ಪುನರ್ ಪರಿಶೀಲನೆ ಅಗತ್ಯ ದೇಶದ ಪ್ರಮುಖ ನದಿಗಳನ್ನು ಜೋಡಣೆ ಮಾಡುವ ಉದ್ದೆೀಶದ ಮಹತ್ವಾಕಾಂಕ್ಷಿ ಯೋಜನೆಯನ್ನು ಕಾಲಮಿತಿಯೊಳಗೆ ಅನುಷ್ಠಾನಗೊಳಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿರುವುದು ಆ ಕುರಿತ ವಿವಾದ ಮತ್ತಷ್ಟು ತೀವ್ರಗೊಳ್ಳಲು ಕಾರಣವಾಗಿದೆ. ಹೀಗೆ ನದಿಗಳನ್ನು ಜೋಡಿಸುವುದರಿಂದ ಬರಗಾಲ ಪೀಡಿತ ಪ್ರದೇಶಗಳ ಜನರಿಗೆ ಅನುಕೂಲವಾಗಲಿದೆ. ಪ್ರವಾಹದಿಂದ ಆಗುವ ಹಾನಿ ತಪ್ಪಲಿದೆ. ದೇಶದ ಆರ್ಥಿಕ ಸ್ಥಿತಿ ಉತ್ತಮವಾಗಲಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಹೇಳಿದ್ದಾರೆ. ಅವರು ಹೇಳಿರುವ ಮಾತಿನಲ್ಲಿ ಹೊಸದೇನೂ ಇಲ್ಲ. ಹತ್ತು ವರ್ಷಗಳ ಹಿಂದೆ ಈ ಯೋಜನೆಯನ್ನು ರೂಪಿಸಿದಾಗ ಅದರ ಸಮರ್ಥನೆಗೆ ಇದೇ ವಾದವನ್ನು ಕೊಡಲಾಗಿತ್ತು. ಅಂಥ ಯೋಜನೆಯಿಂದ ಆಗಬಹುದಾದ ಕೆಟ್ಟ ಪರಿಣಾಮಗಳ ಬಗ್ಗೆಯೂ ಸಾಕಷ್ಟು ವಿಶ್ಲೇಷಣೆಗಳು ನಡೆದಿವೆ. ಈ ಯೋಜನೆ ರಾಜ್ಯ ರಾಜ್ಯಗಳ ನಡುವೆ ಹೊಸ ವಿವಾದಗಳಿಗೆ ಕಾರಣವಾಗುವುದರಲ್ಲಿ ಅನುಮಾನವಿಲ್ಲ. ಈಗಾಗಲೇ ವಿವಾದಗಳಿಂದಾಗಿ ಸಣ್ಣಪುಟ್ಟ ನೀರಾವರಿ ಯೋಜನೆಗಳೇ ಜಾರಿಯಾಗದಂಥ ಸ್ಥಿತಿ ಇದೆ. ಇಂಥ ಯೋಜನೆಗಳಿಂದಾಗಿ ಮನೆ ಮಠ ಕಳೆದುಕೊಂಡವರ ಪುನರ್‌ವಸತಿಯೇ ಸಮಸ್ಯೆಯಾಗಿರುವಾಗ ಆ ಬೃಹತ್ ಯೋಜನೆ ಸೃಷ್ಟಿಸಲಿರುವ ಪುನರ್‌ವಸತಿ ಸಮಸ್ಯೆ ಕಲ್ಪನೆಗೂ ಮೀರಿದ್ದು. ದೇಶದಲ್ಲಿ ಈಗ ಜಾರಿಯಾಗುತ್ತಿರುವ ಯೋಜನೆಗಳ ಬಹುಪಾಲು ಹಣ ಸೋರಿಹೋಗುತ್ತಿದ್ದು ಉದ್ದೇಶಿತ ನದಿ ನೀರು ಸಂಪರ್ಕ ಯೋಜನೆಯ ಗತಿ ಭಿನ್ನವಾಗುವ ಸಾಧ್ಯತೆ ಇಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಕೆಲವರನ್ನೇ ಶ್ರೀಮಂತರನ್ನಾಗಿ ಮಾಡುವ ದೊಡ್ಡ ಅಣೆಕಟ್ಟೆಗಳನ್ನು ಕಟ್ಟುವ ಯೋಜನೆ ಆಘಾತಕಾರಿಯಾದುದು. ಇಂದಿಗೂ ಸಣ್ಣ ಪುಟ್ಟ ಕೆರೆಕಟ್ಟೆಗಳನ್ನು ಕಟ್ಟಿ ನೀರು ಸಂಗ್ರಹಿಸಿ ಅವುಗಳ ನಡುವೆ ಸಂಪರ್ಕ ಸ್ಥಾಪಿಸುವ ಸಾಂಪ್ರದಾಯಿಕ ನೀರಾವರಿ ಪದ್ಧತಿಯೇ ಹೆಚ್ಚು ಉಪಯೋಗಕ್ಕೆ ಬರುವಂಥದು. ಅಂತರ್‌ಜಲ ಹೆಚ್ಚಲು ಮತ್ತು ಸುಸ್ಥಿರ ಅಭಿವೃದ್ಧಿಗೆ ಇಂಥ ಯೋಜನೆಗಳು ಸಹಾಯಕ, ದೊಡ್ಡ ದೊಡ್ಡ ಯೋಜನೆಗಳಲ್ಲ. ಕುಡಿಯುವ ನೀರಿಗಾಗಿ, ನೀರಾವರಿಗಾಗಿ ಬೇರೆ ಬೇರೆ ನದಿಗಳ ನೀರನ್ನು ಬೇರೆ ಕಡೆ ತಂದು ಬಳಸಿಕೊಳ್ಳುತ್ತಿರುವ ಹಲವು ಯೋಜನೆಗಳು ಈಗಾಗಲೇ ವಿವಿಧ ರಾಜ್ಯಗಳಲ್ಲಿ ಜಾರಿಯಾಗಿವೆ. ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ಅಂಥ ಪ್ರಯತ್ನಗಳನ್ನು ಇನ್ನೂ ವ್ಯಾಪಕ ಪ್ರಮಾಣದಲ್ಲಿ ಕೈಗೆತ್ತಿಕೊಳ್ಳುವುದು ಹೆಚ್ಚು ಅರ್ಥಪೂರ್ಣವಾಗಬಹುದು. ಇಂಥ ಅಂಶಗಳನ್ನು ಸುಪ್ರೀಂ ಕೋರ್ಟ್ ಪರಿಗಣನೆಗೆ ತೆಗೆದುಕೊಂಡಂತೆ ಕಾಣುತ್ತಿಲ್ಲ. ಜನರ ಏಳಿಗೆಗೆ ಸಹಾಯಕವಾಗಲಿ, ಅಭಿವೃದ್ಧಿ ಸಮಸ್ಯೆ ನಿವಾರಣೆಯಾಗಲಿ ಎಂಬ ಸದಾಶಯದಿಂದ ಅಂಥ ಆದೇಶವನ್ನು ನೀಡಿರುವಂತೆ ಕಾಣುತ್ತದೆ. ಸದಾಶಯ ಒಳ್ಳೆಯದೇ. ಸದಾಶಯ ವಾಸ್ತವವನ್ನು ಪ್ರತಿನಿಧಿಸುವುದಿಲ್ಲ. ಹಾಗೆ ನೋಡಿದರೆ ಆಗಬಹುದಾದ ಅನುಕೂಲಗಳಿಗಿಂತ ಅನಾಹುತಗಳೇ ಜಾಸ್ತಿ ಎಂದು ಪರಿಸರ, ಸಾಮಾಜಿಕ ಹಾಗೂ ಸಮುದಾಯ ತಜ್ಞರು ಹೇಳುತ್ತಾರೆ. ಅವರ ವಾದವನ್ನು ಸುಲಭವಾಗಿ ತಳ್ಳಿಹಾಕಿ ಆಗಬಹುದಾದ ಅನಾಹುತಗಳನ್ನು ಮೈಮೇಲೆ ಎಳೆದುಕೊಳ್ಳುವುದು ಭವಿಷ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಆದ್ದರಿಂದ ಈ ಯೋಜನೆಯ ಜಾರಿಯಿಂದ ಆಗಬಹುದಾದ ಕೆಟ್ಟ ಪರಿಣಾಮಗಳ ಬಗ್ಗೆ ವಿವರವಾಗಿ ಅಧ್ಯಯನ ನಡೆಯಬೇಕು. ಒಂದು ಅಧ್ಯಯನ ನಡೆದರೆ ಸಾಲದು, ಹಲವು ಅಧ್ಯಯನಗಳು ನಡೆಯಲಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.