ನ್ಯಾಯ ಸಿಗಲಿ ದೆಹಲಿ ವಿದ್ಯಾರ್ಥಿನಿಯ ಅತ್ಯಾಚಾರದ ಪ್ರಮುಖ ಆರೋಪಿ ರಾಮ್‌ಸಿಂಗ್ ಜೈಲಿನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂಬ ಸುದ್ದಿ ಆಘಾತಕಾರಿಯಾದುದು. ಜೈಲಿನ ಅಧಿಕಾರಿಗಳು ಇದನ್ನು ಆತ್ಮಹತ್ಯೆ ಎಂದು ಹೇಳುತ್ತಿದ್ದರೂ ಸಾಂದರ್ಭಿಕ ಸಾಕ್ಷ್ಯಗಳು ಅನುಮಾನ ಹುಟ್ಟಿಸುವಂತಿವೆ. ಹನ್ನೆರಡು ಅಡಿ ಎತ್ತರದ ಛಾವಣಿಯಲ್ಲಿದ್ದ ಫ್ಯಾನ್‌ಗೆ ಐದು ಮುಕ್ಕಾಲು ಅಡಿ ಎತ್ತರದ ರಾಮ್‌ಸಿಂಗ್ ಹೇಗೆ ಹಗ್ಗ ಬಿಗಿದು ನೇಣುಹಾಕಿಕೊಂಡ ಎಂದು ಆತನ ವಕೀಲರು ಮತ್ತು ಕುಟುಂಬದ ಸದಸ್ಯರು ಕೇಳುತ್ತಿದ್ದಾರೆ. ಇಕ್ಕಟ್ಟಿನ ಜೈಲುಕೊಠಡಿಯಲ್ಲಿದ್ದ ಇತರ ಮೂವರು ಕೈದಿಗಳಿಗೆ ಎಚ್ಚರವಾಗದಂತೆ ರಾಮ್‌ಸಿಂಗ್ ಇದನ್ನು ಹೇಗೆ ಮಾಡಿಕೊಂಡ ಎಂಬ ಪ್ರಶ್ನೆಯೂ ಇದೆ. ಏಷ್ಯಾದಲ್ಲಿಯೇ ಅತ್ಯಂತ ದೊಡ್ಡದೆಂದು ಹೇಳಲಾಗುತ್ತಿರುವ ತಿಹಾರ್ ಜೈಲಿನಲ್ಲಿ ಭಯೋತ್ಪಾದನೆಯೂ ಸೇರಿದಂತೆ ಹಲವಾರು ಹೀನ ಕೃತ್ಯಗಳ ಆರೋಪಿಗಳಿದ್ದಾರೆ. ಇಂತಹ ಜೈಲಿನಲ್ಲಿನ ಭದ್ರತಾ ವ್ಯವಸ್ಥೆಯಲ್ಲಿನ ಲೋಪ ಕಳವಳ ಹುಟ್ಟಿಸುವಂತಹದ್ದು. ಒಂದು ವರದಿಯ ಪ್ರಕಾರ ಕಳೆದ ಒಂದು ವರ್ಷದಲ್ಲಿ 22 ಆರೋಪಿಗಳು ತಿಹಾರ್ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರ್ಕಾರ ಈ ಪ್ರಕರಣದ ಬಗ್ಗೆ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿದೆ. ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರು ದೆಹಲಿ ಮಹಾನಗರದಲ್ಲಿನ ಅಪರಾಧ ಚಟುವಟಿಕೆಗಳಿಗಾಗಿ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಪೊಲೀಸರನ್ನೇ ಈವರೆಗೆ ಹೊಣೆ ಮಾಡುತ್ತಾ ಬಂದಿದ್ದಾರೆ. ಆದರೆ ಈಗ ಅವರ ಅಧಿಕಾರ ವ್ಯಾಪ್ತಿಯಲ್ಲಿರುವ ತಿಹಾರ್‌ಜೈಲಿನಲ್ಲಿಯೇ ಈ ಘಟನೆ ನಡೆದಿದೆ. ಹಳೆ ಬಾಕಿ ತೀರಿಸುವವರಂತೆ ಕೇಂದ್ರ ಗೃಹಸಚಿವ ಸುಶೀಲ್‌ಕುಮಾರ್ ಶಿಂಧೆ ಅವರು ತಿಹಾರ್ ಜೈಲಿನ ಭದ್ರತೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಇಂತಹ ಕ್ಷುಲ್ಲಕ ವಿವಾದಗಳಿಂದ ತನಿಖೆ ದಾರಿ ತಪ್ಪುವಂತಾಗಬಾರದು. ದೆಹಲಿ ವಿದ್ಯಾರ್ಥಿನಿ ಅತ್ಯಾಚಾರದ ನಂತರದ ಸಾರ್ವಜನಿಕ ಆಕ್ರೋಶಕ್ಕೆ ಮಣಿದ ಕೇಂದ್ರ ಸರ್ಕಾರ ಅತ್ಯಾಚಾರಿಗಳನ್ನು ಶಿಕ್ಷಿಸಲು ಅವಸರದಿಂದ ಕ್ರಿಮಿನಲ್ ಕಾಯ್ದೆಗೆ ತಿದ್ದುಪಡಿ ಮಾಡಿ ಸುಗ್ರೀವಾಜ್ಞೆಯನ್ನು ಹೊರಡಿಸಿತ್ತು. ಇದಕ್ಕೆ ಸಂಬಂಧಿಸಿದ ಮಸೂದೆ ಬಗ್ಗೆ ಕೇಂದ್ರ ಸಚಿವ ಸಂಪುಟ ಚರ್ಚೆ ನಡೆಸುವ ಹಿಂದಿನ ದಿನವೇ ರಾಮ್‌ಸಿಂಗ್ ಆತ್ಮಹತ್ಯೆ ನಡೆದಿದೆ. ಇದು ನಿಜವಾಗಿಯೂ ಆತ್ಮಹತ್ಯೆಯೇ, ಹತ್ಯೆಯೇ ಇಲ್ಲವೇ ಪೊಲೀಸರ ಹಿಂಸೆಗೆ ಆಗಿರುವ ಬಲಿಯೇ ಎಂಬುದು ಇನ್ನೂ ಸ್ಪಷ್ಟ ಇಲ್ಲ. ಕಾನೂನನ್ನು ಎಷ್ಟೇ ಬಲಪಡಿಸಿದರೂ ತನಿಖೆಯನ್ನು ಬುಡಮೇಲು ಮಾಡುವ ಪ್ರಯತ್ನಗಳು ನಡೆಯುತ್ತಾ ಬಂದಿರುವುದನ್ನು ಇಂತಹ ಹಲವಾರು ಪ್ರಕರಣಗಳಲ್ಲಿ ಕಾಣಬಹುದು. ಈ ಆತ್ಮಹತ್ಯೆಯ ಹಿಂದೆ ಕೂಡಾ ಇಂತಹದ್ದೊಂದು ಕೃತ್ಯವಿರಬಹುದೆಂಬ ಸಂಶಯವನ್ನು ಅನೇಕರು ವ್ಯಕ್ತಪಡಿಸುತ್ತಿದ್ದಾರೆ. ಇತರ ಮೂವರು ಆರೋಪಿಗಳು ಅಪರಾಧದ ಸಂಪೂರ್ಣ ಜವಾಬ್ದಾರಿಯನ್ನು ಆತ್ಮಹತ್ಯೆ ಮಾಡಿಕೊಂಡ ರಾಮ್‌ಸಿಂಗ್ ತಲೆಗೆ ಕಟ್ಟಿ ತಾವು ಪಾರಾಗಲು ಯತ್ನಿಸಬಹುದೆಂಬ ಅಭಿಪ್ರಾಯವೂ ಕೇಳಿಬರುತ್ತಿದೆ. ಇಂತಹ ಸಂಶಯಗಳಿಗೆ ಅವಕಾಶ ನೀಡದ ರೀತಿಯಲ್ಲಿ ತನಿಖೆ ನಡೆಸಿ ರಾಮ್‌ಸಿಂಗ್ ಸಾವಿನ ಹಿಂದಿನ ಸತ್ಯವನ್ನು ಬಯಲುಮಾಡಬೇಕು. ಕಸ್ಟಡಿ ಸಾವಿನ ತನಿಖೆಗಾಗಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಸೂಚಿಸಿರುವ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು. ಯಾವುದೇ ಕಾರಣಕ್ಕೂ ಈ ಘಟನೆ ದೆಹಲಿ ವಿದ್ಯಾರ್ಥಿನಿ ಅತ್ಯಾಚಾರಿಗಳಿಗೆ ಕಾನೂನಿನ ಬಲೆಯಿಂದ ತಪ್ಪಿಸಿಕೊಳ್ಳಲು ನೆರವಾಗಬಾರದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.