ಜನವಿರೋಧಿ ನಿರ್ಧಾರ ಒಂದು ನೂರಾ ಇಪ್ಪತ್ತಕ್ಕೂ ಹೆಚ್ಚು ತಾಲ್ಲೂಕುಗಳಲ್ಲಿ ತೀವ್ರವಾದ ಬರಗಾಲದ ಪರಿಸ್ಥಿತಿ ಇದೆ ಎಂದು ಸರ್ಕಾರವೇ ಒಪ್ಪಿಕೊಂಡಿದೆ. ಅಲ್ಲಿ ಭೂ ಕಂದಾಯ ಮನ್ನಾ ಮಾಡುವ ನಿರ್ಧಾರ ಕೈಗೊಂಡಿರುವುದೇ ಪರಿಸ್ಥಿತಿ ಗಂಭೀರವಾಗಿರುವುದರ ಸಂಕೇತ. ರಾಜ್ಯದಾದ್ಯಂತ ಕುಡಿಯುವ ನೀರಿನ ಸಮಸ್ಯೆಯೂ ಉಲ್ಬಣಿಸಿದೆ. ಮೇವಿಗೂ ಕೊರತೆಯಾಗಿ ಜಾನುವಾರುಗಳು ಸಾಯುತ್ತಿವೆ. ಪರಿಹಾರ ಕ್ರಮಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳಬೇಕಾದ ತುರ್ತು ಪರಿಸ್ಥಿತಿ ಇದೆ. ಸರಿಯಾಗಿ ಮಳೆಯಾಗದೆ, ಕೃಷಿ ಉತ್ಪನ್ನಗಳ ಇಳುವರಿ ಕುಸಿದಿದೆ. ಉತ್ಪಾದನೆ ಕುಸಿದಿದ್ದರೂ ಬೆಳೆಗಳಿಗೆ ಖರ್ಚು ಮಾಡಿದ ವೆಚ್ಚವೂ ಹುಟ್ಟಲಾಗದಷ್ಟು ಧಾರಣೆ ಇಳಿದು ರೈತರು ಕಂಗಾಲಾಗಿದ್ದಾರೆ. ಇಂಥ ಸಂದರ್ಭದಲ್ಲಿ ರಾಜ್ಯ ಸರ್ಕಾರ ಮಾಜಿ ಶಾಸಕರ ಪಿಂಚಣಿ ಮೊತ್ತವನ್ನು ಹೆಚ್ಚಿಸಲು ನಿರ್ಧರಿಸಿದೆ. ಈ ನಿರ್ಧಾರದಿಂದ ಉತ್ತೇಜಿತರಾದ ಹಾಲಿ ಶಾಸಕರೂ ತಮ್ಮ ವೇತನ ಭತ್ಯೆಗಳನ್ನು ಹೆಚ್ಚಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರುತ್ತಿರುವ ವರದಿಗಳು ಬಂದಿವೆ. ಇದನ್ನು ಗಮನಿಸಿದರೆ ರಾಜ್ಯದಲ್ಲಿರುವ ಸರ್ಕಾರಕ್ಕೆ, ಜನರಿಗಿಂತ ಜನಪ್ರತಿನಿಧಿಗಳು ಮತ್ತು ಮಾಜಿ ಜನಪ್ರತಿನಿಧಿಗಳ ಹಿತರಕ್ಷಣೆಯೇ ಆದ್ಯತೆಯಾಗಿರುವಂತೆ ತೋರುತ್ತದೆ. ಜನಸಾಮಾನ್ಯರ ಬಗ್ಗೆ ಅಗಾಧ ತಿರಸ್ಕಾರ ಮತ್ತು ದ್ವೇಷ ಬುದ್ಧಿ ಇರುವ ಕ್ರೂರ ಸರ್ಕಾರದಿಂದ ಮಾತ್ರ ಇಂಥ ನಿರ್ಧಾರಗಳು ಸಾಧ್ಯ. ತಮಗೆ ರಾಜಕೀಯ ಅಧಿಕಾರ ನೀಡಿದ ಜನತೆಯನ್ನು ಈ ಪ್ರಮಾಣದ ನಿಕೃಷ್ಟ ಧೋರಣೆಯಿಂದ ಕಂಡ ಇನ್ನೊಂದು ಸರ್ಕಾರ ರಾಜ್ಯದ ಜನತೆಯ ನೆನಪಿಗೆ ಬರುತ್ತಿಲ್ಲ. ಹಾಗೆ ನೋಡಿದರೆ ರಾಜ್ಯದ ಹಣಕಾಸು ಸ್ಥಿತಿ ಉತ್ತಮವಾಗಿರುವಂತೇನೂ ತೋರುತ್ತಿಲ್ಲ. ಒಂದು ಲಕ್ಷ ಕೋಟಿ ರೂಪಾಯಿ ಮೊತ್ತದ ಬಜೆಟ್ ಮಂಡಿಸುವ ಪೊಳ್ಳು ಹೆಗ್ಗಳಿಕೆಗಾಗಿ ರಾಜ್ಯದ ಜನತೆಯ ಮೇಲೆ ಒಟ್ಟಾರೆಯಾಗಿ 1.02 ಲಕ್ಷ ಕೋಟಿ ಸಾಲವನ್ನು ಹೇರಿರುವ ಆರ್ಥಿಕ ನಿರ್ವಹಣೆ ಈ ಸರ್ಕಾರದ್ದಾಗಿದೆ. ಜನತೆಗೆ ಮೂಲಸೌಕರ್ಯಗಳನ್ನು ಒದಗಿಸುವ ವಿಷಯದಲ್ಲಿ ದಕ್ಷಿಣ ಭಾರತದಲ್ಲಿಯೇ ಕೊನೆಯ ಸ್ಥಾನ ಕರ್ನಾಟಕಕ್ಕಿದೆ. ಎರಡು ದಶಕಗಳ ಹಿಂದೆ ಮೂರು ಹಂತದ ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯಾಗಿ ಗ್ರಾಮ ಪಂಚಾಯತ್, ತಾಲ್ಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್‌ಗಳನ್ನು ಅಸ್ತಿತ್ವಕ್ಕೆ ತಂದು ದೇಶದಲ್ಲಿಯೇ ಮುಂಚೂಣಿ ಸ್ಥಾನದಲ್ಲಿದ್ದ ರಾಜ್ಯದಲ್ಲಿ, ಈಗ ಈ ವೇದಿಕೆಗಳಲ್ಲಿ ಸರ್ಕಾರಿ ಕಾರ‌್ಯಕ್ರಮಗಳ ಅನುಷ್ಠಾನದ ಪ್ರಗತಿ ಪರಿಶೀಲನಾ ವ್ಯವಸ್ಥೆಯೇ ಇಲ್ಲ. ಅಷ್ಟರಮಟ್ಟಿಗೆ ಅವು ನಿಷ್ಕ್ರಿಯವಾಗಿವೆ. ಶಾಸಕರು ತಮ್ಮ ಕ್ಷೇತ್ರದಲ್ಲಿನ ಇಲಾಖೆಗಳ ಕಾರ್ಯಪ್ರಗತಿಯ ಮೇಲೆ ನಿಗಾ ಇಡುವ ಪರಿಪಾಠವೇ ಇಲ್ಲ. ಸಚಿವರು ತಮ್ಮ ಇಲಾಖೆಯ ಕಚೇರಿಗಳಿಗೆ ಭೇಟಿ ನೀಡುವ ಮತ್ತು ಪ್ರಗತಿ ಪರಿಶೀಲನೆಗೆ ಜಿಲ್ಲೆಗಳಿಗೆ ಪ್ರವಾಸ ಕೈಗೊಳ್ಳುವ ಪದ್ಧತಿಯೂ ನಶಿಸಿ ಹೋಗಿದ್ದು ರಾಜ್ಯದಲ್ಲಿ ಸರ್ಕಾರ ಅಸ್ತಿತ್ವದಲ್ಲಿ ಇದೆ ಎಂಬ ಸುರಕ್ಷತಾ ಭಾವವೇ ಜನರಲ್ಲಿ ಮೂಡುತ್ತಿಲ್ಲ. ಇಂಥ ಸಂದರ್ಭದಲ್ಲಿ ಮಾಜಿ ಶಾಸಕರು ಮತ್ತು ಹಾಲಿ ಶಾಸಕರಿಗೆ ಹೆಚ್ಚಿನ ಹಣ ಸಿಗುವಂತೆ ಸರ್ಕಾರ ನಿರ್ಧರಿಸುವುದು ಅಸಂಗತವಾದ ಜನವಿರೋಧಿ ಕೃತ್ಯವಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.