ತಮಿಳುನಾಡಿನ ಹತಾಶೆ ರಾಜ್ಯದ ಕೃಷ್ಣರಾಜಸಾಗರ ಜಲಾಶಯದ ನೀರನ್ನು ಕರ್ನಾಟಕದ ರೈತರು ಬೇಸಿಗೆ ಬೆಳೆಗೆ ಬಳಸಿಕೊಳ್ಳದಂತೆ ತಡೆಯುವ ತಮಿಳುನಾಡಿನ ಪ್ರಯತ್ನಕ್ಕೆ ಮತ್ತೊಮ್ಮೆ ಹಿನ್ನಡೆಯಾಗಿದೆ. ರಾಜ್ಯದ ರೈತರು ಬೇಸಿಗೆ ಬೆಳೆ ಬೆಳೆಯಬಾರದು ಎಂಬ ತಮಿಳುನಾಡಿನ ತಗಾದೆ ಹೊಸದಲ್ಲ. ಪ್ರತಿ ವರ್ಷ ತಕರಾರು ತೆಗೆದು ರಾಜ್ಯದ ರೈತರ ಹಕ್ಕನ್ನು ಮೊಟಕುಗೊಳಿಸಬಹುದು ಎಂದು ತಮಿಳುನಾಡು ಭಾವಿಸಿದಂತಿದೆ. ಕಾವೇರಿ ಐತೀರ್ಪು ಪುನರ್‌ಪರಿಶೀಲಿಸಲು ನ್ಯಾಯಮಂಡಳಿಗೆ ನಿರ್ದೇಶನ ನೀಡಬೇಕೆಂಬ ಮೇಲ್ಮನವಿಯನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿದ ನಂತರ ತಮಿಳುನಾಡು ಹತಾಶವಾಗಿದೆ. ಪದೇ ಪದೇ ತಕರಾರು ಅರ್ಜಿಗಳನ್ನು ಸಲ್ಲಿಸುತ್ತಲೇ ಇದೆ. ಇದೇ ಬೇಡಿಕೆ ಇಟ್ಟುಕೊಂಡು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಾರ್ಚ್ ಕೊನೆ ವಾರದಲ್ಲಿ ತಳ್ಳಿಹಾಕಿತ್ತು. ಆನಂತರ ಸಲ್ಲಿಸಿದ ಮಧ್ಯಂತರ ಅರ್ಜಿಯನ್ನು ಸುಪ್ರೀಂಕೋರ್ಟ್ ಕಳೆದ ಶುಕ್ರವಾರ ತಳ್ಳಿಹಾಕಿದೆ. ನೀರು ಹಂಚಿಕೆಗೆ ಸಂಬಂಧಿಸಿದ ತಕರಾರುಗಳ ಇತ್ಯರ್ಥಕ್ಕಾಗಿ ರಚನೆಯಾಗಿರುವ ತ್ರಿಸದಸ್ಯ ಪೀಠ ತಮಿಳುನಾಡಿನ ಬೇಡಿಕೆಯನ್ನು ಪರಿಶೀಲಿಸಿದೆ ಎಂದು ನ್ಯಾಯಮೂರ್ತಿ ಡಿ.ಕೆ. ಜೈನ್ ಸ್ಪಷ್ಟವಾಗಿ ಹೇಳಿದ್ದಾರೆ. ಸುಪ್ರೀಂಕೋರ್ಟಿನ ರಜೆ ಆರಂಭಕ್ಕೆ ಮೊದಲೇ ಮಧ್ಯಂತರ ಅರ್ಜಿಯನ್ನು ವಿಚಾರಣೆ ಮಾಡುವಂತೆ ತಮಿಳುನಾಡು ಒತ್ತಾಯಿಸಿತ್ತು. ವಿಶೇಷ ನ್ಯಾಯಪೀಠ ಇತ್ತೀಚೆಗಷ್ಟೇ ರಚನೆಯಾಗಿರುವುದರಿಂದ ಅದು ತಕ್ಷಣಕ್ಕೆ ಕಾರ್ಯ ಆರಂಭಿಸುವ ಸಾಧ್ಯತೆ ಇಲ್ಲ. ಹೀಗಾಗಿ ಕರ್ನಾಟಕದ ರೈತರು ಮತ್ತು ಸರ್ಕಾರ ಸದ್ಯಕ್ಕೆ ನಿರಾಳವಾಗಿರಬಹುದು. ಕಾವೇರಿ ಐತೀರ್ಪಿನ ಪ್ರಕಾರ ಫೆಬ್ರುವರಿಯಿಂದ ಮೇ ತಿಂಗಳವರೆಗೆ ಪ್ರತಿ ತಿಂಗಳು ತಲಾ 2.5 ಟಿಎಂಸಿ ಅಡಿ ನೀರನ್ನು ತಮಿಳುನಾಡಿಗೆ ಬಿಡುವುದನ್ನು ಕರ್ನಾಟಕ ತಪ್ಪಿಸಿಕೊಳ್ಳುವಂತಿಲ್ಲ. ಉಳಿದಂತೆ ಜಲಾಶಯದ ನೀರಿನ ಸಂಗ್ರಹವನ್ನು ತನಗೆ ಬೇಕಾದಂತೆ ಬಳಸಿಕೊಳ್ಳುವ ಹಕ್ಕು ರಾಜ್ಯಕ್ಕಿದೆ. ನೀರು ಹಂಚಿಕೆ ತಕರಾರುಗಳ ಇತ್ಯರ್ಥಕ್ಕೆ ರಚನೆಯಾಗಿರುವ ತ್ರಿಸದಸ್ಯ ಪೀಠದ ಮುಂದೆ ತಮಿಳುನಾಡು ಇನ್ನಷ್ಟು ತಕರಾರು ಅರ್ಜಿಗಳನ್ನು ಸಲ್ಲಿಸುವ ಸಾಧ್ಯತೆಗಳಿವೆ. ರಾಜ್ಯದ ರೈತರು ಬೇಸಿಗೆ ಬೆಳೆ ಬೆಳೆಯುವುದನ್ನು ನಿರ್ಬಂಧಿಸುವ ಒತ್ತಾಯವನ್ನು ಅದು ಕೈಬಿಡುವುದಿಲ್ಲ. ಬೇಸಿಗೆ ಬೆಳೆಗೆ ಜಲಾಶಯದ ನೀರನ್ನೆಲ್ಲ ಬಳಸಿಕೊಂಡರೆ ಮುಂದಿನ ಮುಂಗಾರು ಕೃಷಿ ಚಟುವಟಿಕೆಗಳಿಗೆ ಸಕಾಲದಲ್ಲಿ ನೀರು ಪೂರೈಕೆ ಸಾಧ್ಯವಾಗದೆಂಬ ಹಿನ್ನೆಲೆಯಲ್ಲಿ ಜಲಾಶಯದಲ್ಲಿ ಸ್ವಲ್ಪ ಪ್ರಮಾಣದ ನೀರು ಇರುವಂತೆ ನೋಡಿಕೊಳ್ಳುವ ಉದ್ದೇಶ ತಮಿಳುನಾಡಿನದು. ಅದೇನೇ ಇರಲಿ, ತಮಿಳುನಾಡಿನ ತಕರಾರು ಅರ್ಜಿಗಳನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿರುವುದರಿಂದ ತನಗೆ ನ್ಯಾಯ ಸಿಕ್ಕಿತೆಂದು ರಾಜ್ಯ ಸರ್ಕಾರ ಭಾವಿಸಬೇಕಾಗಿಲ್ಲ. ಸುಪ್ರಿಂ ಕೋರ್ಟಿನ ರಜೆ ಅವಧಿಯ ನ್ಯಾಯಪೀಠದ ಎದುರು ತಮಿಳುನಾಡು ಮತ್ತೆ ಅರ್ಜಿ ಹಾಕಿಕೊಳ್ಳಬಹುದು ಅಥವಾ ತ್ರಿಸದಸ್ಯ ಪೀಠದ ಕಾರ್ಯಾರಂಭಕ್ಕೆ ಒತ್ತಾಯಿಸಬಹುದು. ಹತ್ತಾರು ವರ್ಷಗಳಿಂದ ಬೇಸಿಗೆ ಬೆಳೆಗಳನ್ನು ಬೆಳೆಯುತ್ತಿರುವ ರಾಜ್ಯದ ರೈತರ ಹಕ್ಕಿಗೆ ಚ್ಯುತಿ ಆಗದಂತೆ ನೋಡಿಕೊಳ್ಳುವ ಹೊಣೆ ಸರ್ಕಾರದ ಮೇಲಿದೆ. ತಮಿಳುನಾಡು ಸರ್ಕಾರದ ತಕರಾರು ಅರ್ಜಿಗಳ ನ್ಯಾಯಾಲಯದಲ್ಲಿ ಸಮರ್ಥವಾಗಿ ಎದುರಿಸುವುದು ನಿಜಕ್ಕೂ ಸವಾಲು. ವಿರೋಧ ಪಕ್ಷಗಳು ಮತ್ತು ರೈತರ ಸಹಕಾರ ಪಡೆದು ಕಾವೇರಿ ನೀರಿನ ಹಕ್ಕು ಕಾಪಾಡಿಕೊಳ್ಳುವ ಹೊಣೆಗಾರಿಕೆ ರಾಜ್ಯ ಸಮರ್ಥವಾಗಿ ನಿಭಾಯಿಸಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.