ಕಲಬೆರಕೆ ಹಾವಳಿ ಬೆಂಗಳೂರಿನಲ್ಲಿ ಕಲಬೆರಕೆ ಹಾಲಿನ ಮಾರಾಟ ದೊಡ್ಡ ದಂಧೆಯ ಸ್ವರೂಪ ಪಡೆದುಕೊಂಡಿರುವುದು ಮಹಾನಗರ ಪಾಲಿಕೆ ಮತ್ತು ಇತರ ಇಲಾಖೆಗಳ ವೈಫಲ್ಯದ ಫಲ. ತಮಿಳುನಾಡಿನ ಈರೋಡ್ ಜಿಲ್ಲೆಯಿಂದ ನಿತ್ಯ ಸಾವಿರಾರು ಲೀಟರ್ ಹಾಲು ತಂದು ಅದಕ್ಕೆ ಕಾಸ್ಟಿಕ್‌ಸೋಡಾ, ಸಕ್ಕರೆ ಮತ್ತು ಕೆಲವು ರಾಸಾಯನಿಕಗಳನ್ನು ಬೆರೆಸಿ ಮಾರಾಟ ಮಾಡುವ ಖದೀಮರ ಕಾರ್ಯಾಚರಣೆ ಸರ್ಕಾರದ ಗಮನಕ್ಕೆ ಬಾರದೆ ನಡೆಯುತ್ತಿದೆ ಎಂದು ಹೇಳಲಾಗದು. ನಿತ್ಯ 10 ರಿಂದ 15 ಸಾವಿರ ಲೀಟರ್ ಕಲಬೆರಕೆ ಹಾಲನ್ನು ರಾಜಾರೋಷವಾಗಿ ಮಾರಾಟ ಮಾಡುತ್ತ್ದ್ದಿದರೂ ಸಂಬಂಧಪಟ್ಟ ಅಧಿಕಾರಿಗಳು ಅತ್ತ ಗಮನ ಹರಿಸದೇ ಇರುವುದನ್ನು ನೋಡಿದರೆ ಈ ಕಳ್ಳ ವ್ಯವಹಾರದಲ್ಲಿ ಅವರೂ ಪಾಲುದಾರರಿರಬಹುದು ಎಂಬ ಅನುಮಾನ ಬರುತ್ತದೆ. ಹಾಲು ಮಾತ್ರವಲ್ಲ, ತುಪ್ಪ, ಎಣ್ಣೆ, ಚಹಾ, ಪೆಟ್ರೋಲ್ ಹೀಗೆ ಅನೇಕ ವಸ್ತುಗಳ ಕಲಬೆರಕೆ ವ್ಯಾಪಾರ ಅಬಾಧಿತವಾಗಿ ನಡೆಯುತ್ತಿದೆ. ಇಂತಹ ವ್ಯವಹಾರಗಳಲ್ಲಿ ತೊಡಗಿರುವವರ ದೊಡ್ಡ ಜಾಲವೇ ಬೆಂಗಳೂರಿನಲ್ಲಿದೆ. ಕಲಬೆರಕೆ ಪದಾರ್ಥಗಳನ್ನು ದೀರ್ಘಕಾಲ ಬಳಸುವವರು ರಕ್ತದೊತ್ತಡ, ಮಧುಮೇಹ, ಕ್ಯಾನ್ಸರ್ ಹಾಗೂ ಚರ್ಮದ ಕಾಯಿಲೆಗಳಿಗೆ ತುತ್ತಾಗುತ್ತಾರೆ. ಕಲಬೆರಕೆ ವಸ್ತುಗಳನ್ನು ಕೊಳ್ಳದಂತೆ ಜನರನ್ನು ಜಾಗೃತಗೊಳಿಸುವ ಪ್ರಯತ್ನವನ್ನಷ್ಟೇ ಮಾಡುತ್ತಿರುವ ಸರ್ಕಾರ ಈ ಅವ್ಯವಹಾರವನ್ನು ಬೇರುಸಹಿತ ಕಿತ್ತು ಹಾಕುವ ಪ್ರಯತ್ನ ಮಾಡುತ್ತಿಲ್ಲ. ಸಂಬಂಧಪಟ್ಟ ಇಲಾಖೆಗಳ ಬೇಜವಾಬ್ದಾರಿತನಕ್ಕೆ ಅಮಾಯಕರು ಬೆಲೆ ತೆರುವಂತಾಗಿದೆ. ಕಲಬೆರಕೆ ಹಾಲು ಮಾರಾಟ ಬೆಂಗಳೂರಿಗೆ ಸೀಮಿತವಾಗಿಲ್ಲ. ರಾಜ್ಯದ ಅನೇಕ ಪಟ್ಟಣದಲ್ಲಿ ಇಂತಹ ಮಾರಾಟ ಜಾಲಗಳಿವೆ. ಎರಡು ವರ್ಷಗಳ ಹಿಂದೆ ಬೆಳಗಾವಿ ಜಿಲ್ಲೆಯಲ್ಲಿ ಕೃತಕ ಹಾಲು ತಯಾರಿಸಿ ಮಾರಾಟ ಮಾಡುವ ಜಾಲವೊಂದನ್ನು ಪತ್ತೆ ಹಚ್ಚಲಾಗಿತ್ತು. ಪ್ರಾಣಿಗಳ ಮೂಳೆಗಳಲ್ಲಿನ ಕೊಬ್ಬನ್ನು ಖಾದ್ಯ ತೈಲದಲ್ಲಿ ಬೆರೆಸಿ ಮಾರಾಟ ಮಾಡುವ ದಂಧೆ ಹೈದರಾಬಾದ್ ಕರ್ನಾಟಕ ಜಿಲ್ಲೆಗಳಲ್ಲಿ ವರದಿಯಾಗಿತ್ತು. ಹಾಲು, ಎಣ್ಣೆ, ತುಪ್ಪ, ಚಹಾಪುಡಿ ಹೀಗೆ ಅನೇಕ ಖಾದ್ಯ ವಸ್ತುಗಳ ಕಲಬೆರಕೆ ವ್ಯಾಪಾರ ನಡೆಯುತ್ತಿದೆ. ಆಹಾರ ಪದಾರ್ಥಗಳನ್ನು ಕೊಳ್ಳುವ ಮೊದಲು ಅವುಗಳ ಗುಣಮಟ್ಟ ಖಾತರಿ ಪಡಿಸಿಕೊಳ್ಳುವ ಜವಾಬ್ದಾರಿ ಗ್ರಾಹಕರದು. ಬಡವರು ಹಾಗೂ ಕೆಳ ಮಧ್ಯಮ ವರ್ಗದ ಜನ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಸಿಗುವ ವಸ್ತುಗಳ ಗುಣಮಟ್ಟದ ಬಗ್ಗೆ ತಲೆ ಕೆಡಿಸಿಕೊಳ್ಳದೆ ಖರೀದಿಸುತ್ತಾರೆ. ಒಂದೆರಡು ರೂಪಾಯಿಗಳನ್ನು ಉಳಿತಾಯ ಮಾಡಲು ಹೋಗಿ ಸಾವಿರಾರು ರೂಪಾಯಿ ಖರ್ಚು ಮಾಡಬೇಕಾದಂತಹ ಕಾಯಿಲೆಗಳನ್ನು ತಂದುಕೊಳ್ಳುತ್ತಾರೆ. ಖರೀದಿಸುವ ವಸ್ತುಗಳ ಗುಣಮಟ್ಟದ ಬಗ್ಗೆ ಅವರು ಖಾತರಿ ಪಡಿಸಿಕೊಳ್ಳಬೇಕು. ಮಾರುಕಟ್ಟೆಯಲ್ಲಿ ಬಿಕರಿಯಾಗುವ ವಸ್ತುಗಳ ಗುಣಮಟ್ಟ ಪರೀಕ್ಷಿಸುವ ಅಧಿಕಾರ ಇರುವ ಸಿಬ್ಬಂದಿ ಸದಾ ಚುರುಕಾಗಿ ಕಾರ್ಯ ನಿರ್ವಹಿಸಬೇಕು. ಆಗಾಗ ವಸ್ತುಗಳ ಗುಣಮಟ್ಟದ ಪರಿಶೀಲನೆ ನಡೆಯುತ್ತಿದ್ದರೆ ಕಲಬೆರಕೆ ತಡೆಗಟ್ಟಬಹುದು. ಬೆಂಗಳೂರು ದೊಡ್ಡದಾಗಿ ಬೆಳೆದಿರುವುದರಿಂದ ಕಲಬೆರಕೆ ಎಲ್ಲಿ ನಡೆಯುತ್ತಿದೆ ಎಂಬದನ್ನು ಪತ್ತೆ ಹಚ್ಚುವುದು ಕಷ್ಟ. ಇದು ಒಂದು ದಿನದಲ್ಲಿ ಮಾಡಿ ಮುಗಿಸುವ ಕೆಲಸ ಅಲ್ಲ. ಸಾರ್ವಜನಿಕರೂ ಸರ್ಕಾರದ ಜತೆ ಕೈಜೋಡಿಸಿ ಈ ಕಳ್ಳ ವ್ಯವಹಾರ ತಡೆಯಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.