ಒತ್ತುವರಿ ತೆರವು ಆಗಲಿ ಖಾಸಗಿಯವರ ವಶದಲ್ಲಿರುವ ರಾಜ್ಯದ ಅರಣ್ಯ ಪ್ರದೇಶದ ಸ್ವಾಧೀನ ಕುರಿತಂತೆ ಅಧ್ಯಯನ ನಡೆಸಲು ತಜ್ಞರ ಸಮಿತಿಯೊಂದನ್ನು ರಚಿಸುವಂತೆ ಕೇಂದ್ರ ಸರ್ಕಾರದ ಉನ್ನತಾಧಿಕಾರ ಸಮಿತಿ (ಸಿಇಸಿ) ಸುಪ್ರೀಂ ಕೋರ್ಟಿಗೆ ಶಿಫಾರಸು ಮಾಡಿದೆ. ಅರಣ್ಯ ಒತ್ತುವರಿ, ಅಕ್ರಮ ಗಣಿಗಾರಿಕೆ ಮತ್ತು ಕಾಡು ಪ್ರಾಣಿಗಳು ಜನವಸತಿ ಪ್ರದೇಶಕ್ಕೆ ನುಗ್ಗಿ ದಾಂಧಲೆ ಎಬ್ಬಿಸುತ್ತಿರುವ ಈ ಸಂದರ್ಭದಲ್ಲಿ ಸಿಇಸಿ ಶಿಫಾರಸು ಅತ್ಯಂತ ಮಹತ್ವದ್ದು. ಕೊಡಗು ಹಾಗೂ ಪಶ್ಚಿಮ ಘಟ್ಟ ಪ್ರದೇಶಕ್ಕೆ ಹೊಂದಿಕೊಂಡ ಜಿಲ್ಲೆಗಳಲ್ಲಿ ಭಾರೀ ಪ್ರಮಾಣದ ಅರಣ್ಯ ಒತ್ತುವರಿಯಾಗಿದೆ. ಕೊಡಗಿನ ಖಾಸಗಿ ಅರಣ್ಯ ಪ್ರದೇಶಗಳಲ್ಲಿ ರಸ್ತೆ ಮತ್ತಿತರ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡಿರುವುದನ್ನು ಪ್ರಶ್ನಿಸಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸೂಚನೆಗೆ ಅನುಗುಣವಾಗಿ ಸಿಇಸಿ ಈ ಶಿಫಾರಸು ಮಾಡಿದೆ. ರಾಜ್ಯದಲ್ಲಿ 2.5 ಲಕ್ಷ ಎಕರೆ ಅರಣ್ಯ ಒತ್ತುವರಿಯಾಗಿದೆ. ಈ ಅರಣ್ಯದ ಬಹುಭಾಗವನ್ನು ಸಾಗುವಳಿ ಭೂಮಿಯಾಗಿ ಪರಿವರ್ತಿಸಲಾಗಿದೆ. ಅನೇಕ ಜಿಲ್ಲೆಗಳಲ್ಲಿ ಅರಣ್ಯ ಗಡಿಗಳೇ ನಾಶವಾಗಿವೆ. ರಾಜಕೀಯ ವ್ಯಕ್ತಿಗಳು, ಸರ್ಕಾರಿ ಅಧಿಕಾರಿಗಳು ಒತ್ತುವರಿಯಲ್ಲಿ ಶಾಮೀಲಾಗಿದ್ದಾರೆ. ಈ ಒತ್ತುವರಿಯನ್ನು ತೆರವು ಮಾಡುವುದು ರಾಜ್ಯ ಸರ್ಕಾರಕ್ಕೆ ದೊಡ್ಡ ಸವಾಲು. ಪಶ್ಚಿಮಘಟ್ಟದ ಮೀಸಲು ಅರಣ್ಯ ಮತ್ತು ವನ್ಯಜೀವಿ ಧಾಮಗಳಲ್ಲದೆ, ಬಳ್ಳಾರಿ, ಚಿತ್ರದುರ್ಗ, ತುಮಕೂರು ಜಿಲ್ಲೆಗಳಲ್ಲೂ ಅರಣ್ಯ ಇಲಾಖೆ ವಶದಲ್ಲಿದ್ದ ಕುರುಚಲು ಅರಣ್ಯಭೂಮಿಯನ್ನು ಒತ್ತುವರಿ ಮಾಡಿಕೊಂಡು ಅಲ್ಲಿ ಅಕ್ರಮ ಗಣಿಗಾರಿಕೆ ನಡೆಸಿದ ಉದಾಹರಣೆಗಳಿವೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸಿಇಸಿ ಶಿಫಾರಸನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಕೊಡಗು, ಚಿಕ್ಕಮಗಳೂರು ಮತ್ತಿತರ ಜಿಲ್ಲೆಗಳಲ್ಲಿ ಸಾಗುವಳಿ ಮಾಡಲಾಗದ ಖಾಸಗಿ ಭೂಮಿಯಲ್ಲಿ ಅರಣ್ಯ ಸಹಜವಾಗಿ ಬೆಳೆದಿದೆ. ಲಾಭಕ್ಕಾಗಿ ಬೆಲೆ ಬಾಳುವ ಮರಗಳನ್ನು ಬೆಳೆಸಿದವರೂ ಇದ್ದಾರೆ. ಈ ಖಾಸಗಿ ಅರಣ್ಯಗಳಲ್ಲಿ ಮರಗಳನ್ನು ಕಡಿಯುವುದಕ್ಕೆ ಅಥವಾ ಅಲ್ಲಿ ರಸ್ತೆ ಮತ್ತಿತರ ಅಭಿವೃದ್ಧಿಗೆ ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆಯ ಪೂರ್ವಾನುಮತಿ ಅಗತ್ಯ ಎಂದು ಸುಪ್ರೀಂಕೋರ್ಟ್ ಬಹಳ ಹಿಂದೆಯೇ ಸ್ಪಷ್ಟವಾಗಿ ಹೇಳಿದೆ. ಆದರೆ ಈ ವಿಷಯದಲ್ಲಿ ರಾಜ್ಯ ಸರ್ಕಾರ ಸ್ಪಷ್ಟ ನಿಲುವು ತೆಗೆದುಕೊಂಡಿಲ್ಲ. ಈಗ ಸಿಇಸಿಯ ಶಿಫಾರಸಿಗೆ ಅನುಗುಣವಾಗಿ ಖಾಸಗಿ ಅರಣ್ಯವನ್ನು ವಶಕ್ಕೆ ಪಡೆಯುವ ವಿಷಯದಲ್ಲಿ ತನ್ನ ನಿಲುವು ತಿಳಿಸಬೇಕಿದೆ. ಖಾಸಗಿ ಅರಣ್ಯವನ್ನು ಸರ್ಕಾರ ವಶಕ್ಕೆ ಪಡೆಯಲು ಮುಂದಾದರೆ ಅದಕ್ಕೆ ವಿರೋಧ ಬರುತ್ತದೆ. ಚಿಕ್ಕಮಗಳೂರು, ಹಾಸನ ಮತ್ತಿತರ ಜಿಲ್ಲೆಗಳಲ್ಲಿನ ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡು ಅಲ್ಲಿ ಕಾಫಿ ತೋಟ ಬೆಳೆಸಿದ ಹಲವು ಪ್ರಕರಣಗಳಿವೆ. ಪಶ್ಚಿಮ ಘಟ್ಟದ ಕಾಡು ಹಾಗೂ ಮೀಸಲು ಅರಣ್ಯ ಒತ್ತುವರಿಯಿಂದ ವನ್ಯಜೀವಿಗಳ ಆವಾಸ ಮತ್ತು ಓಡಾಟಕ್ಕೆ ಅಡ್ಡಿಯಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಖಾಸಗಿ ಅರಣ್ಯವನ್ನು ವಶಪಡಿಸಿಕೊಳ್ಳುವ ದಿಟ್ಟ ನಿಲುವು ತಾಳಬೇಕು. ಅರಣ್ಯ ಸಂರಕ್ಷಣೆಯ ಬಗ್ಗೆ ರಾಜ್ಯ ಸರ್ಕಾರ ಮಾತಿನ ಕಾಳಜಿ ತೋರುವ ಬದಲಾಗಿ ನಿರ್ದಿಷ್ಟ ಕಾರ್ಯಸೂಚಿ ಹಾಕಿಕೊಂಡು ಕಾರ್ಯೋನ್ಮುಖವಾಗಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.