ಶಿಸ್ತಿನ ಚೌಕಟ್ಟು ಅಗತ್ಯ ಭಾರತದ ಮಟ್ಟಿಗೆ ಕ್ರಿಕೆಟ್ ತನ್ನ ಸುತ್ತಲೂ ಹಗರಣಗಳ ಸರಮಾಲೆ ಬಿಗಿದುಕೊಂಡಿದೆ. ಇಂಡಿಯನ್ ಪ್ರೀಮಿಯರ್ ಲೀಗ್‌ನ ಈ ಸಲದ ಪೈಪೋಟಿ ಕೊನೆಯ ಹಂತ ತಲುಪುತ್ತಿರುವಾಗಲೇ ಹಲವು ಹಗರಣಗಳು ಏಕಾಏಕಿ ಉದ್ಭವಿಸಿವೆ. ಸ್ಪಾಟ್ ಫಿಕ್ಸಿಂಗ್, ಶಾರೂಖ್ ಗದ್ದಲ, ಲೂಕ್ ಪಾಮರ್ಸ್‌ಬ್ಯಾಚ್ ಕೆಟ್ಟ ವರ್ತನೆಗಳು ಒಂದರಮೇಲೊಂದರಂತೆ ಸುದ್ದಿಯಾಗಿವೆ. ಕ್ರಿಕೆಟ್ ಇವತ್ತು ಆಟಕ್ಕಿಂತಲೂ ಹೆಚ್ಚಾಗಿ ಮೋಜಿನ ಸ್ವರೂಪ ಪಡೆದುಕೊಂಡಿರುವುದು ಎದ್ದು ಕಾಣುತ್ತಿದೆ. ಹೀಗಾಗಿಯೇ ಇಂತಹ ಅನಾಹುತಗಳು ನಡೆಯತೊಡಗಿವೆ. ಈ ನಡುವೆ ಮಾಜಿ ಟೆಸ್ಟ್ ಆಟಗಾರ ಮತ್ತು ಸಂಸದ ಕೀರ್ತಿ ಆಜಾದ್ ಐಪಿಎಲ್ ಟೂರ್ನಿಯನ್ನೇ ನಿಷೇಧಿಸಬೇಕೆಂದು ಆಗ್ರಹಿಸಿ ಉಪವಾಸವನ್ನೂ ನಡೆಸಿದ್ದಾರೆ. ಹೀಗೆ ಕ್ರಿಕೆಟೇತರ ಸಂಗತಿಗಳಿಂದಲೇ ಈ ಕ್ರೀಡೆ ಸುದ್ದಿಯಾಗುತ್ತಿರುವುದು ನಿಜಕ್ಕೂ ವಿಪರ್ಯಾಸ. ಇದರಿಂದ ಕ್ರಿಕೆಟ್‌ನ ನಿಜವಾದ ಅಭಿಮಾನಿಗಳು ನೊಂದುಕೊಂಡಿದ್ದಾರೆ. ಸುಂದರ ಆಟವೊಂದು ವ್ಯಾಪಾರೀಕರಣದ ಪ್ರಕ್ರಿಯೆಯಲ್ಲಿ ಸಿಲುಕಿ ತನ್ನ ಗಾಂಭೀರ್ಯವನ್ನು ಕಳೆದುಕೊಳ್ಳುತ್ತಿರುವುದು ಕ್ರೀಡಾಕ್ಷೇತ್ರದ ದುರಂತವಲ್ಲದೆ ಇನ್ನೇನು? ಕೇಂದ್ರ ಕ್ರೀಡಾ ಸಚಿವ ಅಜಯ್ ಮಾಕನ್ ಐಪಿಎಲ್ ನಿಷೇಧದ ಅಗತ್ಯವಿಲ್ಲವೆನ್ನುತ್ತಾ ಕ್ರಿಕೆಟ್ ಆಡಳಿತ ವ್ಯವಸ್ಥೆಗೆ ಮೂಗುದಾರ ಹಾಕಬೇಕೆನ್ನುವ ಬಗ್ಗೆಯೇ ಹೆಚ್ಚು ಒಲವು ತೋರಿದ್ದಾರೆ. ಹೌದು, ಬೆರಳಿಗೆ ಗಾಯವಾಗಿದೆಯೆಂದು ಕೈಯನ್ನೇ ಕಡಿಯುವುದು ಜಾಣತನ ನಿರ್ಧಾರವಾಗದು. ಪ್ರಸಕ್ತ ವಿವಾದಗಳ ಬೇರು ಇರುವುದೆಲ್ಲಿ ಎಂಬುದನ್ನು ಗುರುತಿಸಿ ಅಲ್ಲಿಗೆ ಮದ್ದು ಎರೆಯಬೇಕೆನ್ನುವ ಮಾಕನ್ ಅಭಿಪ್ರಾಯ ಅರ್ಥಪೂರ್ಣ. ಕ್ರೀಡೆಯೊಂದು ಜನಪ್ರಿಯತೆಯ ಉತ್ತುಂಗಕ್ಕೇರಿದಾಗ ಉದ್ಯಮ ಪ್ರಭುಗಳು, ವ್ಯಾಪಾರಿಗಳು ಅದನ್ನು ಮುತ್ತಿಕೊಳ್ಳುವುದು ಸಹಜ. ಭಾರತದಲ್ಲಿ ಆಗಿರುವುದೂ ಅದೇ. ಚಿತ್ರರಂಗದ ಹಣವಂತರು, ಬಹುರಾಷ್ಟ್ರೀಯ ಕಂಪೆನಿಗಳ ಮಾಲೀಕರು ಕ್ರಿಕೆಟ್ ರಂಗದಲ್ಲಿ ಎಲ್ಲವೂ ತಮ್ಮ ತಾಳಕ್ಕೆ ತಕ್ಕಂತೆ ಕುಣಿಯಬೇಕೆಂದು ಬಯಸಿದರು. ಹೀಗಾಗಿ ಕ್ರಿಕೆಟ್‌ನ ಜತೆಗೆ ಹಣ, ಮೋಜು ಬೆಸೆದುಕೊಂಡಿತು. ಆಟದ ನಡೆಗಳ ಮೇಲೆ ಜೂಜು ನಡೆಸುವವರ ಸಂಖ್ಯೆಯೂ ಹೆಚ್ಚತೊಡಗಿತು. ಹಣ ಹೂಡಿದವರ ಅಟಾಟೋಪ ಮೇರೆ ಮೀರಿತು. ಆಟಗಾರರೂ ರನ್‌ಗಳ ಜೊತೆಗೇ ಡಾಲರ್‌ಗಳ ಲೆಕ್ಕಾಚಾರಕ್ಕೆ ಇಳಿದರು. ಹಣದ ಸುರಿಮಳೆಯಿಂದ ಕೆಲವು ಆಟಗಾರರಲ್ಲಿ ದುರಾಸೆಯೂ ಬೆಳೆಯತೊಡಗಿದರೆ, ಇನ್ನೂ ಕೆಲವರಲ್ಲಿ ಅಹಂಕಾರ ಬೆಟ್ಟದಂತಾಯಿತು. ಆಟಗಾರರಿಗೆ ಹಣ ಸಿಗಲೇಬೇಕು, ನಿಜ. ಆದರೆ ಅಷ್ಟಕ್ಕೇ ಅದು ನಿಲ್ಲಲಿಲ್ಲ. ಇಡೀ ಕ್ರಿಕೆಟ್ ಪ್ರಕ್ರಿಯೆಯೇ ವ್ಯಾಪಾರೀಕರಣದತ್ತ ಜಾರತೊಡಗಿತು. ಇಂತಹ ಸಂದಿಗ್ಧತೆಯಲ್ಲಿ ಕ್ರಿಕೆಟ್ ಆಡಳಿತಗಾರರು ಎಚ್ಚರ ವಹಿಸಬೇಕಿತ್ತು. ಇಂತಹ ಯಾವುದರ ಪ್ರಭಾವವೂ ಕ್ರಿಕೆಟ್ ವ್ಯವಸ್ಥೆಯ ಮೇಲಾಗದಂತೆ ನೋಡಿಕೊಳ್ಳಬೇಕಿತ್ತು. ಇಲ್ಲಿಯೇ ಆಡಳಿತಗಾರರು ಎಡವಿದ್ದಾರೆ. ಹೀಗಾಗಿಯೇ ಇವತ್ತು ಅಭಿಮಾನಿಗಳು ಕ್ರಿಕೆಟ್‌ನ ಪ್ರತಿ ನಡೆಗಳನ್ನೂ ಅನುಮಾನದಿಂದ ನೋಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಮಯದಲ್ಲಿ ಐಪಿಎಲ್ ನಿಷೇಧ ಮಾಡುವುದು ಸಮಸ್ಯೆಗೆ ಪರಿಹಾರವೇ ಅಲ್ಲ. ಮತ್ತೆ ಇದೇ ಕಳಂಕಗಳು ಇನ್ನೊಂದು ರೂಪದಲ್ಲಿ ತಲೆ ಎತ್ತದಿರಲಾರದು. ಹೀಗಾಗಿ ಪರಿಸ್ಥಿತಿಯನ್ನು ಸರಿಪಡಿಸುವ ನಿಟ್ಟಿನಲ್ಲಿ ಕ್ರಿಕೆಟ್ ವ್ಯವಸ್ಥೆಯನ್ನೇ ಒಂದು ಶಿಸ್ತಿನ ಚೌಕಟ್ಟಿನೊಳಗೆ ತರಬೇಕಿದೆ. ಈ ದಿಸೆಯಲ್ಲಿ ಕ್ರಿಕೆಟ್ ಆಡಳಿತಗಾರರು ಗಂಭೀರವಾಗಿ ಯೋಚಿಸುವುದು ಒಳಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.