ನಿಲ್ಲದ ಅಕ್ರಮ ಗಣಿಗಾರಿಕೆ ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಅಕ್ರಮ ಗಣಿಗಾರಿಕೆಯಿಂದ ಅಲ್ಲಿನ ಪರಿಸರಕ್ಕೆ ಆಗಿರುವ ಹಾನಿ ಅಷ್ಟಿಷ್ಟಲ್ಲ. ಹಾನಿಗೆ ಒಳಗಾದ ಪರಿಸರವನ್ನು ಸರಿಪಡಿಸುವ ಪ್ರಯತ್ನ ಆರಂಭವಾಗುವ ಮೊದಲೇ ಬಾಗಲಕೋಟೆ ಜಿಲ್ಲೆಯಲ್ಲಿ ಕೃಷ್ಣಾ ನದಿ ಪಾತ್ರದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಅದಿರು,ಕಲ್ಲು, ಮರಳು, ಮಣ್ಣು ಇತ್ಯಾದಿ ನಿಸರ್ಗದ ಸಂಪತ್ತನ್ನೆಲ್ಲ ಬಗೆದು ಮಾರಾಟ ಮಾಡುವವರನ್ನು ನಿಯಂತ್ರಿಸುವುದೇ ದೊಡ್ಡ ಸಮಸ್ಯೆ. ಈ ಬೆಳವಣಿಗೆ ದುರದೃಷ್ಟಕರ ಮಾತ್ರವಲ್ಲ ರಾಜ್ಯ ಸರ್ಕಾರದ ಕೆಟ್ಟ ಆಡಳಿತದ ಸಂಕೇತ. ನದಿ ಪಾತ್ರದಲ್ಲಿ ಗಣಿಗಾರಿಕೆ ನಡೆಸುವುದು ನಿಷಿದ್ಧ. ಆದರೆ ಆಲಮಟ್ಟಿ ಜಲಾಶಯದ ವ್ಯಾಪ್ತಿಯಲ್ಲಿ, ನದಿ ಪಾತ್ರದಲ್ಲೇ ದೊಡ್ಡ ಪ್ರಮಾಣದಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದರೂ ಅದನ್ನು ನೋಡಿಕೊಂಡು ಸುಮ್ಮನಿರುವ ಕೃಷ್ಣಾ ಜಲಭಾಗ್ಯ ನಿಗಮ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಜಿಲ್ಲಾಡಳಿತಗಳ ಹೊಣೆಗೇಡಿತನ ಅಕ್ಷಮ್ಯ. ಪ್ರತಿ ಬೇಸಿಗೆಯಲ್ಲಿ ಸಣ್ಣ ಪ್ರಮಾಣದಲ್ಲಿ ಅಲ್ಲಲ್ಲಿ ನಡೆಯುತ್ತಿದ್ದ ಕಲ್ಲು ಗಣಿಗಾರಿಕೆ ಈ ದೊಡ್ಡ ಸ್ವರೂಪ ಪಡೆದುಕೊಂಡಿದೆ. ಗಣಿಗಾರಿಕೆ ನಡೆಯುತ್ತಿರುವ ಪ್ರದೇಶದ ಸಮೀಪದಲ್ಲಿ ಸೇತುವೆ ನಿರ್ಮಾಣದ ಗುತ್ತಿಗೆ ಹಿಡಿದ ವ್ಯಕ್ತಿಯೊಬ್ಬರು ಜೆಸಿಬಿ ಹಾಗೂ ಕ್ರೇನ್‌ಗಳನ್ನು ಬಳಸಿ ಕಲ್ಲು ಗಣಿಗಾರಿಕೆ ಮಾಡುತ್ತಿದ್ದಾರೆ. ಇದರಿಂದ ಸಮೀಪದ ಪಾರ್ವತಿ ಕಟ್ಟೆ ಸೇತುವೆ ಹಾಗೂ ರೈಲ್ವೆ ಸೇತುವೆಗೆ ಹಾನಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಅಕ್ರಮವನ್ನು ತಡೆಯುವ ವಿಷಯದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ನಿರಾಸಕ್ತಿ ನೋಡಿದರೆ ಅವರು ಈ ಅವ್ಯವಹಾರದಲ್ಲಿ ಶಾಮೀಲಾಗಿರಬಹುದು ಎಂಬ ಅನುಮಾನ ಬರುತ್ತದೆ. ನದಿ ಪಾತ್ರ ಹಾಗೂ ಜಲಾಶಯದ ಸುತ್ತಮುತ್ತ ಗಣಿಗಾರಿಕೆಗೆ ಅವಕಾಶ ಕೊಟ್ಟರೆ ಏನಾಗುತ್ತದೆ ಎಂಬುದಕ್ಕೆ ತುಂಗಭದ್ರಾ ಜಲಾಶಯ ದೊಡ್ಡ ಉದಾಹರಣೆ. ಮೂರ್ನಾಲ್ಕು ದಶಕಗಳಿಂದ ನಡೆಯುತ್ತಿರುವ ಗಣಿಗಾರಿಕೆಯಿಂದ ಸುಮಾರು 30 ಟಿಎಂಸಿ ಅಡಿಗಳಷ್ಟು ನೀರಿನ ಸಂಗ್ರಹ ಸಾಮರ್ಥ್ಯ ಕುಗ್ಗಿಸುವಷ್ಟು ಹೂಳು ಜಲಾಶಯಕ್ಕೆ ಬಂದು ಸೇರಿದೆ. ಅದೇನೇ ಇರಲಿ, ಅಕ್ರಮ ಗಣಿಗಾರಿಕೆಯನ್ನು ತಡೆಯುವುದು ಸರ್ಕಾರದ ಕೆಲಸವೇ ಆದರೂ ಸ್ಥಳೀಯರು ಮತ್ತು ಚುನಾಯಿತ ಪ್ರತಿನಿಧಿಗಳು ಸಕಾಲದಲ್ಲಿ ಅದನ್ನು ಸರ್ಕಾರದ ಗಮನಕ್ಕೆ ತರುವ ವಿಷಯದಲ್ಲಿ ವಿಫಲರಾಗಿದ್ದಾರೆ. ಕಲ್ಲು ಗಣಿಗಾರಿಕೆಯಿಂದ ಸಮೀಪದಲ್ಲೇ ಇರುವ ಸೇತುವೆ ಹಾಗೂ ನವೋದಯ ಶಾಲಾ ಕಟ್ಟಡಕ್ಕೆ ಹೆಚ್ಚಿನ ಹಾನಿಯಾಗುತ್ತಿದೆ ಎನ್ನುವುದು ಗೊತ್ತಾದ ಮೇಲೂ ಸ್ಥಳೀಯರು ಸರ್ಕಾರಕ್ಕೆ ದೂರು ನೀಡಲು ಹಿಂಜರಿಯುತ್ತಿದ್ದಾರೆಂದರೆ ಗಣಿಗಾರಿಕೆಯಲ್ಲಿ ತೊಡಗಿರುವ ವ್ಯಕ್ತಿ ಪ್ರಭಾವಶಾಲಿಯಾಗಿರಬಹುದು. ಅಕ್ರಮ ಕಲ್ಲು ಗಣಿಗಾರಿಕೆ ಕುರಿತು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ ಎಂಬ ಕೃಷ್ಣ ಜಲ ನಿಗಮದ ಅಧಿಕಾರಿಗಳ ಹೇಳಿಕೆಯೂ ಹೊಣೆಗೇಡಿತನದ್ದು. ಗಣಿಗಾರಿಕೆ ತಡೆಯುವುದು ತಮ್ಮ ಕರ್ತವ್ಯ ಎಂಬುದನ್ನು ಅವರು ಮರೆತಿದ್ದಾರೆ. ನದಿ ಪಾತ್ರದಲ್ಲಿ ಸಿಗುವ ಕಲ್ಲುಗಳ ಗುಣಮಟ್ಟ ಪರೀಕ್ಷಿಸದೆ ಸೇತುವೆ ನಿರ್ಮಾಣಕ್ಕೆ ಬಳಸಲಾಗುತ್ತಿದೆ ಎಂಬ ಮಾತು ಕೇಳಿ ಬಂದಿದೆ. ಈ ಕುರಿತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಗಮನ ಹರಿಸಬೇಕು. ನದಿ ಪಾತ್ರದಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಗೆ ಕಡಿವಾಣ ಹಾಕದಿದ್ದರೆ ನದಿ ಪರಿಸರ ಹಾಳಾಗುತ್ತದೆ. ಸರ್ಕಾರ ಅದಕ್ಕೆ ಅವಕಾಶ ಕೊಡಬಾರದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.