ವೈಜ್ಞಾನಿಕ ಚಿಂತನೆ ಇರಲಿ ನಾಡಿನ ಅಭಿವೃದ್ಧಿಗೆ ಶಿಕ್ಷಣದ ಮೂಲಕ ನಿರ್ಮಿಸುವ ಮಾನವ ಸಂಪನ್ಮೂಲವೇ ಬಹಳ ಅಮೂಲ್ಯ ಎನ್ನುವುದು ಸುಸ್ಪಷ್ಟ. ಆದರೆ ಶಿಕ್ಷಣದ ವಿಷಯದಲ್ಲೇ ವಿಪರೀತ ಅಸ್ಪಷ್ಟತೆ ಇರುವುದು ನಮ್ಮ ವ್ಯವಸ್ಥೆಯ ವಿಪರ್ಯಾಸ. ಮಹತ್ವಾಕಾಂಕ್ಷೆಯಿಂದ ದೇಶಾದ್ಯಂತ ಜಾರಿಗೆ ತರಲಾದ ಶಿಕ್ಷಣ ಹಕ್ಕು ಕಾಯಿದೆಯ ಪ್ರಕಾರ 14 ವರ್ಷಗಳವರೆಗೆ ಕಡ್ಡಾಯ, ಉಚಿತ ಶಿಕ್ಷಣ ಪಡೆಯುವುದು ದೇಶದಲ್ಲಿ ಹುಟ್ಟುವ ಪ್ರತಿಯೊಂದು ಮಗುವಿನ ಮೂಲಭೂತ ಹಕ್ಕು ಮತ್ತು ಅದನ್ನು ಆದ್ಯತೆಯ ಮೇಲೆ ಒದಗಿಸುವುದು ಆಡಳಿತ ನಡೆಸುವ ಪ್ರತಿಯೊಂದು ಸರ್ಕಾರದ ಕರ್ತವ್ಯ. ಈ ಹಿನ್ನೆಲೆಯಲ್ಲಿ ಸರ್ಕಾರ ಲೋಪದೋಷಗಳಿಗೆ ಆಸ್ಪದವಿಲ್ಲದ ವ್ಯವಸ್ಥೆಯನ್ನು ರೂಪಿಸುವುದು ಅಪೇಕ್ಷಣೀಯ. ಶಾಲೆಯಿಂದ ಹೊರಗಿರುವ ಮಕ್ಕಳನ್ನು ಮತ್ತೆ ಶಾಲೆಗೆ ಕರೆತಂದು ಅವರಿಗೆ ವಸತಿಸಹಿತ ಶಿಕ್ಷಣ ನೀಡುವ ಒಂದು ಮುಖ್ಯ ನಿರ್ಧಾರವನ್ನು ರಾಜ್ಯ ಸರ್ಕಾರ ಇತ್ತೀಚೆಗೆ ಕೈಗೊಂಡಿದೆ. ಶಾಲೆಯಿಂದ ಹೊರಗಿರುವ 6 ರಿಂದ 14 ವರ್ಷದೊಳಗಿನ ಸುಮಾರು 70 ಸಾವಿರ ಮಕ್ಕಳಿಗಾಗಿ ಪ್ರಸಕ್ತ ವರ್ಷದಲ್ಲಿ 408 ವಸತಿಸಹಿತ ಶಾಲೆಗಳನ್ನು ಪ್ರಾರಂಭಿಸುವುದು ಮತ್ತು ವಿಶೇಷ ತರಬೇತಿ ನೀಡುವ ಮೂಲಕ ಅವರನ್ನು ಮುಖ್ಯವಾಹಿನಿಗೆ ತರುವುದು ಈ ನಿರ್ಧಾರದ ಮುಖ್ಯ ಆಶಯಗಳು. ಆದರೆ ಈ ನಿರ್ಧಾರದ ಉಪಯುಕ್ತತೆಯ ಬಗ್ಗೆ ಹಲವು ಪ್ರಶ್ನೆಗಳು, ಅನುಮಾನಗಳು ಹುಟ್ಟುತ್ತಿವೆ. ಅಲ್ಲದೆ ಅದರಲ್ಲಿ ವೈಜ್ಞಾನಿಕ ಚಿಂತನೆ, ವ್ಯಾಪಕ ಸಮಾಲೋಚನೆ ಮತ್ತು ಪೂರ್ವಸಿದ್ಧತೆಯ ಕೊರತೆಗಳು ಮೇಲ್ನೋಟಕ್ಕೇ ಕಾಣುತ್ತಿವೆ. ಶಾಲೆ ಬಿಟ್ಟಿದ್ದ ಮಕ್ಕಳನ್ನು ಮರಳಿ ತರಲು ಕಳೆದ ಹತ್ತು ವರ್ಷಗಳಲ್ಲಿ ಹಲವು ಕಾರ್ಯಕ್ರಮಗಳು ರಾಜ್ಯದಲ್ಲಿ ಜಾರಿಯಾಗಿವೆ. ಆದರೆ ಅವುಗಳ ಮೂಲಕ ಶಾಲೆಗೆ ಮರಳಿ ಬಂದ ಮಕ್ಕಳು ಶಿಕ್ಷಣ ಮುಂದುವರೆಸಿರುವ ಬಗ್ಗೆ ನಿಗಾ ಇಟ್ಟು ವಿಶ್ಲೇಷಣೆ ಮಾಡಲಾಗಿದೆಯೇ? ಈಗ ರಾಜ್ಯದಲ್ಲಿ ಶಾಲೆಯಿಂದ ದೂರವಿರುವ ಮಕ್ಕಳ ಸಂಖ್ಯೆ ಕೇವಲ 70 ಸಾವಿರ ಎನ್ನುವುದು ವಾಸ್ತವದ ಚಿತ್ರಣವೇ ಎಂಬ ಸಂಶಯವೂ ಬರುತ್ತಿದೆ. ಶಾಲೆ ಬಿಟ್ಟ ಮಕ್ಕಳಲ್ಲಿ ಅವರ ವಯಸ್ಸಿನ ಶೇಕಡಾವಾರು ಪ್ರಮಾಣವನ್ನು ಪ್ರತಿ ಪಂಚಾಯತಿ ವ್ಯಾಪ್ತಿಯಲ್ಲಿ ಸರಿಯಾಗಿ ಗುರುತಿಸಲಾಗಿದೆಯೇ? ಹಾಗೆಯೇ, ಶಾಲೆ ಬಿಟ್ಟ ಮಕ್ಕಳನ್ನು ಮನೆ ಬಿಡಿಸುವುದು ಅವರ ಮಾನಸಿಕ ಬೆಳವಣಿಗೆಯ ದೃಷ್ಟಿಯಿಂದ ವಿಹಿತವೇ ಎನ್ನುವ ಚರ್ಚೆ ನಡೆದಂತಿಲ್ಲ. ಶಾಲೆ ಬಿಟ್ಟ ಮಕ್ಕಳಲ್ಲಿ ಅವರು ಬಿಟ್ಟು ಎಷ್ಟು ಸಮಯ ಆಯಿತು ಎನ್ನುವುದೂ ಬಹಳ ಮುಖ್ಯ. ಶಾಲೆ ಬಿಟ್ಟು ಮೂರುನಾಲ್ಕು ತಿಂಗಳು ಮಾತ್ರ ಆಗಿದ್ದರೆ ಮಗು ತನ್ನ ಮನೆಯಿಂದಲೇ ಮತ್ತೆ ಶಾಲೆಗೆ ಬರಬಹುದೆನ್ನಿಸುತ್ತದೆ. ಶಾಲೆ ಬಿಟ್ಟು ಕೆಲವೇ ತಿಂಗಳು ಆಗಿರುವ ಮತ್ತು ಕೆಲವು ವರ್ಷಗಳೇ ಆಗಿರುವ ಮಕ್ಕಳಿಗೆ ವಿಭಿನ್ನವಾದ ಮಾರ್ಗೋಪಾಯಗಳು ಬೇಕಾಗುತ್ತವೆ. ಅಲ್ಲದೆ ಏಕರೂಪದ ವಿಶೇಷ ತರಬೇತಿಯೂ ಇಲ್ಲಿ ಪ್ರಯೋಜನವಾಗದೇ ಹೋಗಬಹುದು. ಇಂಥ ಹಲವು ಅಂಶಗಳ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ಗಂಭೀರವಾಗಿ ಪರಿಶೀಲಿಸಬೇಕು. ಇಲ್ಲದಿದ್ದರೆ, ಈಗಾಗಲೇ ಹೇಳಲಾರದ ದುಃಸ್ಥಿತಿಯಲ್ಲಿರುವ ಸರ್ಕಾರಿ ವಸತಿಶಾಲೆಗಳ ಸಮೂಹಕ್ಕೆ ಇವು ಹೊಸ ಸೇರ್ಪಡೆ ಆಗಬಹುದಷ್ಟೆ. ಶಾಲೆಗಳಲ್ಲೇ ವಸತಿ ವ್ಯವಸ್ಥೆ ಮಾಡ ಬೇಕೆನ್ನುವ ನಿರ್ಧಾರ ಶಿಕ್ಞಣ ತಜ್ಞರ ಸೈದ್ಧಾಂತಿಕ ಪರಿಶೀಲನೆಗೆ ಒಳ ಪಡುವುದು ಅಗತ್ಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.