ಏಡ್ಸ್ ಚಿಕಿತ್ಸೆಗೊಂದು ಆಶಾಕಿರಣ ಮಾನವ ಜೀವರಾಶಿಯ ಆರೋಗ್ಯ ರಕ್ಷಣೆ ಮತ್ತು ಉಳಿವಿನ ಹಾದಿಯಲ್ಲಿ ಐತಿಹಾಸಿಕ ಎನ್ನಬಹುದಾದ ಸಾಧನೆಯೊಂದನ್ನು ಅಮೆರಿಕದ ಮೇರಿಲ್ಯಾಂಡ್‌ನ ಜಾನ್ ಹಾಪ್‌ಕಿನ್ಸ್ ಶಿಶು ಆರೋಗ್ಯ ಕೇಂದ್ರದ ಸಂಶೋಧಕರು ಮಾಡಿದ್ದಾರೆ. ಎಚ್‌ಐವಿ ಸೋಂಕು ಅಂಟಿಸಿಕೊಂಡೇ ಜನಿಸಿದ ಶಿಶುವನ್ನು ಗುಣಪಡಿಸುವಲ್ಲಿ ಸಫಲರಾಗಿದ್ದಾರೆ. ಅದರ ಪ್ರತಿ ಹಂತದ ಬೆಳವಣಿಗೆಯನ್ನೂ ದಾಖಲಿಸಿದ್ದಾರೆ. ಇಡೀ ವಿಶ್ವವೇ ಬೆರಗುಗಣ್ಣಿನಿಂದ ನೋಡುವಂತೆ ಮಾಡಿದ ಮಹತ್ವದ ಸಂಗತಿಯಿದು. ಸದ್ಯಕ್ಕಂತೂ ಶಾಶ್ವತ ಚಿಕಿತ್ಸೆಯೇ ಇಲ್ಲದ ಮತ್ತು ಅಕಾಲಿಕವಾಗಿ ಸಾವಿನ ಮನೆಗೆ ನೂಕುವ ಕಾಯಿಲೆ ಎಂಬ ಕುಖ್ಯಾತಿ ಎಚ್‌ಐವಿಗೆ ಇದೆ. ಏಕೆಂದರೆ ಎಚ್‌ಐವಿ ಸೋಂಕುಪೀಡಿತ ಮಗುವನ್ನು ಪೂರ್ಣ ಗುಣಪಡಿಸಿದ ಉದಾಹರಣೆ ಇದುವರೆಗೂ ಇರಲಿಲ್ಲ. ಸೋಂಕು ಅಂಟಿಸಿಕೊಂಡ ತಾಯಿಗೆ ಹೆರಿಗೆಗೆ ಮುನ್ನವೇ ಔಷಧ ನೀಡಿ ಶಿಶುವಿಗೆ ಈ ಕಾಯಿಲೆ ಬರದಂತೆ ಮಾಡುವ ಚಿಕಿತ್ಸೆ ಲಭ್ಯವಿದೆ. ಆದರೆ ವಿಶ್ವದ ಬಡ ದೇಶಗಳಲ್ಲಿ ಅದರಲ್ಲೂ ವಿಶೇಷವಾಗಿ ಆಫ್ರಿಕ, ಏಷ್ಯದ ಕೆಲ ದೇಶಗಳಲ್ಲಿ ತಾಯಂದಿರಿಗೆ ಕನಿಷ್ಠ ಆರೋಗ್ಯ ಸೇವೆಗಳೂ ದೊರೆಯುತ್ತಿಲ್ಲ. ಅದಕ್ಕಾಗಿಯೇ ಅಲ್ಲಿ ಎಚ್‌ಐವಿ ಸೋಂಕು ಹೊತ್ತುಕೊಂಡೆ ಭೂಮಿಗೆ ಬರುವ ಶಿಶುಗಳ ಸಂಖ್ಯೆ ಅಧಿಕ. ಎಚ್‌ಐವಿ ವೈರಸ್‌ಗಳು ದೇಹದಲ್ಲಿ ಬೆಳವಣಿಗೆ ಹೊಂದಿ ರೋಗನಿರೋಧಕ ಶಕ್ತಿಯನ್ನೇ ಸರ್ವನಾಶ ಮಾಡುವ ಏಡ್ಸ್ ಕಾಯಿಲೆಯಾಗಿ ರೂಪಾಂತರ ಹೊಂದುತ್ತವೆ. ಹೀಗಾಗಿ ಸೋಂಕು ಪೀಡಿತ ಮಕ್ಕಳು ಬದುಕಿರುವಷ್ಟು ದಿನವೂ ನಿರಂತರವಾಗಿ ಔಷಧವನ್ನು ತೆಗೆದುಕೊಳ್ಳುತ್ತಲೇ ಇರಬೇಕು. ಬಡವರ ಪಾಲಿಗಂತೂ ಇದು ದುಬಾರಿ ಮತ್ತು ಕಷ್ಟಕರ. ವಿಶ್ವಸಂಸ್ಥೆಯ ಅಂದಾಜಿನ ಪ್ರಕಾರ 2011ರಲ್ಲಿ 3.30 ಲಕ್ಷ ಮಕ್ಕಳು ಎಚ್‌ಐವಿ ಸೋಂಕಿನೊಂದಿಗೆ ಜನಿಸಿವೆ. ವಿಶ್ವದಲ್ಲಿ ಎಚ್‌ಐವಿ ಪೀಡಿತ ಮಕ್ಕಳ ಸಂಖ್ಯೆ 30 ಲಕ್ಷಕ್ಕೂ ಅಧಿಕ. ಇವೆಲ್ಲ ಬೆಚ್ಚಿಬೀಳಿಸುವ ಸಂಗತಿಯೇ ಸರಿ. ಹಾಪ್‌ಕಿನ್ಸ್ ಕೇಂದ್ರದ ಸಂಶೋಧಕರು ಗುಣಪಡಿಸಿದ್ದು ಮಿಸ್ಸಿಸಿಪ್ಪಿಯ ತಾಯಿಯೊಬ್ಬಳು ಹೆತ್ತ ಮಗುವನ್ನು. ಆಕೆ ಹೆರಿಗೆಗೆ ಮುನ್ನ ಒಮ್ಮೆಯೂ ತಪಾಸಣೆಗೆ ಒಳಗಾಗಿರಲಿಲ್ಲ. ಹೀಗಾಗಿ ಸೋಂಕುಪೀಡಿತೆ ಎಂದು ತಿಳಿದದ್ದೇ ಹೆರಿಗೆಗೆ ದಾಖಲಾದಾಗ. ಮಗು ಜನಿಸಿದ 30 ಗಂಟೆಗಳಲ್ಲಿಯೇ ಅದಕ್ಕೆ ಚಿಕಿತ್ಸೆ ಆರಂಭಿಸಿದರು. 18 ತಿಂಗಳು ನಿರಂತರವಾಗಿ ಮುಂದುವರಿಸಿದರು. ನಂತರ ತಾಯಿ ತನ್ನ ಮಗುವಿನ ಜತೆ ಆಸ್ಪತ್ರೆಯ ಕಡೆಯೇ ಮುಖ ಮಾಡಲಿಲ್ಲ. ಐದು ತಿಂಗಳ ಬಳಿಕ ಮತ್ತೆ ಮಗುವನ್ನು ತಂದು ತಪಾಸಣೆಗೆ ಒಳಪಡಿಸಿದಳು. ಅಷ್ಟರಲ್ಲಿ ಎಚ್‌ಐವಿ ವೈರಾಣು ಹಲವು ಪಟ್ಟು ಬೆಳೆದು ದೇಹವನ್ನೆಲ್ಲಾ ಆವರಿಸಿರುತ್ತವೆ ಎಂದು ಭಾವಿಸಿದ್ದ ಸಂಶೋಧಕರಿಗೆ ಆಶ್ಚರ್ಯ ಕಾದಿತ್ತು. ಅಳಿದುಳಿದ ವೈರಾಣುಗಳು ಇನ್ನೆಂದೂ ತಲೆಯೆತ್ತಲಾರದಷ್ಟು ದುರ್ಬಲಗೊಂಡಿದ್ದವು. ಈ ಮಾಹಿತಿಗಳನ್ನೆಲ್ಲ ದಾಖಲಿಸಿ ಅವರು ಸೋಮವಾರ ವೈದ್ಯಕೀಯ ಸಮಾವೇಶವೊಂದರಲ್ಲಿ ಮಂಡಿಸಿದ್ದಾರೆ. ಇದಕ್ಕೆ ಪ್ರತಿಯಾಗಿ, `ಜನಿಸುವಾಗ ಈ ಮಗುವಿಗೆ ನಿಜವಾಗಿಯೂ ಸೋಂಕು ಇತ್ತು ಎಂಬುದೇ ಖಾತರಿಯಾಗಿಲ್ಲ; ಆದ್ದರಿಂದ ಇದು ಈಗ ಬಳಕೆಯಲ್ಲಿರುವ ಪ್ರತಿಬಂಧಕ ಚಿಕಿತ್ಸೆ ಮಾತ್ರ' ಎನ್ನುವ ವಾದವನ್ನು ವಿಜ್ಞಾನಿಗಳ ವರ್ಗವೊಂದು ಮುಂದಿಟ್ಟಿದೆ. ಆದರೂ ವೈರಾಣಗಳ ಇರುವಿಕೆಯನ್ನು ಆರಂಭದ ಹಂತದಲ್ಲಿಯೇ ಗುರುತಿಸಿ ಶಿಶುಗಳಿಗೆ ಚಿಕಿತ್ಸೆ ನೀಡುವ ನವೀನ ವಿಧಾನಕ್ಕೆ ಇದು ನಾಂದಿ ಹಾಡಿದೆ, ಭರವಸೆಯ ಆಶಾಕಿರಣವೊಂದನ್ನು ಮೂಡಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.