅರಾಜಕ ಸ್ಥಿತಿಗೆ ರಾಜ್ಯವನ್ನು ದೂಡಬಾರದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.