ಸಕಾಲ ಸೇವೆ ಬೇಕು ನಾಗರಿಕರಿಗೆ ನಿಗದಿತ ಕಾಲ ಮಿತಿಯೊಳಗೆ ಸರ್ಕಾರಿ ಸೇವೆಗಳನ್ನು ಖಾತ್ರಿಗೊಳಿಸುವ ಮಸೂದೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಪಾಸ್‌ಪೋರ್ಟ್, ಪಿಂಚಣಿ, ಚಾಲನೆ ಪರವಾನಗಿ, ಜಾತಿ ಪ್ರಮಾಣಪತ್ರ, ಪಡಿತರ ಚೀಟಿ, ತೆರಿಗೆ ಮರುಪಾವತಿ ಮತ್ತು ಜನನ, ಮರಣ ಪ್ರಮಾಣಪತ್ರಗಳಂತಹ ದಾಖಲಾತಿಗಳನ್ನು ನಿರ್ದಿಷ್ಟ ಕಾಲಮಿತಿಯೊಳಗೆ ಜನರಿಗೆ ಒದಗಿಸುವುದು ಈ ಮಸೂದೆಯ ಮಹತ್ವಾಕಾಂಕ್ಷೆಯ ಉದ್ದೇಶ. ಈ ದಾಖಲೆಗಳನ್ನು ಪಡೆದುಕೊಳ್ಳಲು ಸಾಮಾನ್ಯ ನಾಗರಿಕರು ಪಡುವ ಪಾಡು ಎಲ್ಲರಿಗೂ ತಿಳಿದಿರುವಂತಹದ್ದೇ. ಭ್ರಷ್ಟಾಚಾರವನ್ನು ಹಾಸಿ ಹೊದ್ದ ಕ್ಷೇತ್ರಗಳಿವು. ಹೀಗಾಗಿಯೇ, ಈ ಸೇವೆಗಳನ್ನು ಒದಗಿಸುವಲ್ಲಿ ವಿಳಂಬವಾದಲ್ಲಿ ಅದಕ್ಕೆ ದಂಡ ಹಾಕುವ ಅವಕಾಶವನ್ನು ಈಗ ಈ ಮಸೂದೆ ನೀಡುತ್ತದೆ. ದಿನಕ್ಕೆ 250 ರೂಪಾಯಿಯಂತೆ ಈ ದಂಡ ಆರಂಭವಾಗುತ್ತದೆ. ಗರಿಷ್ಠ ರೂ.50,000ದವರೆಗೂ ದಂಡ ಹಾಕಲು ಅವಕಾಶವಿರುತ್ತದೆ. ಈ ದಂಡವನ್ನು ಇಲಾಖೆಗಳು ಭರಿಸುವುದಿಲ್ಲ. ವಿಳಂಬಕ್ಕೆ ಕಾರಣರಾದ ಅಧಿಕಾರಿಗಳೇ ಭರಿಸಬೇಕಾಗುತ್ತದೆ. ಇದರಿಂದಾಗಿ ವಿಳಂಬ ತಪ್ಪಿಸುವುದು ಅಧಿಕಾರಿಗಳಿಗೆ ಅವರದೇ ಹಿತದೃಷ್ಟಿಯಿಂದಲೂ ಮುಖ್ಯವಾಗುತ್ತದೆ. ಈ ದೃಷ್ಟಿಯಿಂದ ಈ ಮಸೂದೆ ಕಾಯಿದೆಯಾಗಿ ಸರಿಯಾಗಿ ಜಾರಿಯಾದಲ್ಲಿ ದಕ್ಷತೆ ಹಾಗೂ ಉತ್ತರದಾಯಿತ್ವ ಹೆಚ್ಚುತ್ತದೆ ಎಂಬ ಆಶಾಭಾವ ಇರಿಸಿಕೊಳ್ಳಬಹುದು. ಈ ಮಸೂದೆ ಭ್ರಷ್ಟಾಚಾರಕ್ಕಿರುವ ಅವಕಾಶಗಳನ್ನು ತಗ್ಗಿಸುತ್ತದೆ. ಜೊತೆಗೆ, ಮಾಹಿತಿ ಹಕ್ಕಿನ ಕಾಯಿದೆಗಿಂತ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನಾಗರಿಕರನ್ನು ಸಶಕ್ತೀಕರಣಗೊಳಿಸುವ ಸಾಮರ್ಥ್ಯವನ್ನು ಈ ಉದ್ದೇಶಿತ ಕಾಯಿದೆ ಹೊಂದಿದೆ. ಸಂಸತ್ತಿನಲ್ಲಿ ಈ ಮಸೂದೆ ಅಂಗೀಕಾರ ಪಡೆದ ನಂತರ ಸರ್ಕಾರದ ಎಲ್ಲಾ ಇಲಾಖೆಗಳು ಹಾಗೂ ಸಂಸ್ಥೆಗಳು ನಾಗರಿಕರ ಸನ್ನದು ಸಿದ್ಧಪಡಿಸಬೇಕಾಗುತ್ತದೆ. ಅದರಲ್ಲಿ ಅವು ನೀಡುವ ಸೇವೆಗಳು, ಅವುಗಳ ವಿಲೇವಾರಿಯ ಕಾರ್ಯಯೋಜನೆ ಮತ್ತಿತರ ವಿವರಗಳನ್ನು ನಮೂದಿಸುವುದು ಕಡ್ಡಾಯವಾಗುತ್ತದೆ. ಜೊತೆಗೆ, ಈ ಸಂಬಂಧದ ಕುಂದುಕೊರತೆ ಹಾಗೂ ಪರಿಹಾರಗಳ ಅನುಷ್ಠಾನಕ್ಕೆ ಮೂಲಸೌಕರ್ಯಗಳು ಹಾಗೂ ವಿಧಿವಿಧಾನಗಳನ್ನೂ ಸೃಷ್ಟಿಸಬೇಕಾಗುತ್ತದೆ. ಇದರಿಂದ ಹೆಚ್ಚಿನ ಪ್ರಮಾಣದಲ್ಲಿ ಆಡಳಿತದಲ್ಲಿ ಪಾರದರ್ಶಕತೆಯನ್ನು ಸೃಷ್ಟಿಸುವುದು ಸಾಧ್ಯವಾಗುತ್ತದೆ ಎಂಬ ನಿರೀಕ್ಷೆ ಇದೆ. ಈಗಾಗಲೇ ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಇಂತಹದೇ ಕಾನೂನು ಅಸ್ತಿತ್ವದಲ್ಲಿದೆ. ಆದರೆ, ಅದರ ಅನುಷ್ಠಾನ ಪೂರ್ಣ ತೃಪ್ತಿಕರವಾಗಿಲ್ಲ ಎಂಬುದು ವಾಸ್ತವ. ಹೀಗಾಗಿ ಈ ಕಾನೂನುಗಳ ಅನುಷ್ಠಾನದಲ್ಲಿನ ಸಮಸ್ಯೆಗಳನ್ನು ಅಧ್ಯಯನ ಮಾಡಬೇಕು. ದೋಷಗಳನ್ನು ಸಾಧ್ಯವಾದಷ್ಟು ಕೇಂದ್ರದ ಕಾನೂನಿನಲ್ಲಿ ಕಡಿಮೆ ಮಾಡಬೇಕು. ಉತ್ತರದಾಯಿತ್ವಕ್ಕೆ ಬಲಯುತವಾದ ವ್ಯವಸ್ಥೆಯನ್ನು ರೂಪಿಸುವುದು ಮುಖ್ಯ. ಉದ್ದೇಶಿತ ಮಸೂದೆ ರಾಜ್ಯಗಳ ಅಧಿಕಾರಗಳನ್ನು ಅತಿಕ್ರಮಿಸಿ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುತ್ತದೆಂಬ ಟೀಕೆಗಳೂ ಈ ಮಧ್ಯೆ ವ್ಯಕ್ತವಾಗಿವೆ. ಆದರೆ ಈ ಮಸೂದೆಯನ್ನು ಸಂಸದೀಯ ಸ್ಥಾಯಿ ಸಮಿತಿ ಅಧ್ಯಯನ ಮಾಡಿದೆ. ಅದರ ಪ್ರಕಾರ, ಈ ಭೀತಿಗೆ ಅರ್ಥವಿಲ್ಲ. ಅಗತ್ಯ ಬಿದ್ದಲ್ಲಿ ಸಂಸತ್‌ನಲ್ಲಿ ಚರ್ಚೆಯಾಗುವ ಸಂದರ್ಭದಲ್ಲಿ ಬದಲಾವಣೆಗಳನ್ನು ಮಾಡುವುದಕ್ಕೂ ಅವಕಾಶವಿದೆ. ಹೀಗಾಗಿ ರಾಜಕೀಯ ಪಕ್ಷಗಳ ಕ್ಷುಲ್ಲಕ ರಾಜಕಾರಣಗಳ ನಡುವೆ ಈ ಮಸೂದೆ ಬಲಿಪಶು ಆಗಬಾರದು ಎಂಬುದರತ್ತ ಕಾಳಜಿ ಇರಬೇಕಾದುದು ಅವಶ್ಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.