ಯಾವುದು ಸಂಸ್ಕೃತಿ ನೈತಿಕತೆ ಹೆಸರಲ್ಲಿ ಹೆಣ್ಣುಮಕ್ಕಳ ವೇಷಭೂಷಣಗಳನ್ನು ನಿಯಂತ್ರಿಸುವ ಪ್ರವೃತ್ತಿ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ಇತ್ತೀಚೆಗೆಷ್ಟೇ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಸಿ. ಸಿ. ಪಾಟೀಲ್ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ಲೈಂಗಿಕ ಕಿರುಕುಳ ವಿರುದ್ಧದ ಸಮಿತಿಯ ಮುಖ್ಯಸ್ಥೆ ಕೆ.ಕೆ. ಸೀತಮ್ಮ ಅವರು ಹೆಣ್ಣುಮಕ್ಕಳು ಧರಿಸಬೇಕಾದ ಉಡುಪಿನ ಕುರಿತು ಹೇಳಿದ `ನೈತಿಕ ಪಾಠ~, ವ್ಯಾಪಕ ಟೀಕೆಗೊಳಗಾಗಿತ್ತು. ಈ ವಿದ್ಯಮಾನ, ನೆನಪಿನಿಂದ ಮಾಸುವ ಮುಂಚೆಯೇ ಧಾರವಾಡದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಈಗ ಸುದ್ದಿಯಲ್ಲಿದೆ. ವಿದ್ಯಾರ್ಥಿನಿಯರು `ಪ್ರಚೋದನಾತ್ಮಕ ಪಾಶ್ಚಿಮಾತ್ಯ ಉಡುಪು~ ಧರಿಸಬಾರದೆಂದು ಗೃಹವಿಜ್ಞಾನ ವಿಭಾಗದ ಡೀನ್ ಸುತ್ತೋಲೆ ಹೊರಡಿಸಿದ್ದಾರೆ. ಈ ಪ್ರಕಾರ ಟಿ-ಷರ್ಟ್, ಟ್ರೌಷರ್ಸ್‌, ಮಿಡಿ, ಸ್ಕರ್ಟ್ ಅಥವಾ ಮತ್ಯಾವುದೇ ಉಡುಪನ್ನೂ ವಿದ್ಯಾರ್ಥಿನಿಯರು ಧರಿಸುವಂತಿಲ್ಲ. ಕಳೆದ ಫೆಬ್ರುವರಿಯಲ್ಲೇ ಈ ಆದೇಶ ಜಾರಿಗೆ ಬಂದಿರುವುದರಿಂದ ಸೀರೆ ಅಥವಾ ಸೆಲ್ವಾರ್ ಕಮೀಜ್ ಧರಿಸಿ 400 ವಿದ್ಯಾರ್ಥಿನಿಯರು ತರಗತಿಗಳಿಗೆ ಹಾಜರಾಗುತ್ತಿದ್ದಾರೆ. `ವಿದ್ಯಾರ್ಥಿನಿಯರು ಧರಿಸುವ ಪಾಶ್ಚಾತ್ಯ ಉಡುಪುಗಳು ವಿದ್ಯಾರ್ಥಿಗಳನ್ನು ಪ್ರಚೋದಿಸುವುದರಿಂದ~ ಕ್ರಮೇಣ ಈ ಉಡುಪು ಸಂಹಿತೆಯನ್ನು ವಿಶ್ವವಿದ್ಯಾಲಯದ ಇತರ ವಿಭಾಗಗಳಿಗೂ ವಿಸ್ತರಿಸುವುದಾಗಿ ಹೇಳಿರುವ ಕುಲಪತಿಗಳ ಮಾತುಗಳು ಅವರು ಪ್ರತಿನಿಧಿಸುವ ಶೈಕ್ಷಣಿಕ ಹುದ್ದೆಗೆ ಶೋಭೆ ತರುವಂತಹದ್ದಲ್ಲ. ಭಾರತೀಯ ಸಂಸ್ಕೃತಿಯನ್ನು ಪ್ರತಿನಿಧಿಸುವ ಉಡುಪುಗಳನ್ನೇ ಧರಿಸಬೇಕೆಂದು ಹೇರುವ ಪ್ರವೃತ್ತಿ ಹೆಣ್ಣುಮಕ್ಕಳ ಮೇಲಷ್ಟೇ ಏಕೆ ಎಂಬ ಪ್ರಶ್ನೆ ಮುಕ್ತ ಮನ ಹೊಂದಿರುವ ಎಲ್ಲರೂ ಕೇಳಬಹುದಾದ ಪ್ರಶ್ನೆ. ಪುರುಷರು ಧರಿಸುವ ಸೂಟುಬೂಟುಗಳೇನು ಭಾರತೀಯ ಸಂಸ್ಕೃತಿಯೇ ಎಂಬಂತಹ ವಿತಂಡ ವಾದ ಮಂಡನೆಗೆ ಇದು ಅನುವು ಮಾಡಿಕೊಡುತ್ತದೆ. ಸೆಲ್‌ಫೋನ್‌ಗಳನ್ನೂ ಈ ಕ್ಯಾಂಪಸ್‌ನಲ್ಲಿ ನಿಷೇಧಿಸಲಾಗಿದೆ. ತರಗತಿಗಳಲ್ಲಿ ಶಿಸ್ತು ಮೂಡಿಸಲು ಕೆಲವೊಂದು ಮಿತಿಗಳಲ್ಲಿ ಈ ಕ್ರಮವೇನೋ ಒಪ್ಪಬಹುದಾದಂತಹದ್ದು. ಆದರೆ ನೈತಿಕತೆ, ಸಂಸ್ಕೃತಿ ಹೆಸರಲ್ಲಿ ಹೆಣ್ಣುಮಕ್ಕಳ ಮೇಲೆ ಹೇರಲಾಗುವ ಉಡುಪು ಸಂಹಿತೆ ಮಾತ್ರ ಪ್ರಜಾಸತ್ತೆಯ ಮೌಲ್ಯಗಳಿಗೆ ವಿರುದ್ಧವಾದುದು. ಸಭ್ಯತೆ ಅಥವಾ ಅಸಭ್ಯತೆ ಎಂಬುದು ಪ್ರತಿಯೊಂದು ಸಂಸ್ಕೃತಿಯಲ್ಲೂ ಭಿನ್ನ ದನಿ ಪಡೆಯುತ್ತದೆ ಎಂಬುದು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡುವವರ ಅರಿವಿನಲ್ಲಿರಬೇಕಾದುದು ಅವಶ್ಯ. ಕಚೇರಿಗಳಿಗೆ ಬರುವಾಗ `ಸಭ್ಯ ಉಡುಪು~ ಧರಿಸಿರಬೇಕು; ಜೀನ್ಸ್ ಮತ್ತು ಟಿ-ಷರ್ಟ್‌ಗಳನ್ನು ಧರಿಸಬಾರದು ಎಂದು ಹರಿಯಾಣದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಳೆದ ವಾರವಷ್ಟೇ ಹೊರಡಿಸಿರುವ ಸುತ್ತೋಲೆಯೂ ಈಗ ವಿವಾದದ ಕೇಂದ್ರಬಿಂದುವಾಗಿರುವುದನ್ನು ಸ್ಮರಿಸಬಹುದು. ಬಹುಶಃ ಈ ಬಗೆಯ ವಾದ ವಿವಾದ ಈ ಯುಗದಲ್ಲಿ ಮುಗಿಯುವ ಲಕ್ಷಣಗಳೂ ಕಾಣಿಸುತ್ತಿಲ್ಲ. ಈ ಎಲ್ಲಾ ವಾದಗಳ ಹಿನ್ನೆಲೆಯಲ್ಲಿರುವುದು ಹೆಣ್ಣನ್ನು ಭೋಗವಸ್ತುವಾಗಿ ನೋಡುವಂತಹ ದೃಷ್ಟಿಕೋನ. ಮಹಿಳೆಯನ್ನು ಸಮಾನ ನೆಲೆಯಲ್ಲಿ ವ್ಯಕ್ತಿಯಾಗಿ ಪರಿಗಣಿಸುವ ವಾತಾವರಣ ಮೂಡಬೇಕಾದುದು ಇಲ್ಲಿ ಮುಖ್ಯ. ಸ್ವತಂತ್ರ ವಿವೇಚನಾಯುಕ್ತ, ಜವಾಬ್ದಾರಿಯುತ ತೀರ್ಮಾನಗಳನ್ನು ಕೈಗೊಳ್ಳಬಹುದಾದ ಮಹಿಳೆಯ ಸಾಮರ್ಥ್ಯಕ್ಕೆ ಮನ್ನಣೆ ದೊರೆಯುವಂತಹ ವಾತಾವರಣ ನಿರ್ಮಾಣವಾಗುವವರೆಗೂ ಮಹಿಳೆಯನ್ನು ಸಂಸ್ಕೃತಿಯ ಹೆಸರಲ್ಲಿ ನಿಯತ್ರಿಸುವಂತಹ ಈ ರಾಜಕೀಯಕ್ಕೆ ಕೊನೆಯೇ ಇಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.