ಕಾಳ್ಗಿಚ್ಚಿನ ಹಾವಳಿ ಕಳೆದ ಎರಡು ವಾರಗಳಿಂದ ರಾಜ್ಯದ ವಿವಿಧ ಕಡೆ ಸಂಭವಿಸಿದ ಕಾಳ್ಗಿಚ್ಚಿನಿಂದ ನೂರಾರು ಎಕರೆ ಅರಣ್ಯ ಹಾನಿಗೆ ಒಳಗಾಗಿದೆ. ಸತತ ನಿಗಾ ಇರುವ ರಾಷ್ಟ್ರೀಯ ಉದ್ಯಾನಗಳಲ್ಲಿಯೂ ಕಾಳ್ಗಿಚ್ಚಿನ ಪಿಡುಗು ತಪ್ಪಿಲ್ಲ. ಬಂಡೀಪುರ, ನಾಗರಹೊಳೆ ಮಾತ್ರವಲ್ಲದೆ, ಹಾಸನ, ಶಿವಮೊಗ್ಗ, ತುಮಕೂರು ಜಿಲ್ಲೆಗಳಲ್ಲಿಯೂ ಕಾಳ್ಗಿಚ್ಚಿನಿಂದ ಅಪಾರ ಪ್ರಮಾಣದ ಅರಣ್ಯ ಸಂಪತ್ತಿನ ನಾಶದ ವರದಿಗಳು ಬಂದಿವೆ. ಬಿಸಿಲಿನ ಝಳ, ಜೋರಾಗಿ ಬೀಸುವ ಗಾಳಿ, ಒಣಗಿ ನಿಂತ ಬಿದಿರು ಮೆಳೆ ಕಾಳ್ಗಿಚ್ಚಿನ ತೀವ್ರತೆಯನ್ನು ಹೆಚ್ಚಿಸಿದೆ. ಕಾಡಂಚಿನ ಅಡಿಕೆ ತೋಟಗಳು, ಕೆಲವು ಕಡೆ ಬಾಳೆತೋಟಗಳೂ ಕಾಳ್ಗಿಚ್ಚಿನಿಂದ ಹಾನಿಗೆ ಒಳಗಾಗಿವೆ. ಅರಣ್ಯದಲ್ಲಿಯೇ ವಸತಿ ಪ್ರದೇಶಗಳಿರುವುದರಿಂದ ಆಕಸ್ಮಿಕವಾಗಿ ಒಣ ಎಲೆಗಳಿಗೆ ತಗಲುವ ಬೆಂಕಿ ಕಾಳ್ಗಿಚ್ಚಾಗಿ ವ್ಯಾಪಿಸುವುದು ಒಂದು ಬಗೆಯಾದರೆ, ಅರಣ್ಯ ಇಲಾಖೆ ಸಿಬ್ಬಂದಿಯಿಂದ ವಿಚಾರಣೆಗೆ ಇಲ್ಲವೇ ಕಿರುಕುಳಕ್ಕೆ ಒಳಗಾದವರು ದುರುದ್ದೇಶದಿಂದ ಹಚ್ಚುವ ಬೆಂಕಿ ಇನ್ನೊಂದು ಬಗೆಯದು. ರಾತ್ರಿ ಹೊತ್ತಿನಲ್ಲಿ ಕಾಡಲ್ಲಿ ಸಾಗುವವರು ಸಹಜವಾಗಿ ಸೇದಿ ಬಿಸಾಡುವ ಬೀಡಿ ಸಿಗರೇಟು ತುಂಡುಗಳೂ ಬೆಂಕಿಯ ಅನಾಹುತಕ್ಕೆ ನೆಪವಾಗಬಲ್ಲದು. ರಾಜ್ಯದಲ್ಲಿ ಅರಣ್ಯಪ್ರದೇಶ ಕೃಷಿ ಮತ್ತು ಜನವಸತಿಯ ಕಾರಣ ಸಂಕುಚಿತವಾಗುತ್ತಿದೆಯಾದರೂ ಇರುವ ಅರಣ್ಯ ಪ್ರದೇಶವನ್ನು ಕಳ್ಳ ಬೇಟೆಗಾರರು, ಮರಗಳ್ಳರು ಮತ್ತು ಅತಿಕ್ರಮಣಕಾರರಿಂದ ರಕ್ಷಿಸುವಷ್ಟು ಕಾವಲು ಸಿಬ್ಬಂದಿ ಇಲ್ಲ. ಅವಶ್ಯಕ ಸಿಬ್ಬಂದಿಯ ಕೊರತೆ ಕಾಳ್ಗಿಚ್ಚನ್ನು ನಿಯಂತ್ರಣಕ್ಕೆ ತರುವ ಸಂದರ್ಭದಲ್ಲಿ ಅರಣ್ಯ ಇಲಾಖೆಗೆ ಪ್ರತ್ಯಕ್ಷವಾಗಿಯೇ ಅನುಭವಕ್ಕೆ ಬರುತ್ತಿದೆ. ನಾಗರಹೊಳೆ, ಬಂಡೀಪುರ ಆನೆಗಳ ಆವಾಸಗಳಾಗಿದ್ದು ಬೇಸಿಗೆಯ ಆರಂಭದಲ್ಲಿಯೇ ಕಾಳ್ಗಿಚ್ಚಿನಿಂದ ಬಿದಿರು ಮತ್ತಿತರ ಮೇವಿನ ಸಸ್ಯಗಳು ನಷ್ಟವಾದರೆ ಆನೆಗಳು ಮೇವನ್ನು ಅರಸಿ ತೋಟಗಳಿಗೆ ನುಗ್ಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಮತ್ತೆ ವನ್ಯಜೀವಿಗಳೊಂದಿಗೆ ಮನುಷ್ಯರ ಸಂಘರ್ಷ. ಅರಣ್ಯದ ವಿಸ್ತೀರ್ಣಕ್ಕೆ ಅನುಗುಣವಾಗಿ ಕಾವಲು ಸಿಬ್ಬಂದಿಯನ್ನು ಎಲ್ಲಕಡೆಯೂ ನೇಮಿಸಿಕೊಳ್ಳುವುದು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಇದಕ್ಕೆ ಪರಿಹಾರವೆಂಬಂತೆ ಅರಣ್ಯ ಸಂರಕ್ಷಣೆಯ ಹೊಣೆಯನ್ನು ಸ್ವಯಂ ಪ್ರೇರಣೆಯಿಂದ ಕೈಗೊಳ್ಳಲೆಂದು ಉದ್ದೇಶಿಸಿ ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಗ್ರಾಮ ಅರಣ್ಯ ಸಮಿತಿಗಳನ್ನು ಸರ್ಕಾರ ರಚಿಸಿದೆ. ಸಾರ್ವಜನಿಕರನ್ನು ಒಳಗೊಂಡು ಸರ್ಕಾರ ರಚಿಸುವ ಯಾವುದೇ ಸಮಿತಿಗಳಿಗೆ ಆಗುವಂತೆ, ಗ್ರಾಮ ಅರಣ್ಯ ಸಮಿತಿಗಳಲ್ಲಿಯೂ ಪಕ್ಷ ರಾಜಕೀಯದ ಲೆಕ್ಕಾಚಾರವೇ ಮೇಲುಗೈ ಪಡೆದು ಮೂಲ ಉದ್ದೇಶ ನೇಪಥ್ಯಕ್ಕೆ ಸರಿದಿದೆ. ಅರಣ್ಯ ಸಂರಕ್ಷಣೆ ಇಡೀ ಜನಸಮುದಾಯದ ಮುಂದಿನ ಭವಿಷ್ಯಕ್ಕೆ ಬೇಕಾದ ಮಹತ್ವದ ಕಾರ್ಯ ಎಂಬುದನ್ನು ಜನತೆಯಲ್ಲಿ ಮನದಟ್ಟು ಮಾಡದೆ ಕಾಡಿನ ಸಂಪತ್ತಿನ ರಕ್ಷಣೆಯಲ್ಲಿ ಜನರನ್ನು ತೊಡಗಿಸಿಕೊಳ್ಳುವುದು ಕಷ್ಟ. ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ಕಾರ್ಯೋನ್ಮುಖವಾಗಿರುವ ಸ್ವಯಂ ಸೇವಾ ಸಂಘಟನೆಗಳಿಗಿಂತಲೂ ಕಾಡನ್ನು ಅವಲಂಬಿಸಿದವರಲ್ಲಿ ಅರಣ್ಯ ರಕ್ಷಣೆಯ ಮಹತ್ವವನ್ನು ತಿಳಿಯಪಡಿಸುವ ಕಾರ್ಯ ಅರಣ್ಯ ಇಲಾಖೆಯಿಂದಲೇ ಆಗಬೇಕು. ಜನರನ್ನು ತೊಡಗಿಸಿಕೊಳ್ಳದೆ ಕಾಳ್ಗಿಚ್ಚಿನಂಥ ಬೇಸಿಗೆ ಉಪಟಳಗಳನ್ನು ಎದುರಿಸುವುದು ಸುಲಭವಲ್ಲ. ಅರಣ್ಯ ಇಲಾಖೆ ಈ ನಿಟ್ಟಿನಲ್ಲಿ ಮುಂದುವರಿಯುವುದು ಅವಶ್ಯಕ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.