ಸಮಗ್ರ ತನಿಖೆಯಾಗಲಿ ರಾಜ್ಯ ಸರ್ಕಾರದ ಇಬ್ಬರು ಅಧಿಕಾರಿಗಳು, ಕೆಲವೇ ದಿನಗಳ ಅಂತರದಲ್ಲಿ ದುಷ್ಕರ್ಮಿಗಳ ಹಲ್ಲೆಗೆ ಬಲಿಯಾಗಿದ್ದು, ರಾಜ್ಯದಲ್ಲಿ ತಾಂಡವವಾಡುತ್ತಿರುವ ಭ್ರಷ್ಟ ಮತ್ತು ಕಾನೂನು ಅವ್ಯವಸ್ಥೆಗೆ ಕನ್ನಡಿ ಹಿಡಿದಿದೆ. ದಾಂಡೇಲಿಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮದನ ನಾಯಕ ತಮ್ಮ ಕರ್ತವ್ಯಪ್ರಜ್ಞೆಗೆ ಜೀವ ತೆತ್ತರೆ, ಸಹಕಾರ ಸಂಘಗಳ ಇಲಾಖೆ ಉಪನಿರ್ದೇಶಕ ಎಸ್.ಪಿ. ಮಹಾಂತೇಶ್ ನಿಗೂಢವಾಗಿ ಹತ್ಯೆಗೊಳಗಾಗಿದ್ದಾರೆ. ಮೊದಲ ಪ್ರಕರಣದಲ್ಲಿ ಕೊಲ್ಲುವ ಉದ್ದೇಶ ಇರದಿದ್ದರೂ `ಕಾನೂನುಬಾಹಿರ ಚಟುವಟಿಕೆ ಮಾಡಬೇಡಿ~ ಎಂದು ಹೇಳಿದ ಮದನ ನಾಯಕ ಮೇಲೆ ಹಲ್ಲೆ ನಡೆಸಿದವರ ಕ್ರೌರ್ಯ ಮೆರೆದಿತ್ತು. ಎರಡನೆಯದರಲ್ಲಿ ಮಹಾಂತೇಶ್ ಅವರನ್ನು ಕೊಲ್ಲುವುದೇ ಉದ್ದೇಶವಾಗಿತ್ತು. ಈ ಕೊಲೆಗೆ ಅವರು ಕೆಲವು ಗೃಹ ನಿರ್ಮಾಣ ಸಹಕಾರ ಸಂಘಗಳ ಅವ್ಯವಹಾರಗಳನ್ನು ಬಯಲಿಗೆಳೆಯಬಹುದು ಎಂಬ ಅಂಶ ಕಾರಣವೇ ಅಥವಾ ಬೇರೆ ಯಾವುದಾದರೂ ವೈಯಕ್ತಿಕ ಕಾರಣ ಇರಬಹುದೇ ಎಂಬುದು ತನಿಖೆ ನಂತರ ಗೊತ್ತಾಗಬೇಕು. ಆದರೆ ಈ ನಿಗೂಢ ಪ್ರಕರಣ ಗೃಹ ನಿರ್ಮಾಣ ಸಹಕಾರ ಸಂಘಗಳಲ್ಲಿ ದಶಕಗಳಿಂದ ನಡೆಯುತ್ತಿರುವ ಕಾನೂನುಬಾಹಿರ ವ್ಯವಹಾರಗಳ ಬಗ್ಗೆ ಸರ್ಕಾರ ಕಣ್ಣು ತೆರೆಯಲೇಬೇಕಾದ ಪರಿಸ್ಥಿತಿಯನ್ನು ನಿರ್ಮಿಸಿದೆ. ಕಳೆದ ಮೂರು ದಶಕಗಳಲ್ಲಿ ರಾಜ್ಯದಾದ್ಯಂತ ನಾಯಿಕೊಡೆಗಳಂತೆ ಹುಟ್ಟಿಕೊಂಡ ಹಲವು ಗೃಹ ನಿರ್ಮಾಣ ಸಹಕಾರ ಸಂಘಗಳು ಕೃಷಿ ಜಮೀನು ಪರಿವರ್ತನೆಯಲ್ಲಿ ಅಡ್ಡದಾರಿಯನ್ನೇ ಹಿಡಿದಿದ್ದರೂ ಯಾವ ಸರ್ಕಾರವೂ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿಲ್ಲ. ಸರ್ಕಾರ 1985 ರಲ್ಲಿ ಒಂದು ಸುತ್ತೋಲೆ ಹೊರಡಿಸಿ, `1961 ರ ಕರ್ನಾಟಕ ಭೂ ಸುಧಾರಣಾ ಕಾನೂನಿನ ಪ್ರಕಾರ ಗೃಹ ನಿರ್ಮಾಣ ಸಹಕಾರ ಸಂಘಗಳು ಕೃಷಿ ಜಮೀನು ಹೊಂದುವುದು ನಿಷಿದ್ಧ~ ಎಂದು ತಿಳಿಸಿತ್ತು. ಅಂದರೆ ಕೃಷಿ ಜಮೀನನ್ನು ಕೃಷಿಯೇತರ ಉದ್ದೇಶಗಳಿಗೆ ಪರಿವರ್ತಿಸಲು ಕಂದಾಯ ಇಲಾಖೆ ಒಪ್ಪಿಗೆ ಕೊಡುವಂತಿಲ್ಲ. ಆದರೆ ಕಳೆದ 27 ವರ್ಷಗಳಲ್ಲಿ ಯಾವ ಸರ್ಕಾರವೂ ಸಹಕಾರ ಸಂಘಗಳ ಅವ್ಯವಹಾರವನ್ನು ತಡೆಯುವ ಸಾಹಸಕ್ಕೆ ಕೈಹಾಕಿಲ್ಲ. ಸಹಕಾರ ಸಂಘಗಳಲ್ಲಿ ಬಿಲ್ಡರುಗಳ ಪ್ರವೇಶದಿಂದ ಇನ್ನಷ್ಟು ನಿಯಮಗಳನ್ನು ಗಾಳಿಗೆ ತೂರಲಾಯಿತು. ಕಾನೂನಿನ ಪ್ರಕಾರ ನೇರವಾಗಿ ಮಾಡಲಾಗದ್ದನ್ನು ಪರೋಕ್ಷವಾಗಿಯೂ ಮಾಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದ್ದರೂ ಜಮೀನು ಪರಿವರ್ತನೆ ಅವ್ಯಾಹತವಾಗಿ ಮುಂದುವರಿದಿದೆ. ರಾಜ್ಯದಲ್ಲಿ ಸರ್ಕಾರ ಸಹಕಾರ ಸಂಘಗಳಿಗಾಗಿ ವಶಪಡಿಸಿಕೊಂಡ 25 ಸಾವಿರಕ್ಕೂ ಹೆಚ್ಚು ಎಕರೆ ಜಮೀನಿನಲ್ಲಿ, ಬೆಂಗಳೂರು ಮತ್ತು ಮೈಸೂರಿನಲ್ಲೇ ಏಳೂವರೆ ಸಾವಿರ ಎಕರೆ ಜಮೀನನ್ನು ಕಾನೂನುಬಾಹಿರವಾಗಿ ಪರಿವರ್ತಿಸಲಾಗಿದೆ ಎಂದು ಭೂಮಾಫಿಯಾ ವಿರುದ್ಧ ಹೋರಾಟ ನಡೆಸಿರುವವರು ಹೇಳಿದ್ದಾರೆ. ರಾಜ್ಯದಲ್ಲಿ ಒಂದೂವರೆ ಸಾವಿರಕ್ಕೂ ಹೆಚ್ಚು ಗೃಹ ನಿರ್ಮಾಣ ಸಂಘಗಳಿದ್ದು ಏಳು ಲಕ್ಷಕ್ಕೂ ಹೆಚ್ಚು ಸದಸ್ಯರಿದ್ದಾರೆ. ಸರ್ಕಾರ ವಶಪಡಿಸಿಕೊಂಡ ಜಮೀನಿನಲ್ಲೇ ಹೆಚ್ಚಿನ ನಿವೇಶನಗಳನ್ನು ವಿತರಿಸಲಾಗಿದೆ. ಸಹಕಾರ ಸಂಘಗಳಲ್ಲಿ 3.5 ಲಕ್ಷ ಕೋಟಿ ರೂಪಾಯಿಗಳಷ್ಟು ಅವ್ಯವಹಾರ ನಡೆದಿರಬಹುದೆಂಬ ಅನುಮಾನ ಇದೆ. ಮಹಾಂತೇಶ್ ಅವರ ಸಾವಿನ ಪ್ರಕರಣದ ತನಿಖೆ ಈ ಎಲ್ಲ ಅಂಶಗಳನ್ನು ಪತ್ತೆ ಮಾಡಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.