ಕಠಿಣ ಕ್ರಮ ಅಗತ್ಯ ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಗಿದು ಫಲಿತಾಂಶ ಪ್ರಕಟವಾಗಲಿದೆ. ವಿಧಾನಸಭಾ ಚುನಾವಣೆಯ ವೇಳಾಪಟ್ಟಿ ಯಾವ ಗಳಿಗೆಯೂ ಹೊರಬೀಳಬಹುದು. ಇಂತಹ ಸಮಯದಲ್ಲಿ ಬಜರಂಗ ದಳದವರು ಮತ್ತೆ ಸಕ್ರಿಯರಾಗಿದ್ದಾರೆ. ಉಡುಪಿ ತಾಲ್ಲೂಕಿನ ಮೂಡುಬೆಳ್ಳೆ ಸಮೀಪದ ಕುದುರೆಮಾಲೆ ಎಂಬಲ್ಲಿರುವ ಕ್ರೈಸ್ತ ಪ್ರಾರ್ಥನಾ ಮಂದಿರವೊಂದಕ್ಕೆ ಬಜರಂಗದಳದ ಕಾರ್ಯಕರ್ತರೆನ್ನಲಾದ ಕೆಲವರ ತಂಡ ದಾಳಿಮಾಡಿ, ಹಾನಿ ಮಾಡಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಧಾರ್ಮಿಕ ಸ್ಥಳಗಳ ಮೇಲೆ ನಡೆಯುವ ಇಂತಹ ಕೃತ್ಯಗಳು ಖಂಡನೀಯ. ಹಿಂದೂಗಳನ್ನು ಮತಾಂತರ ಮಾಡಲಾಗುತ್ತಿದೆ ಎನ್ನುವ ಕಾರಣದಿಂದ ಈ ದಾಳಿ ನಡೆಸಿರುವುದಾಗಿ ಬಜರಂಗದಳದ ಮುಖಂಡರು ಹೇಳಿಕೊಂಡಿದ್ದಾರೆ. ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿ ಪ್ರಾರ್ಥನಾ ಮಂದಿರಕ್ಕೆ ತೆರಳಿದ್ದೆವು ಎಂದು ಬಜರಂಗದಳದ ಕಾರ‍್ಯಕರ್ತರು ಹೇಳಿಕೊಂಡಿರುವುದು, ದಾಳಿಕೋರರ ಉದ್ದೇಶಪೂರ್ವಕ ಕೃತ್ಯದತ್ತ ಬೆರಳುಮಾಡುತ್ತದೆ. ಅಷ್ಟಕ್ಕೂ ಕಾನೂನನ್ನು ಕೈಗೆತ್ತಿಕೊಳ್ಳಲು ಅಧಿಕಾರ ಕೊಟ್ಟವರಾರು ಎಂಬುದು ಪ್ರಶ್ನೆ. ಉಡುಪಿ, ದಕ್ಷಿಣಕನ್ನಡ ಭಾಗಗಳಲ್ಲಿ ಕೋಮವಾದಿ ಗುಂಪುಗಳು ಧರ್ಮದ ಹೆಸರಿನಲ್ಲಿ ಸರ್ವಾಧಿಕಾರವನ್ನು ಮೆರೆಯುತ್ತಿರುವುದು ಜಾತ್ಯತೀತ ಸಮಾಜದಲ್ಲಿ ಆತಂಕ ಸೃಷ್ಟಿಸುವ ಕೆಲಸ. ಕಾನೂನು ಕೈಗೆತ್ತಿಕೊಂಡು ಚರ್ಚ್‌ಗಳ ಮೇಲೆ ದಾಳಿ ನಡೆಸುವುದು ಕಾನೂನು ವಿರೋಧಿ ಕ್ರಮ. ಬಲವಂತ ಮತಾಂತರದಂತಹ ಅಕ್ರಮಗಳು ಕಂಡುಬಂದ ಸಂದರ್ಭದಲ್ಲಿ ಪ್ರತಿಭಟನೆ ನಡೆಸಬಹುದು. ಜನಾಭಿಪ್ರಾಯ ಮೂಡಿಸಬಹುದು. ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಬೇಕೇ ಹೊರತು ತಾನು ಹೇಳಿದ್ದೇ ಕಾನೂನು ಎಂದು ಹಿಂದೂ ಸಂಘಟನೆಗಳು ನಡೆದುಕೊಳ್ಳುತ್ತಿರುವ ರೀತಿ ಅಪಾಯಕಾರಿ. ಪೂಜಾ ಅಥವಾ ಪ್ರಾರ್ಥನಾ ಸ್ಥಳಗಳ ಮೇಲೆ ನಡೆಯುವ ಇಂತಹ ದಾಳಿಗಳು ಆರೋಗ್ಯಕರ ಸಮಾಜದ ಲಕ್ಷಣವಲ್ಲ. ನಾಲ್ಕು ವರ್ಷಗಳಿಂದ ಈ ರೀತಿಯ ದುಷ್ಕೃತ್ಯಗಳು ದಕ್ಷಿಣ ಕನ್ನಡ, ಉಡುಪಿ, ಮೈಸೂರು, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಪದೇ ಪದೇ ಮರುಕಳಿಸುತ್ತಿವೆ. ಆ ಮೂಲಕ ಆ ಜನರ ಭಾವನೆಗಳನ್ನು ಗಾಸಿಗೊಳಿಸಲಾಗಿದೆ. ಪೌರಸಂಸ್ಥೆಗಳ ಸ್ಥಳೀಯ ಸಂಸ್ಥೆಗಳ ಫಲಿತಾಂಶ ಪ್ರಕಟಣೆ ಸನಿಹವಿರುವಾಗಲೇ ಇಂತಹ ಕಿಡಿಗೇಡಿತನ ಮಾಡುವುದರ ಹಿಂದೆ ದುರುದ್ದೇಶ ಇರುವುದು ಗೋಚರವಾಗುತ್ತದೆ. ಮತೀಯ ಸೌಹಾರ್ದವನ್ನು ಕೆಡಿಸುವ ದುರುದ್ದೇಶ ಇದರ ಹಿಂದೆ ಇರುವುದನ್ನು ಅಲ್ಲಗಳೆಯಲಾಗದು. ಸಂವಿಧಾನ ಎಲ್ಲರಿಗೂ ಧಾರ್ಮಿಕ ಸ್ವಾತಂತ್ರ್ಯ ನೀಡಿದೆ. ಸ್ವಇಚ್ಛೆಯಿಂದ ಮತ್ತೊಂದು ಧರ್ಮಕ್ಕೆ ಸೇರಿದರೆ ಅದು ಅಪರಾಧವಲ್ಲ, ಆದರೆ ಬಲವಂತವಾಗಿ ಮತಾಂತರ ಮಾಡಿಸುವುದು ಅಪರಾಧ, ಕಾನೂನು ಇಷ್ಟು ಸ್ಪಷ್ಟವಾಗಿದ್ದರೂ ಸ್ವಘೋಷಿತ ಹಿಂದೂ ಧರ್ಮ ಸಂರಕ್ಷಕರು ದುಂಡಾವರ್ತನೆ ನಡೆಸುವುದು ಅಪರಾಧ. ಧಾರ್ಮಿಕ ಸಾಮರಸ್ಯ ಕೆಡದಂತೆ ನೋಡಿಕೊಳ್ಳುವುದು ಸರ್ಕಾರದ ಕರ್ತವ್ಯ, ದುಂಡಾವರ್ತಿ ನಡೆಸುವ ಬಜರಂಗದಳದವರ ಬಗ್ಗೆ ಸಡಿಲ ನೀತಿ ಅನುಸರಿಸುತ್ತಿರುವುದೇ ಇಂಥ ಘಟನೆಗಳು ಮರುಕಳಿಸಲು ಕಾರಣ. ಶಾಂತಿ ಕದಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಪ್ರಾಮಾಣಿಕ ಪ್ರಯತ್ನವನ್ನು ಸರ್ಕಾರ ಮೆರೆಯಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.