ಸಹಾಯಧನ ಏಕೆ? ಸದಭಿರುಚಿಯ ಉತ್ತಮ ಚಿತ್ರಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಸಾಂಸ್ಕೃತಿಕ ಹೊಣೆಗಾರಿಕೆಯನ್ನು ನಿರ್ವಹಿಸಲು ರಾಜ್ಯ ಸರ್ಕಾರ ಕಳೆದ ಶತಮಾನದ ಅರವತ್ತರ ದಶಕದಿಂದ ಆರಂಭಿಸಿದ ಚಲನಚಿತ್ರ ರಾಜ್ಯ ಪ್ರಶಸ್ತಿ ಮತ್ತು ಸಹಾಯಧನ ಯೋಜನೆಗಳು ಈಚಿನ ವರ್ಷಗಳಲ್ಲಿ ವಿವಾದಗಳಿಗೆ ಎಡೆ ಮಾಡಿಕೊಡುತ್ತಿವೆ. ಪ್ರಶಸ್ತಿಗಳು ಮತ್ತು ಗುಣಮಟ್ಟದ ಚಿತ್ರಗಳನ್ನು ಗುರುತಿಸಿ ಸಹಾಯಧನಕ್ಕೆ ಸಲಹೆ ಮಾಡುವ ಸಮಿತಿಗಳ ನೇಮಕಗಳಲ್ಲಿ ಕ್ಷೇತ್ರದಲ್ಲಿನ ಪರಿಣತಿಗಿಂತ ರಾಜಕೀಯ ಹಿತಾಸಕ್ತಿಯೇ ಪ್ರಾಧಾನ್ಯತೆ ಪಡೆದಿರುವುದರಿಂದ ಇಂಥ ಪರಿಸ್ಥಿತಿ ಏರ್ಪಡುತ್ತಿದೆ. ಸಮಿತಿಗೆ ಆಯ್ಕೆಯಾದವರಲ್ಲಿ ಕೂಡ ಚಿತ್ರಗಳ ಗುಣಾತ್ಮಕ ಅಂಶಗಳನ್ನು ಗುರುತಿಸುವುದಕ್ಕಿಂತ ವೈಯಕ್ತಿಕ ಹಿತಾಸಕ್ತಿಯನ್ನು ಈಡೇರಿಸಿಕೊಳ್ಳುವ ವ್ಯಾಪಾರಿ ಪ್ರವೃತ್ತಿ ಕೆಲಸ ಮಾಡುತ್ತಿರುವ ಪರಿಣಾಮ ಅರ್ಹ ವ್ಯಕ್ತಿಗಳು ಮತ್ತು ಚಿತ್ರಗಳು ಆಯ್ಕೆ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತಿಲ್ಲವೆಂಬ ಆಕ್ಷೇಪ ಪ್ರತಿಸಲವೂ ಕೇಳಿ ಬರುತ್ತಿದೆ. ಸಹಾಯಧನ ನೀಡಿಕೆಯಲ್ಲಿ ಗುಣಮಟ್ಟದ ಮಾನದಂಡ ನೇಪಥ್ಯಕ್ಕೆ ಸರಿಯುವಂತಾಗಿದೆ. ಪ್ರಶಸ್ತಿ, ಪುರಸ್ಕಾರಗಳನ್ನು ನೀಡುವ ಸಮಿತಿಗಳ ಸದಸ್ಯತ್ವ ಅರ್ಹತೆಯನ್ನು ಗುರುತಿಸಲು ಸಿಕ್ಕಿದ ಅವಕಾಶ ಎಂಬುದಕ್ಕಿಂತ ತಮಗೆ ಬೇಕಿದ್ದವರಿಗೆ ಅನುಕೂಲ ಮಾಡಿಕೊಡಲು ಲಭಿಸಿದ ಅಧಿಕಾರ ಎಂದು ಹೆಚ್ಚಿನವರು ಭಾವಿಸುವುದರಿಂದ ಈ ಪರಿಸ್ಥಿತಿ. ರಾಜಕೀಯ ಕ್ಷೇತ್ರವನ್ನು ಕಲುಶಿತಗೊಳಿಸಿರುವ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಅಧಿಕಾರ ದುರುಪಯೋಗ ಮತ್ತು ನಿಯಮಗಳ ಉಲ್ಲಂಘನೆಯ ಪಿಡುಗು ಚಲನಚಿತ್ರದಂತಹ ಸಾಂಸ್ಕೃತಿಕ ಕ್ಷೇತ್ರಕ್ಕೂ ವ್ಯಾಪಿಸಿರುವುದರ ಪರಿಣಾಮ ಇದು. ಸಾರ್ವಜನಿಕ ಹಣವೆಂದರೆ ಹೇಗೆ ಬೇಕಾದರೂ ಬಳಸಬಹುದೆಂಬ ಹೊಣೆಗೇಡಿತನದ ಧೋರಣೆಗೆ ಈ ವಿದ್ಯಮಾನ ನಿದರ್ಶನ. ಚಲನಚಿತ್ರ ಉದ್ಯಮ ಈಗಾಗಲೇ ರಾಜ್ಯದಲ್ಲಿ ಸುಭದ್ರವಾಗಿ ನೆಲೆಗೊಂಡಿದೆ. ವರ್ಷಕ್ಕೆ ನೂರಕ್ಕೂ ಹೆಚ್ಚಿನ ಚಿತ್ರಗಳ ನಿರ್ಮಾಣ ಆಗುತ್ತಿದೆ. ಐದುನೂರು ಕೋಟಿ ರೂಪಾಯಿಗೂ ಹೆಚ್ಚಿನ ಬಂಡವಾಳ ಹೂಡಿಕೆಯಾಗುತ್ತಿದೆ. ಕಲಾವಿದರು, ತಂತ್ರಜ್ಞರು, ಸಹಾಯಕರು ಸೇರಿದಂತೆ ಸಹಸ್ರಾರು ಜನತೆ ಇಲ್ಲಿ ಬದುಕನ್ನು ಕಂಡುಕೊಂಡಿದ್ದಾರೆ. ಚಿತ್ರೋದ್ಯಮ ರಾಜ್ಯದಲ್ಲಿ ನೆಲೆಗೊಳ್ಳುವುದಕ್ಕೆ ಅಗತ್ಯವಾದ ಪೂರಕ ಸೌಲಭ್ಯಗಳನ್ನು ರಾಜ್ಯ ಸರ್ಕಾರ ಒದಗಿಸಿದೆ. ಮನರಂಜನೆ ತೆರಿಗೆಯಲ್ಲಿ ವಿನಾಯಿತಿಯನ್ನೂ ನೀಡಿದೆ. ಕಲಾವಿದರು ತಂತ್ರಜ್ಞರ ಜೀವಮಾನದ ಸಾಧನೆಗಾಗಿ ಕೆಲವು ಪ್ರತಿಷ್ಠಿತ ಪ್ರಶಸ್ತಿಗಳನ್ನೂ ಆರಂಭಿಸಿದೆ. ಇದರ ಜೊತೆಗೆ ವಾರ್ಷಿಕ ಪ್ರಶಸ್ತಿಗಳನ್ನೂ ನೀಡುತ್ತಿದೆ. ಚಿತ್ರರಂಗಕ್ಕೆ ಸಂಬಂಧಪಟ್ಟವರೇ ಆಯ್ಕೆ ಸಮಿತಿಗಳಲ್ಲಿದ್ದರೂ ಪ್ರಶಸ್ತಿ ಮತ್ತು ಸಹಾಯಧನಕ್ಕೆ ಆರಿಸುವ ಚಿತ್ರಗಳ ಪಟ್ಟಿ ಪ್ರತಿ ವರ್ಷವೂ ಅವ್ಯವಹಾರದ ಸೋಂಕಿಗೆ ಗುರಿಯಾಗುತ್ತಿರುವುದರಿಂದ ಸರ್ಕಾರ ಇದಕ್ಕೆ ಪರಿಹಾರ ಕಂಡುಕೊಳ್ಳಲೇಬೇಕಾಗಿದೆ. ಪ್ರಶಸ್ತಿಗಳು ಚಿತ್ರ ಪ್ರೇಕ್ಷಕರ ಅಭಿಪ್ರಾಯವನ್ನು ಆಧರಿಸಿ ನಿರ್ಧಾರವಾಗುವಂತೆ ಆಯ್ಕೆಯ ನಿಯಮಗಳಲ್ಲಿ ಬದಲಾವಣೆ ತರುವುದನ್ನು ಪರಿಶೀಲಿಸಬೇಕು. ಸಹಾಯಧನಕ್ಕಾಗಿಯೇ ಚಿತ್ರ ನಿರ್ಮಿಸುವ ಪ್ರವೃತ್ತಿಯಿಂದ ಉದ್ಯಮ ಬೆಳೆಯುವುದು ಸಾಧ್ಯವಿಲ್ಲ. ಚಿತ್ರೋದ್ಯಮ ರಾಜ್ಯದಲ್ಲಿ ಈಗಾಗಲೇ ನೆಲೆಗೊಂಡಿರುವುದರಿಂದ ಸಹಾಯಧನದ ಯೋಜನೆಯನ್ನು ಇನ್ನೂ ಮುಂದುವರಿಸುವುದರಲ್ಲಿ ಅರ್ಥವಿಲ್ಲ. ಚಲನಚಿತ್ರ ನಿರ್ಮಾಣ ಸೃಜನಶೀಲ ಪ್ರಕ್ರಿಯೆ. ಅದು ಸಾಹಿತ್ಯ, ಸಂಗೀತ, ಕಲೆಗಳಂತೆ ಮುಕ್ತ, ಸ್ವಚ್ಛಂದ ವಾತಾವರಣದಲ್ಲಿ ಅರಳುವಂತಿರಬೇಕು. ಅಷ್ಟಕ್ಕೂ ನೇಕಾರಿಕೆ, ಗುಡಿಕೈಗಾರಿಕೆ, ಹೈನುಗಾರಿಕೆಯೇ ಮೊದಲಾದ ಜೀವನವೃತ್ತಿ ಕ್ಷೇತ್ರಗಳಿಗೆ ನೀಡಲಾಗದ ಉತ್ತೇಜನವನ್ನು ಚಿತ್ರೋದ್ಯಮಕ್ಕೆ ನೀಡಬೇಕೇ ಎಂಬುದನ್ನು ಸರ್ಕಾರ ಪರಿಶೀಲಿಸಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.