ವಿಚ್ಛೇದನ ಪರಿಹಾರ ಅಲ್ಲ ಗಂಡು ಮತ್ತು ಹೆಣ್ಣನ್ನು ಮಾನಸಿಕವಾಗಿ, ದೈಹಿಕವಾಗಿ ಒಂದುಗೂಡಿಸಿ ಬಾಳಲು ಅನುವು ಮಾಡಿಕೊಡುವ ವಿವಾಹ, ಕ್ಷುಲ್ಲಕ ಕಾರಣಗಳಿಗೆ ಮುರಿದುಬೀಳುವ ಪ್ರಕರಣಗಳು ದಿನೇದಿನೇ ಹೆಚ್ಚುತ್ತಿವೆ. ಇವುಗಳಿಗೆ ನ್ಯಾಯಾಲಯದ ಮುದ್ರೆಯೂ ಬೀಳುತ್ತಿದೆ. ವಿವಾಹ ವಿಚ್ಛೇದನ ಪ್ರಕ್ರಿಯೆಯನ್ನು ಸರಳಗೊಳಿಸುವ ಉದ್ದೇಶದಿಂದ ಈಗಿರುವ ವಿವಾಹ ಕಾನೂನಿಗೆ ತಿದ್ದುಪಡಿ ತರಲೂ ಕೇಂದ್ರ ಸರ್ಕಾರ ಉದ್ದೇಶಿಸಿದೆ. ಇದರಿಂದ ವಿಚ್ಛೇದನ ಪ್ರಕರಣಗಳು ಹೆಚ್ಚಾಗಿ ಸಾಮಾಜಿಕ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. `ಗಂಡ-ಹೆಂಡತಿ ನಡುವಣ ಸೂಕ್ಷ್ಮ ಸಂಬಂಧದಲ್ಲಿ ಒಡೆದುಹೋಗಿರುವ ಮನಸ್ಸನ್ನು ಒಂದುಗೂಡಿಸಿ ವಿಚ್ಛೇದನವನ್ನು ತಡೆಯಬೇಕು~ ಎಂದು ಹೈಕೋರ್ಟ್, ಕೌಟುಂಬಿಕ ನ್ಯಾಯಾಲಯವೊಂದಕ್ಕೆ ಬುದ್ಧಿಮಾತು ಹೇಳಿರುವುದು ಅರ್ಥಪೂರ್ಣವೂ, ವಿವೇಚನಾಯುಕ್ತವೂ ಆಗಿದೆ. ಹಾಗೆಯೇ ಕೇಂದ್ರ ಸರ್ಕಾರ ಮಂಡಿಸಿದ `ವಿವಾಹ ಕಾನೂನು (ತಿದ್ದುಪಡಿ) ಮಸೂದೆ-2010~ ಮಹಿಳೆಯರ ಶೋಷಣೆಗೆ ಕಾರಣವಾಗಲಿದೆ ಎಂದು ಬಿಜೆಪಿ ಪ್ರತಿಭಟಿಸಿದ್ದೂ ಸೂಕ್ತವಾಗಿದೆ. 56 ವರ್ಷಗಳ ಹಿಂದಿನ ಕಾನೂನಿನಲ್ಲಿ ಸುಧಾರಣೆ ತರುವುದರಿಂದ ಹಲವು ವರ್ಷಗಳಿಂದ ಪರಿಹಾರ ಕಾಣದ ಗಂಭೀರ ಸಮಸ್ಯೆಗಳು ಬಗೆಹರಿಯುವವು ಎಂದು ಮಸೂದೆ ಮಂಡಿಸಿರುವ ಸರ್ಕಾರ ತಿಳಿಸಿದೆ. ಆದರೆ ಈ ತಿದ್ದುಪಡಿಯಿಂದ ಮಹಿಳೆಯರಿಗೆ ಆರ್ಥಿಕ ಭದ್ರತೆ ದೊರಕಬೇಕೇ ಹೊರತು, ಅದು ಗಂಡಸರ ಕೈಗೆ ಶೋಷಣೆಯ ಅಸ್ತ್ರವಾಗಬಾರದು ಎಂದು ಹೇಳಿರುವ ಬಿಜೆಪಿ ಮಾತುಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಪತಿಯ ಆಸ್ತಿಯಲ್ಲಿ ಪತ್ನಿಗೆ ಪಾಲು ದೊರೆಯಬೇಕು ಎಂಬುದರಲ್ಲಿ ಯಾವುದೇ ಅನುಮಾನವೂ ಇಲ್ಲ. ಆದರೆ ಆಸ್ತಿಯಲ್ಲಿ ಪಾಲು ಕೊಟ್ಟು ವಿಚ್ಛೇದನ ನೀಡುವುದರಿಂದ ಮೂಲ ಸಮಸ್ಯೆ ಬಗೆಹರಿಯುವುದಿಲ್ಲ. ಒಬ್ಬಳನ್ನು ಬಿಟ್ಟು ಮತ್ತೊಬ್ಬಳನ್ನು ಹಣಕ್ಕಾಗಿ ಮದುವೆಯಾದ ಉದಾಹರಣೆಗಳು ಸಾಕಷ್ಟಿವೆ. ಇಲ್ಲಿ ಹೆಣ್ಣಿನ ಶೋಷಣೆ ನಿರಂತರವಾಗಿ ಮುಂದುವರಿಯುತ್ತದೆ. ಗಂಡ-ಹೆಂಡಿರ ನಡುವೆ ಸಣ್ಣಪುಟ್ಟ ವಿವಾದಗಳಿಂದ ಆರಂಭವಾಗುವ ಸಮಸ್ಯೆಗಳು ಮುಂದೆ ವೈಯಕ್ತಿಕ ಅಹಂನಿಂದಾಗಿ ದೊಡ್ಡದಾಗುತ್ತವೆ. ಇಬ್ಬರಿಗೂ ಅವರ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಅಭಿಪ್ರಾಯದ ಅಧಿಕಾರ ಇದ್ದರೂ, ಇಬ್ಬರಿಗೂ ಇರುವ ಆರ್ಥಿಕ ಸ್ವಾತಂತ್ರ್ಯ `ನಾನೇನೂ ನಿನಗಿಂತ ಕಡಿಮೆ ಇಲ್ಲ~ ಎಂಬ ಪ್ರತಿಷ್ಠೆಗೆ ಕಾರಣವಾಗಿರುವ ಉದಾಹರಣೆಗಳಿವೆ. ಮನೆಯವರ ವಿರೋಧದ ನಡುವೆಯೂ ಪ್ರೀತಿಸಿ ಒಂದಾಗುವ ಯುವ ಮನಸ್ಸುಗಳು ಪ್ರಬಲ ಕಾರಣವಿಲ್ಲದೇ ಒದ್ದಾಡುತ್ತವೆ. ಇಲ್ಲಿ ಪಾಶ್ಚಿಮಾತ್ಯ ದೇಶಗಳ ಸಂಸ್ಕೃತಿಯೂ ಪ್ರಭಾವ ಬೀರುತ್ತದೆ. ಇಂಥ ಸಂದರ್ಭಗಳಲ್ಲಿ ಕೌನ್ಸೆಲಿಂಗ್ ಕೇಂದ್ರಗಳು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು. ಇಬ್ಬರ ಜೊತೆಯೂ ಸಮಾಲೋಚಿಸಿ, ವಿವಾಹವೆಂಬ ಮಧುರ ಸಂಬಂಧದಲ್ಲಿ ಅಡಗಿರುವ ಮಾನವೀಯ ಅಂಶಗಳನ್ನು ಮನವರಿಕೆ ಮಾಡಿಕೊಟ್ಟಲ್ಲಿ ವಿಚ್ಛೇದನ್ನು ತಡೆಗಟ್ಟಬಹುದು. ವಿವಾಹ ವಿಚ್ಛೇದನ ಪ್ರಕ್ರಿಯೆ ಸರಳಗೊಳಿಸುವ ತಿದ್ದುಪಡಿ ಗಂಡ ಮತ್ತು ಹೆಂಡತಿ ಇಬ್ಬರಿಗೂ ಅನುಕೂಲಕರವಾಗಿರಬೇಕೆ ಹೊರತು ಯಾರೊಬ್ಬರಿಗೂ ಅನ್ಯಾಯವಾಗಬಾರದು. ಇಲ್ಲಿ ಧಾರ್ಮಿಕ ಸಂಘಟನೆಗಳ ಜೊತೆ ಧರ್ಮಗುರುಗಳು ಮಧ್ಯಸ್ಥಿಕೆ ವಹಿಸಿ, ಪತಿ-ಪತ್ನಿ ಒಂದಾಗುವಂತೆ ಮಾಡಬೇಕು. ದುಷ್ಟತನದ ಪರಮಾವಧಿಯಲ್ಲಿ ಮತ್ತು ಸರಿಪಡಿಸಲಾಗದ ದೈಹಿಕ ನ್ಯೂನತೆಯಲ್ಲಿ ಮಾತ್ರ ವಿಚ್ಛೇದನ ಅನಿವಾರ್ಯವಾಗುತ್ತದೆಯೇ ಹೊರತು, ಸಣ್ಣಪುಟ್ಟ ಕಾರಣಗಳಿಗೆ ದೂರವಾಗುವುದು ಆರೋಗ್ಯಕರ ಬೆಳವಣಿಗೆಯಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.