ಕ್ರೀಡಾರಂಗಕ್ಕೆ ಸಂದ ಮನ್ನಣೆ ಸಚಿನ್ ತೆಂಡೂಲ್ಕರ್ ಅವರನ್ನು ರಾಜ್ಯಸಭೆಗೆ ನಾಮಕರಣ ಮಾಡಿರುವ ಯುಪಿಎ ಸರ್ಕಾರದ ನಿರ್ಧಾರ ವಿವಾದಕ್ಕೆ ಆಸ್ಪದ ಕೊಟ್ಟಿರುವುದು ವಿಷಾದಕರ. ಕ್ರಿಕೆಟ್ ಜಗತ್ತು ಕಂಡಿರುವ ಅದ್ಭುತ ಪ್ರತಿಭೆ ಸಚಿನ್ ಎಂಬುದು ನಿರ್ವಿವಾದ. ಇಂತಹ ಪ್ರತಿಭಾವಂತನನ್ನು ರಾಜ್ಯಸಭೆಗೆ ಕರೆದುಕೊಂಡಿರುವುದು ಕ್ರೀಡಾರಂಗಕ್ಕೆ ನೀಡಿದ ಮನ್ನಣೆ. ಸ್ವಾತಂತ್ರ್ಯಾನಂತರ ಈವರೆಗೆ ರಾಜ್ಯಸಭೆಗೆ ಸಾಹಿತಿಗಳು, ಉದ್ಯಮಿಗಳು, ಚಿತ್ರ ಕಲಾವಿದರು, ಸಂಗೀತಗಾರರು ಸೇರಿದಂತೆ ವಿಭಿನ್ನ ಕ್ಷೇತ್ರಗಳ ಸಾಧಕರನ್ನು ನಾಮಕರಣ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಕ್ರೀಡಾ ಕ್ಷೇತ್ರಕ್ಕೆ ಸೇರಿದವರೊಬ್ಬರು ಈ ಪಟ್ಟಿಗೆ ಸೇರಿದ್ದಾರೆ. ಹಿಂದೆಲ್ಲಾ ಇಲ್ಲದ ಅಪಸ್ವರ ಈಗ ಏಕೆ? ಸಮಸ್ತ ಕ್ರೀಡಾಪಟುಗಳು ಹೆಮ್ಮೆ ಪಡಬೇಕಾದ ಸಂಗತಿ ಇದು. ಹಿರಿಯರ ಮನೆಯಲ್ಲಿ ಈ ಕಿರಿಯನಿಗೇನು ಕೆಲಸ ಎನ್ನುವವರು ಹಿಂದೆ ನಾಮಕರಣಗೊಂಡಿದ್ದ ಬಹಳಷ್ಟು ಗಣ್ಯ ಹಿರಿಯರಲ್ಲಿ ಹಲವರು ಏನು ಮಾಡಿದ್ದರು ಎಂದೂ ಪ್ರಶ್ನಿಸಿಕೊಳ್ಳಬೇಕು. ಕೇಂದ್ರದ ಈ ನಿರ್ಧಾರವನ್ನು ಶಿವಸೇನೆಯ ಬಾಳಾ ಠಾಕ್ರೆ ಟೀಕಿಸಿದ್ದಾರೆ. ಪ್ರತಿಯೊಂದರಲ್ಲಿಯೂ ರಾಜಕಾರಣವನ್ನೇ ಕಾಣುವವರು ಇಂತಹ ನಿರ್ಧಾರಗಳಲ್ಲಿಯೂ ರಾಜಕೀಯವನ್ನೇ ಹುಡುಕುತ್ತಾರಷ್ಟೆ. ಸಚಿನ್ ದೇಶದ ಜನಪ್ರಿಯ ಆಟಗಾರ. ಆತನ ಜನಪ್ರಿಯತೆಯನ್ನು ಆಡಳಿತ ಪಕ್ಷ ಬಂಡವಾಳ ಮಾಡಿಕೊಳ್ಳಲೆತ್ನಿಸಿದೆ ಎನ್ನುವವರೂ ಆತ ಅಸಮರ್ಥ ಎನ್ನುವಂತಿಲ್ಲ. ಇಂತಹದೊಂದು ರಾಜಕೀಯ ನಿರ್ಧಾರದಿಂದ ಸಚಿನ್ ಕಾಂಗ್ರೆಸ್ ಪಕ್ಷದ ಬೆಂಬಲಿಗೆ ಎನ್ನುವುದೂ ತಪ್ಪಾಗುತ್ತದೆ. ಸೋನಿಯಾ ಗಾಂಧಿಯವರನ್ನು ಸಚಿನ್ ಭೇಟಿಯಾಗಿರುವುದಕ್ಕೆ ವಿಶೇಷ ಅರ್ಥಗಳನ್ನು ಕಲ್ಪಿಸುವ ಅಗತ್ಯವಿಲ್ಲ. ಹಿಂದೆ ಆರ್.ಕೆ.ನಾರಾಯಣ್ ಅವರಂತಹ ಖ್ಯಾತ ಸಾಹಿತಿಗಳೂ ರಾಜ್ಯಸಭೆಯಲ್ಲಿ ತಮ್ಮತನವನ್ನು ಉಳಿಸಿಕೊಂಡಿದ್ದನ್ನು ಮರೆಯುವಂತಿಲ್ಲ. 250 ಸದಸ್ಯರಿರುವ ರಾಜ್ಯಸಭೆಗೆ ವಿಭಿನ್ನ ಕ್ಷೇತ್ರಗಳಲ್ಲಿ ಮಹೋನ್ನತ ಸಾಧನೆ ಮಾಡಿರುವ 12 ಮಂದಿಯನ್ನು ನಾಮಕರಣ ಮಾಡುವುದು ಸಂಪ್ರದಾಯ. ಹೀಗಾಗಿ ಹಿಂದೆ ಚಿತ್ರರಂಗದ ನರ್ಗಿಸ್ ದತ್, ಲತಾ ಮಂಗೇಶ್ಕರ್, ಶಿವಾಜಿ ಗಣೇಶನ್, ವೈಜಯಂತಿ ಮಾಲಾ ಮುಂತಾದವರೂ ನಾಮಕರಣಗೊಂಡಿದ್ದರು. ಈ ರೀತಿ ಮೇಲ್ಮನೆಗೆ ಹೋದವರು ವೃತ್ತಿಪರ ರಾಜಕಾರಣಿಗಳಂತೆ ಚರ್ಚೆಯಲ್ಲಿ ಭಾಗವಹಿಸಲೇಬೇಕೆಂದು ನಿರೀಕ್ಷಿಸುವ ಅಗತ್ಯವೂ ಇಲ್ಲ. ಸಂಬಂಧಪಟ್ಟವರ ಕ್ಷೇತ್ರಕ್ಕೆ ಸಂಬಂಧಿಸಿದ ಚರ್ಚೆಗಳು ನಡೆದಾಗ ಇಂತಹ ಗಣ್ಯರು ತಮ್ಮ ಅನಿಸಿಕೆ ಮಂಡಿಸಲು ಅವಕಾಶವಿರುತ್ತದೆ. ಇದೀಗ ಕ್ರೀಡಾಕ್ಷೇತ್ರಕ್ಕೆ ಸಂಬಂಧಿಸಿದಂತೆ ರಾಜ್ಯಸಭೆಯಲ್ಲೊಂದು ಧ್ವನಿ ಕೇಳಿಸಲಿದೆ ಎನ್ನುವುದೇ ಸಮಾಧಾನದ ಸಂಗತಿ. ಕ್ರೀಡೆಗೆ ಸಂಬಂಧಿಸಿದ ಗಣ್ಯರೊಬ್ಬರು ರಾಜ್ಯಸಭೆಯಲ್ಲಿ ಇರುವಂಥ ಪರಿಸ್ಥಿತಿ ನಿರ್ಮಾಣಕ್ಕೆ ಸಚಿನ್ ನಾಮಕರಣ ನಾಂದಿ ಹಾಡಲಿ. ಸಚಿನ್ ರಾಜ್ಯಸಭೆಯಲ್ಲಿ ಕ್ರಿಕೆಟನ್ನಷ್ಟೇ ಪ್ರತಿನಿಧಿಸುವುದಲ್ಲ, ಇಡೀ ಕ್ರೀಡಾರಂಗದ ಪರ ಧ್ವನಿಯಾಗಬೇಕಿದೆ. ಸಚಿನ್ ಜಾಗತಿಕ ಕ್ರಿಕೆಟ್‌ನಲ್ಲಿ ದಂತಕತೆಯಂತಿರುವವರು. ಸಜ್ಜನ ನಡವಳಿಕೆ, ಪರಿಶ್ರಮ, ಸಾಹಸಗಳಿಂದ ನಾಡಿನ ಯುವಜನರಿಗೆ ಮಾದರಿ ಎನಿಸಿದ್ದಾರೆ. ಕ್ರೀಡಾಂಗಣದ ಒಳಗೂ, ಹೊರಗೂ ವಿವಾದಾತೀತ ವ್ಯಕ್ತಿ. `ಹಿರಿಯರ ಮನೆ~ಯಲ್ಲಿ ಘನ ವ್ಯಕ್ತಿತ್ವದ ಸಚಿನ್ ತಮ್ಮ ದಟ್ಟ ಅನುಭವದ ಮೂಸೆಯಿಂದ ರಚನಾತ್ಮಕ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದಕ್ಕೆ ಅವಕಾಶವಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.