ಆಶಾದಾಯಕ ಫಲಿತಾಂಶ ಭವಿಷ್ಯದ ಪೀಳಿಗೆಗಳ ಸರ್ವಾಂಗೀಣ ಸಾಮರ್ಥ್ಯವನ್ನು ರೂಪಿಸಲು ಒಳ್ಳೆಯ ಶಿಕ್ಷಣದ ತಳಹದಿ ಅತ್ಯವಶ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ. ಶಿಕ್ಷಣ ಕ್ಷೇತ್ರದಲ್ಲಿ ಆ ದಿಸೆಯಲ್ಲಿ ನಡೆಯುವ ಪ್ರಾಮಾಣಿಕ ಪ್ರಯತ್ನಗಳು ಆಶಾದಾಯಕ ಫಲಿತಾಂಶವನ್ನು ಕೊಡುವುದು ಸಹಜ. ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದ ಪ್ರಮಾಣ ಶೇ 76.13ಕ್ಕೆ ಏರಿರುವುದು ಅಂಥ ಪ್ರಯತ್ನಗಳಿಗೆ ಸಿಕ್ಕ ಫಲ ಎಂದೇ ಸಮಾಧಾನ ಪಟ್ಟುಕೊಳ್ಳಬಹುದು. ಇದು ರಾಜ್ಯದ ಶೈಕ್ಷಣಿಕ ಇತಿಹಾಸದಲ್ಲಿ ಹೊಸ ದಾಖಲೆಯಾಗಿದೆ. ಒಂದು ಶಿಕ್ಷಣ ವ್ಯವಸ್ಥೆಯ ಉಪಯುಕ್ತತೆ ಮತ್ತು ಸಾರ್ಥಕತೆಯನ್ನು ಅರ್ಥೈಸುವ ಸಿದ್ಧಾಂತಗಳು, ಅಳೆಯುವ ಮಾನದಂಡಗಳು ಏನೇ ಇರಲಿ, ಪ್ರಸ್ತುತ ಪದ್ಧತಿಯಲ್ಲಂತೂ ಅದು ವ್ಯಕ್ತವಾಗುವುದು ಬಹುತೇಕ ಎಸ್‌ಎಸ್‌ಎಲ್‌ಸಿ ಹಂತದಲ್ಲಿ. ದಶಕದ ಹಿಂದೆ ದೇಶಾದ್ಯಂತ ಆರಂಭವಾದ ಸರ್ವಶಿಕ್ಷಣ ಅಭಿಯಾನ ಮತ್ತು ರಾಜ್ಯ ಪ್ರೌಢ ಶಿಕ್ಷಣ ಮಂಡಳಿ ಇತ್ತೀಚಿನ ಒಂದೆರಡು ವರ್ಷಗಳಲ್ಲಿ ಕೈಗೊಂಡ ಪರೀಕ್ಷಾ ವ್ಯವಸ್ಥೆಯ ಸುಧಾರಣೆ ಕ್ರಮಗಳು ಪರಿಣಾಮ ಬೀರುತ್ತಿವೆ ಎಂಬುದಂತೂ ಈ ವರ್ಷದ ಫಲಿತಾಂಶದಿಂದ ಗೊತ್ತಾಗುತ್ತಿದೆ. ಶಾಲೆ ಬಿಡುವ ಮಕ್ಕಳ ಪೈಕಿ ಗ್ರಾಮೀಣ ಪ್ರದೇಶದ ಮಕ್ಕಳ ಸಂಖ್ಯೆ ಮತ್ತು ಅವರಲ್ಲಿ ಹೆಣ್ಣುಮಕ್ಕಳ ಸಂಖ್ಯೆ ಹೆಚ್ಚಾಗಿದ್ದರೂ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಮಾತ್ರ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಮತ್ತು ಬಾಲಕಿಯರು ಮೇಲುಗೈ ಸಾಧಿಸುವುದು ಈ ಬಾರಿಯೂ ಮುಂದುವರಿದಿದೆ. ಕಲಿಕೆಯ ಉಳಿಕೆ ಮಾಡುವ ಆಶಯದ ಪಠ್ಯಕ್ರಮ ಮತ್ತು ಪ್ರಾಮಾಣಿಕ ಶಿಕ್ಷಕರ ಶ್ರಮ ಫಲಿತಾಂಶದ ಈ ಏರಿಕೆಯ ಹಿಂದಿದೆ. ಎಸ್‌ಎಸ್‌ಎಲ್‌ಸಿ ಫಲಿತಾಂಶ ಅನೇಕ ಕೋನಗಳಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆಗೆ ಕನ್ನಡಿ ಹಿಡಿದು ಮುಖ್ಯ ವಿಷಯಗಳ ಬಗ್ಗೆ ನಮ್ಮ ಗಮನ ಸೆಳೆಯುತ್ತದೆ. ಇದರಲ್ಲಿ ಬಹಳ ಗಮನಾರ್ಹವೆಂದರೆ, ಉತ್ತರ ಕರ್ನಾಟಕದ ಹಲವು ಜಿಲ್ಲೆಗಳು ಫಲಿತಾಂಶದಲ್ಲಿ ಹಿಂದುಳಿದಿರುವುದು ಮತ್ತು ಆ ಜಿಲ್ಲೆಗಳು ಅಭಿವೃದ್ಧಿಯಲ್ಲೂ ಹಿಂದುಳಿದಿರುವುದು ಇವುಗಳ ಪರಸ್ಪರ ಸಂಬಂಧ ಮತ್ತೊಮ್ಮೆ ದೃಢಪಡುತ್ತಿದೆ. ಅಲ್ಲದೆ ಬೀದರ್ ಜಿಲ್ಲೆ ಹಲವು ವರ್ಷಗಳಿಂದ ಫಲಿತಾಂಶದಲ್ಲಿ ಕೊನೆಯ ಸ್ಥಾನ ಪಡೆಯುತ್ತಿರುವುದರ ಬಗ್ಗೆ ವಿಶೇಷ ಅಧ್ಯಯನ ಅಗತ್ಯವೆನಿಸುತ್ತದೆ. ದಕ್ಷಿಣ ಕರ್ನಾಟಕದಲ್ಲಿ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಫಲಿತಾಂಶ ಕೂಡ ಆದ್ಯತೆಗೆ ಒತ್ತಾಯಿಸುತ್ತಿದೆ. ಶಾಲಾ ಸೌಲಭ್ಯಗಳನ್ನು ಹೆಚ್ಚಿಸುವುದು, ಶಿಕ್ಷಕರ ಕೊರತೆ ಇರುವ ಕಡೆ ಅಗತ್ಯ ನೇಮಕಾತಿ, ಶಿಕ್ಷಕರಿಗೂ ತರಬೇತಿ, ಶೈಕ್ಷಣಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಇನ್ನೂ ಹೆಚ್ಚಿನ ತರಬೇತಿ, ಶಾಲೆ ತಪ್ಪಿಸುವ ಮಕ್ಕಳ ಬಗ್ಗೆ ಹೆಚ್ಚನ ಕಾಳಜಿ ಮುಂತಾದ ಕ್ರಮಗಳ ಮೂಲಕ ಹಿಂದುಳಿದ ಜಿಲ್ಲೆಗಳನ್ನು ಸಮಾನ ನೆಲೆಗೆ ತರುವ ಪ್ರಯತ್ನಗಳನ್ನು ಸರ್ಕಾರ ಹೆಚ್ಚಿಸುವ ಅಗತ್ಯವಿದೆ. ಎಸ್‌ಎಸ್‌ಎಲ್‌ಸಿ ಫಲಿತಾಂಶ ಏರಿಕೆ ನಮ್ಮ ಕೊರತೆಗಳ ಬಗ್ಗೆ ಮತ್ತಷ್ಟು ಚಿಂತನೆಗೆ ದಾರಿ ಮಾಡಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.