ದುಷ್ಟರಿಂದ ಕಾಡು ರಕ್ಷಿಸಿ ರಾಜ್ಯದ ವಿವಿಧ ಅರಣ್ಯಗಳಲ್ಲಿ ಕಳೆದ ಫೆಬ್ರುವರಿಯಲ್ಲಿ ಸಂಭವಿಸಿದ ಸರಣಿ ಕಾಳ್ಗಿಚ್ಚಿನ ಪ್ರಕರಣಗಳು ಆಕಸ್ಮಿಕ ಅಲ್ಲ ಎಂಬ ಸಂಗತಿಯೇ ಆಘಾತಕಾರಿ. ಈ ಕುರಿತು ತನಿಖೆ ನಡೆಸಿರುವ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿ ಬಿ.ಕೆ. ಸಿಂಗ್ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಅರಣ್ಯಗಳ ವ್ಯಾಪ್ತಿಯಲ್ಲಿ ವಾಸ ಮಾಡುವ ಜನರೇ ಕಾಡಿಗೆ ಬೆಂಕಿ ಹಚ್ಚಿದರೆಂಬ ಸಂಗತಿಯನ್ನು ಬಹಿರಂಗಗೊಳಿಸಿದ್ದಾರೆ. ತಮ್ಮ ಬೇಸಾಯದ ಭೂಮಿ ವಿಸ್ತರಿಸಿಕೊಳ್ಳಲು ಕಾಡಿಗೆ ಬೆಂಕಿ ಹಚ್ಚುವುದು ದುಷ್ಟತನ ಮಾತ್ರವಲ್ಲ ಖಂಡನೀಯ. ನಾಗರಹೊಳೆ ನಾಲ್ಕನೇ ವಲಯದಲ್ಲಿ ಬುಡಕಟ್ಟು ಜನಾಂಗಗಳ ಕೆಲ ಮುಖಂಡರು ಮತ್ತು ಕೆಲವು ಎನ್‌ಜಿಒಗಳ ಚಿತಾವಣೆಯಿಂದ ಸ್ಥಳೀಯರೇ ಕಾಡಿಗೆ ಬೆಂಕಿ ಹಚ್ಚಿದ್ದಾರೆ ಎಂದು ಸಿಂಗ್ ವರದಿಯಲ್ಲಿ ಹೇಳಿದ್ದಾರೆ. ಅರಣ್ಯ ಸಂರಕ್ಷಣೆ ಮಾಡಬೇಕಾದವರೇ ಅದರ ನಾಶಕ್ಕೆ ಕೈಹಾಕುವುದೆಂದರೆ `ಬೇಲಿಯೇ ಎದ್ದು ಹೊಲ ಮೇಯ್ದಂತೆ~. ಅದು ಅಕ್ಷಮ್ಯ ಅಪರಾಧ. ಬುಡಕಟ್ಟು ಜನರು ತಮ್ಮ ಸಮಸ್ಯೆಗಳನ್ನು ಸರ್ಕಾರದ ಅಥವಾ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ಮಾತುಕತೆಗಳ ಮೂಲಕ ಬಗೆಹರಿಸಿಕೊಳ್ಳಬೇಕೇ ಹೊರತು ಕಾಡಿಗೆ ಬೆಂಕಿ ಹಚ್ಚುವಂತಹ ಅತೀರೇಕದ ಕ್ರಮಗಳಿಗೆ ಮುಂದಾಗಬಾರದು. ಚಿತಾವಣೆ ಮಾಡಿದವರನ್ನು ಸರ್ಕಾರ ಪತ್ತೆ ಹಚ್ಚಿ ಅವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗದಿದ್ದರೆ ಕಾಡು ಉಳಿಯುವುದಿಲ್ಲ. ಮೈಸೂರು, ಚಾಮರಾಜನಗರ, ಶಿವಮೊಗ್ಗ, ಚಿಕ್ಕಮಗಳೂರು ಮತ್ತಿತರ ಜಿಲ್ಲೆಗಳ 3,624 ಹೆಕ್ಟೇರ್ ಪ್ರದೇಶದಲ್ಲಿ ಕಾಳ್ಗಿಚ್ಚು ಕಾಣಿಸಿಕೊಂಡಿತ್ತು. ನಾಗರಹೊಳೆ ರಾಷ್ಟ್ರೀಯ ಅರಣ್ಯ ವ್ಯಾಪ್ತಿಯಲ್ಲಿ 460 ಹೆಕ್ಟೇರ್ ಅರಣ್ಯ ಹೊರತುಪಡಿಸಿ ಉಳಿದೆಡೆ ಕಾಳ್ಗಿಚ್ಚಿನಿಂದ ಸಸ್ಯ ಹಾಗೂ ಪ್ರಾಣಿಸಂಕುಲಕ್ಕೆ ಹೆಚ್ಚಿನ ಹಾನಿಯಾಗಿಲ್ಲ ಎಂದು ವರದಿ ಹೇಳಿದೆ. ಅದೇನೇ ಇರಲಿ 460 ಹೆಕ್ಟೇರ್ ಪ್ರದೇಶದ ಕಾಡು ಮತ್ತು ಪ್ರಾಣಿ ಹಾಗೂ ಕೀಟ ಸಂಕುಲ ನಾಶವಾದದ್ದು ದೊಡ್ಡ ಹಾನಿ. ಅದಕ್ಕೆ ಕಾರಣರಾದವರಿಗೆ ಕ್ಷಮೆಯೇ ಇಲ್ಲ. ಅರಣ್ಯ ಪ್ರದೇಶದಲ್ಲಿ ವಾಸ ಮಾಡುವ ಜನರು ತಮ್ಮ ಬೇಸಾಯದ ಭೂಮಿಗೆ ಹೊಂದಿಕೊಂಡ ಪ್ರದೇಶದಲ್ಲಿ ಬೆಳೆದ ಹುಲ್ಲು ಹಾಗೂ ಕುರುಚಲು ಗಿಡ,ಗಂಟೆಗಳಿಗೆ ಬೇಸಿಗೆಯಲ್ಲಿ ಬೆಂಕಿ ಹಾಕುವ ಪ್ರವೃತ್ತಿ ದೊಡ್ಡ ಪ್ರಮಾಣದ ಕಾಳ್ಗಿಚ್ಚಿಗೆ ಕಾರಣವಾಗುತ್ತಿದೆ. ಕೆಲವು ಬುಡಕಟ್ಟು ಜನರಿಗೆ ಅರಣ್ಯ ಇಲಾಖೆಯ ಮೇಲೆ ದ್ವೇಷದ ಭಾವನೆಗಳಿವೆ. ಶರಾವತಿ ಯೋಜನೆಯಿಂದ ನೆಲೆ ಕಳೆದುಕೊಂಡವರು ಶಿವಮೊಗ್ಗ ಜಿಲ್ಲೆಯ ಅರಣ್ಯ ಪ್ರದೇಶದ ಹಳ್ಳಿಗಳಲ್ಲಿರುವ ಭೂಮಿ ಒತ್ತುವರಿ ಮಾಡಿಕೊಳ್ಳಲು ಮತ್ತು ಮಂಗನ ಕಾಯಲೆ ನಿಯಂತ್ರಣದ ನೆಪದಲ್ಲಿ ಕಾಡಿಗೆ ಬೆಂಕಿ ಹಚ್ಚಿದರೆಂದು ಬಿ.ಕೆ. ಸಿಂಗ್ ವರದಿಯಲ್ಲಿ ಹೇಳಿದ್ದಾರೆ. ಈ ವರದಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಅರಣ್ಯ ಪ್ರದೇಶದ ಹಳ್ಳಿಗಳ ಜನರ ಸಮಸ್ಯೆಗಳನ್ನು ಬಗೆಹರಿಸಲು ತುರ್ತು ಕ್ರಮ ತೆಗೆದುಕೊಳ್ಳಬೇಕು. ಕಾರಣವೇ ಇಲ್ಲದೆ ಕಾಡಿಗೆ ಬೆಂಕಿ ಹಚ್ಚುವ ತಿಕ್ಕಲು ಜನರನ್ನು ಬಂಧಿಸಿದರೆ ಉಳಿದವರು ತಂತಾನೆ ದಾರಿಗೆ ಬರುತ್ತಾರೆ. ಕಾಳ್ಗಿಚ್ಚಿಗೆ ಕಾರಣವಾದ ಸಂಗತಿಗಳನ್ನು ಲಘುವಾಗಿ ಕಾರಣಬಾರದು. ಸರ್ಕಾರ ಜನರ ಸಹಕಾರದಿಂದ ಕಾಡನ್ನು ರಕ್ಷಣೆ ಮಾಡಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.