ಮಿತವ್ಯಯ ಕ್ರಮ ಜಾರಿಯಾಗಲಿ ದೇಶಿ ಅರ್ಥ ವ್ಯವಸ್ಥೆಯ ಆರೋಗ್ಯಕ್ಕೆ ಕನ್ನಡಿ ಹಿಡಿಯುವ ರೂಪಾಯಿ ಮೌಲ್ಯ ಮತ್ತು ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕಗಳು ಬುಧವಾರದ ವಹಿವಾಟಿನಲ್ಲಿ ತೀವ್ರ ಕುಸಿತ ದಾಖಲಿಸಿ ಆತಂಕ ಮೂಡಿಸಿವೆ. ಜಾಗತಿಕ ಆರ್ಥಿಕ ಸಂಕಷ್ಟದ ಕರಿನೆರಳು ಸ್ಥಳೀಯ ಅರ್ಥ ವ್ಯವಸ್ಥೆ ಮೇಲೆ ಮತ್ತೊಮ್ಮೆ ಪ್ರತಿಕೂಲ ಪರಿಣಾಮ ಬೀರುತ್ತಿರುವುದನ್ನು ಈ ವಿದ್ಯಮಾನಗಳು ದೃಢಪಡಿಸುತ್ತವೆ. ಈ ವರ್ಷದ ಜನವರಿಯಿಂದ ಇಲ್ಲಿಯವರೆಗೆ ರೂಪಾಯಿ ವಿನಿಮಯ ದರ 44.61ರಿಂದ 54.53ರವರೆಗೆ (ಶೇ 22ರಷ್ಟು) ಕುಸಿತವಾಗಿದೆ. ಷೇರುಪೇಟೆಯಲ್ಲಿ ಕೆಲ ದಿನಗಳಿಂದ ನಿರುತ್ಸಾಹದ ವಾತಾವರಣವೇ ಮುಂದುವರೆದಿರುವಾಗಲೇ ಐರೋಪ್ಯ ಒಕ್ಕೂಟದ ಹಣಕಾಸು ಬಿಕ್ಕಟ್ಟಿನ ಪರಿಣಾಮ ನಮ್ಮಲ್ಲೂ ಪ್ರತಿಫಲನಗೊಳ್ಳುತ್ತಿರುವುದು ಕಳವಳಕ್ಕೆ ಎಡೆ ಮಾಡಿಕೊಟ್ಟಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು, ತಮ್ಮ ಸಾಗರೋತ್ತರ ಹೊಣೆಗಾರಿಕೆ ನಿಭಾಯಿಸಲು ದೇಶಿ ಷೇರುಪೇಟೆಯಿಂದ ಹಣ ಮರಳಿ ಪಡೆಯುತ್ತಿದ್ದಾರೆ. ಹಣದ ಹೊರ ಹರಿವಿನ ಕಾರಣ ಮತ್ತು ಆಮದುದಾರರಿಂದ ಡಾಲರ್‌ಗೆ ಬೇಡಿಕೆ ಹೆಚ್ಚಿದೆ. ಸಾಲದ ಸುಳಿಯಿಂದ ಹೊರ ಬರಲು ನೆರವಾಗುವ ಪರಿಹಾರ ಕೊಡುಗೆಗೆ ಪ್ರತಿಯಾಗಿ, ಐರೋಪ್ಯ ಒಕ್ಕೂಟ ಮತ್ತು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಪ್ರಸ್ತಾಪಿಸಿರುವ ನಿಬಂಧನೆಗಳಿಗೆ ಒಪ್ಪದ ಗ್ರೀಸ್, ಮಿತವ್ಯಯ ಕ್ರಮಗಳ ಬಗ್ಗೆ ಹೊಸದಾಗಿ ಜನಾಭಿಪ್ರಾಯ ಪಡೆಯಲು ಹೊರಟಿದೆ. ಇದು ಒಕ್ಕೂಟದಲ್ಲಿನ ಆರ್ಥಿಕ ಅನಿಶ್ಚಿತತೆ ಇನ್ನಷ್ಟು ಹೆಚ್ಚಿಸಲಿದೆ. ಇದಕ್ಕೆ ಪೂರಕವಾಗಿ ನಮ್ಮಲ್ಲಿನ ಚಾಲ್ತಿ ಖಾತೆ ಕೊರತೆ, ವಿತ್ತೀಯ ಕೊರತೆ ಮತ್ತು ಹಣದುಬ್ಬರ ಸಮಸ್ಯೆಗಳು ದೇಶಿ ಅರ್ಥ ವ್ಯವಸ್ಥೆಯ ಬೆಳವಣಿಗೆಗೆ ಅಡ್ಡಿಯಾಗಿವೆ. ಜಾಗತಿಕ ಬಿಕ್ಕಟ್ಟಿನ ತೀವ್ರತೆ ದೇಶಿ ಅರ್ಥ ವ್ಯವಸ್ಥೆ ಮೇಲೆ ಪ್ರತಿಕೂಲ ಪರಿಣಾಮ ಬೀರದಂತೆ ಸರ್ಕಾರ ಗಮನ ಹರಿಸುವ ಅನಿವಾರ್ಯತೆ ಈಗ ಉದ್ಭವಿಸಿದೆ. ಸಾಗರೋತ್ತರ ಬೆಳವಣಿಗೆಗಳ ಪ್ರತಿಕೂಲ ಪರಿಣಾಮ ತಡೆಯಲು ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕುವ ಬಗ್ಗೆ ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಇಂಗಿತ ವ್ಯಕ್ತಪಡಿಸಿ ಚಿಂತೆಗೆ ಕಾರಣ ಇಲ್ಲ ಎಂದೂ ಅಭಯ ನೀಡಿದ್ದಾರೆ. ಅಪ್ರಿಯವಾದ ಕಠಿಣ ಕ್ರಮಗಳನ್ನು ಕೈಗೊಳ್ಳುವುದನ್ನು ಯಾವುದೇ ಕಾರಣಕ್ಕೂ ಮುಂದೂಡದೇ ತಕ್ಷಣ ಜಾರಿಗೆ ತರಲು ಮತ್ತು ವರಮಾನ ವೃದ್ಧಿಗೆ ಪೂರಕ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಕಾರ್ಯೋನ್ಮುಖವಾಗಬೇಕಾಗಿದೆ. ಇನ್ನಷ್ಟು ಆರ್ಥಿಕ ಶಿಸ್ತು ಜಾರಿಗೆ ತರುವ ಅನಿವಾರ್ಯತೆಯೂ ಎದುರಾಗಿದೆ. ಆರ್ಥಿಕ ಮಿತವ್ಯಯದ ಮತ್ತು ಅಪ್ರಿಯ ಕಠಿಣ ಕ್ರಮಗಳ ಬಗ್ಗೆ ಸಚಿವ ಮುಖರ್ಜಿ ಅವರ ಮಾತುಗಳನ್ನೇ ನಂಬುವುದಾದರೆ ಜನರು ಮತ್ತೆ ಪೆಟ್ರೋಲ್ ಬೆಲೆ ಹೆಚ್ಚಳ, ಡೀಸೆಲ್ ನಿಯಂತ್ರಣ ಮುಕ್ತಗೊಳಿಸುವಂತಹ ಕ್ರಮಗಳಿಗೆ ಮಾನಸಿಕವಾಗಿ ಸಜ್ಜಾಗಬೇಕಾಗಿದೆ. ಈಗಾಗಲೇ ಅವಶ್ಯಕ ಸರಕುಗಳ ಬೆಲೆ ಏರಿಕೆಯಿಂದ ಬಸವಳಿದಿರುವ ಜನರ ಇನ್ನಷ್ಟು ಮೇಲೆ ಹೊರೆಯಾಗುವ ಕ್ರಮಗಳನ್ನು ಕೈಗೊಳ್ಳುವ ಬದಲಿಗೆ 2008ರಲ್ಲಿ ಜಾರಿಗೆ ತಂದಿದ್ದ ಅಧಿಕಾರಿಗಳ, ಸಚಿವರ ವಿಲಾಸಿ ವೆಚ್ಚಗಳಿಗೆ, ಸರ್ಕಾರದ ಅನುತ್ಪಾದಕ ಖರ್ಚುಗಳಿಗೆ ಲಗಾಮು ಹಾಕುವಂತಹ ಮಿತವ್ಯಯ ಕ್ರಮಗಳತ್ತಲೇ ಸರ್ಕಾರ ಹೆಚ್ಚು ಗಮನ ಹರಿಸಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.