ಬೇಕಾಗಿದೆ ಪರಿವರ್ತನೆ ಇಂದು ಅಂತರ ರಾಷ್ಟ್ರೀಯ ಮಹಿಳಾ ದಿನ. ಮಹಿಳೆ ಎಲ್ಲ ಕಾಲಕ್ಕೂ ಚರ್ಚೆಯ ವಸ್ತು. ಆಕೆಯ ನಡೆ,ನುಡಿ, ಉಡುಗೆ ತೊಡುಗೆ ಎಲ್ಲವೂ ಸಮಾಜದ ಹದ್ದಿನ ಕಣ್ಣಲ್ಲಿ ನಿಷ್ಕರ್ಷೆಗೆ ಒಳಗಾಗುತ್ತಲೇ ಇರುತ್ತವೆ. ಸಮಾನತೆಯ ಆಶಯಕ್ಕೆ ಗ್ರಹಣ ಹಿಡಿದಿರುವ ಕಾಲಘಟ್ಟದಲ್ಲಿ ನಾವಿದ್ದೇವೆ. ಅಂತಹದ್ದೊಂದು ಕನಸಿನೊಂದಿಗೆ ಮುನ್ನುಗ್ಗುವ ಮಹಿಳೆಯ ಉತ್ಸಾಹಕ್ಕೆ ತಣ್ಣೀರೆರಚುವ ಕಾರ್ಯ ಆಗಾಗ್ಗೆ ನಡೆಯುತ್ತಲೇ ಇರುತ್ತದೆ. ಆದರೂ ಇದೆಲ್ಲದರ ನಡುವೆಯೂ ಆಕೆ ಬೆಳೆದಿದ್ದಾಳೆ, ಬೆಳೆಯುತ್ತಲೇ ಇದ್ದಾಳೆ. ತನ್ನ ಅದಮ್ಯ ಚೇತನವನ್ನು ಕಸಿಯುವ ಹಕ್ಕು ಮತ್ತು ಶಕ್ತಿ ಯಾರಿಗೂ ಇಲ್ಲ ಎಂಬಂತೆ. ಅದಕ್ಕೇ, ದೆಹಲಿಯಲ್ಲಿ ಅತ್ಯಾಚಾರಕ್ಕೆ ಒಳಗಾದ ಯುವತಿಯ ಸುದ್ದಿ ರಾರಾಜಿಸಿದ ಮಾಧ್ಯಮಗಳಲ್ಲಿ ಕಲ್ಪನಾ ಚಾವ್ಲಾ, ಸುನಿತಾ ವಿಲಿಯಮ್ಸ ಅಂತಹವರ ಸಾಧನೆಯೂ ದಾಖಲಾಗುತ್ತದೆ. ಭ್ರೂಣದಲ್ಲೇ ಚಿವುಟಿಹೋದ ಕಂದಮ್ಮಗಳ ವಿಷಯ ಪ್ರಕಟವಾದ ಅದೇ ಜಾಗದಲ್ಲಿ ಮರುದಿನ, ಜಗತ್ತಿನ ಎದುರಿಗೆ ದೇಶದ ಕೀರ್ತಿಪತಾಕೆ ಹಾರಿಸಿ ಬಂದ ಸೈನಾ ನೆಹ್ವಾಲ್, ಮೇರಿ ಕೋಮ್ ಅಂತಹವರು ವಿಜಯದ ನಗೆ ಬೀರುತ್ತಾರೆ. ಅಬಲೆ ಎಂದು ಜರಿದ ಅದೇ ಸಮಾಜ ಅವಳ ಸಾಧನೆ ಕಂಡು ಮೂಗಿನ ಮೇಲೆ ಬೆರಳೇರಿಸುತ್ತದೆ.ಆದರೂ ಯಾಕೆ ಇಂತಹ ವಿರೋಧಾಭಾಸ? ಉತ್ತರ ಸ್ಪಷ್ಟ. ಮಣ್ಣಲ್ಲಿ ಯಾವ ಬೀಜ ಬಿತ್ತುತ್ತೇವೆಯೋ ಮುಂದೆ ಅದೇ ಮರ ತಾನೇ ಹುಟ್ಟುವುದು? ಇಡೀ ಸಮಾಜವೇ ಪುರುಷ ಪ್ರಧಾನ ಆಗಿರುವಾಗ ಇಂತಹ ವಿರೋಧಾಭಾಸಗಳು ಘಟಿಸುವುದರಲ್ಲಿ ಅಚ್ಚರಿಯೇನಿಲ್ಲ. ಸಮಾಧಾನದ ಸಂಗತಿಯೆಂದರೆ, ಮಹಿಳೆಯೆಡೆಗಿನ ಸಾಮಾಜಿಕ ದೃಷ್ಟಿಕೋನದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವಂತಹ ಬೆಳವಣಿಗೆಗಳು ಇತ್ತೀಚೆಗೆ ಗೋಚರಿಸುತ್ತಿವೆ. ದೆಹಲಿ ಅತ್ಯಾಚಾರ ಘಟನೆ ದೇಶದಲ್ಲಿ ಸಂಚಲನವನ್ನೇ ಸೃಷ್ಟಿಸಿದೆ. ಅತ್ಯಾಚಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸರ್ಕಾರ ಮುಂದಾಗಿದೆ. ಹೆಣ್ಣಿನ ಅಸಹಾಯಕತೆಯನ್ನು ದುರುಪಯೋಗ ಪಡಿಸಿಕೊಳ್ಳುವ ದುರುಳರಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂಬ ಬೇಡಿಕೆ ಬಲಗೊಳ್ಳುತ್ತಿದೆ. ಮಹಿಳಾ ಸಬಲೀಕರಣಕ್ಕೆ ಪೂರಕವಾಗಿ ಮಹಿಳಾ ಬ್ಯಾಂಕ್, ನಿರ್ಭಯ ನಿಧಿಯಂತಹ ಯೋಜನೆಗಳನ್ನು ಘೋಷಿಸಲಾಗಿದೆ. ಇದೇ ವೇಳೆ, ಹೆಣ್ಣು ಭ್ರೂಣ ಹತ್ಯೆಯ ವಿರುದ್ಧ ಸುಪ್ರೀಂಕೋರ್ಟ್ ಸರ್ಕಾರಕ್ಕೆ ಚಾಟಿ ಏಟು ಬೀಸಿದೆ. ಆದರೂ ಪುರುಷ ಪ್ರಧಾನ ವ್ಯವಸ್ಥೆಯ ಬೇರುಗಳು ಆಳವಾಗಿ ಬೇರೂರಿವೆ. ಬುಡದಿಂದಲೇ ಅವುಗಳನ್ನು ಅಲುಗಾಡಿಸಿ ಚುಚ್ಚುಮದ್ದು ನೀಡದ ಹೊರತು, ಹೆಣ್ಣನ್ನು ಭೋಗದ ಸರಕಿನಂತೆ ನೋಡುವ ಸಮಾಜದ ಮನೋಭಾವ ಬದಲಾಗದು. ಆಕೆಯ ಮೇಲೆ ನಡೆಯುವ ನಿರಂತರ ದೌರ್ಜನ್ಯ, ಶೋಷಣೆ, ಹಿಂಸಾಚಾರ ಕೊನೆಯಾಗದು. ಬದಲಾವಣೆ ತಾತ್ಕಾಲಿಕ, ಪರಿವರ್ತನೆ ನಿರಂತರ. ಹೀಗಾಗಿ ಮೊದಲು ಹೆಣ್ಣಿನ ಬಗೆಗಿನ ಪೂರ್ವಗ್ರಹಗಳು ಬದಲಾಗಬೇಕು. ಕೌಟುಂಬಿಕ ದೌರ್ಜನ್ಯಗಳಿಗೆ ಕಡಿವಾಣ ಹಾಕಬೇಕು. ಮಹಿಳಾ ಪರ ಕಾನೂನುಗಳು ಬಲಗೊಳ್ಳಬೇಕು. ಇಲ್ಲದಿದ್ದರೆ ಅಲ್ಲೊಬ್ಬಳು ಇಲ್ಲೊಬ್ಬಳು ಸಾಧಕಿಯ ಹೊರತಾಗಿ ವಿಶಾಲ ತಳಹದಿಯ ಸಮಾಜ ನಿರ್ಮಾಣ ಸಾಧ್ಯವಿಲ್ಲ. ಇಂತಹ ಮಹತ್ವದ ಕಾರ್ಯಕ್ಕೆ ಮಹಿಳಾ ದಿನಾಚರಣೆ ಪೂರಕವಾಗಬೇಕು. ಆಗ ಮಾತ್ರ ಪರಿವರ್ತನೆಯನ್ನು ನಿರೀಕ್ಷಿಸಬಹುದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.