ಶಿಕ್ಷಣ ಸುಧಾರಣೆಯ ದೃಷ್ಟಿ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ ತರುವುದಕ್ಕೆ ಕೇಂದ್ರ ಸರ್ಕಾರ ತೀವ್ರ ಪ್ರಯತ್ನಗಳನ್ನು ನಡೆಸುತ್ತಿದೆ. ಶಿಕ್ಷಣಕ್ಕೆ ಹಕ್ಕಿನ ಸ್ಥಾನ ಕೊಡಲಾಗಿದೆ. ಶಿಕ್ಷಣವು ಕೇಂದ್ರ ಮತ್ತು ರಾಜ್ಯಗಳು ಒಟ್ಟಾಗಿ ಸೇರಿ ಅನುಷ್ಠಾನಗೊಳಿಸುವ ವಿಷಯವಾಗಿದ್ದರೂ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಮಾಡುವ ಸಲಹೆಗಳನ್ನು ರಾಜ್ಯಗಳು ತಮಗೆ ತೋಚಿದಂತೆ ಜಾರಿಗೊಳಿಸಿದರೆ ಪ್ರಯೋಜನವಿಲ್ಲ. ಒಂದರಿಂದ ಹತ್ತನೇ ತರಗತಿಯವರೆಗೆ ಕೆಲವಾದರೂ ವಿಷಯಗಳಲ್ಲಿ ದೇಶದಾದ್ಯಂತ ಏಕರೂಪದ ಪಠ್ಯಕ್ರಮ ಅಗತ್ಯವೆಂಬ ಸಲಹೆಗೆ ರಾಜ್ಯಗಳಿಂದ ಅನುಕೂಲಕರ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. 2005ರ ರಾಷ್ಟ್ರೀಯ ಪಠ್ಯ ನೀತಿಗೆ ಅನುಗುಣವಾಗಿ ಕರ್ನಾಟಕ ಕೆಲವು ತರಗತಿಗಳಿಗೆ ಪರಿಷ್ಕರಿಸಿದ ಪಠ್ಯವಿಷಯಗಳ ಬಗ್ಗೆ ತೀವ್ರ ಆಕ್ಷೇಪಗಳು ಎದ್ದಿವೆ. ದೇಶದಲ್ಲಿರುವ 18 ಲಕ್ಷ ಶಾಲೆಗಳಲ್ಲಿ ಶೇ 37ರಷ್ಟು ಶಾಲೆಗಳು ಖಾಸಗಿ ವಲಯದಲ್ಲಿರುವುದರಿಂದ ಅವುಗಳಿಂದ ಮಕ್ಕಳು ಮತ್ತು ಪೋಷಕರ ಶೋಷಣೆ ತಡೆಯಬೇಕಾದ ಹೊಣೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರ್ವಹಿಸಬೇಕಿದೆ. ಗುಣಮಟ್ಟದ ಶಿಕ್ಷಣ, ಇಂಗ್ಲಿಷ್ ಮಾಧ್ಯಮ ಮತ್ತು ಹೆಚ್ಚಿನ ಸೌಕರ್ಯಗಳ ಆಮಿಷ ಒಡ್ಡಿ ವಿದ್ಯಾರ್ಥಿ ಮತ್ತು ಪೋಷಕರನ್ನು ಆರ್ಥಿಕವಾಗಿ ಸುಲಿಗೆ ಮಾಡುವ ಖಾಸಗಿ ಶಾಲೆಗಳಿಗೆ ಕಡಿವಾಣ ಹಾಕಲು ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಮುಂದಾಗಿರುವುದು ಅವಶ್ಯಕವಾಗಿ ಆಗಲೇಬೇಕಾದ ಕಾರ್ಯ. ಖಾಸಗಿ ಶಾಲೆಗಳು ನಡೆಸುವ ಪ್ರವೇಶ ಪಾರದರ್ಶಕವಾಗಿರಬೇಕು. ಲಭ್ಯ ಸೀಟುಗಳ ಸಂಖ್ಯೆ, ಹಂಚಿಕೆ ವಿಧಾನ, ಸ್ಥಳೀಯರಿಗೆ ಎಷ್ಟು ಸೀಟುಗಳನ್ನು ನೀಡಲಾಗಿದೆ ಎಂಬ ಮಾಹಿತಿಗಳನ್ನು ಆಡಳಿತ ಮಂಡಲಿಗಳು ಬಹಿರಂಗ ಪಡಿಸಬೇಕು ಎಂಬ ನಿಯಮಗಳು ಈಗ ಇದ್ದರೂ ಅವನ್ನು ಯಾವ ಖಾಸಗಿ ಶಾಲೆಯೂ ಪಾಲಿಸುತ್ತಿಲ್ಲ. ವಂತಿಗೆ ಪಡೆಯುವುದನ್ನು ಸರ್ಕಾರ ನಿಷೇಧಿಸಿದೆ. ಆದರೂ ಪರೋಕ್ಷವಾಗಿ ದೇಣಿಗೆ ಪಡೆಯುವುದು ನಿಂತಿಲ್ಲ. ಇದಕ್ಕೆ ಕಾರಣ, ಖಾಸಗಿ ಶಾಲೆಗಳು ಹೊಂದಿರುವ ರಾಜಕೀಯ ಪ್ರಭಾವ. ಕರ್ನಾಟಕದ ಮಟ್ಟಿಗೆ ಜನಪ್ರತಿನಿಧಿಗಳು ಮತ್ತು ರಾಜಕೀಯ ಪಕ್ಷಗಳ ಮುಖಂಡರು ಹಣ ಮಾಡುವುದಕ್ಕೆಂದೇ ಶಿಕ್ಷಣ ಕ್ಷೇತ್ರದಲ್ಲಿ ಸಕ್ರಿಯವಾಗಿರುವುದು ರಹಸ್ಯವಲ್ಲ. ಅವರ ಪ್ರಭಾವದಿಂದ ಶಿಕ್ಷಣ ಇಲಾಖೆಯ ನಿಯಮಗಳೆಲ್ಲ ಕಾಗದದಲ್ಲಿಯೇ ಉಳಿದಿವೆ. ಖಾಸಗಿ ಶಾಲೆಗಳಲ್ಲಿ ಪ್ರವೇಶಗಳೆಲ್ಲ ಮುಗಿದ ಮೇಲೆ ಶಿಕ್ಷಣ ಇಲಾಖೆ ವಂತಿಗೆ ನಿಷೇಧಿಸಿ ಪ್ರಕಟಣೆ ಹೊರಡಿಸಿದರೆ ಅದಕ್ಕೆ ಏನು ಬೆಲೆ? ಸರ್ಕಾರದ ನಿಯಮಗಳನ್ನು ಉಲ್ಲಂಘಿಸುವ ಶಾಲೆಗಳಿಗೆ ಮಾನ್ಯತೆ ರದ್ದತಿ, ದಂಡ ಇತ್ಯಾದಿ ಕ್ರಮಗಳಿಗೆ ಅವಕಾಶವಿದ್ದರೂ ಇದುವರೆಗೆ ಅಂಥ ಕ್ರಮಗಳನ್ನು ಕೈಗೊಂಡ ನಿದರ್ಶನಗಳಿಲ್ಲ. ನಿಯಮಗಳ ಅನುಷ್ಠಾನ ವ್ಯವಸ್ಥೆಯೇ ದುರ್ಬಲವಾಗಿರುವಾಗ `ಶಿಕ್ಷಣ ನ್ಯಾಯಮಂಡಲಿ~ಯ ರಚನೆಗೆ ಆಸ್ಪದ ಕಲ್ಪಿಸಿಕೊಳ್ಳುವ ಕೇಂದ್ರದ ಉದ್ದೇಶ ಎಷ್ಟರಮಟ್ಟಿಗೆ ಫಲಕಾರಿಯಾಗುವುದೋ ಹೇಳಲಾಗದು. ಪ್ರಾಥಮಿಕ ಶಿಕ್ಷಣ ಭವಿಷ್ಯದ ಪೀಳಿಗೆಗೆ ಭದ್ರ ಅಡಿಪಾಯ ಹಾಕುವಂತಿರಬೇಕು ಎಂಬುದಕ್ಕಿಂತ ತಾವು ನಂಬಿರುವ ತತ್ವ ಸಿದ್ಧಾಂತಗಳನ್ನೇ ಮಕ್ಕಳು ಕಲಿಯಬೇಕು ಎಂದು ಭಾವಿಸಿದ ಕರ್ಮಠ ಮನಃಸ್ಥಿತಿ ರಾಜಕೀಯ ಪಕ್ಷಗಳಲ್ಲಿ ಇರುವುದರಿಂದ ಕೇಂದ್ರದ ಹೊಸ ಕಾನೂನು ಹೆಚ್ಚಿನ ಬದಲಾವಣೆ ತರುವುದು ಅನುಮಾನ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.