ಮಾನವೀಯತೆ ಇರಲಿ ಬೆಂಗಳೂರಿನಲ್ಲಿ ಈಚೆಗೆ ಮಲ್ಲೇಶ್ವರಂ ಮತ್ತು ಗಾಂಧಿ ಬಜಾರ್‌ನಲ್ಲಿ ಅನಧಿಕೃತ ಅಂಗಡಿಗಳನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ತೆರವುಗೊಳಿಸಿತ್ತು. ನಗರದ ನಾಗರಿಕ ಹಾಗೂ ಮೂಲಸೌಕರ್ಯ ಆಸ್ತಿ ನಿರ್ವಹಣಾ ಕರ್ತವ್ಯದ ಅನುಷ್ಠಾನದ ಅಂಗವಾಗಿ, ಈ ತೆರವು ಕಾರ್ಯಾಚರಣೆಗಳನ್ನು ನಡೆಸಿರುವುದನ್ನು ಬಿಬಿಎಂಪಿ ಸಮರ್ಥಿಸಿಕೊಂಡಿದೆ. ಆದರೆ ಇಂತಹ ಕಾರ್ಯಾಚರಣೆಗಳನ್ನು ನಡೆಸುವಾಗ, ಅದರ ಮಾನವೀಯ ಮುಖವನ್ನೂ ಅಲಕ್ಷಿಸಲಾಗದು. ಬೀದಿ ಬದಿಯ ವ್ಯಾಪಾರ ಎಂಬುದು ನಗರ ಜೀವನದ ಚಿಲ್ಲರೆ ವ್ಯಾಪಾರ ಹಾಗೂ ವಿತರಣಾ ವ್ಯವಸ್ಥೆಯ ಪ್ರಮುಖ ಅಂಗ. ಜೊತೆಗೆ ಲಕ್ಷಾಂತರ ಜನರ ಜೀವನೋಪಾಯ ಮಾರ್ಗ. ಹೆಚ್ಚಿನ ವ್ಯಾಪಾರಿಗಳು ಮಹಿಳೆಯರು. ತರಕಾರಿ, ಹಣ್ಣು, ಹೂವು ಇತ್ಯಾದಿ ದಿನನಿತ್ಯದ ಅಗತ್ಯಗಳನ್ನು ಪೂರೈಸುವ ಬೀದಿ ವ್ಯಾಪಾರ ನಾಗರಿಕರಿಗೆ ನಿಜಕ್ಕೂ ಉಪಯುಕ್ತ ಸೇವೆಯನ್ನೇ ಸಲ್ಲಿಸುತ್ತಿವೆ. ಆದರೆ ಈ ಬಡಪಾಯಿಗಳು ಕೆಳ ಹಂತದ ಅಧಿಕಾರಿಗಳು ಹಾಗೂ ಪೊಲೀಸರಿಂದ ಅಪಾರ ಕಿರುಕುಳಕ್ಕೊಳಗಾಗುತ್ತಾ ಅವರಿಗೆ ಲಂಚ ನೀಡಿ ವ್ಯಾಪಾರ ಉಳಿಸಿಕೊಳ್ಳುವಂತಹ ಅನಿವಾರ್ಯತೆಗೆ ಸಿಲುಕಿರುವುದು ಎಲ್ಲರಿಗೂ ತಿಳಿದಿರುವ ಸತ್ಯ. ಆದರೆ ಬೀದಿ ವ್ಯಾಪಾರ ನಿಯಂತ್ರಣದ ಜೊತೆಗೇ ಈ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಾದುದೂ ಸ್ಫಳೀಯ ಸಂಸ್ಥೆಗಳ ಕರ್ತವ್ಯ. ಬೀದಿ ಬದಿ ವ್ಯಾಪಾರಿಗಳು ಅಸಂಘಟಿತ ವಲಯಕ್ಕೆ ಸೇರಿರುವುದರಿಂದ ತಮ್ಮ ಹಕ್ಕುಗಳಿಗಾಗಿ ಹೋರಾಡುವ ತ್ರಾಣ ಅವರಲ್ಲಿಲ್ಲ. ಈ ಹಿನ್ನೆಲೆಯಲ್ಲೇ 2009ರಲ್ಲಿ ಕೇಂದ್ರ ಸರ್ಕಾರ, ನಗರ ಬೀದಿ ವ್ಯಾಪಾರಿಗಳ ಕುರಿತಾಗಿ ರಾಷ್ಟ್ರೀಯ ನೀತಿಯೊಂದನ್ನು ಪ್ರಕಟಿಸಿತ್ತು. ಈ ಮುಂಚೆಯೂ 2004ರ್ಲ್ಲಲೂ ಇಂತಹದೊಂದು ನೀತಿ ಪ್ರಕಟವಾಗಿತ್ತು. ಈ ಪ್ರಕಾರ, ಬೀದಿ ಮಾರಾಟಗಾರರನ್ನು ನೊಂದಾಯಿಸಿಕೊಂಡು ಅವರಿಗೆ ಗುರುತಿನ ಚೀಟಿಗಳನ್ನು ರಾಜ್ಯ ಸರ್ಕಾರಗಳು ಹಾಗೂ ಸ್ಥಳೀಯ ಸಂಸ್ಥೆಗಳು ವಿತರಿಸಬೇಕೆಂದು ಶಿಫಾರಸು ಮಾಡಲಾಗಿತ್ತು. `ಟೌನ್ ಮಾರಾಟ ಸಮಿತಿ~ಗಳನ್ನು ರಚಿಸುವ ಮೂಲಕ ಮಾರಾಟ ಚಟುವಟಿಕೆಗಳ ನಿಯಂತ್ರಣದ ಜೊತೆಗೇ ಮಾರಾಟಗಾರರ ಹಕ್ಕುಗಳನ್ನು ರಕ್ಷಿಸುವ ವಿಚಾರವೂ ಈ ನೀತಿಯಲ್ಲಿತ್ತು. ಆದರೆ ರಾಜ್ಯ ಸರ್ಕಾರಗಳು ಇವನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಈಗ ಇತ್ತೀಚೆಗೆ ನಡೆದ ಮತ್ತೊಂದು ರಾಷ್ಟ್ರೀಯ ಸಮಾಲೋಚನಾ ಸಭೆಯ್ಲ್ಲಲೂ, ನಗರ ಬೀದಿ ವ್ಯಾಪಾರಿಗಳ ಹಕ್ಕುಗಳನ್ನು ಶಾಸನಬದ್ಧಗೊಳಿಸುವ ಕೇಂದ್ರದ ವಿಧೇಯಕವೊಂದರ ಜಾರಿಗೆ ಒತ್ತಾಯಿಸಲಾಗಿದೆ. ಈ ಮೂಲಕ ರಾಷ್ಟ್ರದಲ್ಲಿ ಸುಮಾರು ಒಂದು ಕೋಟಿಯಷ್ಟು ಬೀದಿ ಮಾರಾಟಗಾರರಿಗೆ ಅಧಿಕೃತತೆ ತಂದುಕೊಡುವುದು ಸಾಧ್ಯವಾಗಲಿದೆ. ಇಂತಹ ಮಾನ್ಯತೆಗಾಗಿ ನಾಲ್ಕು ದಶಕಗಳಿಂದ ಹೋರಾಟ ನಡೆಸುತ್ತಿದ್ದರೂ ನಮ್ಮ ನಗರಗಳು ಅವರನ್ನು ಒಳಗೊಳ್ಳುವ ಸಂವೇದನಾಶೀಲತೆಯನ್ನು ಇನ್ನೂ ಪ್ರದರ್ಶಿಸಿಲ್ಲ. ಬೀದಿಗಳಲ್ಲಿ ಕಾರುಗಳ ಪಾರ್ಕಿಂಗ್ ಒಪ್ಪಿಕೊಳ್ಳುವ ಜನರು, ಬೀದಿ ಮಾರಾಟ, ಸಂಚಾರಕ್ಕೆ ಅಡ್ಡಗಾಲು ಎಂದು ಭಾವಿಸುವುದೇ ಹೆಚ್ಚು. ಝಗಮಗಿಸುವ ಮಾಲ್‌ಗಳ ನಡುವೆಯೂ, ಅನೇಕ ಮಂದಿಗೆ ಸ್ವಯಂ ಉದ್ಯೋಗದ ಆಧಾರವಾಗಿರುವ ಬೀದಿ ವ್ಯಾಪಾರಿಗಳ ಹಕ್ಕುಗಳ ರಕ್ಷಣೆಗೆ ಸೂಕ್ತ ಕಾನೂನಿನ ಚೌಕಟ್ಟನ್ನು ರೂಪಿಸಬೇಕಿದೆ. ಈ ನಿಟ್ಟಿನಲ್ಲಿ ಘನತೆಯ ಬದುಕಿಗೆ ಅವಕಾಶ ಕಲ್ಪಿಸಿಕೊಡಲು ಸ್ಥಳೀಯ ಸಂಸ್ಥೆಗಳಿಗೆ ತಾಕೀತು ಮಾಡುವ ಅವಶ್ಯಕತೆಯೂ ಇದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.