ದಿಕ್ಸೂಚಿ ಫಲಿತಾಂಶ ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಮತದಾರರು ತಮ್ಮ ರಾಜಕೀಯ ಪ್ರಜ್ಞಾವಂತಿಕೆಯನ್ನು ಮೆರೆದಿದ್ದಾರೆ. ಎಲ್ಲ ರಾಜಕೀಯ ಪಕ್ಷಗಳ ಒಕ್ಕೊರಲಿನ ವಿರೋಧವನ್ನು ದಿಟ್ಟತನದಿಂದ ಎದುರಿಸಿ ಯಶಸ್ವಿಯಾಗಿ ಚುನಾವಣೆ ನಡೆಸಿದ ರಾಜ್ಯ ಚುನಾವಣಾ ಆಯೋಗಕ್ಕೆ ಮೊದಲ ಅಭಿನಂದನೆ ಸಲ್ಲಬೇಕು. ಗ್ರಾಮೀಣ ಪ್ರದೇಶಗಳಿಗೆ ಹೋಲಿಸಿದರೆ ನಗರ, ಪಟ್ಟಣ ಪ್ರದೇಶಗಳಲ್ಲಿರುವ ಮತದಾರರು ಹೆಚ್ಚು ಶಿಕ್ಷಿತರು ಮತ್ತು ರಾಜಕೀಯವಾಗಿ ಪ್ರಜ್ಞಾವಂತರಾಗಿರುತ್ತಾರೆ. ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಯುವಜನರು ಪಟ್ಟಣದಲ್ಲಿ ನೆಲೆಸಿರುವುದರಿಂದ ಮತದಾರರಲ್ಲಿ ಈ ವರ್ಗದ ಪ್ರಾತಿನಿಧ್ಯ ಹೆಚ್ಚಿರುತ್ತದೆ ಎನ್ನುವುದನ್ನೂ ಗಮನಿಸಬೇಕಾಗುತ್ತದೆ. ಆದುದರಿಂದ ಕಡಿಮೆ ಸಂಖ್ಯೆಯ ಮತದಾರರು ಮಾತ್ರ ಚುನಾವಣೆಯಲ್ಲಿ ಭಾಗವಹಿಸಿದ್ದರೂ ಶಿಕ್ಷಿತ, ಪ್ರಜ್ಞಾವಂತ ಮತ್ತು ಯುವಜನತೆಯನ್ನೊಳಗೊಂಡ ಈ ಗುಂಪಿನ ರಾಜಕೀಯ ಅಭಿಪ್ರಾಯವನ್ನು ಕಡೆಗಣಿಸುವಂತಿಲ್ಲ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಥಳೀಯ ವಿಷಯಗಳೇ ಪ್ರಧಾನ ಪಾತ್ರ ವಹಿಸುವುದಿದ್ದರೂ ಮತದಾರರು ರಾಜಕೀಯ ಪಕ್ಷಗಳನ್ನು ಸಂಪೂರ್ಣವಾಗಿ ಮರೆತು ಮತ ಚಲಾಯಿಸುತ್ತಾರೆ ಎಂದು ಹೇಳಲಾಗುವುದಿಲ್ಲ. ಭ್ರಷ್ಟಾಚಾರದ ಆರೋಪಗಳು ಮತ್ತು ಒಳಜಗಳದಿಂದ ರೇಜಿಗೆ ಹುಟ್ಟಿಸಿದ್ದ ಬಿಜೆಪಿಗೆ ಮತದಾರರು ತಕ್ಕ ಪಾಠ ಕಲಿಸಿದ್ದಾರೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿನ ಕೋಮುವಾದಿ ರಾಜಕಾರಣ ಮತ್ತು ಬಳ್ಳಾರಿ ಜಿಲ್ಲೆಯ ಅಕ್ರಮ ಗಣಿಗಾರಿಕೆಯ ದುಡ್ಡಿನ ರಾಜಕಾರಣವನ್ನು ಮತದಾರರು ತಿರಸ್ಕರಿಸಿರುವುದು ಆಶಾದಾಯಕವಾದ ಬೆಳವಣಿಗೆ. ಕಾಂಗ್ರೆಸ್ ಪಕ್ಷದ ಗೆಲುವು ಹೆಚ್ಚುಕಡಿಮೆ ನಿರೀಕ್ಷಿತವಾಗಿದ್ದೂ ಕಾಂಗ್ರೆಸ್ ತನ್ನ ಪರವಾಗಿರುವ ಮತಗಳಿಗಿಂತಲೂ ಹೆಚ್ಚಾಗಿ ಬಿಜೆಪಿ ವಿರೋಧಿ ಮತಗಳ ಬೆಂಬಲದಿಂದಲೇ ಗೆದ್ದುಬಂದಿದೆ ಎಂಬ ವ್ಯಾಖ್ಯಾನವನ್ನು ಕೂಡಾ ತಳ್ಳಿಹಾಕಲಾಗದು. ಬಿಜೆಪಿ ವಿರುದ್ಧ ಬಂಡೆದ್ದು ಸ್ವಂತ ಪಕ್ಷ ಸ್ಥಾಪಿಸಿದ್ದ ಬಿ.ಎಸ್.ಯಡಿಯೂರಪ್ಪನವರಿಗೆ ಈ ಫಲಿತಾಂಶ ಮುಖಭಂಗವನ್ನುಂಟು ಮಾಡಿದೆ. ಹೇಳಿಕೊಂಡಿದ್ದಷ್ಟನ್ನು ಮಾಡಿತೋರಿಸಲು ಅವರಿಗೆ ಆಗಿಲ್ಲ. ವಿಧಾನಸಭಾ ಚುನಾವಣೆಯ ನಂತರ ತಾನೇ ಅಧಿಕಾರಕ್ಕೆ ಬರುವುದಾಗಿ ಹೇಳಿಕೊಂಡಿದ್ದ ಅವರಿಗೆ ಸ್ವಂತ ಜಿಲ್ಲೆಯಾದ ಶಿವಮೊಗ್ಗದಲ್ಲಿಯೇ ತನ್ನ ಪಕ್ಷವನ್ನು ಅಧಿಕಾರಕ್ಕೆ ತರಲಾಗಿಲ್ಲ. ಆದರೆ ಬಿಜೆಪಿ ಪ್ರಾಬಲ್ಯ ಇದ್ದ ಕಡೆಗಳಲ್ಲಿ ಆ ಪಕ್ಷದ ಅಭ್ಯರ್ಥಿಗಳ ಸೋಲಿಗೆ ಕೆಜೆಪಿ ಕಾರಣವಾಗಿದೆ. ಈ ಸೇಡಿನ ರಾಜಕಾರಣ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿಯೂ ಬಿಜೆಪಿಗೆ ಹಾನಿ ಉಂಟುಮಾಡಬಹುದು. 2007ರಲ್ಲಿ ನಡೆದಿದ್ದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಮನಾಗಿ ಸ್ಥಾನಗಳನ್ನು ಗೆದ್ದಿದ್ದ ಜೆಡಿ (ಎಸ್)ಗೆ ಆ ಗೆಲುವಿನ ಮಟ್ಟವನ್ನು ಉಳಿಸಿಕೊಳ್ಳಲಾಗಿಲ್ಲ ಎನ್ನುವುದು ನಿಜ. ಆದರೆ ಆಡಳಿತಾರೂಢ ಬಿಜೆಪಿಗೆ ಸಮನಾಗಿ ಸ್ಥಾನಗಳನ್ನು ಗಳಿಸುವ ಮೂಲಕ ರಾಜ್ಯ ರಾಜಕಾರಣದಲ್ಲಿ ಯಾರೂ ತನ್ನನ್ನು ಕಡೆಗಣಿಸುವಂತಿಲ್ಲ ಎಂಬ ಸಂದೇಶವನ್ನು ಜೆಡಿ(ಎಸ್) ನೀಡಿದೆ. ದಲಿತ,ಹಿಂದುಳಿದ ಜಾತಿ ಮತ್ತು ಅಲ್ಪಸಂಖ್ಯಾತರ ಪಕ್ಷ ಎಂದು ಬಿಂಬಿಸುತ್ತಾ ರಾಜಕೀಯ ನೆಲೆ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದ ಬಿಎಸ್‌ಆರ್ ಕಾಂಗ್ರೆಸ್ ಸ್ವಂತ ಜಿಲ್ಲೆಯಲ್ಲಿಯೇ ದೂಳೀಪಟವಾಗಿದೆ. ಶೇಕಡಾ 20ರಷ್ಟು ಮತದಾರರು ಮಾತ್ರ ಭಾಗವಹಿಸಿದ್ದ ಈ ಚುನಾವಣೆಯ ಫಲಿತಾಂಶ ರಾಜಕೀಯ ಪಕ್ಷಗಳ ಬಗೆಗಿನ ಸ್ಪಷ್ಟವಾದ ಜನಮತ ಎಂದು ಹೇಳಲಾಗದಿದ್ದರೂ ಭವಿಷ್ಯದ ರಾಜಕೀಯದ ದಾರಿಗೆ ದಿಕ್ಸೂಚಿ ಎನ್ನುವುದರಲ್ಲಿ ಅನುಮಾನ ಇಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.