ಮುಳುವಾದ ಉದಾಸೀನತೆ ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಸಿಬಿಐ ತನಿಖೆ ಅನಿರೀಕ್ಷಿತವೇನಲ್ಲ. ಕಳೆದ ಎರಡು ವರ್ಷಗಳಿಂದ ರಾಜ್ಯದಲ್ಲಿ ಗಣಿ ಅಕ್ರಮಗಳ ದೂಳು ಕಣ್ಣಿಗೆ ರಾಚುತ್ತಿದೆ. ಅಕ್ರಮಗಳಿಗೆ ರಾಜ್ಯ ಸರ್ಕಾರದ ವೈಫಲ್ಯವೇ ಕಾರಣ. ಈ ಅಕ್ರಮಗಳಿಗೆ ಹಿಂದಿನ ಮುಖ್ಯಮಂತ್ರಿ ಕಚೇರಿಯೇ ಕೇಂದ್ರವಾಗಿತ್ತು. ಬಿಎಸ್‌ವೈ ಕುಟುಂಬದ ಸದಸ್ಯರು ಹೊಂದಿರುವ ಟ್ರಸ್ಟ್ ಹಾಗೂ ನಿರ್ಮಾಣ ಕಂಪೆನಿಗೆ ಗಣಿ ಕಂಪೆನಿಗಳು ದಾರಿಯಲ್ಲದ ದಾರಿಯಲ್ಲಿ ಸಾಗಿ ಕಪ್ಪ ನೀಡಿರುವುದು ಜೊತೆಗೆ ಸರ್ಕಾರ ಬಿಡಿಎ ಭೂಮಿಯನ್ನು ಡಿನೋಟಿಫಿಕೇಷನ್ ಮಾಡಿರುವುದು ಸೇರಿದಂತೆ ಭ್ರಷ್ಟಾಚಾರದ ಎಲ್ಲ ಒಳಸುಳಿಗಳ ಆಕ್ಟೋಪಸ್ ಹಿಡಿತದಲ್ಲಿ ಬಿ.ಎಸ್.ಯಡಿಯೂರಪ್ಪ ಸಿಕ್ಕಿಹಾಕಿಕೊಂಡಿದ್ದಾರೆ. ಸಂಪುಟದಲ್ಲೇ ಜನಾರ್ದನ ರೆಡ್ಡಿಯವರಿಗೆ ಆಶ್ರಯ ನೀಡಿ, ಕಣ್ಣೆದುರೇ ಅವ್ಯಾಹತ ಅದಿರು ಲೂಟಿ ನಡೆಯುತ್ತಿದ್ದರೂ ಯಡಿಯೂರಪ್ಪ ಅದಕ್ಕೆ ಲಗಾಮು ಹಾಕಲಿಲ್ಲ. ಬೇಲೆಕೇರಿ ಬಂದರಿನಿಂದ 35 ಲಕ್ಷ ಮೆಟ್ರಿಕ್ ಟನ್ ಕಬ್ಬಿಣದ ಅದಿರು ರಹಸ್ಯವಾಗಿ, ಅಕ್ರಮವಾಗಿ ರಫ್ತಾದರೂ ಅದು ಸರ್ಕಾರದ ಕಣ್ಣಿಗೆ ಕಾಣಲೇ ಇಲ್ಲ. ಕರ್ನಾಟಕ ಮತ್ತು ಆಂಧ್ರಪ್ರದೇಶಗಳಲ್ಲಿ ನಡೆದಿರುವ ಅರಣ್ಯ ನಾಶ, ಅದಿರು ಲೂಟಿ ತಡೆದು ಪರಿಸರ ಸಂರಕ್ಷಣೆ ಮಾಡಲು ಉಭಯ ಸರ್ಕಾರಗಳು ವಿಫಲವಾಗಿವೆ ಎಂದು ಸುಪ್ರಿಂ ಕೋರ್ಟ್ ಹೇಳಿ, ನೆಲದ ರಕ್ಷಣೆಗೆ ಮುಂದಾಗಿರುವುದಕ್ಕೆ ಪರಿಸರ ರಕ್ಷಣೆಯ ಕಾಳಜಿಯೇ ಕಾರಣ. ಈ ಅಪರಾಧ ಹಿನ್ನೆಲೆಯಲ್ಲೇ ಜನಾರ್ದನರೆಡ್ಡಿ ಕಳೆದ ಏಳು ತಿಂಗಳಿಂದ ಸೆರೆಮನೆಯಲ್ಲಿದ್ದಾರೆ. ಈಗ ಯಡಿಯೂರಪ್ಪ ಅವರ ಸರದಿ. ಇವರ ಹಿಂದೆಯೇ ಹಲವು ಮಾಜಿ ಮುಖ್ಯಮಂತ್ರಿಗಳು, ನಗರಾಭಿವೃದ್ಧಿ ಸಚಿವರು, ಕೆಲವು ಅಧಿಕಾರಿಗಳೂ ತನಿಖೆಯ ವ್ಯಾಪ್ತಿಯಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನುವುದೂ ಕಾದು ನೋಡಬೇಕಾದ ಕುತೂಹಲಕರ ಸಂಗತಿ. ಅಕ್ರಮ ಗಣಿ ಲೂಟಿ ಕಾರ್ಯದಲ್ಲಿ ಕೇವಲ ರಾಜಕಾರಣಿಗಳೇ ಇಲ್ಲ. 787 ಅಧಿಕಾರಿಗಳು, ಉದ್ಯಮಿಗಳು, ಬ್ಯಾಂಕುಗಳು, ಸಾರ್ವಜನಿಕ ವಲಯದ ಕಂಪೆನಿಗಳು ಶಾಮೀಲಾಗಿವೆ.ಆರ್ಥಿಕ ನೀತಿ ಸುಧಾರಣೆಯ ನಂತರ ಹೀಗೆ ರಾಜಕಾರಣಿಗಳು, ಅಧಿಕಾರಿಗಳು, ಸಾರ್ವಜನಿಕ ವಲಯದ ಕಂಪೆನಿಗಳು ಶಾಮೀಲಾಗಿ ಅಕ್ರಮವೆಸಗುವ ಲೂಟಿ ಕಾರ್ಯ ದೇಶಾದಾದ್ಯಂತ ಏಕಮುಖವಾಗಿ ಕಾಣಿಸಿಕೊಳ್ಳಲಾರಂಭಿಸಿದೆ. 2 ಜಿ ಸ್ಪೆಕ್ಟ್ರಂ, ಕಾಮನ್‌ವೆಲ್ತ್ ಕ್ರೀಡಾಕೂಟ ಹಗರಣ, ಮುಂಬೈ ಆದರ್ಶ ಹೌಸಿಂಗ್ ಸೊಸೈಟಿ ಹಗರಣಗಳೆಲ್ಲಾ ಈ ಹಿನ್ನೆಲೆಯವೇ. ಅದಿರು ಲೂಟಿಯಲ್ಲೂ ಈ ಮೂರೂ ಶಕ್ತಿಗಳು ಕೈಕೈ ಹಿಡಿದು ಭಾಗಿಗಳಾಗಿವೆ ಎನ್ನುವುದನ್ನು ಲೋಕಾಯುಕ್ತ ವರದಿಯೇ ಹೇಳಿದೆ. ಮಾಜಿ ಮುಖ್ಯಮಂತ್ರಿಯ ಪುತ್ರರು ನಡೆಸುತ್ತಿರುವ ಶಿಕ್ಷಣ ಸಂಸ್ಥೆಗೆ ಗಣಿ ಕಂಪೆನಿಗಳು ದೇಣಿಗೆ ನೀಡಿರುವುದು, ಅದಕ್ಕೆ ಪ್ರತಿಯಾಗಿ ಗಣಿಗೆ ಪರವಾನಗಿ ನೀಡಿರುವುದು ಸಿಇಸಿ ವರದಿಯಲ್ಲಿ ನಿರೂಪಿತವಾಗಿದೆ. ಅಧಿಕಾರದಲ್ಲಿರುವಾಗ, ಇಂಥ ಎಲ್ಲ ಅಕ್ರಮಗಳಿಗೆ ರಾಜಕೀಯ ಗುರಾಣಿ ಹಿಡಿಯುವ ಮೂಲಕ ತಪ್ಪಿಸಿಕೊಳ್ಳುವ ಕೆಲಸ ಮಾಡಲಾಯಿತು. ತಮ್ಮ ಹಿಂದಿನ ಮುಖ್ಯಮಂತ್ರಿಗಳು ಅಕ್ರಮ ಗಣಿ ಪರವಾನಗಿ ನೀಡಿದ್ದಾರೆ ನಾನೊಬ್ಬನೇ ಅಲ್ಲ ಎಂಬ ಬಿ.ಎಸ್.ಯಡಿಯೂರಪ್ಪ ಅವರ ಸಮಜಾಯಿಷಿಯೂ ಸಮರ್ಥನೀಯವಾಗಿರಲಿಲ್ಲ. ಎಲ್ಲ ಆರೋಪಗಳನ್ನು ಲಘುವಾಗಿ ಪರಿಗಣಿಸಿದ್ದು ಕುರ್ಚಿಗೂ ಮುಳುವಾಯಿತು. ತನಿಖೆಗೂ ಎರವಾಯಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.