ಜನಸಾಮಾನ್ಯರ ಮೇಲೆ ಹೊರೆ ಕನಿಷ್ಠ ಒಂಬತ್ತು ತಿಂಗಳಿಗೆ ಒಮ್ಮೆಯಾದರೂ ವಿದ್ಯುತ್ ದರ ಪರಿಷ್ಕರಿಸಲು ವಿದ್ಯುತ್ ವಿತರಣ ಕಂಪೆನಿಗಳಿಗೆ (ಡಿಸ್ಕಾಮ್ಸ) ಕೇಂದ್ರ ಸರ್ಕಾರ ಸಲಹೆ ನೀಡಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರಗಳ ಒತ್ತಡಗಳಿಗೆ ಮಣಿಯದೆ ನಿಯಮಿತ ದರ ಏರಿಕೆ ಮೂಲಕ ತಮ್ಮ ನಷ್ಟವನ್ನು ಕಡಿಮೆ ಮಾಡಿಕೊಳ್ಳಬೇಕೆಂದು ವಿದ್ಯುತ್ ವಿತರಣ ಕಂಪೆನಿಗಳಿಗೆ ಸರ್ಕಾರ ಹಿತವಚನ ಹೇಳಿದೆ. ವಾಸ್ತವವಾಗಿ ರಾಜ್ಯ ಸರ್ಕಾರಗಳ ನಿಯಂತ್ರಣದ ಹಂಗಿಲ್ಲದೆ ಸ್ವತಂತ್ರವಾಗಿ ವಿದ್ಯುತ್ ದರ ಏರಿಕೆಗೆ ಅವಕಾಶ ನೀಡಬೇಕೆಂಬುದು ವಿದ್ಯುತ್ ವಿತರಣ ಕಂಪೆನಿಗಳ ಬಹುದಿನಗಳ ಬೇಡಿಕೆಯೇ ಆಗಿದೆ. ಇದಕ್ಕೀಗ ಕೇಂದ್ರ ಸರ್ಕಾರವೂ ದನಿಗೂಡಿಸಿದಂತಾಗಿದೆ. ಎಷ್ಟು ಬಾರಿ ವಿದ್ಯುತ್ ದರಗಳನ್ನು ಪರಿಷ್ಕರಿಸಲಾಗಿದೆ ಎಂಬುದನ್ನು ಇನ್ನು ಮುಂದೆ ರಾಜ್ಯ ವಿದ್ಯುತ್ ವಿತರಣ ಸಂಸ್ಥೆಗಳಿಗೆ ಸಾಲ ಸೌಲಭ್ಯ ಹಾಗೂ ಹಣಕಾಸು ನೆರವುಗಳನ್ನು ನೀಡುವ ಸಂದರ್ಭದಲ್ಲಿ ಪರಿಗಣನೆಗೆ ತೆಗೆದುಕೊಳ್ಳಲಾಗುವುದು. ಹೀಗಾಗಿ ಈ ಷರತ್ತನ್ನು ಪಾಲಿಸುವುದು ವಿದ್ಯುತ್ ವಿತರಣ ಕಂಪೆನಿಗಳಿಗೆ ಕಡ್ಡಾಯವಾಗಬಹುದು. ಇದರಿಂದ ನಿರಂತರ ವಿದ್ಯುತ್ ದರ ಏರಿಕೆಗಳ ಕಾಲ ಸನ್ನಿಹಿತವಾದಂತಾಗಿದೆ. ರಾಷ್ಟ್ರದಾದ್ಯಂತ ವಿದ್ಯುತ್ ವಿತರಣ ಕಂಪೆನಿಗಳು ಆರ್ಥಿಕ ಸಂಕಷ್ಟದಲ್ಲಿವೆ ಎಂಬುದು ಈಗಾಗಲೇ ಸಾಕಷ್ಟು ಚರ್ಚೆಯಾಗಿರುವ ವಿಚಾರ. ಇಂಧನ ಸಚಿವಾಲಯದ ಮೂಲಗಳ ಪ್ರಕಾರ, ವಿವಿಧ ರಾಜ್ಯಗಳ ವಿದ್ಯುತ್ ವಿತರಣ ಕಂಪೆನಿಗಳ ನಷ್ಟದ ಪ್ರಮಾಣ ಸುಮಾರು ರೂ ಒಂದು ಲಕ್ಷ ಕೋಟಿ. ಅದರಲ್ಲೂ ತಮಿಳುನಾಡು, ಉತ್ತರ ಪ್ರದೇಶ, ಬಿಹಾರ ಹಾಗೂ ರಾಜಸ್ತಾನಗಳಂತಹ ರಾಜ್ಯಗಳ ವಿದ್ಯುತ್ ವಿತರಣ ಕಂಪೆನಿಗಳ ಆರ್ಥಿಕ ಸ್ಥಿತಿಗತಿಗಳಂತೂ ಹೀನಾಯವಾಗಿವೆ. ಇತ್ತೀಚಿನ ವರ್ಷಗಳಲ್ಲಿ ವಿದ್ಯುತ್ ಖರೀದಿ ವೆಚ್ಚಗಳು ತೀವ್ರವಾಗಿ ಏರಿದ್ದರೂ ವಿದ್ಯುತ್ ದರಗಳ ಏರಿಕೆಗೆ ರಾಜ್ಯಗಳು ತೋರುತ್ತಿರುವ ಎಚ್ಚರಿಕೆಯ ನಡೆಗಳಿಂದಾಗಿ ವಿದ್ಯುತ್ ವಲಯದ ನಷ್ಟ ಹೆಚ್ಚಾಗುತ್ತಲೇ ಇದೆ ಎಂಬುದು ಕೇಂದ್ರದ ಪ್ರತಿಪಾದನೆ. ಈ ನಷ್ಟ ತಡೆಗಟ್ಟಲು ರಾಜಸ್ತಾನ ಶೇಕಡ 80ರಷ್ಟು, ಮಧ್ಯಪ್ರದೇಶ ಶೇಕಡ 65ರಷ್ಟು, ತಮಿಳುನಾಡು ಶೇ55ರಷ್ಟು ಭಾರಿ ಪ್ರಮಾಣದಲ್ಲಿ ವಿದ್ಯುತ್ ದರಗಳನ್ನು ಏರಿಸಬೇಕಿದೆ ಎಂಬುದೂ ಒಂದು ಅಂದಾಜು. ಕಳೆದ ಆರು ತಿಂಗಳುಗಳಲ್ಲಿ ಈಗಾಗಲೇ ಸುಮಾರು 25 ರಾಜ್ಯಗಳು ಶೇಕಡ 10ರಿಂದ ಶೇಕಡ 37ರಷ್ಟು ಪ್ರಮಾಣದಲ್ಲಿ ವಿದ್ಯುತ್ ದರಗಳನ್ನು ಏರಿಸಿಯೂ ಆಗಿದೆ. ವಿದ್ಯುತ್ ದರಗಳ ಏರಿಕೆಯ ಹೊರೆ ಅಂತಿಮವಾಗಿ ಬೀಳುವುದು ಬಳಕೆದಾರರ ಮೇಲೆಯೇ ಎಂಬುದನ್ನು ಮರೆಯಲಾಗದು. ನಿಜ. ವಿದ್ಯುತ್ ವಲಯದಲ್ಲಿ ಸುಧಾರಣೆ ಆಗಬೇಕು. ಈ ಆದರ್ಶದ ಮಾತನ್ನು ಯಾರೂ ಅಲ್ಲಗಳೆಯುವುದಿಲ್ಲ. ಆದರೆ ಈಗಿರುವ ವಿದ್ಯುತ್ ಪೂರೈಕೆ ಗುಣಮಟ್ಟ ಎಂತಹದ್ದು ಎಂಬುದನ್ನು ಪ್ರಶ್ನಿಸಿಕೊಳ್ಳಬೇಕಿದೆ. ವಿದ್ಯುತ್ ಗ್ರಾಹಕರು ಉಳಿಸಿಕೊಂಡಿರುವ ಬಾಕಿ, ಪ್ರಸರಣದಲ್ಲಿ ಆಗುತ್ತಿರುವ ವಿದ್ಯುತ್ ಪೋಲು ಇತ್ಯಾದಿ ಸಮಸ್ಯೆಗಳು ಬಗೆಹರಿದೇ ಇಲ್ಲ. ಸರಬರಾಜು, ವಿತರಣೆ ಹಾಗೂ ತಾಂತ್ರಿಕ ವೈಫಲ್ಯಗಳಿಂದ ಆಗುತ್ತಿರುವ ವಿದ್ಯುತ್ ನಷ್ಟ, ಸೋರಿಕೆಗಳನ್ನು ತಡೆಗಟ್ಟಲಾಗಿಲ್ಲ. ವಿದ್ಯುತ್ ನಿರ್ವಹಣೆಯಲ್ಲಿ ಎದ್ದು ಕಾಣಿಸುವ ಈ ಅದಕ್ಷತೆಯನ್ನು ತಡೆಗಟ್ಟುವುದಲ್ಲದೆ ಪರ್ಯಾಯ ವಿದ್ಯುತ್ ಸೃಷ್ಟಿ ಹಾಗೂ ಬಳಕೆಗೆ ಯೋಜನೆಗಳನ್ನೂ ಸರ್ಕಾರ ರೂಪಿಸಬೇಕಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.