ಘನತೆ ಉಳಿಸುವ ಕೆಲಸವಾಗಲಿ ರಾಜ್ಯಪಾಲರುಗಳ ನೇಮಕ ಎಂದರೆ ಅದು ಸದಾ ವಿವಾದದ ಗೂಡು. ಕೇಂದ್ರದಲ್ಲಿರುವ ಆಡಳಿತ ಪಕ್ಷ ತಮಗೆ ಬೇಕಾದವರನ್ನು ಸಂವಿಧಾನಾತ್ಮಕ ಹುದ್ದೆಗೆ ಆಯ್ಕೆ ಮಾಡಿಕೊಳ್ಳುವ ಪ್ರಕ್ರಿಯೆಯಿಂದಲೇ ವಿವಾದ ಗೂಡು ಕಟ್ಟುತ್ತದೆ. ಈ ಹಂತವನ್ನು ದಾಟಿ ಯುಪಿಎ ಸರ್ಕಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವುದು ನಾಗಾಲ್ಯಾಂಡ್ ರಾಜ್ಯಪಾಲರ ನೇಮಕದ ಮೂಲಕ ವ್ಯಕ್ತವಾಗುತ್ತದೆ. ಸಿಬಿಐನ ಮಾಜಿ ನಿರ್ದೇಶಕ ಅಶ್ವನಿಕುಮಾರ್ ಅವರನ್ನು ನಾಗಾಲ್ಯಾಂಡ್‌ನ ನೂತನ ರಾಜ್ಯಪಾಲರನ್ನಾಗಿ ನೇಮಿಸುವ ಮೂಲಕ ಕೆಟ್ಟ ಪರಂಪರೆಯೊಂದನ್ನು ಯುಪಿಎ ಸರ್ಕಾರ ಹುಟ್ಟುಹಾಕಿದಂತಾಗಿದೆ. ಮಾಜಿ ಸಿಬಿಐ ನಿರ್ದೇಶಕರೊಬ್ಬರನ್ನು ರಾಜ್ಯಪಾಲರ ಹುದ್ದೆಗೆ ನೇಮಿಸಿರುವುದು ಇದೇ ಮೊದಲು. ಈ ಮೂಲಕ ರಾಷ್ಟ್ರದ ಅತ್ಯುನ್ನತ ತನಿಖಾ ಸಂಸ್ಥೆಯನ್ನು ಆಡಳಿತ ಪಕ್ಷಗಳು ತಮ್ಮ ಮೂಗಿನ ನೇರಕ್ಕೆ ಬಳಸಿಕೊಳ್ಳುತ್ತಿವೆ ಎನ್ನುವ ಆಪಾದನೆಗೆ ಬಲ ಬಂದಿದೆ. ಇಂತಹ ಆಪಾದನೆ ನಿನ್ನೆ ಮೊನ್ನೆಯದಲ್ಲ. ಇದರಲ್ಲಿ ಎಷ್ಟೋ ಬಾರಿ ವಾಸ್ತವಾಂಶ ಇರುವುದನ್ನೂ ಅಲ್ಲಗಳೆಯುವಂತಿಲ್ಲ. ಈ ಕಾರಣದಿಂದಲೇ ಸಿಬಿಐಯಂತಹ ತನಿಖಾ ಸಂಸ್ಥೆಗಳನ್ನು ಸರ್ಕಾರದ ಬಿಗಿಹಿಡಿತದಿಂದ ಮುಕ್ತಗೊಳಿಸಿ ಸ್ವತಂತ್ರ ಸಂಸ್ಥೆಯನ್ನಾಗಿಸಬೇಕೆಂಬ ಬೇಡಿಕೆ ಕೇಳಿಬರುತ್ತಲೇ ಇದೆ. ನಿವೃತ್ತಿಯ ನಂತರ ಸಿಬಿಐ ನಿರ್ದೇಶಕರನ್ನು ಯಾವುದೇ ಪ್ರಮುಖ ಹುದ್ದೆಗೆ ಪರಿಗಣಿಸಬಾರದು ಎಂಬ ಷರತ್ತನ್ನು ವಿಧಿಸಬೇಕೆಂಬ ಒತ್ತಡವೂ ಇದೆ. ಆದರೆ ಅಶ್ವನಿಕುಮಾರ್ ಅವರ ನೇಮಕಾತಿಯ ಮೂಲಕ ಈ ಎಲ್ಲ ನೈತಿಕ ನಿಯಮಗಳು ಗಾಳಿಗೆ ತೂರಿಹೋಗಿವೆ. ಸರ್ಕಾರಕ್ಕೆ ನೀಡಿದ ಸಹಾಯಕ್ಕಾಗಿ ಸಿಬಿಐ ಮುಖ್ಯಸ್ಥರಿಗೆ ಒಳ್ಳೆಯ `ಉಡುಗೊರೆ'ಯೇ ಸಿಕ್ಕಂತಾಗಿದೆ. 2008 ರಲ್ಲಿ ಅಶ್ವನಿಕುಮಾರ್ ಅವರನ್ನು ಸಿಬಿಐ ನಿರ್ದೇಶಕರನ್ನಾಗಿ ನೇಮಿಸಿದಾಗಲೇ ವಿವಾದ ಸೃಷ್ಟಿಯಾಗಿತ್ತು. ಈ ಹುದ್ದೆಗೆ ಬೇಕಾದ ಸೇವಾಹಿರಿತನವನ್ನು ಅವರು ಹೊಂದಿರಲಿಲ್ಲ. ಆದರೆ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಅದರ ಕೆಲವು ಹಿರಿಯ ನಾಯಕರ ಜೊತೆ ನಿಕಟವಾಗಿದ್ದ ಕಾರಣ ಅಶ್ವನಿಕುಮಾರ್ ಈ ಹುದ್ದೆಯನ್ನು ಗಿಟ್ಟಿಸಿಕೊಂಡರು ಎಂಬುದು ಗುಟ್ಟಿನ ಸಂಗತಿಯಾಗಿರಲಿಲ್ಲ. ನಾಗಾಲ್ಯಾಂಡ್ ರಾಜ್ಯಪಾಲರನ್ನಾಗಿ ಅವರನ್ನು ನೇಮಿಸಿರುವ ಕ್ರಮವೇ ಕಾಂಗ್ರೆಸ್ ನಾಯಕರ ಜೊತೆ ಅವರು ಕೈ ಜೋಡಿಸಿದ್ದರು ಎನ್ನುವುದನ್ನು ಹೇಳುತ್ತದೆ. ರಾಜ್ಯಗಳಲ್ಲಿ ರಾಷ್ಟ್ರಪತಿಯವರ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುವ ರಾಜ್ಯಪಾಲರು ರಾಜಕೀಯರಂಗದಿಂದ ದೂರ ಉಳಿಯಬೇಕು. ಆದರೆ ಈಗ ಅಂತಹ ನೀತಿ ನಿಯಮ ಮೂಲೆಗುಂಪಾಗಿದೆ. ರಾಜಕೀಯದಿಂದ ತಿರಸ್ಕೃತರಾದವರು, ನಿವೃತ್ತರಾದವರು, ಕೇಂದ್ರ ಸರ್ಕಾರಕ್ಕೆ ಭಂಟರಾಗಿ ದುಡಿದ ಅಧಿಕಾರಶಾಹಿಗಳು, ತನಿಖಾದಳದ ಮುಖ್ಯಸ್ಥರು ಇವರುಗಳಿಗೆಲ್ಲಾ ಈಗ ರಾಜಭವನದಲ್ಲಿ ಆಶ್ರಯ ಕಲ್ಪಿಸುವುದು ಸಾಮಾನ್ಯಸಂಗತಿಯಾಗಿದೆ. ಮಾಜಿ ಪೊಲೀಸ್ ಅಧಿಕಾರಿಗಳು, ನಿವೃತ್ತ ತನಿಖಾದಳದ ಅಧಿಕಾರಿಗಳನ್ನೆಲ್ಲಾ ರಾಜ್ಯಪಾಲರನ್ನಾಗಿ ನೇಮಿಸುವ ಪರಂಪರೆ ಈಗ ಪ್ರಶ್ನಾರ್ಹ. ಈಗ ಅಂತಹ ಆರು ರಾಜ್ಯಪಾಲರಿದ್ದಾರೆ. ಸಂವಿಧಾನ ವಿಷಯದಲ್ಲಿ ಅತಿ ದೊಡ್ಡ ಮೇಧಾವಿಗಳು ಎನ್ನುವ ಕಾರಣಕ್ಕೆ ಅವರುಗಳನ್ನು ಆ ಹುದ್ದೆಗೆ ನೇಮಿಸಲಾಗಿದೆ ಎಂದು ಭಾವಿಸಿದರೆ ಅದು ತಪ್ಪಾಗುತ್ತದೆ. ದಕ್ಷತೆ, ನಿಷ್ಪಕ್ಷಪಾತ ನಿಲುವು ರಾಜ್ಯಪಾಲರ ಘನತೆಯನ್ನು ಹೆಚ್ಚಿಸುತ್ತದೆ. ಆದರೆ ರಾಜ್ಯ ರಾಜಕೀಯದಲ್ಲಿ ಮೂಗುತೂರಿಸುವ ವ್ಯಕ್ತಿಗಳನ್ನು ಆಯ್ಕೆ ಮಾಡುವ ಮೂಲಕ ಕೇಂದ್ರ ಸರ್ಕಾರ ಅಂತಹ ಘನತೆಯನ್ನು ಕುಗ್ಗಿಸುವ ಯತ್ನ ನಡೆಸಿರುವುದು ವಿಷಾದದ ಸಂಗತಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.