ಸುರಕ್ಷತೆಗೆ ಗಮನ ಇರಲಿ ತಮಿಳುನಾಡಿನ ಕೂಡುಂಕುಳಂ ಅಣುವಿದ್ಯುತ್ ಸ್ಥಾವರ ವಿರೋಧಿ ಚಳವಳಿ ದಿನದಿಂದ ದಿನಕ್ಕೆ ವಿಚಿತ್ರ ತಿರುವು ಪಡೆದುಕೊಳ್ಳುತ್ತಿದೆ. ಹದಿಮೂರು ಸಾವಿರ ಕೋಟಿ ರೂಪಾಯಿ ವೆಚ್ಚದ ಈ ಅಣುಸ್ಥಾವರದ ಮೊದಲ ಹಂತದ ಕಾಮಗಾರಿಗಳು ಮುಕ್ತಾಯ ಹಂತದಲ್ಲಿರುವಾಗ ಈ ಯೋಜನೆಯನ್ನೇ ಕೈಬಿಡುವಂತೆ ಒತ್ತಾಯಿಸಿ ಸ್ಥಳೀಯ ಕೆಲವು ಸಂಘಟನೆಗಳು ಕಳೆದ ಏಳು ತಿಂಗಳಿಂದ ಪ್ರತಿಭಟನೆ ನಡೆಸುತ್ತಿವೆ. ಸ್ಥಾವರದ ನಿರ್ಮಾಣ ಕಾಮಗಾರಿ ಆರಂಭವಾದ ಹತ್ತು ವರ್ಷಗಳ ನಂತರ ಸುರಕ್ಷತೆಯ ಬಗ್ಗೆ ಸ್ಥಳೀಯರು ಅನುಮಾನ ವ್ಯಕ್ತಪಡಿಸುತ್ತಿರುವುದಕ್ಕೆ ಕಾರಣಗಳಿಲ್ಲ. ಸ್ಥಾವರ ವಿರೋಧಿ ಚಳವಳಿಯ ಹಿಂದೆ ಅಮೆರಿಕಾದ ಕೆಲವು ಸ್ವಯಂ ಸೇವಾ ಸಂಸ್ಥೆಗಳ ಕೈವಾಡವಿದೆ ಎಂದು ಸ್ವತಃ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ. ಪ್ರಧಾನಿ ಅವರ ಹೇಳಿಕೆಗೆ ಆಧಾರವಿದೆ ಎಂದು ಪ್ರಧಾನಿ ಕಾರ್ಯಾಲಯದ ಸಚಿವರು ಕೂಡ ದೃಢಪಡಿಸಿದ್ದಾರೆ. ದೇಶದ ಅಣುವಿದ್ಯುತ್ ಯೋಜನೆಯನ್ನು ಕೆಲವು ಸ್ವಯಂ ಸೇವಾ ಸಂಸ್ಥೆಗಳು ನಿಯಂತ್ರಿಸುವುದಕ್ಕೆ ಅವಕಾಶ ಮಾಡಿಕೊಡಲಾಗದು. ಸರ್ಕಾರಕ್ಕೆ ಪುಕೋಶಿಮಾ ಮತ್ತು ರಷ್ಯಾದ ಚರ್ನೋಬಿಲ್ ದುರಂತಗಳ ನಂತರ ಅಣುಸ್ಥಾವರಗಳು ಸುರಕ್ಷಿತ ಅಲ್ಲ ಎನ್ನುವ ಅಭಿಪ್ರಾಯ ಅನೇಕ ದೇಶಗಳಲ್ಲಿದೆ. ಕೆಲವು ಮುಂದುವರಿದ ರಾಷ್ಟ್ರಗಳ ಪರಿಸರ ಸಂಘಟನೆಗಳು ಅಣುಸ್ಥಾವರಗಳ ವಿರುದ್ಧ ಜನಾಭಿಪ್ರಾಯ ಮೂಡಿಸುವ ಆಂದೋಲನ ನಡೆಸುತ್ತಿವೆ. ದುರಂತಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸುವುದೇ ಇದಕ್ಕೆ ಪರಿಹಾರ. ಕೂಡುಂಕುಳಂ ಸ್ಥಾವರದ ಸುರಕ್ಷತೆಯ ಬಗ್ಗೆ ಸ್ಥಳೀಯರಿಗೆ ಇರುವ ಅನುಮಾನಗಳನ್ನು ನಿವಾರಣೆ ಮಾಡುವುದು ಕೇಂದ್ರ ಸರ್ಕಾರದ ಕರ್ತವ್ಯ. ಅಣು ವಿಜ್ಞಾನಿಗಳು, ಪರಿಸರ ತಜ್ಞರ ಜತೆಯಲ್ಲಿ ಜನ ಪ್ರತಿನಿಧಿಗಳು ಮತ್ತು ಚಳವಳಿ ನಡೆಸುತ್ತಿರುವ ಸಂಘಟನೆಗಳ ಪ್ರತಿನಿಧಿಗಳು ಕೂಲಂಕಷ ಚರ್ಚೆ ನಡೆಸಿ ತಮ್ಮ ಅನುಮಾನಗಳನ್ನು ಬಗೆಹರಿಸಿಕೊಳ್ಳಬೇಕು. ಸ್ಥಾವರವನ್ನೇ ಮುಚ್ಚುವಂತೆ ಒತ್ತಾಯಿಸಿ ಚಳವಳಿ ನಡೆಸುವುದು ಜಾಣತನ ಅಲ್ಲ. ದೇಶದಾದ್ಯಂತ ಈಗ ವಿದ್ಯುತ್ತಿನ ಅಭಾವವಿದೆ. ವಿದ್ಯುತ್ತಿನ ಬೇಡಿಕೆ ಹೆಚ್ಚುತ್ತಿದೆ. ಪ್ರತಿಯೊಂದು ಕ್ಷೇತ್ರದ ಅಭಿವೃದ್ಧಿಯೂ ವಿದ್ಯುತ್ತನ್ನೇ ಅವಲಂಬಿಸಿರುವುದರಿಂದ ಅಣು ಶಕ್ತಿಯನ್ನು ವಿದ್ಯುತ್‌ಆಗಿ ಬಳಸಿಕೊಳ್ಳದ ಹೊರತು ಬೇರೆ ದಾರಿ ಇಲ್ಲ. ಇತರೆ ಇಂಧನ ಮೂಲಗಳನ್ನೂ ಬಳಸಿಕೊಳ್ಳುವ ಬಗ್ಗೆ ಚಿಂತನೆ ನಡೆಯಬೇಕಿದೆ. ಪುಕೋಶಿಮಾ ಮತ್ತು ಚರ್ನೋಬಿಲ್ ದುರಂತಗಳಿಗೆ ಕಾರಣವಾದ ಸಂಗತಿಗಳನ್ನು ತಿಳಿದುಕೊಂಡು ಅಂತಹ ಲೋಪಗಳು ಕೂಡುಂಕುಳಂ ಸ್ಥಾವರದಲ್ಲಿ ಮರುಕಳಿಸದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಸಾಧ್ಯವಿದೆ. ಕೂಡುಂಕುಳಂ ಅಣುಸ್ಥಾವರ ತಮಿಳುನಾಡಿಗೆ ಮಾತ್ರವೇ ಸಂಬಂಧಿಸಿದ್ದಲ್ಲ. ಅದರಿಂದ ಇಡೀ ದೇಶಕ್ಕೇ ಪ್ರಯೋಜನವಿದೆ. ಆದ್ದರಿಂದ ಕೇಂದ್ರ ಸರ್ಕಾರ ರಾಜ್ಯ ಸರ್ಕಾರವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಣು ಸ್ಥಾವರ ವಿರೋಧಿಸುತ್ತಿರುವ ಸ್ಥಳೀಯರಿಗೆ ವಸ್ತುಸ್ಥೀತಿಯನ್ನು ಮನವರಿಕೆ ಮಾಡಿಕೊಡಬೇಕು. ಇದರೊಂದಿಗೆ ವಿದೇಶಿ ನೆರವನ್ನು ಅಣುಸ್ಥಾವರ ವಿರೋಧಕ್ಕೆ ದುರ್ಬಳಕೆ ಮಾಡಿಕೊಳ್ಳುತ್ತಿರುವ ಪ್ರಕರಣಗಳನ್ನು ತನಿಖೆಗೆ ಒಳಪಡಿಸಬೇಕು. ಏನೇ ಆದರೂ, ಅಣುಸ್ಥಾವರ ಕಾರ್ಯಾರಂಭ ವಿಳಂಬವಾಗುವುದಕ್ಕೆ ಅವಕಾಶ ಕೊಡಬಾರದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.