ಆಂಟನಿಯವರ ಸತ್ವಪರೀಕ್ಷೆ ಯುಪಿಎ ಕೊರಳಿಗೆ ಸುತ್ತಿಕೊಂಡಿರುವ ಹಗರಣಗಳ ಸರಮಾಲೆಯಲ್ಲಿ ರಕ್ಷಣಾ ಇಲಾಖೆಯೊಂದು ಬಾಕಿ ಇತ್ತು. `ಕಳಪೆ ದರ್ಜೆ ವಾಹನಗಳ ಖರೀದಿಗಾಗಿ ಲಾಬಿ ಮಾಡಲು 14 ಕೋಟಿ ರೂಪಾಯಿ ಲಂಚದ ಆಮಿಷವೊಡ್ಡಲಾಗಿತ್ತು~ ಎಂದು ಸೇನಾ ಮುಖ್ಯಸ್ಥ ಜ.ವಿ.ಕೆ.ಸಿಂಗ್ ಹೇಳುವ ಮೂಲಕ ಈ ಬಾಕಿಯೂ ತೀರಿದಂತಾಗಿದೆ. ರಾಜೀವ್‌ಗಾಂಧಿಯವರಿಂದ ಹಿಡಿದು ಅಟಲಬಿಹಾರಿ ವಾಜಪೇಯಿವರೆಗೆ ಇತ್ತೀಚಿನ ಯಾವ ಸರ್ಕಾರವೂ ರಕ್ಷಣಾ ಇಲಾಖೆಯ ಖರೀದಿಯಲ್ಲಿನ ಅವ್ಯವಹಾರದಿಂದ ಮುಕ್ತವಾಗಿಲ್ಲ. ದೇಶದಲ್ಲಿ ಉಳಿದಿರುವ ಕೆಲವೇ ಕೆಲವು ಪ್ರಾಮಾಣಿಕ ರಾಜಕಾರಣಿಗಳಲ್ಲಿ ಒಬ್ಬರಾದ ಎ.ಕೆ.ಆಂಟನಿ ಅವರು ಸಚಿವರಾಗಿರುವುದರಿಂದ ಈ ಬಾರಿ ಕಾಂಗ್ರೆಸ್, ಕನಿಷ್ಠ ರಕ್ಷಣಾ ಇಲಾಖೆಯ ಹಗರಣಗಳ ಸುಳಿಯಲ್ಲಿ ಸಿಕ್ಕಿಬೀಳಲಾರದು ಎಂಬ ನಂಬಿಕೆ ಕೂಡಾ ಹುಸಿಯಾಗಿದೆ. ಸಚಿವ ಆಂಟನಿಯವರ ಹಾಗೆ ಜ.ಸಿಂಗ್ ಅವರೂ ಪ್ರಾಮಾಣಿಕತೆ ಮತ್ತು ದಕ್ಷತೆಗೆ ಹೆಸರಾದವರು. ತನ್ನ ಅಧಿಕಾರವಧಿಯಲ್ಲಿ ರಕ್ಷಣಾ ಇಲಾಖೆಯನ್ನು ಶುಚಿಗೊಳಿಸಲು ಜ.ಸಿಂಗ್ ಪ್ರಯತ್ನ ನಡೆಸಿದ್ದಾರೆ. ಬಯಲಾಗಿರುವ ಹಗರಣ ಇಬ್ಬರು `ಪ್ರಾಮಾಣಿಕ~ರನ್ನೂ ಸಂಶಯದ ಕಟಕಟೆಯಲ್ಲಿ ನಿಲ್ಲಿಸಿದೆ. ರಕ್ಷಣಾ ಸಚಿವರು ಲೋಕಸಭೆಯಲ್ಲಿ ಸ್ವಯಂಪ್ರೇರಿತ ಹೇಳಿಕೆ ನೀಡಿ ಜ.ವಿ.ಕೆ.ಸಿಂಗ್ ಮಾಡಿರುವ ಆರೋಪವನ್ನು ಒಪ್ಪಿಕೊಂಡಿರುವುದು ಮಾತ್ರವಲ್ಲ, ಲಂಚದ ಆಮಿಷ ತೋರಿಸಿರುವ ಸೇನಾಧಿಕಾರಿಯ ಹೆಸರನ್ನೂ ಬಹಿರಂಗಪಡಿಸಿದ್ದಾರೆ. ಈಗಾಗಲೇ ಹಗರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಲಾಗಿದೆ. ಆದರೆ, ಇಷ್ಟರಿಂದಲೇ ಸಚಿವರ ತಮ್ಮ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲಾಗುವುದಿಲ್ಲ. ಆರೋಪದ ಸತ್ಯಾಸತ್ಯತೆಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳುವ ಹಕ್ಕು ದೇಶದ ಜನರಿಗೆ ಇದೆ.ಮೊದಲನೆಯದಾಗಿ, ಕಳೆದ ವರ್ಷದ ಆಗಸ್ಟ್‌ನಲ್ಲಿ ನಡೆದಿದ್ದ ಈ ಘಟನೆಯನ್ನು ಜ.ವಿ.ಕೆ.ಸಿಂಗ್ ಇಲ್ಲಿಯವರೆಗೆ ಯಾಕೆ ಬಚ್ಚಿಟ್ಟುಕೊಂಡಿದ್ದರು? ಇಂತಹ ದೂರುಗಳನ್ನು ರಕ್ಷಣಾ ಸಚಿವರಿಗೆ ಲಿಖಿತ ರೂಪದಲ್ಲಿ ನೀಡಬೇಕೆಂಬ ನಿಯಮವಿದ್ದರೂ ಮೌಖಿಕ ದೂರು ನೀಡಿ ಯಾಕೆ ತೆಪ್ಪಗಾದರು? ಜನ್ಮದಿನದ ವಿವಾದದಲ್ಲಿ ಸೋತುಹೋದ ನಂತರವಷ್ಟೇ ಈ ಹಗರಣವನ್ನು ಬಯಲುಗೊಳಿಸಿದ್ದರ ಹಿಂದೆ ಬೇರೆ ಉದ್ದೇಶಗಳಿದ್ದವೇ?- ಈ ಪ್ರಶ್ನೆಗಳಿಗೆ ಜ.ಸಿಂಗ್ ಉತ್ತರ ನೀಡಬೇಕಾಗಿದೆ. ಎರಡನೆಯದಾಗಿ, ಸಚಿವ ಆಂಟನಿ ಅವರ ಜವಾಬ್ದಾರಿ. ತನಿಖೆ ನಡೆಸದೆ ಇರಲು ಸೇನಾ ಮುಖ್ಯಸ್ಥರು ಲಂಚ ಹಗರಣದ ಬಗ್ಗೆ ಲಿಖಿತ ದೂರು ನೀಡದಿರುವುದು ಕಾರಣ ಎಂಬ ಅವರ ಸಮಜಾಯಿಷಿ ಒಪ್ಪಿಕೊಳ್ಳುವಂತಹದ್ದಲ್ಲ. ಲಿಖಿತ ದೂರು ನೀಡಲು ಸೇನಾ ಮುಖ್ಯಸ್ಥರಿಗೆ ಆದೇಶ ನೀಡುವುದು ಮಾತ್ರವಲ್ಲ, ಆ ಆದೇಶವನ್ನು ಉಲ್ಲಂಘಿಸಿದರೆ ಕ್ರಮ ಕೈಗೊಳ್ಳುವ ಅಧಿಕಾರವೂ ಸಚಿವರಿಗೆ ಇದೆ. ಹೀಗಿದ್ದೂ ಪ್ರಾಮಾಣಿಕತೆಗೆ ಹೆಸರಾಗಿರುವ ಎ.ಕೆ.ಆಂಟನಿ ಅವರು ಸುಮ್ಮನಾದುದು ಯಾಕೆ? ಈ ವಿಷಯದಲ್ಲಿ ಮುಂದುವರಿಯದಂತೆ ಅವರ ಮೇಲೆ ಕೂಡಾ `ಮೇಲಿನಿಂದ~ ಒತ್ತಡ ಇತ್ತೇ? ಸಿಬಿಐ ನಡೆಸುವ ತನಿಖೆಯಿಂದ ಈ ಪ್ರಶ್ನೆಗಳಿಗೆ ಉತ್ತರ ಸಿಗಲಾರದು. ಇದನ್ನು ಆಂಟನಿಯವರೇ ಹೇಳಬೇಕಾಗಿದೆ. ಸಂಶಯ ನಿವಾರಣೆಯಾಗುವ ವರೆಗೆ ಅವರೂ ಒಬ್ಬ ಆರೋಪಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.