ಲಂಚ: ತ್ವರಿತ ವಿಚಾರಣೆಯಾಗಲಿ ಭ್ರಷ್ಟಾಚಾರ ಪ್ರಕರಣಗಳ ತನಿಖೆ ಮತ್ತು ವಿಚಾರಣಾ ವ್ಯವಸ್ಥೆ ವಿಳಂಬರೋಗದಿಂದ ನರಳುತ್ತಿದೆ. ಬಿಜೆಪಿ ಮಾಜಿ ಅಧ್ಯಕ್ಷ ಬಂಗಾರು ಲಕ್ಷ್ಮಣ್ ಮತ್ತು ದೆಹಲಿಯ ಮ್ಯೋಜಿಸ್ಟ್ರೇಟ್ ಕೋರ್ಟೊಂದರಲ್ಲಿ ನ್ಯಾಯಾಧೀಶರಾಗಿದ್ದ ಗುಲಾಬ್ ತುಳಸಿಯಾನಿ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳೇ ಇದಕ್ಕೆ ಸಾಕ್ಷಿ. ಒಂದು ಲಕ್ಷ ರೂಪಾಯಿ ಲಂಚ ಪಡೆದ ಬಂಗಾರು ಲಕ್ಷ್ಮಣ್ ಪ್ರಕರಣದಲ್ಲಿ ಹನ್ನೊಂದು ವರ್ಷಗಳ ನಂತರ, ಹಾಗೆಯೇ ಎರಡು ಸಾವಿರ ರೂಪಾಯಿ ಲಂಚ ಪಡೆದ ತುಳಸಿಯಾನಿ ಪ್ರಕರಣದಲ್ಲಿ 26 ವರ್ಷಗಳ ನಂತರ ತೀರ್ಪು ಹೊರಬಿದ್ದಿದೆ. ಇದು ಮೊದಲ ಹಂತ ಅಷ್ಟೆ. ಆರೋಪಿಗಳು ಉನ್ನತ ಕೋರ್ಟುಗಳಿಗೆ ಹೋಗುವ ಅವಕಾಶ ಇರುವುದರಿಂದ ಅಂತಿಮ ತೀರ್ಪು ಹೊರಬೀಳಲು ಇನ್ನೂ ಎಷ್ಟು ವರ್ಷ ಹಿಡಿಯುತ್ತದೋ ಹೇಳಲಾಗದು. ಈ ಪರಿಸ್ಥಿತಿಯನ್ನು ನೋಡಿದರೆ ಭ್ರಷ್ಟಾಚಾರ ಪ್ರಕರಣಗಳ ವಿಚಾರಣಾ ವ್ಯವಸ್ಥೆಯ ಬಗ್ಗೆಯೇ ವಿಶ್ವಾಸ ಹೋಗುತ್ತದೆ. ಭ್ರಷ್ಟಾಚಾರ ದೇಶದಲ್ಲಿ ಕ್ಯಾನ್ಸರ್‌ನಂತೆ ಎಲ್ಲ ಕ್ಷೇತ್ರಗಳಿಗೂ ಹಬ್ಬುತ್ತಿದೆ. ಏನು ಮಾಡಿದರೂ ನಡೆಯುತ್ತದೆ ಎನ್ನುವ ಮನೋಭಾವ ಮತ್ತು ಜನರ ಅಸಡ್ಡೆ ಭ್ರಷ್ಟಾಚಾರ ಹೆಚ್ಚಲು ಕಾರಣ. ಅಕ್ರಮ ಮಾರ್ಗದಲ್ಲಿ ನಡೆಯದಿದ್ದರೆ ಯಾವ ಕೆಲಸವೂ ಆಗುವುದಿಲ್ಲ ಮತ್ತು ನ್ಯಾಯವಾಗಿ ಆಗಬೇಕಾದ ಕೆಲಸಕ್ಕೂ ಅನಿವಾರ್ಯವಾಗಿ ಲಂಚ ಕೊಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬಂಗಾರು ಲಕ್ಷ್ಮಣ್ ಪ್ರಕರಣದ ತೀರ್ಪು ನೀಡುವಾಗ ನ್ಯಾಯಾಧೀಶರು ಹೇಳಿರುವ ಅಭಿಪ್ರಾಯಗಳು ಸರಿಯಾಗಿಯೇ ಇವೆ. ಪರಿಸ್ಥಿತಿ ಸುಧಾರಿಸಲು ಇರುವ ಒಂದೇ ಮಾರ್ಗ ಭ್ರಷ್ಟಾಚಾರ ಪ್ರಕರಣಗಳ ವಿಚಾರಣೆ ಮತ್ತು ತೀರ್ಪುಕೊಡುವ ವ್ಯವಸ್ಥೆಯಲ್ಲಿನ ವಿಳಂಬವನ್ನು ತಪ್ಪಿಸುವುದು. ಇಂಥ ಪ್ರಕರಣಗಳಲ್ಲಿ ಬೇಗ ತನಿಖೆ, ವಿಚಾರಣೆ ಮುಗಿದು ಅಪರಾಧಿಗಳಿಗೆ ಶಿಕ್ಷೆಯಾದರೆ ಭ್ರಷ್ಟಾಚಾರ ಕಡಿಮೆಯಾಗಲು ಸಹಾಯಕವಾದೀತು. ಭ್ರಷ್ಟಾಚಾರದ ಹಗರಣಗಳನ್ನು ಮುಂದಿಟ್ಟುಕೊಂಡು ಕೇಂದ್ರದಲ್ಲಿನ ಕಾಂಗ್ರೆಸ್ ನೇತೃತ್ವದ ಸರ್ಕಾರದ ವಿರುದ್ಧ ಯುದ್ಧ ಸಾರಿರುವ ಬಿಜೆಪಿಗೆ ಬಂಗಾರು ಲಕ್ಷಣ್ ವಿರುದ್ಧದ ಲಂಚ ಪ್ರಕರಣದ ತೀರ್ಪು ಆಘಾತವನ್ನೇ ಉಂಟುಮಾಡಿದೆ. ತಮ್ಮದು ಭಿನ್ನ ಮತ್ತು ಸ್ವಚ್ಛವಾದ ಪಕ್ಷ ಎಂದು ಹೇಳುತ್ತಿದ್ದ ಬಿಜೆಪಿ ನಾಯಕರ ಬಣ್ಣ ಬಯಲಾಗಿದೆ. ಹೀಗೆಂದ ಮಾತ್ರಕ್ಕೆ ಕಾಂಗ್ರೆಸ್ ನಾಯಕರು ಶುದ್ಧರೆಂದಲ್ಲ. ಲಕ್ಷ ಲಕ್ಷ ಕೋಟಿ ರೂಪಾಯಿಗಳ ಹಗರಣಗಳು ಆ ಪಕ್ಷದ ನಾಯಕರನ್ನು ಕಿತ್ತು ತಿನ್ನುತ್ತಿವೆ. ಬೊಫೋರ್ಸ್ ಹಗರಣ 25 ವರ್ಷಗಳ ನಂತರವೂ ಆ ಪಕ್ಷವನ್ನು ಕಾಡುತ್ತಿದೆ. ಬಂಗಾರು ಲಕ್ಷ್ಮಣ್ ಹಗರಣದಲ್ಲಿ ಬಂದಿರುವ ತೀರ್ಪು ಭ್ರಷ್ಟಾಚಾರದಿಂದ ಕೊಳೆಯುತ್ತಿರುವ ಇಡೀ ವ್ಯವಸ್ಥೆಯ ಸಂಕೇತ ಅಷ್ಟೇ. ವಿಪರ್ಯಾಸವೆಂದರೆ ಭ್ರಷ್ಟಾಚಾರದ ವಿರುದ್ಧ ಮಾತನಾಡುವ ರಾಜಕಾರಣಿಗಳೇ ಅದರ ವಿರುದ್ಧ ಹೋರಾಡುವವರ ಮೇಲೆ ಕ್ರಮ ತೆಗೆದುಕೊಂಡ ಉದಾಹರಣೆಗಳಿವೆ. ಬಂಗಾರು ಲಕ್ಷಣ್ ಪ್ರಕರಣವೇ ಇದಕ್ಕೆ ಉತ್ತಮ ನಿದರ್ಶನ. ಈ ಪ್ರಕರಣದಲ್ಲಿ ಭ್ರಷ್ಟಾಚಾರ ಬಯಲಿಗೆ ತಂದ `ತೆಹಲ್ಕಾ ಡಾಟ್‌ಕಾಂ~ ಆನ್‌ಲೈನ್ ಜಾಲ ತಾಣದ ಪತ್ರಕರ್ತರು ಮತ್ತು ಅದನ್ನು ಪ್ರಕಟಿಸುತ್ತಿದ್ದ ಸಂಸ್ಥೆಯ ವಿರುದ್ಧವೇ ಆಗಿನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಕ್ರಮ ತೆಗೆದುಕೊಂಡದ್ದು ಈಗ ಇತಿಹಾಸ. ಬಂಗಾರು ಲಕ್ಷ್ಮಣ್ ಪ್ರಕರಣದ ತೀರ್ಪು ಭ್ರಷ್ಟಾಚಾರವನ್ನು ಬಯಲಿಗೆಳೆಯುತ್ತಿರುವ ಜನಪರ ಮಾಧ್ಯಮ ಸಂಸ್ಥೆಗಳಿಗೆ ಮತ್ತು ಪತ್ರಕರ್ತರಿಗೆ ಸಿಕ್ಕ ದೊಡ್ಡ ಗೌರವವೇ ಆಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.