ಹಗರಣಗಳ ಸುಳಿಯಲ್ಲಿ ರೈತರನ್ನು ಸಾಲದ ಸುಳಿಯಿಂದ ಪಾರು ಮಾಡಲು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ `ಕೃಷಿ ಸಾಲ ಮನ್ನಾ' ಯೋಜನೆಯಲ್ಲೂ ಸಾಕಷ್ಟು ಅವ್ಯವಹಾರ ನಡೆದಿದೆ ಎಂಬ ಸಂಗತಿಯನ್ನು ಮಹಾಲೇಖಪಾಲರ (ಸಿಎಜಿ) ವರದಿ ಬಹಿರಂಗಪಡಿಸಿದೆ. ಈಗಾಗಲೇ ಸಾಲು ಸಾಲು ಹಗರಣಗಳ ಆರೋಪದಿಂದ ಬಸವಳಿದಿರುವ ಯುಪಿಎ ಸರ್ಕಾರಕ್ಕೆ ಇದರಿಂದ ಮತ್ತೊಂದು ಕಳಂಕ ಮೆತ್ತಿದಂತಾಗಿದೆ. 2008ರಲ್ಲಿ ಅನುಷ್ಠಾನಕ್ಕೆ ತರಲಾದ ಕೃಷಿ ಸಾಲ ಮನ್ನಾ ತನ್ನ `ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದು' ಎಂದು ಮನಮೋಹನ್‌ಸಿಂಗ್ ಸರ್ಕಾರ ಬೆನ್ನು ಚಪ್ಪರಿಸಿಕೊಂಡಿತ್ತು. ಮರು ವರ್ಷ ನಡೆದ ಚುನಾವಣೆಯಲ್ಲಿ ಯುಪಿಎ ಗೆಲುವಿನಲ್ಲಿ ಸಾಲ ಮನ್ನಾ ಯೋಜನೆ ಮಹತ್ವದ ಪಾತ್ರ ವಹಿಸಿತ್ತು. ಆ ಯೋಜನೆಯೇ ಈಗ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಸರ್ಕಾರ ರೂಪಿಸಿದ್ದ ಸಾಲ ಮನ್ನಾ ಯೋಜನೆಯ ಮೊತ್ತ ಒಂದೆರಡು ಕೋಟಿ ರೂಪಾಯಿಯಲ್ಲ. ಒಟ್ಟು 71500 ಕೋಟಿ ರೂಪಾಯಿ. ಇದೇನೂ ಕಡಿಮೆ ಹಣವಲ್ಲ. ಲಭ್ಯ ಅಂಕಿಸಂಖ್ಯೆಗಳ ಪ್ರಕಾರ ಈ ಯೋಜನೆಯನ್ವಯ 3.45 ಕೋಟಿ ಸಣ್ಣ, ಅತಿ ಸಣ್ಣ ಮತ್ತು ಇತರ ರೈತರ 52 ಸಾವಿರ ಕೋಟಿ ರೂಪಾಯಿ ಸಾಲವನ್ನು ಇದುವರೆಗೆ ಮನ್ನಾ ಮಾಡಲಾಗಿದೆ. ಅಂದರೆ ಇಷ್ಟು ಮೊತ್ತದ ಸಾಲದ ಹಣವನ್ನು ರೈತರ ಪರವಾಗಿ ಸರ್ಕಾರವೇ ತುಂಬಿಕೊಟ್ಟಿದೆ. ಇಲ್ಲೇ ಸಾಕಷ್ಟು ಅವ್ಯವಹಾರ ನಡೆದಿದೆ. ನಿಯಮಗಳ ಉಲ್ಲಂಘನೆ, ಅನರ್ಹ ವ್ಯಕ್ತಿಗಳ ಸಾಲ ಮನ್ನಾ, ಮಾರ್ಗದರ್ಶಿ ಸೂತ್ರಗಳನ್ನು ಕಡೆಗಣಿಸಿರುವುದು, ಅರ್ಹ ರೈತರಿಗೆ ಯೋಜನೆ ಸೌಲಭ್ಯ ನೀಡದೇ ಇರುವುದು ಮುಂತಾದ ಲೋಪಗಳನ್ನು ಸಿಎಜಿ ಪಟ್ಟಿ ಮಾಡಿದೆ. ಕೃಷಿ ಪತ್ತಿನ ಮತ್ತು ಅಡಮಾನ ಸಹಕಾರ ಸಂಘಗಳು, ಗ್ರಾಮೀಣ, ಪಟ್ಟಣ ಸಹಕಾರಿ ಬ್ಯಾಂಕ್‌ಗಳು ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ರೈತರು ಪಡೆದ ಅಲ್ಪಾವಧಿ ಬೆಳೆ ಸಾಲ, ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಸಾಲದ ಸುಸ್ತಿ ಕಂತುಗಳನ್ನು ಒಂದು ಸಲಕ್ಕೆ ತೀರಿಸಿ ಅವರನ್ನು ಋಣಮುಕ್ತ ಮಾಡುವ ಯೋಜನೆಯ ಉದ್ದೇಶವೇನೋ ಚೆನ್ನಾಗಿತ್ತು. ಸಾಲ ಮನ್ನಾಕ್ಕೆ ಯಾರು ಅರ್ಹರು, ಎಷ್ಟು ಮೊತ್ತವನ್ನು ಮನ್ನಾ ಮಾಡಬಹುದು, ಯಾವ ಅವಧಿಗೆ ಸಂಬಂಧಿಸಿದ್ದು ಎಂಬ ಬಗ್ಗೆ ಸ್ಪಷ್ಟ ಮಾರ್ಗದರ್ಶಿ ಸೂತ್ರಗಳನ್ನೂ ನೀಡಲಾಗಿತ್ತು. ಅದರ ಅನುಷ್ಠಾನ ಹಳಿ ತಪ್ಪಿದೆ, ಸಾಲ ಕೊಟ್ಟ ಸಂಸ್ಥೆಗಳು ಅರ್ಹ ಫಲಾನುಭವಿಗಳ ಪಟ್ಟಿ ಸಿದ್ಧಪಡಿಸುವಲ್ಲಿ ತಪ್ಪು ಮಾಡಿವೆ ಎಂಬ ಸಿಎಜಿ ವರದಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಇದೇ ಸಂದರ್ಭದಲ್ಲಿ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ ನಿಧಿಯನ್ನೂ ವಿವಿಧ ರಾಜ್ಯಗಳು ದುರ್ಬಳಕೆ ಮಾಡಿಕೊಂಡಿವೆ ಎಂಬ ಮತ್ತೊಂದು ವರದಿಯನ್ನೂ ಸಿಎಜಿ ನಿಡಿದೆ. ಕರ್ನಾಟಕ ಕೂಡ ಈ ರಾಜ್ಯಗಳ ಪಟ್ಟಿಯಲ್ಲಿದೆ ಎನ್ನುವುದು ತಲೆತಗ್ಗಿಸಲೇ ಬೇಕಾದ ಸಂಗತಿ. ಲೋಪಗಳನ್ನು ಸರಿಪಡಿಸುವ ಕೆಲಸ ಮಾಡಬೇಕೇ ಹೊರತು, `ಏನೂ ನಡದೇ ಇಲ್ಲ' ಎಂದು ಸಿಎಜಿ ಮೇಲೆಯೇ ಅಪನಂಬಿಕೆ ವ್ಯಕ್ತಪಡಿಸುವುದು ಸರ್ವಥಾ ಸಲ್ಲ. ಆಗ ಮಾತ್ರ ಸರ್ಕಾರದ ಮಾತಿನ ಬಗ್ಗೆ ಜನರಿಗೆ ವಿಶ್ವಾಸ ಬಂದೀತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.