ವರದಕ್ಷಿಣೆಗೆ ಶಿಕ್ಷೆಯ ಮದ್ದು ವರದಕ್ಷಿಣೆಗಾಗಿ ಹೆಣ್ಣುಮಕ್ಕಳನ್ನು ಹಿಂಸಿಸಿ ಸಾವಿನ ದವಡೆಗೆ ದೂಡುವ ತಪ್ಪಿತಸ್ಥರಿಗೆ ಜೀವಾವಧಿ ಜೈಲುಶಿಕ್ಷೆಗಿಂತ ಕಡಿಮೆ ಶಿಕ್ಷೆ ನೀಡಬಾರದು ಎಂಬಂತಹ ಸುಪ್ರೀಂಕೋರ್ಟ್ ತೀರ್ಪು ಸ್ವಾಗತಾರ್ಹವಾದುದು. ವರದಕ್ಷಿಣೆಪಿಡುಗು ದಿನೇದಿನೇ ದೊಡ್ಡ ಸಾಮಾಜಿಕ ಸಮಸ್ಯೆಯಾಗಿ ಬೆಳೆಯುತ್ತಿರುವಂತಹ ಸನ್ನಿವೇಶದಲ್ಲಿ ನಾವಿದ್ದೇವೆ. ವರದಕ್ಷಿಣೆ ಪಿಡುಗಿಗೆ ಪ್ರತಿ ಗಂಟೆಗೆ ಒಬ್ಬ ಮಹಿಳೆ ಭಾರತದಲ್ಲಿ ಸಾಯುತ್ತಿದ್ದಾಳೆ ಎಂಬಂತಹ ಇತ್ತೀಚಿನ ಅಂಕಿಅಂಶಗಳು ಈ ಸಮಸ್ಯೆಯ ತೀವ್ರತೆಗೆ ಸಾಕ್ಷಿ. ಹೀಗೆಂದೇ, ಭಾರತೀಯ ದಂಡ ಸಂಹಿತೆ(ಐಪಿಸಿ)ಯ ಸೆಕ್ಷನ್ 302ರ ಅನ್ವಯ, ಕೊಲೆ ಆರೋಪವನ್ನೂ ಹೊರಿಸುವ ಮೂಲಕ ವರದಕ್ಷಿಣೆ ಅಪರಾಧಕ್ಕೆ ಮರಣದಂಡನೆ ವಿಧಿಸಲು ಅನುವು ಮಾಡಿಕೊಡಬೇಕೆಂದು ಸುಪ್ರೀಂ ಕೋರ್ಟ್ 2010ರ್ಲ್ಲಲೇ ರಾಷ್ಟ್ರದ ಎಲ್ಲಾ ನ್ಯಾಯಾಲಯಗಳಿಗೂ ಸೂಚಿಸಿದ್ದುದನ್ನು ಇಲ್ಲಿ ಸ್ಮರಿಸಬಹುದು. ವಾಸ್ತವವಾಗಿ ಅಪರಾಧಿಗಳಿಗೆ ಶಿಕ್ಷೆಯಾಗುವ ಪ್ರಮಾಣ ಕಡಿಮೆ ಇರುವುದೂ ವರದಕ್ಷಿಣೆ ಸಾವುಗಳ ಹೆಚ್ಚಳಕ್ಕೆ ಕಾರಣ. ಈ ಹಿನ್ನೆಲೆಯಲ್ಲಿ, ವರದಕ್ಷಿಣೆ ಅಪರಾಧಕ್ಕೆ ಶಿಕ್ಷೆಯ ಪ್ರಮಾಣ ಕಡಿಮೆಯಾಗಲೇ ಕೂಡದು ಎಂದು ಸುಪ್ರೀಂಕೋರ್ಟ್ ಮತ್ತೊಮ್ಮೆ ಈಗ ವ್ಯಕ್ತಪಡಿಸಿರುವ ಕಳಕಳಿ ಮಹತ್ವದ್ದು. ವೈವಾಹಿಕ ಬದುಕಿನೊಳಗಿನ ಹಿಂಸೆಗಳಿಂದ ಮಹಿಳೆಯನ್ನು ರಕ್ಷಿಸಲು ಅನೇಕ ಕಾನೂನುಗಳಿವೆ.1961ರ ವರದಕ್ಷಿಣೆ ನಿಷೇಧ ಕಾಯಿದೆ ಅನ್ವಯ ವರದಕ್ಷಿಣೆ ಕೊಡುವುದು ಹಾಗೂ ತೆಗೆದುಕೊಳ್ಳುವುದು ಎರಡೂ ಅಪರಾಧಗಳೇ. ಐಪಿಸಿ ಸೆಕ್ಷನ್ 304 ಬಿ ಅನ್ವಯ ಮದುವೆಯಾದ ಏಳು ವರ್ಷಗಳ ಒಳಗೆ ಮಹಿಳೆ ಅಸ್ವಾಭಾವಿಕವಾಗಿ ಸಾವಿಗೀಡಾದಲ್ಲಿ, ಅಂತಹ ಸಾವುಗಳನ್ನು ವರದಕ್ಷಿಣೆ ಸಾವುಗಳಾಗಿ ಪರಿಗಣಿಸಿ ಏಳು ವರ್ಷಗಳ ಸೆರೆವಾಸದ ಶಿಕ್ಷೆ ಒದಗಿಸಲು ಅವಕಾಶವಿದೆ. ಹಾಗೆಯೇ ಐಪಿಸಿ ಸೆಕ್ಷನ್ 498ಎ ಅನ್ವಯ, ವಿವಾಹದ ನಂತರ ಮಹಿಳೆ ವಿರುದ್ಧದ ಕ್ರೌರ್ಯ, ಕಿರುಕುಳ ಹಾಗೂ ಹಿಂಸಾಚಾರಗಳಿಗೆ ಮೂರು ವರ್ಷಗಳಷ್ಟು ಸೆರೆವಾಸದ ಶಿಕ್ಷೆ ಇದೆ. ಹೀಗಿದ್ದೂ ಭಾರತೀಯ ಸಮಾಜದ ವಿವಾಹ ವ್ಯವಸ್ಥೆಯೊಳಗೆ ವರದಕ್ಷಿಣೆ ಅಂತರ್ಗತವಾಗಿಬಿಟ್ಟಿದೆ. ಹೆಣ್ಣು ಹೆತ್ತವರ ಮೇಲಿನ ಒತ್ತಡ ಹೇಗಿದೆ ಎಂದರೆ ಭಾರತದಲ್ಲಿ ಶೇ 80ರಷ್ಟು ಬ್ಯಾಂಕ್ ಸಾಲಗಳನ್ನು ವಿವಾಹ ವೆಚ್ಚ ಹಾಗೂ ವರದಕ್ಷಿಣೆ ಬೇಡಿಕೆಗಳನ್ನು ಪೂರೈಸಲು ತೆಗೆದುಕೊಳ್ಳಲಾಗುತ್ತದೆ ಎಂದು ಅಂಕಿ ಅಂಶಗಳು ಹೇಳುತ್ತವೆ. ಮಹಾರಾಷ್ಟ್ರದ ವಿದರ್ಭದಲ್ಲಿ ರೈತರ ಆತ್ಮಹತ್ಯೆ ಹೆಚ್ಚಳಕ್ಕೂ, ಹೆಣ್ಣುಮಕ್ಕಳ ಮದುವೆ ಸಾಲಗಳ ಮರುಪಾವತಿ ವೈಫಲ್ಯಗಳಿಗೂ ಸಂಬಂಧವಿರುವುದನ್ನು ತನಿಖೆಗಳು ದೃಢಪಡಿಸಿರುವುದು ಇದಕ್ಕೆ ಸಾಕ್ಷಿ. ಈ ಬೆಳವಣಿಗೆಗಳು ಹೆಣ್ಣುಭ್ರೂಣ ಹತ್ಯೆಯಂತಹ ಮತ್ತೊಂದು ಪಿಡುಗಿಗೆ ಪ್ರೇರಕವಾಗುತ್ತಿದೆ. ಈ ಮಧ್ಯೆ ವರದಕ್ಷಿಣೆ ನಿಷೇಧ ಕಾನೂನುಗಳ ಜಾರಿ ವ್ಯವಸ್ಥೆ ದುರ್ಬಲವಾಗಿರುವುದರಿಂದ ಈ ಕಾನೂನು ದುರ್ಬಳಕೆ ಮಾಡಿಕೊಳ್ಳುವವರೂ ಗೋಚರವಾಗುತ್ತಿದ್ದಾರೆ. ಇದನ್ನೇ ನೆಪ ಮಾಡಿಕೊಂಡು ಮಹಿಳಾ ಪರ ಕಾನೂನುಗಳ ವಿರುದ್ಧ ಹೋರಾಟ ಮಾಡುವ ಸಂಘಟನೆಗಳೂ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿವೆ. ಈ ನಿಟ್ಟಿನಲ್ಲಿ ಕಾನೂನಿನ ದುರ್ಬಳಕೆ ತಡೆಗೆ ಪೊಲೀಸ್ ತನಿಖೆ ಬಿಗಿಯಾಗಬೇಕಾದುದು ಮುಖ್ಯ. ಮಹಿಳೆಯ ಅಸ್ತಿತ್ವವನ್ನೇ ಅಪಮೌಲ್ಯಗೊಳಿಸುವ ವರದಕ್ಷಿಣೆ ಪಿಡುಗನ್ನು ಮೂಲೋತ್ಪಾಟನೆ ಮಾಡುವ ದಿಸೆಯಲ್ಲಿ ಸಮಾಜವೂ ಕೈಜೋಡಿಸಬೇಕಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.