ರಾಜಕೀಯ ಪರಿಹಾರ ಬೇಕು ಜಿನೀವಾದಲ್ಲಿ ಸದ್ಯದಲ್ಲೇ ಸಮಾವೇಶಗೊಳ್ಳಲಿರುವ ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿ (ಯುಎನ್‌ಎಚ್‌ಆರ್‌ಸಿ) ಸಭೆಯಲ್ಲಿ, ಶ್ರೀಲಂಕಾ ಕುರಿತ ಅಮೆರಿಕ ನಿರ್ಣಯದ ಬಗ್ಗೆ ಮತ ಹಾಕುವ ವಿಚಾರದಲ್ಲಿ ಭಾರತ ಸರ್ಕಾರ ಪ್ರಬುದ್ಧವಾದ ನಿಲುವು ತಾಳಬೇಕಿದೆ. ಮಾನವ ಹಕ್ಕುಗಳ ಉಲ್ಲಂಘನೆಗಾಗಿ ಶ್ರೀಲಂಕಾ ವಿರುದ್ಧ ಯುಎನ್‌ಎಚ್‌ಆರ್‌ಸಿ ಸಭೆಯಲ್ಲಿ ಮತ ಹಾಕಬೇಕೆಂದು ತಮಿಳುನಾಡಿನ ರಾಜಕೀಯ ಪಕ್ಷಗಳು ಹಾಗೂ ರಾಜಕಾರಣಿಗಳು ಕೇಂದ್ರದ ಯುಪಿಎ ಸರ್ಕಾರದ ಮೇಲೆ ಈಗಾಗಲೇ ಒತ್ತಡ ಹೇರುತ್ತಿದ್ದಾರೆ. 2009ರಲ್ಲಿ ಶ್ರೀಲಂಕಾ ಸರ್ಕಾರ ಹಾಗೂ ತಮಿಳು ಈಳಂ ವಿಮೋಚನಾ ಟೈಗರ್‌ಗಳ (ಎಲ್‌ಟಿಟಿಇ) ಮಧ್ಯದ ಸಂಘರ್ಷದ ಅಂತಿಮ ಘಟ್ಟದಲ್ಲಿ ನಡೆದಂತಹ ಮಾನವ ಹಕ್ಕುಗಳ ಉಲ್ಲಂಘನೆಗಳಿಗಾಗಿ, ಮಹೀಂದಾ ರಾಜಪಕ್ಸ ಸರ್ಕಾರವನ್ನು ವಿಚಾರಣೆಗೊಳಪಡಿಸಬೇಕಾದುದು ಅತ್ಯವಶ್ಯ ಎಂಬಂತಹ ವಾದವನ್ನು ತಮಿಳುನಾಡಿನ ರಾಜಕೀಯ ಪಕ್ಷಗಳು ಮುಂದಿಡುತ್ತಿವೆ. ಈ ಮಧ್ಯೆ, ಶ್ರೀಲಂಕಾ ಸರ್ಕಾರ ಹಾಗೂ ಅಲ್ಲಿನ ತಮಿಳು ನಾಯಕತ್ವದ ಮಧ್ಯೆ ನೇರ ಮಾತುಕತೆಗಳಾಗಬೇಕಾದ ಅವಶ್ಯಕತೆಯನ್ನು ಪ್ರಧಾನಿ ಮನಮೋಹನ್ ಸಿಂಗ್, ಕಳೆದ ವಾರ ರಾಜ್ಯಸಭೆಯಲ್ಲಿ ಪ್ರತಿಪಾದಿಸಿದ್ದಾರೆ. ಆತ್ಮ ಗೌರವದಿಂದ ಘನತೆಯ ಬದುಕನ್ನು ಬದುಕಲು ಶ್ರೀಲಂಕಾ ತಮಿಳರಿಗೆ ಅನುವು ಮಾಡಿಕೊಡುವವರೆಗೆ ಶ್ರೀಲಂಕಾದಲ್ಲಿ ಶಾಂತಿ ನೆಲಸುವುದು ಅಸಾಧ್ಯ ಎಂಬಂತಹ ಮಾತುಗಳನ್ನೂ ಈ ಸಂದರ್ಭದಲ್ಲಿ ಪ್ರಧಾನಿ ಹೇಳಿದ್ದಾರೆ. ಈ ನಿಟ್ಟಿನಲ್ಲಿ ರಾಜಕೀಯ ಸಾಮರಸ್ಯದ ಪ್ರಕ್ರಿಯೆಯನ್ನು ಆರಂಭಿಸಲು ಕಾಲ ಈಗ ಪಕ್ವವಾಗಿದೆ. ಅರ್ಥಪೂರ್ಣವಾದ ಅಧಿಕಾರ ಹಂಚಿಕೆಯ ಬೇಡಿಕೆಯನ್ನು ಶ್ರೀಲಂಕಾ ತಮಿಳರು ಎಂದಿನಿಂದಲೂ ಮುಂದಿಟ್ಟುಕೊಂಡೇ ಬಂದಿದ್ದಾರೆ. ಈ ಬಗ್ಗೆ ಕೈಗೊಳ್ಳಬಹುದಾದ ಯಾವುದೇ ಕ್ರಮ, ಈ ಬಿಕ್ಕಟ್ಟು ಅಂತ್ಯದಲ್ಲಿ ಉಪಯುಕ್ತ ಹೆಜ್ಜೆಯಾಗುತ್ತದೆ. `ಶ್ರೀಲಂಕಾದಲ್ಲಿ ಉತ್ತರದಾಯಿತ್ವ ಹಾಗೂ ಸಮನ್ವಯಕ್ಕೆ ಉತ್ತೇಜನ' ಎಂಬ ಶೀರ್ಷಿಕೆ ಇರುವ ಯುಎನ್‌ಎಚ್‌ಆರ್‌ಸಿ ಯ ಕರಡು ನಿರ್ಣಯವೂ, ಇನ್ನೂ ರಾಜಿ ಸಂಧಾನಗಳಿಗೆ ತೆರೆದುಕೊಂಡೇ ಇದೆ. ಹೀಗಾಗಿ ಕರಡು ನಿರ್ಣಯದ ಅಂಶಗಳ ನಿರ್ಧಾರವನ್ನು ಅಮೆರಿಕದ ವಿವೇಚನೆಗೇ ಬಿಡುವ ಬದಲು ನಿರ್ಣಯದ ಬರವಣಿಗೆಯಲ್ಲಿ ಭಾರತವೂ ಪ್ರಧಾನ ಪಾತ್ರ ವಹಿಸುವುದು ಅಗತ್ಯವಿದೆ. ಈ ಪುಟ್ಟ ದ್ವೀಪ ರಾಷ್ಟ್ರದಲ್ಲಿ ಪ್ರತ್ಯೇಕ ತಮಿಳು ನಾಡಿಗಾಗಿ ಭಾರತದಲ್ಲಿರುವ ತಮಿಳು ಪಕ್ಷಗಳು ಒತ್ತಾಯಿಸುತ್ತಿವೆ. ಆದರೆ ಇಂತಹ ಬೇಡಿಕೆಗಳು ಶ್ರೀಲಂಕಾದ ಹಳೆಯ ಅಭದ್ರತೆಗಳನ್ನು ಹೆಚ್ಚಿಸಬಹುದಷ್ಟೆ. ರಾಜತಾಂತ್ರಿಕ ನೆಲೆಯಲ್ಲೂ ಇಂತಹ ಉಗ್ರ ನಿಲುವುಗಳು ಅತಾರ್ಕಿಕವಾಗುತ್ತವೆ. ನಮ್ಮ ನೆರೆಯ ರಾಷ್ಟ್ರಗಳಲ್ಲಿ ತನ್ನ ಪ್ರಭಾವ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಚೀನಾ ನಡೆಗಳೂ ನಮ್ಮ ಗಮನದಲ್ಲಿರಬೇಕು. ಅಷ್ಟೇ ಅಲ್ಲ, ಉಗ್ರ ನಿಲುವುಗಳು ಶ್ರೀಲಂಕಾದಲ್ಲಿರುವ ತಮಿಳರ ಹಿತಾಸಕ್ತಿಗಳ ಮೇಲೂ ತದ್ವಿರುದ್ಧ ಪರಿಣಾಮಗಳನ್ನೇ ಬೀರಬಹುದು. ಹೀಗಾಗಿ ಶ್ರೀಲಂಕಾದಲ್ಲಿನ ಜನಾಂಗೀಯ ಸಮಸ್ಯೆಗೆ ಸಂಯಮದ ರಾಜಕೀಯ ಪರಿಹಾರ ಕಂಡುಕೊಳ್ಳುವುದಕ್ಕೆ ಆದ್ಯತೆ ನೀಡುವುದು ಸೂಕ್ತ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.