ಎಚ್ಚರಿಕೆಯ ಗಂಟೆ ಕರ್ನಾಟಕದ ನಲವತ್ತೆಂಟು ತಾಲ್ಲೂಕುಗಳಲ್ಲಿ ಕೊಳವೆ ಬಾವಿಗಳ ನೀರು ಕುಡಿಯಲು ಯೋಗ್ಯವಲ್ಲ ಎಂಬ ಆಘಾತಕಾರಿ ಸಂಗತಿ ರಾಜ್ಯ ಸರ್ಕಾರವೇ ಕೈಗೊಂಡ ಸಮೀಕ್ಷೆಯಿಂದ ಗೊತ್ತಾಗಿದೆ. 58 ತಾಲ್ಲೂಕುಗಳಲ್ಲಿ ಶೇ.50ರಷ್ಟು ನೀರು ಕುಡಿಯಲು ಯೋಗ್ಯವಾಗಿದೆ. 70 ತಾಲ್ಲೂಕುಗಳ ಅಂತರ್ಜಲ ಇನ್ನೂ ಕಲುಷಿತವಾಗಿಲ್ಲ ಎನ್ನುವುದು ಸಮಾಧಾನದ ಸಂಗತಿ. ಕೊಳವೆ ಬಾವಿಗಳ ನೀರನ್ನು ಶುದ್ಧೀಕರಿಸಿ ಪೂರೈಸುವ ವ್ಯವಸ್ಥೆ ಇಲ್ಲದ ಕಡೆಗಳಲ್ಲಿ ಪ್ಲೋರೈಡ್ ಇತ್ಯಾದಿ ಅಪಾಯಕಾರಿ ರಾಸಾಯನಿಕಗಳಿರುವ ನೀರು ಕುಡಿದ ಜನರು ಅಕಾಲ ವೃದ್ಧಾಪ್ಯ, ಮೂಳೆಗಳ ಸವೆತ ಇತ್ಯಾದಿ ದೈಹಿಕ ನ್ಯೂನತೆಗಳಿಗೆ ತುತ್ತಾಗುವ ಅಪಾಯವಿದೆ. ಅಂತರ್ಜಲದ ಅತಿಯಾದ ಬಳಕೆ ವಿರುದ್ಧ ವಿಜ್ಞಾನಿಗಳು ಮತ್ತು ಪರಿಸರ ಸಂಘಟನೆಗಳು ನೀಡಿದ ಎಚ್ಚರಿಕೆಯನ್ನು ಉಪೇಕ್ಷಿಸಿದ ಫಲ ಇದು. ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಸರ್ಕಾರ ನೂರಾರು ಕೋಟಿ ರೂ ಗಳನ್ನು ಖರ್ಚು ಮಾಡಿದೆ. ಆದರೆ ಅದರಿಂದ ಹೆಚ್ಚಿನ ಪ್ರಯೋಜನ ಆಗಿಲ್ಲ. ನದಿ, ಜಲಾಶಯ, ಕೆರೆ ಕಟ್ಟೆಗಳಿಲ್ಲದ ಜಿಲ್ಲೆಗಳಲ್ಲಿ ಬೇಸಾಯ, ಕೈಗಾರಿಕೆ, ಗೃಹ ಬಳಕೆ ಇತ್ಯಾದಿ ಎಲ್ಲದಕ್ಕೂ ಅಂತರ್ಜಲವೇ ಆಧಾರ. ಕೋಲಾರ, ಚಿತ್ರದುರ್ಗ, ತುಮಕೂರು ಮತ್ತಿತರ ಜಿಲ್ಲೆಗಳಲ್ಲಿ ಅಂತರ್ಜಲದ ಬಳಕೆ ಪ್ರಮಾಣ ಶೇ.200ಕ್ಕೂ ಹೆಚ್ಚು. ಸಾವಿರ ಅಡಿ ಆಳಕ್ಕೆ ಕೊರೆದರೂ ನೀರಿಲ್ಲ. ಜನಸಂಖ್ಯೆ ಹೆಚ್ಚಳದಿಂದಾಗಿ ಆಹಾರ ಧಾನ್ಯ, ಹಣ್ಣು, ತರಕಾರಿ, ಹಾಲು ಇತ್ಯಾದಿಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಹೆಚ್ಚು ಉತ್ಪಾದನೆ ಮಾಡುವ ಧಾವಂತದಲ್ಲಿ ಅಂತರ್ಜಲದ ಅತಿಯಾದ ಬಳಕೆಯ ದುಷ್ಪರಿಣಾಮಗಳನ್ನು ಯಾರೂ ಯೋಚಿಸಲಿಲ್ಲ. ಈ ಬೆಳವಣಿಗೆಯನ್ನು ರಾಜ್ಯ ಎಚ್ಚರಿಕೆಯ ಗಂಟೆ ಎಂದೇ ಪರಿಗಣಿಸಬೇಕು. ಅಂತರ್ಜಲದ ಮಟ್ಟ ಹೆಚ್ಚಿಸಲು ಏನು ಮಾಡಲು ಸಾಧ್ಯವೋ ಅದನ್ನೆಲ್ಲ ಮಾಡಬೇಕು. ಮಳೆಯ ನೀರು ವ್ಯರ್ಥವಾಗಲು ಬಿಡಬಾರದು. ನೀರನ್ನು ಭೂಮಿಗೆ ಇಂಗಿಸುವ ಮೂಲಕ ಅಂರ್ತಜಲ ಮಟ್ಟ ಹೆಚ್ಚಿಸಿಕೊಳ್ಳುವ ಪ್ರಯೋಗಗಳು ಅಲ್ಲಲ್ಲಿ ಯಶಸ್ವಿಯಾಗಿವೆ. ಈ ಮಾದರಿಯ ಪ್ರಯೋಗಗಳು ಇಡೀ ರಾಜ್ಯದಲ್ಲಿ ಆರಂಭವಾಗಬೇಕಿದೆ. ಕಲುಷಿತ ನೀರು ಕುಡಿಯುತ್ತಿರುವ ನಲವತ್ತೆಂಟು ತಾಲ್ಲೂಕುಗಳ ಜನರ ಆರೋಗ್ಯದ ಮೇಲೆ ಇನ್ನಷ್ಟು ಕೆಟ್ಟ ಪರಿಣಾಮ ಆಗದಂತೆ ತಡೆಯಬೇಕು. ಕೊಳವೆ ಬಾವಿ ಕೊರೆಯುವ ಮುನ್ನ ಸರ್ಕಾರದ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸುವ ಸರ್ಕಾರದ ಚಿಂತನೆ ಸ್ವಾಗತಾರ್ಹವಾದರೂ ಅನುಮತಿ ಕೊಡುವ ವ್ಯವಸ್ಥೆಯಲ್ಲಿ ಭ್ರಷ್ಟಾಚಾರಕ್ಕೆ ಅವಕಾಶವಾಗದಂತೆ ಎಚ್ಚರಿಕೆ ವಹಿಸಬೇಕು. ಕೊಳವೆ ಬಾವಿಗಳನ್ನು ಕೊರೆಸಲು ಸರ್ಕಾರ ಮತ್ತು ಸಾರ್ವಜನಿಕರು ಸಾವಿರಾರು ಕೋಟಿ ರೂ ಹಣ ಖರ್ಚು ಮಾಡುತ್ತಿದ್ದಾರೆ. ಅಂತರ್ಜಲದ ಲಭ್ಯತೆ ಮತ್ತು ಅದರ ಗುಣಮಟ್ಟದ ಆಧಾರದ ಮೇಲೆ ಕೊಳವೆ ಬಾವಿಗೆ ಅನುಮತಿ ನೀಡಬೇಕು. ಕೊಳವೆ ಬಾವಿಗೆ ಅನುಮತಿ ಪಡೆಯುವ ವ್ಯವಸ್ಥೆಯನ್ನು `ಸಕಾಲ~ ಯೋಜನೆ ವ್ಯಾಪ್ತಿಗೆ ತರಬೇಕು. ಕಲುಷಿತ ನೀರು ಕುಡಿಯುತ್ತಿರುವ ನಲವತ್ತೆಂಟು ತಾಲ್ಲೂಕುಗಳ ಜನರಿಗೆ ತುರ್ತಾಗಿ ಪರ್ಯಾಯ ನೀರಿನ ವ್ಯವಸ್ಥೆ ಮಾಡಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.