ಐಐಟಿ: ವಿವಾದ ಏಕೆ? ಐಐಟಿ, ಎನ್‌ಐಟಿ, ಐಐಐಟಿ ಹಾಗೂ ಎಐಇಇಇಗಳಿಗೆ ಅಖಿಲ ಭಾರತ ಮಟ್ಟದಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸುವ ಬಗ್ಗೆ ಮಾನವ ಸಂಪನ್ಮೂಲ ಸಚಿವಾಲಯ ಮಂಡಿಸಿರುವ ಪ್ರಸ್ತಾವ ವಿವಾದಗಳ ಕಿಡಿ ಹೊತ್ತಿಸಿದೆ. ರಾಷ್ಟ್ರದ ಪ್ರಮುಖ ಎಂಜಿನಿಯರಿಂಗ್ ಸಂಸ್ಥೆಗಳಿಗೆ ಸೇರ ಬಯಸುವ ವಿದ್ಯಾರ್ಥಿಗಳು `ಒಂದೇ ದೇಶ - ಒಂದೇ ಪರೀಕ್ಷೆ~ ಎಂಬ ತತ್ವದಡಿ ಹೊಸ ವಿಧದ ಸಾಮಾನ್ಯ ಪ್ರವೇಶ ಪರೀಕ್ಷೆ ತೆಗೆದುಕೊಳ್ಳಬೇಕು ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಕಪಿಲ್ ಸಿಬಲ್ ಮೇ 28ರಂದು ಪ್ರಕಟಿಸಿದ್ದರು. 2013ರಿಂದ ಜಾರಿಗೆ ಬರುವ ಈ ನಿಯಮ, ಹನ್ನೊಂದು -ಹನ್ನೆರಡನೇ ತರಗತಿಗಳ ಬೋರ್ಡ್ ಪರೀಕ್ಷೆ ಫಲಿತಾಂಶಗಳನ್ನೂ ಗಣನೆಗೆ ತೆಗೆದುಕೊಳ್ಳಲಿದೆ. ವಿದ್ಯಾರ್ಥಿಗಳ ಹೊರೆ, ಒತ್ತಡ ಕಡಿಮೆಮಾಡಬಹುದಾದಂತಹ ಸದುದ್ದೇಶದ ಈ ಪ್ರಸ್ತಾವ ಈಗ ವಿವಾದದ ಕೇಂದ್ರವಾಗಿರುವುದುವಿಪರ್ಯಾಸ. ಐಐಟಿಯಂತಹ ಪ್ರತಿಷ್ಠಿತ ಸಂಸ್ಥೆಗಳ ಸ್ವಾಯತ್ತತೆ ಹಾಗೂ ವರ್ಚಸ್ಸಿಗೆ ಈ ಪ್ರಸ್ತಾವ ಭಂಗ ತರುವಂತಹದ್ದು. ಶೈಕ್ಷಣಿಕ ವಿಚಾರಗಳಲ್ಲಿ ಸರ್ಕಾರ ಅನಗತ್ಯವಾಗಿ ಮಧ್ಯ ಪ್ರವೇಶಿಸುತ್ತಿದೆ ಎಂಬುದು ಟೀಕಾಕಾರರ ಮುಖ್ಯ ದೂರು. ಆದರೆ ವಿವಿಧ ಪ್ರವೇಶ ಪರೀಕ್ಷೆಗಳನ್ನು ತೆಗೆದುಕೊಳ್ಳಬೇಕಾದ ಒತ್ತಡಗಳಿಂದ ಈ ವ್ಯವಸ್ಥೆ ವಿದ್ಯಾರ್ಥಿಗಳನ್ನು ಪಾರು ಮಾಡುತ್ತದೆ ಎಂಬುದು ಈ ಪ್ರಸ್ತಾವದ ಪರ ಇರುವವರ ವಾದ. ಈ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆಯುವವರು ಐಐಟಿ ಯಂತಹ ಪ್ರತಿಷ್ಠಿತ ಸಂಸ್ಥೆಗಳಿಗೆ ಪ್ರವೇಶ ಪಡೆಯುತ್ತಾರೆ. ಕಡಿಮೆ ಅಂಕಗಳನ್ನು ಪಡೆದವರು ಸೀಟುಗಳ ಲಭ್ಯತೆ ಆಧರಿಸಿ ನಂತರದ ಹಂತಗಳ ಎಂಜಿನಿಯರಿಂಗ್ ಸಂಸ್ಥೆಗಳಲ್ಲಿ ಸೀಟುಗಳನ್ನು ಪಡೆದುಕೊಳ್ಳಲು ಅವಕಾಶ ಪಡೆಯುತ್ತಾರೆ. ಆದರೆ, ಇಂತಹ ಸಾಮಾನ್ಯ ಪ್ರವೇಶ ಪರೀಕ್ಷೆ - ಖಾಸಗಿ ಕಾಲೇಜುಗಳು ಸೇರಿದಂತೆ ಕಡಿಮೆ ಗುಣಮಟ್ಟದ ಕಾಲೇಜುಗಳ ಜೊತೆಗೆ ಐಐಟಿ ಗಳನ್ನು ಸಮೀಕರಿಸುತ್ತದೆ ಎಂಬಂತಹ ಭೀತಿ ಹುರುಳಿಲ್ಲದ್ದು. ಈಗ ಜೆಇಇ ಪರೀಕ್ಷೆ ಬರೆಯುತ್ತಿರುವ ಸುಮಾರು 5-6 ಲಕ್ಷ ವಿದ್ಯಾರ್ಥಿಗಳ ಪ್ರಮಾಣಕ್ಕೆ ಹೋಲಿಸಿದರೆ, ಅಖಿಲ ಭಾರತ ಮಟ್ಟದ ಸಾಮಾನ್ಯ ಪ್ರವೇಶ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳ ಸಂಖ್ಯೆ ಅತ್ಯಂತ ಹೆಚ್ಚಾಗುತ್ತದೆ. ಇದಕ್ಕಾಗಿ ಬಲಯುತವಾದ ಸಮರ್ಥ ವ್ಯವಸ್ಥೆ ರೂಪುಗೊಳ್ಳಬೇಕು. ಆಗ, ವೃತ್ತಿಪರ ಕಾಲೇಜುಗಳ ಪ್ರವೇಶವನ್ನು ಹೆಚ್ಚು ಪಾರದರ್ಶಕವಾಗಿಸುವ ನಿಟ್ಟಿನಲ್ಲಿ ಇದು ಮೊದಲ ಹೆಜ್ಜೆಯಾಗಲಿದೆ. ಅನೇಕ ರಾಜ್ಯಗಳು ತಮ್ಮ ಬೋರ್ಡ್ ಪರೀಕ್ಷೆಗಳ ಪಠ್ಯಕ್ರಮ ಸುಧಾರಿಸಲೂ ಈ ಪ್ರಸ್ತಾವ ಪ್ರೇರಕವಾಗಬಹುದು. `ಒಂದೇ ದೇಶ, ಒಂದೇ ಪರೀಕ್ಷೆ~ ಎಂಬ ಸೂತ್ರ ರಾಷ್ಟ್ರದಾದ್ಯಂತ ಕಾಲೇಜುಗಳ ಆಯ್ಕೆಗೆ ವಿದ್ಯಾರ್ಥಿಗಳಿಗೆ ವಿಪುಲ ಅವಕಾಶ ಕಲ್ಪಿಸುತ್ತದೆ ಎಂಬುದನ್ನೂ ಗಮನಿಸಬೇಕು. ಆದರೆ, ಹಲವು ನೆಲೆಗಳಲ್ಲಿ ಪರ ಹಾಗೂ ವಿರೋಧದ ವಾದಗಳಿಗೆ ನೆಲೆಯಾಗಿರುವ ಈ ಪ್ರಸ್ತಾವದ ಕುರಿತಂತೆ ಸಾರ್ವಜನಿಕವಾಗಿ ಇನ್ನಷ್ಟು ಚರ್ಚೆಗಳು ನಡೆಯಬೇಕಿದೆ. ಶಿಕ್ಷಣ ತಜ್ಞರು, ಪೋಷಕರು ಹಾಗೂ ವಿದ್ಯಾರ್ಥಿಗಳು ಈ ವಿಷಯದ ಸಾಧಕ ಬಾಧಕಗಳನ್ನು ಕೂಲಂಕಷವಾಗಿ ಚರ್ಚಿಸಿ ಈ ವಿವಾದದ ಕುರಿತಂತೆ ಒಮ್ಮತದ ಅಭಿಪ್ರಾಯವನ್ನು ಮೂಡಿಸಬೇಕಿರುವುದು ಸದ್ಯದ ಅಗತ್ಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.