ಸಂತಸ ತಂದ ಹಾಕಿ ತಂಡ ಭಾರತದ ಹಾಕಿ ಆಟಗಾರರು ಕ್ರೀಡಾಪ್ರೇಮಿಗಳಲ್ಲಿ ಸಂತಸ ಮೂಡಿಸಿದ್ದಾರೆ. ನವದೆಹಲಿಯಲ್ಲಿ ಭಾನುವಾರ, ಭಾರತ ಹಾಕಿ ತಂಡ ಲಂಡನ್ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ್ದು ಸದ್ಯಕ್ಕೆ ಪದಕ ಗೆದ್ದಷ್ಟೇ ಸಂತಸ ಮೂಡಿಸಿದೆ. 2008ರ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಲು ವಿಫಲವಾಗಿದ್ದ ಭಾರತ ಈ ಬಾರಿಯೂ ಪ್ರವೇಶ ಪಡೆಯುವುದು ಅನುಮಾನವೇ ಆಗಿತ್ತು. ದೇಶದ ಕ್ರೀಡಾರಂಗ ಒಂದು ರೀತಿಯಲ್ಲಿ ಕ್ರಿಕೆಟ್‌ಮಯವಾಗಿದ್ದರೂ ಧೋನಿ ಪಡೆ ಕಳೆದ ವರ್ಷ ವಿಶ್ವಕಪ್ ಗೆದ್ದ ಮೇಲೆ ವಿದೇಶಗಳಲ್ಲಿ ತೀರಾ ನಿರಾಶಾದಾಯಕ ಆಟವಾಡುತ್ತಿದೆ. ಆದರೂ ಕ್ರಿಕೆಟ್ ಜನಪ್ರಿಯತೆಗೇನೂ ಪೆಟ್ಟು ಬಿದ್ದಿಲ್ಲ. ಭಾರತ ಹಾಕಿ ತಂಡ ಇಂಥ ಪರಿಸ್ಥಿತಿಯಲ್ಲಿ ಎಲ್ಲ ರೀತಿಯ ನಕಾರಾತ್ಮಕ ನಿಲುವುಗಳನ್ನು ತೊಡೆದು ಹಾಕಿ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಬೇಕಿತ್ತು. ಹಾಕಿ ರಂಗದಲ್ಲಿ ತುಂಬಿರುವ ರಾಜಕೀಯವೇ ಆಟಗಾರರಿಗೆ ಮತ್ತು ಆಟಕ್ಕೆ ಮುಳುವಾಗಿತ್ತು. ಕ್ರಿಕೆಟ್ ಆಟಗಾರರಿಗೆ ದೊರೆಯುವ ಹಣ ಹಾಗೂ ಇತರ ಸೌಕರ್ಯಗಳಿಗೆ ಹೋಲಿಸಿದರೆ ಹಾಕಿ ಆಟಗಾರರಿಗೆ ಸಿಗುತ್ತಿರುವುದು ಬಹಳ ಕಡಿಮೆ. ಆಟಗಾರರು ಅಂತರರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಆಟ ತೋರುವ ಸಾಮರ್ಥ್ಯ ಹೊಂದಿದ್ದರೂ ಕೀಳರಿಮೆ ಅವರನ್ನು ಕಾಡುತ್ತಿತ್ತು. ವಿದೇಶಗಳಲ್ಲಿ ನಡೆಯುವ ಪ್ರಮುಖ ಟೂರ್ನಿಗಳಲ್ಲಿ ಭಾರತ ಅಗ್ರಸ್ಥಾನ ಗಳಿಸದೆ ಬಹಳ ವರ್ಷಗಳಾಗಿವೆ. ಒಲಿಂಪಿಕ್ ಚಿನ್ನದ ಪದಕ ಗೆಲ್ಲದೆ ಮೂರು ದಶಕಗಳಾಗಿವೆ. 1980ರ ಮಾಸ್ಕೊ ಒಲಿಂಪಿಕ್ಸ್‌ನಲ್ಲಿ, ಪ್ರಮುಖ ರಾಷ್ಟ್ರಗಳ ಬಹಿಷ್ಕಾರದಲ್ಲಿ ಚಿನ್ನದ ಪದಕ ಗೆದ್ದಿದ್ದ ಭಾರತ, ನಂತರ ಚಿನ್ನ ಹೋಗಲಿ, ಕಂಚಿನ ಪದಕವನ್ನೂ ಗೆಲ್ಲಲಿಲ್ಲ. ಭಾರತದ ಹಾಕಿ ಮಾನ ಹೀಗೆ ಕುಸಿಯುತ್ತ ನಡೆದು, ನಾಲ್ಕು ವರ್ಷಗಳ ಹಿಂದೆ, ಒಲಿಂಪಿಕ್ ಇತಿಹಾಸದಲ್ಲೇ ಮೊದಲ ಬಾರಿಗೆ ಅರ್ಹತೆ ಗಳಿಸಲು ವಿಫಲವಾಗಿ ಪ್ರಪಾತಕ್ಕೆ ಬಿದ್ದಿತ್ತು. ಅದನ್ನು ಮೇಲೆತ್ತುವ ಸಕಾರಾತ್ಮಕ ಯತ್ನಗಳನ್ನು ನಡೆಸದೆ ಅಧಿಕಾರಿಗಳು ತಮ್ಮ ಸ್ವಾರ್ಥ ರಾಜಕೀಯದಲ್ಲೇ ಮೆರೆದರು. ನವದೆಹಲಿಯಲ್ಲಿ 2010 ರಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡೆಗಳಲ್ಲಿ ಹಾಗೂ ನಂತರ ಚೀನಾದಲ್ಲಿ ನಡೆದ ಏಷ್ಯನ್ ಕ್ರೀಡೆಗಳಲ್ಲಿ ಚಿನ್ನ ಗೆಲ್ಲಲು ವಿಫಲವಾದ ಭಾರತ ತಂಡ ಲಂಡನ್ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸುವ ಬಗ್ಗೆ ಯಾರಿಗೂ ವಿಶ್ವಾಸ ಇರಲಿಲ್ಲ. ಆದರೆ ಹಾಕಿ ಆಟಗಾರರು ಎಲ್ಲರ ನಿರೀಕ್ಷೆಗೂ ಮೀರಿ ಆಟವಾಡಿ ಒಲಿಂಪಿಕ್ಸ್‌ಗೆ ಮುನ್ನಡೆದಿದ್ದಾರೆ. ಇದೇ ಉತ್ಸಾಹ, ಛಲವನ್ನು ಅವರು ಇನ್ನೂ ಆರು ತಿಂಗಳು ಕಾಯ್ದುಕೊಳ್ಳಬೇಕು. ಅವರ ತರಬೇತಿಗೆ ಕ್ರೀಡಾ ಇಲಾಖೆ, ಹಾಕಿ ಇಂಡಿಯಾ ಸಂಸ್ಥೆ ಎಲ್ಲ ಸೌಲಭ್ಯಗಳನ್ನೂ ಒದಗಿಸಿಕೊಡಬೇಕು. ಭಾರತದ ಮಟ್ಟಿಗೆ ಒಲಿಂಪಿಕ್ ಕ್ರೀಡೆಗಳಲ್ಲಿ ಹಾಕಿ ಚಿನ್ನದ ಪದಕಕ್ಕಿರುವ ಬೆಲೆ ಬೇರೆ ಯಾವ ಪದಕಕ್ಕೂ ಇಲ್ಲ. ಒಲಿಂಪಿಕ್ ಇತಿಹಾಸದಲ್ಲಿ ಎಂಟು ಸಲ ಚಿನ್ನದ ಪದಕ ಗೆದ್ದಿರುವ ಭಾರತ ಆ ಗತವೈಭವವನ್ನು ಮರಳಿ ಪಡೆಯಲು ಸಾಧ್ಯವಾಗುತ್ತಿಲ್ಲ. ಲಂಡನ್ ಒಲಿಂಪಿಕ್ಸ್‌ನಲ್ಲಿ ಭಾರತ ಪದಕ ಗೆದ್ದರೆ ರಾಷ್ಟ್ರದಲ್ಲಿ ಹಾಕಿ ಮತ್ತೆ ಚಿಗುರಬಲ್ಲದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.