ನಾಯಕರೇ ಬದಲಾಗಬೇಕು ಜನರ ಮನೋಭಾವ ಬದಲಾವಣೆಯೇ ಸಮಸ್ಯೆಗಳಿಗೆ ಪರಿಹಾರ ಎಂದು ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ನಡೆದ `ಹಿಂದೂ ಶಕ್ತಿ ಸಂಗಮ~ದ ಸಮಾರೋಪ ಸಮಾರಂಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸರಸಂಘ ಚಾಲಕ ಮೋಹನ್ ಮಧುಕರ್‌ರಾವ್ ಭಾಗ್ವತ್ ಅಭಿಪ್ರಾಯಪಟ್ಟಿದ್ದಾರೆ. ಇದು ಸ್ವಾಗತಾರ್ಹವಾದ ಮಾತು. ಬದಲಾವಣೆ ಎನ್ನುವುದು ಜೀವಂತಿಕೆಯ ಲಕ್ಷಣ. ವಿಚಾರ ನಿಂತ ನೀರಾದರೆ ಅಲ್ಲಿಯೇ ಕೊಳೆತು ನಾರತೊಡಗುತ್ತದೆ, ಅದು ಹರಿವ ನದಿಯಾಗಬೇಕು. ಬಹುಶಃ ಈ ಅರ್ಥದಲ್ಲಿಯೇ ಭಾಗ್ವತ್ ಮಾತನಾಡಿದ್ದಾರೆ. ಆದರೆ ಮನೋಭಾವದ ಬದಲಾವಣೆ ಎಲ್ಲಿಂದ ಪ್ರಾರಂಭವಾಗಬೇಕು, ಜನರಿಂದಲೇ ಇಲ್ಲವೇ ಜನರ ನಾಯಕರಿಂದಲೇ? ಎನ್ನುವುದು ಈಗಿನ ಮುಖ್ಯ ಪ್ರಶ್ನೆ. ಅದು ನಾಯಕರಿಂದಲೇ ಪ್ರಾರಂಭವಾಗಬೇಕು ಎನ್ನುವುದಾದರೆ ಭಾಗ್ವತ್ ಅವರು ಪ್ರತಿನಿಧಿಸುತ್ತಿರುವ ಸಂಘಟನೆಯಿಂದಲೇ ಮನೋಭಾವದ ಬದಲಾವಣೆಯನ್ನು ನಿರೀಕ್ಷಿಸಬೇಕಾಗುತ್ತದೆ. ಆರ್‌ಎಸ್‌ಎಸ್ ತನ್ನ ಸಂವಿಧಾನದಲ್ಲಿ ಸಾಂಸ್ಕೃತಿಕ ಸಂಘಟನೆ ಎಂದು ಹೇಳಿಕೊಂಡರೂ ಅದು ಹಿಂದೂ ಧರ್ಮದ ನಾಯಕನ ಪಾತ್ರವನ್ನೇ ನಿರ್ವಹಿಸುತ್ತಾ ಬಂದಿದೆ. ಈ ಹಿಂದೂ ಧರ್ಮದ ಇತಿಹಾಸವನ್ನು ಅವಲೋಕನ ಮಾಡಿದರೆ ಕಾಲಕಾಲಕ್ಕೆ ಅದು ಬದಲಾವ ಣೆಯ ಗಾಳಿಗೆ ತನ್ನನ್ನು ಒಡ್ಡಿಕೊಳ್ಳುತ್ತಲೇ ಬಂದಿರುವುದನ್ನು ಕಾಣಬಹುದು. ಬಸವಣ್ಣನವರಿಂದ ಹಿಡಿದು ವಿವೇಕಾನಂದ, ಪೆರಿಯಾರ್, ನಾರಾಯಣಗುರುಗಳ ವರೆಗೆ ಎಲ್ಲರೂ ಹಿಂದೂಧರ್ಮದ ಸುಧಾರಣೆಗಾಗಿಯೇ ಪ್ರಯತ್ನ ಮಾಡಿದವರು. ಈ ಧರ್ಮ ಸುಧಾರಕರಿಂದಾಗಿಯೇ ಅಂಧ ಸಂಪ್ರದಾಯಗಳು ಮತ್ತು ಮನುಷ್ಯವಿರೋಧಿ ಆಚಾರ-ವಿಚಾರಗಳ ಸಂಕೋಲೆಯಿಂದ ಹಿಂದೂ ಧರ್ಮ ಬಿಡುಗಡೆ ಪಡೆದು ಬೆಳೆಯುತ್ತಾ ಬಂದದ್ದು. ಆದರೆ ಇತ್ತೀಚಿನ ದಿನಗಳಲ್ಲಿ ಧರ್ಮಸುಧಾರಣೆಯ ಈ ಪ್ರಕ್ರಿಯೆ ಎಲ್ಲೋ ನಿಂತುಹೋದ ಹಾಗೆ, ಬದಲಾವಣೆಯ ಚಕ್ರ ಮತ್ತೆ ಹಿಂದಕ್ಕೆ ತಿರುಗುತ್ತಿರುವ ಹಾಗೆ ಕಾಣುತ್ತಿದೆ. ಹಿಂದೂ ಧರ್ಮವನ್ನು ರೋಗಗಳಂತೆ ಕಾಡುತ್ತಾ ಬಂದ ಜಾತೀಯತೆ, ಅಸ್ಪೃಶ್ಯತೆ ಮತ್ತು ಕಂದಾಚಾರಗಳು ತನ್ನೆಲ್ಲ ಕರಾಳ ರೂಪಗಳೊಂದಿಗೆ ಮತ್ತೆ ತಲೆ ಎತ್ತುತ್ತಿವೆ. ಜಾತಿ ಕಾರಣಕ್ಕಾಗಿಯೇ ಹಿಂದೂಗಳಲ್ಲಿಯೇ ಇರುವ ದುರ್ಬಲರ ಮೇಲೆ ನಿತ್ಯ ದೌರ್ಜನ್ಯಗಳು ನಡೆಯುತ್ತಿವೆ. ಇದನ್ನು ನಡೆಸುತ್ತಿರುವವರು ಹಿಂದೂಗಳೇ ಎನ್ನುವುದನ್ನು ಮರೆಯಬಾರದು. ಎಲ್ಲ ದೇವಾಲಯಗಳಿಗೆ ಎಲ್ಲರಿಗೂ ಇಂದಿಗೂ ಮುಕ್ತಪ್ರವೇಶ ಇಲ್ಲ. ಹಿಂದೂಗಳೆಲ್ಲರೂ ಕೂಡಿ ಊಟಮಾಡುವಂತಹ ಕನಿಷ್ಠ ಮನುಷ್ಯಸಹಜ ನಡವಳಿಕೆಯನ್ನು ದೇವಾಲಯಗಳಲ್ಲಿಯೇ ಕಾಣದಂತಾಗಿದೆ. ಮಡೆಸ್ನಾನದಂತಹ ಮೂಢನಂಬಿಕೆಯನ್ನು ಹಿಂದೂ ಧರ್ಮದ ವಕ್ತಾರರಂತೆ ವರ್ತಿಸುತ್ತಿರುವ ರಾಜಕಾರಣಿಗಳು ಮಾತ್ರವಲ್ಲ, ಧರ್ಮಗುರುಗಳೇ ಸಮರ್ಥಿಸುತ್ತಿದ್ದಾರೆ. ಸಮುದ್ರದಾಟಿ ಹೋದ ಸ್ವಾಮಿಗಳು ದೇವರಪೂಜೆಗೆ ಅನರ್ಹರು ಎನ್ನುವ ಹಾಸ್ಯಾಸ್ಪದ ಕಟ್ಟಳೆಗಳು ಈಗಲೂ ಜಾರಿಯಲ್ಲಿವೆ. ಹಿಂದೂಧರ್ಮದಿಂದ ಸಾಮಾನ್ಯ ಮನುಷ್ಯರನ್ನು ದೂರ ಮಾಡುತ್ತಿರುವ ಈಗಿನ ವ್ಯವಸ್ಥೆ ಬದಲಾಗಬೇಕಾದರೆ ಈ ಧರ್ಮದ ನಾಯಕರ ಮನೋಭಾವ ಮೊದಲು ಬದಲಾಗಬೇಕು. ಹಿಂದಿನ ಧಾರ್ಮಿಕ ನಾಯಕರು ಪ್ರಾರಂಭಿಸಿದ್ದ ಧರ್ಮ ಸುಧಾರಣೆಯ ಪ್ರಕ್ರಿಯೆಯನ್ನು ಅವರು ಮುಂದುವರಿಸಿಕೊಂಡುಹೋಗುವ ದಿಟ್ಟತನವನ್ನು ತೋರಬೇಕು. ಇಂಥ ಪ್ರಯತ್ನ ನಡೆದರೆ ಮಾತ್ರ ಹಿಂದೂ ಧರ್ಮವನ್ನು ಒಂದಾಗಿ ಕಟ್ಟಿ ಬೆಳೆಸಲು ಹೊರಟಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕನಸು ಸಾಕಾರಗೊಳ್ಳಲು ಸಾಧ್ಯ. ಇದಕ್ಕಾಗಿ ಮೊದಲು ಮೋಹನ್ ಭಾಗ್ವತ್ ಪ್ರತಿನಿಧಿಸುತ್ತಿರುವ ಸಂಘಟನೆಯ ಮನೋಭಾವ ಕೂಡಾ ಬದಲಾಗಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.