ಅತಿರೇಕದ ವರ್ತನೆ ಸಂವಿಧಾನ ಶಿಲ್ಪಿ ಬಿ.ಆರ್. ಅಂಬೇಡ್ಕರ್ ಅವರನ್ನು ಕುರಿತ ವ್ಯಂಗ್ಯ ಚಿತ್ರವೊಂದು ಕಳೆದ ಶುಕ್ರವಾರ ಸಂಸತ್ತಿನ ಉಭಯ ಸದನಗಳಲ್ಲಿ ದೊಡ್ಡ ಗದ್ದಲಕ್ಕೆ ಕಾರಣವಾದದ್ದು ಅತ್ಯಂತ ದುರದೃಷ್ಟಕರ ಮತ್ತು ಅನಪೇಕ್ಷಣೀಯ ಸಂಗತಿ. ಪ್ರಸಿದ್ಧ ವ್ಯಂಗ್ಯ ಚಿತ್ರಕಾರ ಶಂಕರ್ ಅವರು 1948ರಲ್ಲಿ ಬರೆದ ಈ ಚಿತ್ರ 2006ರಲ್ಲಿ ರಾಷ್ಟ್ರೀಯ ಶಿಕ್ಷಣ, ಸಂಶೋಧನೆ ಮತ್ತು ತರಬೇತಿ (ಎನ್‌ಸಿಇಆರ್‌ಟಿ) ಮಂಡಳಿ ಹೊರತಂದ ಪಠ್ಯ ಪುಸ್ತಕವೊಂದರಲ್ಲಿ ಪ್ರಕಟವಾಗಿದೆ. ಈ ಚಿತ್ರ ಇತ್ತೀಚೆಗೆ ತಮಿಳುನಾಡಿನ್ಲ್ಲಲೂ ವಿವಾದ ಹುಟ್ಟುಹಾಕಿತ್ತು. ಈ ವ್ಯಂಗ್ಯಚಿತ್ರವನ್ನು ಪಠ್ಯ ಪುಸ್ತಕದಲ್ಲಿ ಪ್ರಕಟಿಸಿದ್ದ ಕ್ರಮ ಅಂಬೇಡ್ಕರ್ ಅವರ ವ್ಯಕ್ತಿತ್ವಕ್ಕೆ ಅವಹೇಳನ ಮಾಡುವ ಪ್ರಯತ್ನ ಎಂದೇ ತಮಿಳುನಾಡಿನ ಸಂಸದರೊಬ್ಬರು ಸಂಸತ್ತಿನಲ್ಲಿ ಬಣ್ಣಿಸಿ ಎರಡೂ ಸದನಗಳಲ್ಲಿ ಗದ್ದಲಕ್ಕೆ ಕಾರಣರಾದರು. ಅದಕ್ಕೆ ಬಿಎಸ್‌ಪಿ ಮತ್ತಿತರ ಪಕ್ಷಗಳ ಸಂಸದರು ಬೆಂಬಲ ನೀಡಿ ಯುಪಿಎ ಸರ್ಕಾರದ ಕ್ಷಮೆಯಾಚನೆಗೂ ಒತ್ತಾಯಿಸಿದರು. ಪಠ್ಯಪುಸ್ತಕದಲ್ಲಿ ಈ ವ್ಯಂಗ್ಯಚಿತ್ರ ಪ್ರಕಟಿಸಿದ್ದರಿಂದ ಅಂಬೇಡ್ಕರ್‌ಗೆ ಅವಮಾನವಾಯಿತು ಎಂದು ಭಾವಿಸುವುದೇ ಮೂರ್ಖತನ. ಅರವತ್ತು ವರ್ಷಗಳ ಹಿಂದೆ ಬರೆದ ವ್ಯಂಗ್ಯ ಚಿತ್ರದಿಂದ ಇಂದು ಅಂಬೇಡ್ಕರ್‌ಗೆ ಅವಮಾನವಾಯಿತು ಎಂದು ಹೇಳುವುದರಲ್ಲಿ ಯಾವ ತರ್ಕವೂ ಇಲ್ಲ. ಯುಪಿಎ ಸರ್ಕಾರವನ್ನು ಪೇಚಿಗೆ ಸಿಕ್ಕಿಸುವ ದುರುದ್ದೇಶ ಬಿಟ್ಟರೆ ಇದರಲ್ಲಿ ಬೇರೇನೂ ಕಾಣದು. ಬಿಎಸ್‌ಪಿ ಮತ್ತಿತರ ಪಕ್ಷಗಳ ಸಂಸದರು ವ್ಯಂಗ್ಯ ಚಿತ್ರದ ಪ್ರಕಟಣೆಯಿಂದ ಸಿಟ್ಟಿಗೆದ್ದದ್ದು ಅನಗತ್ಯ ಹಾಗೂ ಅತಿರೇಕದ ನಡವಳಿಕೆ. ಅಂಬೇಡ್ಕರ್ ಹೆಸರಿನಲ್ಲಿ ರಾಜಕೀಯ ಮಾಡುವ ಕೆಟ್ಟ ಹುನ್ನಾರವಲ್ಲದೇ ಬೇರೇನೂ ಅಲ್ಲ. ದೇಶದ ಉದ್ದಗಲದಲ್ಲಿ ಕೋಟ್ಯಂತರ ದಲಿತರು ಇಂದಿಗೂ ಸಮಾಜದ ಅವಜ್ಞೆಗೆ ಒಳಗಾಗಿದ್ದಾರೆ. ಶ್ರೇಣೀಕೃತ ಜಾತಿ ವ್ಯವಸ್ಥೆಯಿಂದ ನಲುಗಿದ್ದಾರೆ. ಗ್ರಾಮೀಣ ಪ್ರದೇಶಗಳ ದಲಿತರು ಈ ಕಾಲದಲ್ಲೂ ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗುತ್ತಿದ್ದಾರೆ. ಉದ್ಯೋಗ, ಸಾಮಾಜಿಕ ಸ್ಥಾನಮಾನ ಹಾಗೂ ನೆಮ್ಮದಿಯ ಬದುಕಿನಿಂದ ವಂಚಿತರಾಗಿದ್ದಾರೆ. ದಲಿತರೆಂಬ ಒಂದೇ ಕಾರಣಕ್ಕಾಗಿ ಬಲಿಷ್ಠ ಸಮುದಾಯಗಳಿಂದ ಹಲ್ಲೆಗೆ ಒಳಗಾಗುತ್ತಿದ್ದಾರೆ. ಮುಜರಾಯಿ ದೇವಸ್ಥಾನಗಳಿಗೂ ಅವರಿಗೆ ಮುಕ್ತ ಪ್ರವೇಶ ಸಾಧ್ಯವಾಗುತ್ತಿಲ್ಲ. ಈ ಎಲ್ಲಾ ವಾಸ್ತವ ಸಂಗತಿಗಳು ದಲಿತ ರಾಜಕೀಯ ಮುಖಂಡರು ಮತ್ತು ಸಂಸದರಿಗೆ ಗೊತ್ತಿಲ್ಲದ ವಿಷಯವೇನೂ ಅಲ್ಲ. ದಲಿತರ ಮೇಲೆ ನಡೆಯುತ್ತಿರುವ ಶೋಷಣೆಯ ವಿರುದ್ಧ ಧ್ವನಿ ಎತ್ತಿ ಅವರಿಗೆ ನ್ಯಾಯ ಒದಗಿಸುವ ಕೆಲಸವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡುವುದನ್ನು ಬಿಟ್ಟು ಅಂಬೇಡ್ಕರ್ ಅವರಿಗೆ ಅವಮಾನವಾಯಿತೆಂದು ಸಂಸತ್ತಿನಲ್ಲಿ ಗದ್ದಲ ಮಾಡುವುದು ಆತ್ಮಘಾತುಕ ನಡವಳಿಕೆ. ಅಂಬೇಡ್ಕರ್ ಅವರ ಹೋರಾಟದ ಫಲವಾಗಿ ಜಾರಿಗೆ ಬಂದ ರಾಜಕೀಯ ಮತ್ತು ಇತರ ಮೀಸಲಾತಿ ಸೌಲಭ್ಯಗಳನ್ನು ಪಡೆದು ಸಮಾಜದ ಮುಖ್ಯವಾಹಿನಿಯಲ್ಲಿ ಸೇರಿಕೊಂಡ ರಾಜಕೀಯ ಮತ್ತು ಇನ್ನಿತರ ಕ್ಷೇತ್ರಗಳ ದಲಿತ ಮುಖಂಡರು ಕೋಟ್ಯಂತರ ಸಾಮಾನ್ಯ ದಲಿತರನ್ನು ಮರೆತಿದ್ದಾರೆ. ಅವರ ಅಭ್ಯುದಯಕ್ಕಾಗಿ ಶ್ರಮಿಸುವ ಬದಲು ಕ್ಷುಲ್ಲಕ ವಿಚಾರಗಳನ್ನು ದೊಡ್ಡದು ಮಾಡಿ ಅಂಬೇಡ್ಕರ್ ಅವರಿಗೆ ಅವಮಾನವಾಯಿತೆಂದು ಬೊಬ್ಬೆ ಹಾಕುವುದರಲ್ಲಿ ಅರ್ಥವಿಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.