ಗಲ್ಲುಶಿಕ್ಷೆಯಲ್ಲಿ ರಾಜಕೀಯ ಬೇಡ ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಬೇಅಂತ್ ಸಿಂಗ್ ಹಂತಕ ಬಲ್ವಂತ್‌ಸಿಂಗ್ ರಾಜೋನಾಗೆ ನೀಡಲಾಗಿದ್ದ ಗಲ್ಲುಶಿಕ್ಷೆಯನ್ನು ಕೇಂದ್ರ ಸರ್ಕಾರ ತಡೆಹಿಡಿದು ನಿಟ್ಟುಸಿರು ಬಿಟ್ಟಿದೆ. ಮತ್ತೊಬ್ಬ ಆರೋಪಿಯ ಕ್ಷಮಾದಾನದ ಅರ್ಜಿ ಇತ್ಯರ್ಥವಾಗುವವರೆಗೆ ಮಾತ್ರ ಈ ತಡೆ ಇರುವುದರಿಂದ ಈಗಿನ ವಿವಾದ ಇಲ್ಲಿಗೆ ಕೊನೆಗೊಂಡಿತೆಂದು ಹೇಳಲಾಗುವುದಿಲ್ಲ. ಗಲ್ಲು ಶಿಕ್ಷೆಗೆ ಸಂಬಂಧಿಸಿದಂತೆ ಇದೇನು ಮೊದಲ ವಿವಾದ ಅಲ್ಲ. ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಹತ್ಯೆಯ ಮೂವರು ಆರೋಪಿಗಳಿಗೆ ವಿಧಿಸಲಾಗಿರುವ ಗಲ್ಲುಶಿಕ್ಷೆಗೆ ಈಗಾಗಲೇ ಮದ್ರಾಸ್ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಸಂಸತ್ ಭವನದ ಮೇಲೆ ನಡೆದ ಭಯೋತ್ಪಾದಕರ ದಾಳಿಯ ಆರೋಪಿ ಅಫ್ಜಲ್‌ಗುರುವಿನ ಕ್ಷಮಾದಾನ ಅರ್ಜಿ ಇನ್ನೂ ಇತ್ಯರ್ಥವಾಗಿಲ್ಲ. ರಾಜೀವ್ ಹಂತಕರ ಗಲ್ಲುಶಿಕ್ಷೆಯನ್ನು ರದ್ದುಗೊಳಿಸಬೇಕೆಂದು ತಮಿಳುನಾಡು ವಿಧಾನಸಭೆ ಸರ್ವಾನುಮತದ ನಿರ್ಣಯ ಕೈಗೊಂಡರೆ, ಅಫ್ಜಲ್ ಗುರುವನ್ನು ಗಲ್ಲಿಗೇರಿಸಿದರೆ ಕಾಶ್ಮೀರದ ಶಾಂತಿ ಕದಡಿಹೋಗಲಿದೆ ಎಂಬುದು ಅಲ್ಲಿನ ರಾಜ್ಯಸರ್ಕಾರದ ಆತಂಕ. ಜತೆಗೆ ಮುಸ್ಲಿಂ ಸಮುದಾಯ ತಿರುಗಿಬೀಳಬಹುದೆಂಬ ಭೀತಿ ಕೇಂದ್ರ ಸರ್ಕಾರದ್ದು. ಪಂಜಾಬ್ ಸರ್ಕಾರ ಕೂಡಾ ಇಂತಹದ್ದೇ ಕಾರಣ ನೀಡಿ ರಾಜೋನಾಗೆ ಕ್ಷಮಾದಾನ ನೀಡಬೇಕೆಂದು ರಾಷ್ಟ್ರಪತಿಗಳಿಗೆ ಮನವಿ ಮಾಡಿದೆ. ಮೂರು ದಶಕಗಳ ಹಿಂದೆ ಭಯೋತ್ಪಾದನೆಯಿಂದ ನಲುಗಿಹೋಗಿದ್ದ ಪಂಜಾಬ್‌ನಲ್ಲಿ ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿ ಈಗಾಗಲೇ ಸಂಘರ್ಷದ ಸಂದೇಶ ನೀಡಿರುವುದರಿಂದ ವಿವಾದ ರಾಜಕೀಯವಾಗಿ ಸೂಕ್ಷ್ಮ ರೂಪ ಪಡೆದಿದೆ. ಗಲ್ಲು ಶಿಕ್ಷೆ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟ ನೀತಿಯನ್ನು ಅನುಸರಿಸದಿರುವುದೇ ಇಂತಹ ವಿವಾದಗಳು ಹುಟ್ಟಿಕೊಳ್ಳಲು ಕಾರಣ. ಈ ವಿವಾದಗಳಲ್ಲಿ ಕ್ಷಮಾದಾನ ಅರ್ಜಿಯ ಇತ್ಯರ್ಥಕ್ಕೆ ಆಗುತ್ತಿರುವ ವಿಳಂಬದ ಪಾತ್ರವೂ ಇದೆ. ಈ ಬಗ್ಗೆ ಸುಪ್ರೀಂ ಕೋರ್ಟ್ ಹಲವಾರು ಬಾರಿ ಕಳವಳ ವ್ಯಕ್ತಪಡಿಸಿದೆ. ಗಲ್ಲು ಶಿಕ್ಷೆಗೊಳಗಾದ 26 ಅಪರಾಧಿಗಳು ಕ್ಷಮಾದಾನ ಕೋರಿ ರಾಷ್ಟ್ರಪತಿಗಳಿಗೆ ಸಲ್ಲಿಸಿದ್ದ ಅರ್ಜಿಗಳು ಇತ್ಯರ್ಥವಾಗದೆ ಬಾಕಿ ಉಳಿದಿವೆ. ರಾಜೀವ್ ಹಂತಕರ ಕ್ಷಮಾದಾನ ಅರ್ಜಿ ಹನ್ನೊಂದು ವರ್ಷಗಳಿಂದ ಇತ್ಯರ್ಥವಾಗದೆ ಉಳಿದಿತ್ತು. ಆ ಮೂವರು ಆರೋಪಿಗಳು ಈಗಾಗಲೇ 21 ವರ್ಷಗಳನ್ನು ಸೆರೆಮನೆಯಲ್ಲಿ ಕಳೆದಿದ್ದಾರೆ. ಇಂತಹವರನ್ನು ಮತ್ತೆ ಗಲ್ಲಿಗೇರಿಸುವುದು ಅಮಾನವೀಯ. ತಾಂತ್ರಿಕವಾಗಿ ಕ್ಷಮಾದಾನ ರಾಷ್ಟ್ರಪತಿಯವರ ಪರಮಾಧಿಕಾರವಾದರೂ ಅವರು ಕೇಂದ್ರ ಗೃಹ ಇಲಾಖೆಯ ಶಿಫಾರಸಿಗೆ ಅನುಗುಣವಾಗಿ ನಿರ್ಧಾರ ಕೈಗೊಳ್ಳುತ್ತಾರೆ. ಅಲ್ಲಿಯೇ ರಾಜಕೀಯ ಪ್ರವೇಶವಾಗುವುದು. ಇದರಲ್ಲಿ ಯಾವ ರಾಜಕೀಯ ಪಕ್ಷವೂ ಹೊರತಲ್ಲ. ಅಫ್ಜಲ್ ಗುರುವನ್ನು ಗಲ್ಲಿಗೇರಿಸಲೇಬೇಕೆಂದು ಹಟ ಹಿಡಿದಿರುವ ಬಿಜೆಪಿ ಕೂಡಾ ರಾಜೋನ್ ಗಲ್ಲುಶಿಕ್ಷೆ ಬಗ್ಗೆ ಒಮ್ಮತದ ನಿಲುವನ್ನು ವ್ಯಕ್ತಪಡಿಸುತ್ತಿಲ್ಲ. ಆ ಪಕ್ಷದ ಕೇಂದ್ರ ಮತ್ತು ರಾಜ್ಯ ನಾಯಕರು ಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ರಾಜಕೀಯ ಪಕ್ಷಗಳ ಆತ್ಮವಂಚನೆ ಮತ್ತು ಸಡಿಲ ಧೋರಣೆಯಿಂದಾಗಿಯೇ ಗಲ್ಲುಶಿಕ್ಷೆ ಎನ್ನುವುದು ನಗೆಪಾಟಲಿಗೀಡಾಗಿದೆ. ಗಲ್ಲುಶಿಕ್ಷೆಯನ್ನು ಒಪ್ಪದಿರುವ ಹಲವಾರು ದೇಶಗಳಿವೆ. ಆದರೆ ಭಾರತದಲ್ಲಿ ಇದಕ್ಕೆ ಅವಕಾಶ ಇದೆ. ಇದನ್ನು ಒಪ್ಪಿಕೊಂಡ ಮೇಲೆ ಲಾಭ-ನಷ್ಟದ ಲೆಕ್ಕ ಹಾಕದೆ ಅದನ್ನು ಅನುಷ್ಠಾನಗೊಳಿಸುವ ರಾಜಕೀಯ ಇಚ್ಛಾಶಕ್ತಿಯನ್ನು ಕೇಂದ್ರ ಸರ್ಕಾರ ತೋರಬೇಕಾಗುತ್ತದೆ. ಅದು ಅಸಾಧ್ಯ ಎಂದಾದರೆ ಗಲ್ಲುಶಿಕ್ಷೆಯನ್ನೇ ರದ್ದು ಮಾಡಬೇಕು, ದ್ವಂದ್ವ ನೀತಿ ಸಲ್ಲದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.