ಗೃಹಿಣಿಯ ಶ್ರಮಕ್ಕೆ ಮಾನ್ಯತೆ ವಿವಾಹಿತ ಮಹಿಳೆಗೆ ಗಂಡನ ಮನೆಯಲ್ಲಿ ಎಷ್ಟೇ ಹಿಂಸೆ, ದೌರ್ಜನ್ಯಗಳಿದ್ದರೂ ವಿವಾಹ ಬಂಧನವನ್ನು ಕಡಿದುಕೊಂಡು ಹೊರಬರುವುದು ಅಷ್ಟು ಸುಲಭವಲ್ಲ. ಮುಂದೇನು ಎಂಬ ಪ್ರಶ್ನೆ ಆಕೆಯ ಎದುರು ಇರುತ್ತದೆ. ಸಾಮಾನ್ಯವಾಗಿ ಆಕೆಯ ಹೆಸರಲ್ಲಿ ಯಾವ ಆಸ್ತಿಪಾಸ್ತಿಯೂ ಇರುವುದಿಲ್ಲ. ತನ್ನದೆನ್ನುವ ಆದಾಯವಿಲ್ಲದೆ ನೆಲೆ ಕಳೆದುಕೊಳ್ಳುವ ಬದುಕಿನ ಭೀಕರತೆ, ಹಿಂಸಾತ್ಮಕ ವಿವಾಹಬಂಧನಕ್ಕಿಂತಲೂ ಕಷ್ಟಕರವಾಗಿರುತ್ತದೆ. ಈ ಹಿನ್ನೆಲೆಯಲ್ಲೇ ಕಳೆದ ವಾರ ಕೇಂದ್ರ ಸಂಪುಟ ಅಂಗೀಕರಿಸಿರುವ `2010ರ ವಿವಾಹ ಕಾನೂನು (ತಿದ್ದುಪಡಿ) ಮಸೂದೆ~ ಈ ಅಂಶವನ್ನು ಪರಿಗಣಿಸಿರುವುದು ಸ್ವಾಗತಾರ್ಹ. ವಿವಾಹದ ನಂತರ ಗಳಿಸಿದ ಆಸ್ತಿಯಲ್ಲಿ ಮಹಿಳೆಗಿರುವ ಹಕ್ಕನ್ನು ಈ ಮಸೂದೆ ಇದೇ ಮೊದಲ ಬಾರಿಗೆ ಗುರುತಿಸಿದೆ. ಮನೆ ನಿಭಾಯಿಸುತ್ತಾ ಮಕ್ಕಳನ್ನು ನೋಡಿಕೊಳ್ಳುವುದು, ಆದಾಯ ಗಳಿಸುತ್ತಾ ಆಸ್ತಿ ಮಾಡುವ ಕೆಲಸದಷ್ಟೇ ಮುಖ್ಯವಾದುದು ಎಂಬುದನ್ನು ಗುರುತಿಸಿರುವುದು ಬಹು ಮುಖ್ಯ ಬೆಳವಣಿಗೆ. ಸಂಸಾರವನ್ನು ಕಟ್ಟುವ ಗೃಹಿಣಿಯ ಶ್ರಮಕ್ಕೆ ಸಿಕ್ಕಿರುವ ಮಾನ್ಯತೆ. ಹೀಗಾಗಿಯೇ ಸಂಬಂಧ ಬಿರುಕು ಬಿಟ್ಟಲ್ಲಿ ಆಸ್ತಿಯಲ್ಲಿ ಪತ್ನಿಗೂ ಹಕ್ಕಿರುತ್ತದೆ. ಎಷ್ಟು ಆಸ್ತಿಗೆ ಮಹಿಳೆ ಬಾಧ್ಯಸ್ಥಳಾಗುತ್ತಾಳೆ ಎಂಬುದನ್ನು ಕೋರ್ಟ್‌ಗಳ ವಿವೇಚನೆಗೇ ಬಿಡಲಾಗಿದೆ. ಈ ಆಸ್ತಿ ವಿಭಜನೆ ನಿರ್ಧರಿಸಲು ಅನುಸರಿಸುವ ಮಾನದಂಡಗಳಾವುವು ಎಂಬುದೂ ಸ್ಪಷ್ಟವಿಲ್ಲ. ಸಂಸತ್ತಿನಲ್ಲಿ ಈ ಮಸೂದೆಯನ್ನು ಅಂಗೀಕರಿಸುವ ಮೊದಲು ಈ ವಿಚಾರಗಳು ಚರ್ಚೆಯಾಗುವ ಅಗತ್ಯ ಇದೆ. ವಿಚ್ಛೇದನ ಪಡೆದುಕೊಳ್ಳುವುದೂ ಇನ್ನು ಸುಲಭವಾಗಲಿದೆ. ಸುಧಾರಣೆಯೇ ಸಾಧ್ಯವಿಲ್ಲದ ವೈವಾಹಿಕ ಒಡಕು (ಇರ‌್ರಿಟ್ರೀವಬಲ್ ಬ್ರೇಕ್‌ಡೌನ್ ಆಫ್ ಮ್ಯಾರೇಜ್) ವಿಚ್ಛೇದನಕ್ಕೆ ಹೊಸದೊಂದು ನೆಲೆಯಾಗಿ ಈ ತಿದ್ದುಪಡಿ ಮಸೂದೆ ಪರಿಗಣಿಸುತ್ತದೆ. ಪರಸ್ಪರ ಒಪ್ಪಿಗೆ ಮೇರೆಗೆ ಈ ನೆಲೆಯಲ್ಲಿ ವಿಚ್ಛೇದನಕ್ಕಾಗಿ ಪುರುಷ ಅರ್ಜಿ ಸಲ್ಲಿಸಿದಲ್ಲಿ ಅದನ್ನು ಪ್ರಶ್ನಿಸುವ ಹಕ್ಕನ್ನು ಮಹಿಳೆಗೆ ನೀಡಲಾಗಿದೆ. ಆದರೆ ಪುರುಷನಿಗೆ ಈ ಹಕ್ಕನ್ನು ನೀಡಿಲ್ಲ. ಎರಡು ವರ್ಷಗಳ ಹಿಂದೆ ರಾಜ್ಯಸಭೆಯಲ್ಲಿ ಮಂಡನೆಯಾದ ಈ ಮಸೂದೆಯನ್ನು ಕಾನೂನು, ನ್ಯಾಯ ಹಾಗೂ ಸಿಬ್ಬಂದಿ ಕುರಿತಾದ ಸಂಸದೀಯ ಸ್ಥಾಯಿಸಮಿತಿಯ ಪರಿಶೀಲನೆಗೆ ಒಪ್ಪಿಸಲಾಗಿತ್ತು. ಈ ಮಸೂದೆಗೆ ಬೆಂಬಲ ತೋರಿದ್ದ ಸ್ಥಾಯಿಸಮಿತಿ, ವಿಚ್ಛೇದನಕ್ಕೆ ಮೊದಲು ಕಡ್ಡಾಯವಾಗಿ ಆರು ತಿಂಗಳ ಕಾಯುವಿಕೆಯ ಅವಧಿಯನ್ನು ಕಿತ್ತುಹಾಕುವ ಕ್ರಮಕ್ಕೆ ವಿರೋಧ ತೋರಿತ್ತು. ಈಗ ಈ ಶಿಫಾರಸನ್ನೂ ಭಾಗಶಃ ಅಂಗೀಕರಿಸಿರುವ ಸರ್ಕಾರ, ಈ ಕಡ್ಡಾಯ ಕಾಯುವಿಕೆಯ ಅವಧಿಯನ್ನು ನಿರ್ಧರಿಸುವ ವಿಚಾರವನ್ನು ಕೋರ್ಟ್ ವಿವೇಚನೆಗೇ ಬಿಟ್ಟಿದೆ. ವಿಚ್ಛೇದಿತ ದಂಪತಿಯ ಸ್ವಂತ ಮಕ್ಕಳಿಗೆ ಇರುವ ಎಲ್ಲಾ ಹಕ್ಕುಗಳನ್ನು ದತ್ತು ಮಕ್ಕಳಿಗೂ ನೀಡಿರುವುದು ಈ ಮಸೂದೆಯ ಮತ್ತೊಂದು ಮಹತ್ವದ ಅಂಶ. ಆಧುನಿಕ ಉದಾರ ಸಮಾಜದ ಆಶೋತ್ತರಗಳನ್ನು ಈ ಮಸೂದೆ ಬಿಂಬಿಸುತ್ತದೆ. ವಿಷಮ ದಾಂಪತ್ಯಕ್ಕೆ ಘನತೆಯಲ್ಲಿ ಅಂತ್ಯ ಹಾಡಲು ಅನುವು ಮಾಡಿಕೊಡುವುದು ಸರಿಯಾದ ಕ್ರಮವೇ. ಹಾಗೆಯೇ ಆರೋಗ್ಯಕರ ಕುಟುಂಬ ವ್ಯವಸ್ಥೆಯನ್ನು ಪೋಷಿಸುವುದಕ್ಕಾಗಿ, `ಯಜಮಾನ ಸಂಸ್ಕೃತಿ~ಯ ಮೌಲ್ಯಗಳಿಲ್ಲದ ಪರಸ್ಪರ ಗೌರವ, ಕೊಡು-ಕೊಳ್ಳುವಿಕೆಯ ಸಂಬಂಧಗಳ ಮಹತ್ವ ಮನಗಾಣಿಸುವುದೂ ಅಷ್ಟೇ ಮುಖ್ಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.